Advertisement
“ಸೈನ್ಸು ಕಷ್ಟ’- ಇದು, ಗ್ರಾಮೀಣ ಭಾಗದ ಬಹುಪಾಲು ಹೈಸ್ಕೂಲ್ ವಿದ್ಯಾರ್ಥಿಗಳ ಅಂತರಂಗದ ಮಾತು. ಉಳಿದೆಲ್ಲ ವಿಷಯಗಳಲ್ಲಿ ಸುಲಭವಾಗಿ ಹೆಚ್ಚು ಅಂಕ ತೆಗೆಯುವವರು, ಸೈನ್ಸ್ ಅಂದಾಕ್ಷಣ ಮಂಕಾಗುತ್ತಾರೆ. “ಎಷ್ಟು ಓದಿದ್ರೂ ಸರಿಯಾಗಿ ಅರ್ಥವಾಗ್ತಾ ಇಲ್ಲ’ ಎಂದು ಸಂಕೋಚದಿಂದ ಹೇಳುತ್ತಾರೆ. ಸೈನ್ಸ್‌ನಲ್ಲಿ ಪಾಸ್ ಮಾರ್ಕ್ಸ್ ಬಂದ್ರೆ ಸಾಕು ಎಂದು ಹಂಬಲಿಸುತ್ತಾರೆ. ಅಷ್ಟರಮಟ್ಟಿಗೆ “ಸೈನ್ಸು’ ಗ್ರಾಮೀಣ ಭಾಗದ ಹೈಸ್ಕೂಲ್ ವಿದ್ಯಾರ್ಥಿಗಳನ್ನು ಹೆದರಿಸಿದೆ, ಹೆದರಿಸುತ್ತಲೇ ಇದೆ!
Related Articles
ಬೆಳಕಿನ ಪ್ರತಿಫಲನ, ವಕ್ರೀಭವನದ ಕುರಿತು ಹೈಸ್ಕೂಲಿನ ವಿದ್ಯಾರ್ಥಿಗಳು ಓದಿರುತ್ತಾರೆ. ಆದರೆ, ಬೆಳಕಿನ ಪ್ರತಿಫಲನವಾಗಲಿ, ವಕ್ರೀಭವನವೇ ಆಗಲಿ ಹೇಗೆ ಆಗುತ್ತದೆ ಎಂಬುದು ಅವರಿಗೆ ಗೊತ್ತಿರುವುದಿಲ್ಲ. ಅಗತ್ಯವಿರುವ ಉಪಕರಣಗಳನ್ನು ಜೊತೆಗಿಟ್ಟುಕೊಂಡೇ ಶಾಲೆಗೆ ಹೋಗುವ ಆಕಾಂಕ್ಷಾ ತಂಡ, ಪ್ರಯೋಗಗಳ ಮೂಲಕ ಬೆಳಕಿನ ಪ್ರತಿಫಲನ ಹಾಗೂ ವಕ್ರೀಭವನದ ಬಗ್ಗೆ ತಿಳಿಸುತ್ತಾರೆ. ಹಾಗೆಯೇ ವೋಲ್ಟೇಜ್ ಹಾಗೂ ವಿದ್ಯುತ್ ಏರುಪೇರಾಗುವುದು ಹೇಗೆ? ಅಲೆಗಳು ಸೃಷ್ಟಿಯಾಗುವುದು ಹೇಗೆ? ಅಲೆಗಳನ್ನು ಗುರುತಿಸುವುದು ಹೇಗೆ? ತರಂಗ ಎಂದರೆ ಏನು? ಅದು ರೂಪುಗೊಳ್ಳುವುದು ಹೇಗೆ ಎಂಬುದನ್ನೆಲ್ಲ ಪ್ರಯೋಗಗಳ ಮೂಲಕವೇ ಹೇಳಿ ಕೊಡಲಾಗುತ್ತದೆ. ಎಲೆ, ಬೇರು, ಕಾಂಡವನ್ನು ಕೊಂಡೊಯ್ದು ಅದರ ಪರಿಚಯ, ಗುಣವಿಶೇಷ ಹಾಗೂ ವ್ಯತ್ಯಾಸ ತಿಳಿಸುವ ಮೂಲಕ ಜೀವಶಾಸ್ತ್ರವನ್ನು, ಮೊಟ್ಟೆಯ ಬಿಳಿಭಾಗ ತೆಗೆದು ಪ್ರೊಟೀನ್ ಲೆಕ್ಕ ಹಾಕುವ ಮೂಲಕ ರಸಾಯನ ಶಾಸ್ತ್ರವನ್ನೂ ಕೊಡಲಾಗುತ್ತದೆ. ಇಷ್ಟಲ್ಲದೆ ವಿದ್ಯಾರ್ಥಿಗಳನ್ನೇ ಕರೆದು, ಅವರಿಂದಲೇ ರಕ್ತ ಪಡೆದು, ರಕ್ತದ ಗುಂಪು ಯಾವುದೆಂದು ಪತ್ತೆ ಹಚ್ಚುವ ವಿಧಾನವನ್ನೂ ತಿಳಿಸಲಾಗುತ್ತದೆ. ಹಾಲು, ಮೊಸರಾಗಿ ಬದಲಾಗಲು ಕಾರಣವಾಗುವ ಬ್ಯಾಕ್ಟೀರಿಯಾ ಯಾವುದೆಂದು ಸೂಕ್ಷ್ಮದರ್ಶಕದ ಮೂಲಕ ತೋರಿಸಿಕೊಡಲಾಗುತ್ತದೆ. ಪಾಠವೆಂಬುದು ಒಂದು ನಾಟಕ ಅಥವಾ ಸಿನಿಮಾದ ದೃಶ್ಯದಂತೆ ಕಣ್ಮುಂದೆಯೇ ನಡೆಯುತ್ತದಲ್ಲ; ಅದೇ ಕಾರಣದಿಂದ ವಿದ್ಯಾರ್ಥಿಗಳಿಗೆ ವಿಷಯ ಕ್ಲಿಯರ್ ಆಗಿ ಅರ್ಥವಾಗುತ್ತದೆ. ಎಲಎಲಾ, ಸೈನ್ಸು ಇಷ್ಟೊಂದು ಸರಳವಾ, ಫಿಸಿಕ್ಸು, ಕೆಮಿಸ್ಟ್ರಿ ಇಷ್ಟೊಂದು ಸುಲಭವಾ ಎಂಬ ಮುಖಭಾವ ಅವರದ್ದಾಗುತ್ತದೆ. ಮುಂದೊಂದು ದಿನ ಈ ವಿಷಯವನ್ನು ತರಗತಿಯಲ್ಲಿ ಪಾಠ ಮಾಡಿದರೆ, ಅದೆಲ್ಲಾ ಬಹುಬೇಗನೆ ಅರ್ಥವಾಗಿ ಹೆಚ್ಚಿನ ಅಂಕ ಪಡೆಯಲಿಕ್ಕೂ ಒಂದು ರಹದಾರಿ ನಿರ್ಮಾಣವಾಗುತ್ತದೆ.
Advertisement
ಸಮಾನ ಮನಸ್ಕರುಇಂಥದೊಂದು ಸರಳ-ಸುಲಭ ಮತ್ತು ವಿಶಿಷ್ಟ ಮಾದರಿಯ ಪಠ್ಯಕ್ರಮದ ಮೂಲಕವೇ ಸರ್ಕಾರಿ ಶಾಲೆಯ ಮಕ್ಕಳು ಹಾಗೂ ಅಧ್ಯಾಪಕರ ಮನ ಗೆದ್ದಿರುವುದು ಆಕಾಂಕ್ಷಾ ತಂಡದ ಹೆಚ್ಚುಗಾರಿಕೆ. ಅಂದಹಾಗೆ, ಈ ತಂಡದಲ್ಲಿ ಇರುವವರೆಲ್ಲ 30-35 ವಯೋಮಾನದ ಪುತ್ತೂರು, ಮಂಗಳೂರಿನ ಉತ್ಸಾಹಿ ಯುವಕ-ಯುವತಿಯರು. ಎಲ್ಲರೂ ಗ್ರಾಮೀಣ ಭಾಗದಿಂದಲೇ ಬಂದವರು. ಸೈನ್ಸು ಕಷ್ಟ, ಆದರೂ ಇಷ್ಟ ಅಂದುಕೊಂಡೇ ಪದವಿ ಓದಿದವರು. ಸೈನ್ಸು ಕಷ್ಟ ಎಂಬ ಕಾರಣದಿಂದಲೇ ಓದಿನಲ್ಲಿ ಆಸಕ್ತಿ ಕಳೆದುಕೊಳ್ಳುವ ವಿದ್ಯಾರ್ಥಿಗಳಿಗೆ ನೆರವಾಗಬೇಕು, ಅವರನ್ನು ಯಶಸ್ಸಿನ ಹಳಿಗೆ ತಂದು ನಿಲ್ಲಿಸಬೇಕು ಎಂದು ಕನಸು ಕಂಡವರು. ಪುತ್ತೂರಿನವರಾದ ಶ್ರೀಶ ಭಟ್, “ಆಕಾಂಕ’Ò ತಂಡದ ಮುಖ್ಯಸ್ಥರು. ಇವರ ನೇತೃತ್ವದಲ್ಲಿ, 2012ರಲ್ಲಿ “ಆಕಾಂಕ’Ò ತಂಡ ಅಸ್ತಿತ್ವಕ್ಕೆ ಬಂತು. ಅದೀಗ “ಆಕಾಂಕ್ಷಾ ಚಾರಿಟಬಲ್ ಟ್ರಸ್ಟ್’ ಆಗಿದೆ. ತಂಡದಲ್ಲಿ 117 ಮಂದಿ ಸದಸ್ಯರಿದ್ದಾರೆ. “ನಮ್ಮ ತಂಡದಲ್ಲಿ ಸಂಶೋಧನಾ ವಿದ್ಯಾರ್ಥಿಗಳು, ಶಿಕ್ಷಕರು, ಸಾಫ್ಟ್ವೇರ್ ಎಂಜಿನಿಯರ್‌ಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು, ಡಾಕ್ಟರ್ಗಳು ಇದ್ದಾರೆ. ಆಕಾಂಕ್ಷಾ ತಂಡದ ಸದಸ್ಯರಾಗಲು ಸದಸ್ಯತ್ವ ಶುಲ್ಕ ಪಾವತಿಸಬೇಕು. ಹೀಗೆ ಸಂಗ್ರಹವಾದ ಸದಸ್ಯತ್ವ ಶುಲ್ಕವನ್ನು ಬ್ಯಾಂಕ್‌ನಲ್ಲಿ ಇರಿಸಿ, ಆ ಹಣದಿಂದಲೇ ಸರ್ಕಾರಿ ಶಾಲೆಗಳಿಗೆ ಹೋಗಿ ಬರಲು ಬೇಕಾಗುವ ಖರ್ಚುಗಳನ್ನು ನಿಭಾಯಿಸುತ್ತೇವೆ. ನಮ್ಮದು ಉಚಿತ ಸೇವೆ. ಇದು ಆತ್ಮಸಂತೋಷಕ್ಕಾಗಿ ಮಾಡುವ ಕೆಲಸವಾದ್ದರಿಂದ ಯಾರಿಗೂ ಸಂಬಳ ಇಲ್ಲ. ಪಾಠ ಹೇಳಿದ್ದಕ್ಕೆ ಪ್ರತಿಯಾಗಿ ನಾವು ಶಾಲೆಗಳಿಂದ ಯಾವುದೇ ಪ್ರತಿಫಲವನ್ನೂ ಬಯಸುವುದಿಲ್ಲ’ ಎನ್ನುತ್ತಾರೆ ಶ್ರೀಶ ಭಟ್. ಖುಷಿಯಿಂದ ಕಳಿಸ್ತಾರೆ
ತಂಡದಲ್ಲಿರುವವರೆಲ್ಲ ಕೆಲಸ ಮಾಡುತ್ತಿರುವವರು, ರಿಸರ್ಚ್ ಸ್ಕಾಲರ್‌ಗಳು ಅಂದಮೇಲೆ, ಅವರು ಪಾಠ ಮಾಡುವುದು ಯಾವಾಗ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಮಂಗಳೂರು ಜಿಲ್ಲೆಯ ಶಾಲೆಗಳಲ್ಲಾದರೆ ಭಾನುವಾರಗಳಲ್ಲಿ ಹಾಗೂ ಬೆಂಗಳೂರು ಜಿಲ್ಲೆಯ ಗ್ರಾಮೀಣ ಶಾಲೆಗಳಲ್ಲಾದರೆ ಶನಿವಾರಗಳಂದು ಆಕಾಂಕ್ಷಾ ತಂಡದವರಿಂದ ಸ್ಪೆಷಲ್ ಕ್ಲಾಸ್ ನಡೆಯುತ್ತದೆ. ಮಧ್ಯೆಮಧ್ಯೆ ರಸಪ್ರಶ್ನೆ, ಕ್ವಿಝ್ ನಡೆಸುವ ಮೂಲಕ ವಿದ್ಯಾರ್ಥಿಗಳಿಗೆ “ಬೋರ್’ ಆಗದಂತೆ ನೋಡಿಕೊಳ್ಳಲಾಗುತ್ತದೆ. ಸರ್ಕಾರಿ ಶಾಲೆಗಳಿಗೆ ಹೋಗುವ ಮೊದಲು, ಈ ಸಂಬಂಧವಾಗಿ ಶಿಕ್ಷಣಾಧಿಕಾರಿಗಳಿಗೆ ತಿಳಿಸಿಯೇ, ಅವರ ಅನುಮತಿ ಪತ್ರದೊಂದಿಗೇ ಹೋಗುವುದರಿಂದ, ಶಾಲೆಗಳ ಅಧ್ಯಾಪಕವೃಂದದಿಂದಲೂ ನಮ್ಮ ತಂಡಕ್ಕೆ ಆತ್ಮೀಯ ಸ್ವಾಗತ ಸಿಗುತ್ತಿದೆ. ನಮ್ಮ ಸೋದರ ಸೋದರಿಯರಂಥ ಮಕ್ಕಳಿಗೆ ಯಾವುದಾದರೂ ರೀತಿಯಲ್ಲಿ ನೆರವಾಗಬೇಕು ಎಂಬ ಸದಾಶಯವೇ ತಂಡದ ಎಲ್ಲರಿಗೂ ಇರುವುದರಿಂದ, ವೀಕೆಂಡ್ ರಜೆ ವೇಸ್ಟ್ ಆಯ್ತು. ಉಚಿತವಾಗಿ ಪಾಠ ಹೇಳಿದ್ವಿ ಎಂಬ ಭಾವನೆ ನಮ್ಮಲ್ಲಿ ಯಾರಿಗೂ ಇಲ್ಲ. ನಮ್ಮ ತಂಡದಲ್ಲಿ ಹೆಚ್ಚಾಗಿ ಹೆಣ್ಣುಮಕ್ಕಳೇ ಇದ್ದಾರೆ. “ರಾಯಲ್ಟಿ ಸಿಗಲ್ಲ ಅಂದ್ಮೇಲೆ ಪಾಠ ಮಾಡಲು ಯಾಕೆ ಹೋಗ್ತಿàರಾ? ಎಂದು ಯಾವ ಪೋಷಕರೂ ಅಂದಿಲ್ಲ. ಬದಲಾಗಿ, ಹೋಗಿ ಮಕ್ಕಳಿಗೆ ಪಾಠ ಮಾಡಿ ಬನ್ನಿ. ಅದರಿಂದ ನಾಲ್ಕು ಮಕ್ಕಳಿಗೆ ಅನುಕೂಲ ಆಗಲಿ ಎಂದು ಉತ್ತೇಜನದ ಮಾತಾಡಿ ಕಳಿಸುತ್ತಾರೆ. ತಂಡದಲ್ಲಿರುವ 117 ಜನರೂ ಒಂದೇ ಕುಟುಂಬದವರ ಥರಾ ಇದೀವಿ ಅನ್ನುತ್ತಾರೆ’ ಶ್ರೀಶ ಭಟ್. ಕೋಟಿ ರೂಪಾಯಿಗೂ ಮಿಗಿಲು
“ಆಕಾಂಕ್ಷಾ’ ಆರಂಭವಾಗಿ ಆರು ವರ್ಷ ಕಳೆದಿದೆ. ಈ ಅವಧಿಯಲ್ಲಿ ದಕ್ಷಿಣ ಕನ್ನಡದ ಬಂಟ್ವಾಳ, ಸುಳ್ಯ, ಪುತ್ತೂರು, ಮಂಗಳೂರಿನ 60ಕ್ಕೂ ಹೆಚ್ಚು ಶಾಲೆಗಳಲ್ಲಿ, ಬೆಂಗಳೂರು ಜಿಲ್ಲೆಯ ನೆಲಮಂಗಲ, ಚಿಕ್ಕಬಳ್ಳಾಪುರ, ರಾಮನಗರದ ಶಾಲೆಗಳಲ್ಲಿ “ಆಕಾಂಕ್ಷಾ’ ತಂಡದ ಕಾರ್ಯಕ್ರಮಗಳು ನಡೆದಿವೆ. “ನಿಮ್ಮಿಂದ ಪಾಠ ಕೇಳಿದ ನಂತರ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಅದಕ್ಕಾಗಿ ಧನ್ಯವಾದಗಳು’ ಎಂದು ಶಾಲೆಯ ಅಧ್ಯಾಪಕರು ಎಷ್ಟೋ ಬಾರಿ ಹೇಳಿದ್ದಾರೆ. “ನಿಮ್ಮಿಂದಾಗಿ ಸೈನ್ಸ್‌ನಲ್ಲಿ ಆಸಕ್ತಿ ಬಂತು. ಮೊದಲು 38 ನಂಬರ್ ತೆಗೀತಿದ್ದೆ. ನಿಮ್ಮಿಂದ ಪಾಠ ಕೇಳಿದ ಮೇಲೆ 83 ತಗೊಂಡೆ ಸರ್’ ಎಂದು ಎಷ್ಟೋ ವಿದ್ಯಾರ್ಥಿಗಳು ಸಂಭ್ರಮಿಸಿದ್ದಾರೆ. ಇಂಥ ಮಾತುಗಳನ್ನು ಕೇಳಿದಾಗೆಲ್ಲ, ಕೋಟಿ ರೂಪಾಯಿ ಸಿಕ್ಕಾಗ ಆಗುತ್ತದಲ್ಲ; ಅದಕ್ಕಿಂತ ಹೆಚ್ಚಿನ ಖುಷಿಯಾಗುತ್ತದೆ. ಸರ್ಕಾರಿ ಶಾಲೆಗಳಲ್ಲಿ ಪಾಠ ಮಾಡಲು, ಆ ಮೂಲಕ ನಮ್ಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನೆರವಾಗಲು ನಾವೆಲ್ಲ ಸದಾ ಸಿದ್ಧರಿದ್ದೇವೆ ಎಂಬುದು ಆಕಾಂಕ್ಷಾ ತಂಡದ ಎಲ್ಲರ ಒಕ್ಕೊರಲ ಮಾತು.
ಹೆಚ್ಚಿನ ವಿವರಕ್ಕೆ: 8861938512, ಇಮೇಲ್ akankshatrust@gmail.com ಸಂಪರ್ಕಿಸಬಹುದು. ಆಕಾಂಕ್ಷಾ ಅಂದರೆ…
ಮುಂದೆ ನಾನು ಹೀಗೇ ಆಗಬೇಕು, ಹೀಗೇ ಓದಬೇಕು ಎಂಬ ಆಸೆ- ಆಕಾಂಕ್ಷೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಇರುತ್ತೆ. ಆದರೆ, ಎಲ್ಲವೂ ನಾವು ಅಂದುಕೊಂಡಂತೆಯೇ ಆಗುವುದಿಲ್ಲ. ವಿದ್ಯಾರ್ಥಿಗಳ ಕನಸಿಗೆ ಸರಿಯಾದ ದಿಕ್ಕು ತೋರಿಸುವ, ಮಾರ್ಗದರ್ಶನ ಮಾಡುವ ಸದಾಶಯ ನಮ್ಮದಿತ್ತು. ವಿದ್ಯಾರ್ಥಿಗಳ ಆಕಾಂಕ್ಷೆ ಈಡೇರಿಸುವ ಉದ್ದೇಶದಿಂಧ ಆರಂಭಿಸಿದೆವಲ್ಲ; ಅದಕ್ಕೇ “ಆಕಾಂಕ್ಷಾ’ ಎಂದೇ ಹೆಸರಿಟ್ಟುಕೊಂಡೆವು ಅನ್ನುತ್ತಾರೆ ಶ್ರೀಶ. “ಆಕಾಂಕ್ಷಾ’ಕ್ಕೆ ಆಶೀರ್ವಾದ….
ಮೋಜು-ಮಸ್ತಿ ಎಂದು ಸಂಭ್ರಮಿಸುವ ವಯಸ್ಸಿನಲ್ಲಿ, ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ಪಾಠ ಮಾಡುತ್ತಿರುವ “ಆಕಾಂಕ್ಷಾ’ ತಂಡದ ಸದಸ್ಯರನ್ನು, ಪುತ್ತೂರಿನ ವಿವೇಕಾನಂದ ಹಾಗೂ ಫಿಲೋಮಿನಾ ಕಾಲೇಜಿನ ಪ್ರಾಚಾರ್ಯರು, ಅಧ್ಯಾಪಕ ವರ್ಗದವರು ಶ್ಲಾ ಸಿದ್ದಾರೆ. ಐಎಎಸ್ ಅಧಿಕಾರಿಗಳಾದ ತುಳಸಿ ಮದ್ದಿನೇನಿ, ಶ್ರೀವಿದ್ಯಾ, ಹಿರಿಯ ವಿಜ್ಞಾನಿ ಹಾಲೊªಡ್ಡೇರಿ ಸುಧೀಂದ್ರ… ಈ ತಂಡದವರ ಬೆನ್ನು ತಟ್ಟಿದ್ದಾರೆ. “ನಿಮ್ಮ ಸಮಾಜಮುಖೀ ಕೆಲಸದ ಬಗ್ಗೆ ತಿಳಿದು ಹೆಮ್ಮೆಯಾಗಿದೆ. ನಿಮ್ಮ ಕಾರ್ಯಕ್ರಮಕ್ಕೆ ಒಮ್ಮೆ ನಾನೂ ಬರ್ತೀನಿ’ ಎಂದು ಚಿತ್ರನಟ ರಮೇಶ್ ಅರವಿಂದ್ ಮೊನ್ನೆಯಷ್ಟೇ ಹೇಳಿದ್ದಾರೆ. ಈ ಪ್ರೋತ್ಸಾಹದ ಮಾತು, ಆಕಾಂಕ್ಷಾ ತಂಡದವರ ಹುಮ್ಮಸ್ಸನ್ನು ದುಪ್ಪಟ್ಟು ಮಾಡಿದೆ. – ಎ.ಆರ್. ಮಣಿಕಾಂತ್