Advertisement

ಆತಂಕ ತಂದ ಭೂಕಂಪನ

07:03 PM Nov 01, 2020 | Suhan S |

ವಿಜಯಪುರ: ಸುಮಾರು ಒಂದು ತಿಂಗಳಿಂದ ಆಗಾಗ ಅದುರುತ್ತಿರುವ ಭೂಮಿ ಇದೀಗ ದೊಡ್ಡ ಮಟ್ಟದಲ್ಲೇ ಕಂಪಿಸುತ್ತಿದೆ. ಅಧಿಕಾರಿಗಳು ಭಯ ಪಡುವ ಅಗತ್ಯವಿಲ್ಲ ಎಂಬ ಭರವಸೆ ನೀಡುತ್ತಿದ್ದರೂ ಜಿಲ್ಲೆಯಲ್ಲಿ ಬೃಹತ್‌ ಯೋಜನೆಗಳಿರುವ ಪರಿಸರದ ಹತ್ತಾರು ಗ್ರಾಮಗಳಲ್ಲಿ ಭೂಕಂಪದ ಆತಂಕ ಹೆಚ್ಚುತ್ತಲೇ ಸಾಗಿದೆ. ಕಳೆದ 12 ಗಂಟೆಯಲ್ಲಿ ನಿರಂತರ 4 ಬಾರಿ ಭೂ ಕಂಪಿಸಿದ್ದು ಭಯದಲ್ಲೇ ಬದುಕುತ್ತಿರುವ ಜನರಲ್ಲಿ ಇನ್ನಷ್ಟು ಭೀತಿ ಆವರಿಸುವಂತೆ ಮಾಡಿದೆ.

Advertisement

ಈ ತಿಂಗಳ ಮೊದಲ ವಾರದಿಂದ ಸಣ್ಣ ಪ್ರಮಾಣದಲ್ಲಿ ಭೂಮಿಯ ಆಳದಲ್ಲಿ ಕೇಳಿ ಬರುತ್ತಿದ್ದ ಸದ್ದು ಇದೀಗ ದೊಡ್ಡ ಸದ್ದಿನೊಂದಿಗೆ ನಿಂತ ನೆಲವನ್ನೇ ಅಲುಗಾಡಿಸುತ್ತಿದೆ. ಕೊಲ್ಹಾರ ತಾಲೂಕಿನ ಮಲಘಾಣ, ಮಸೂತಿ, ಮುಳವಾಡ ತಾಂಡಾ ಮಾತ್ರವಲ್ಲದೇ ಜಿಲ್ಲೆಯಲ್ಲಿ ಆಲಮಟ್ಟಿಯ ಶಾಸ್ತ್ರಿ ಸಾಗರ, ಕೂಡಗಿ ರಾಷ್ಟ್ರೀಯ ಉಷ್ಣ ವಿದ್ಯುತ್‌ ಸ್ಥಾವರ (ಎನ್‌ಟಿಪಿಸಿ) ದಂಥ ಬೃಹತ್‌ ಯೋಜನೆಗಳಿರುವ ಪರಿಸರದ ನಿಸರ್ಗದ ಮಡಿಲಲ್ಲಿ ನಡೆಯುತ್ತಿರುವ ಈ ಅಚ್ಚರಿ ಭೂಕಂಪದ ಅನುಭವವನ್ನೇ ನೀಡುತ್ತಿದೆ. ಸ್ಥಳೀಯರು ತಕ್ಷಣ ನೆರವಿಗೆ ಬರುವಂತೆ 20 ದಿನಗಳ ಹಿಂದೆಯೇ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಶುಕ್ರವಾರ ಅ. 30ರಂದು ರಾತ್ರಿ 9:01ಕ್ಕೆ ಭಾರಿ ಸದ್ದಿನೊಂದಿಗೆ ಕಂಪಿಸಿದ ಭೂಮಿ, ಶನಿವಾರ ಅ. 31ರಂದು ಬೆಳಗ್ಗೆ 10:05 ಸಮಯದ ಅವ ಧಿಯಲ್ಲಿ 4 ಬಾರಿ ಕಂಪಿಸಿದೆ. ಮನೆಗಳು ಅದುರಿದ್ದರಿಂದ ಗೋಡೆಗಳು ಬಿರುಕು ಬಿಟ್ಟಿವೆ. ಪಾತ್ರೆಗಳು ನೆಲಕ್ಕೆ ಬಿದ್ದಿವೆ. ಮಲಗಿದವರು ಬಡಿದೆಬ್ಬಿಸಿದ ಅನುಭವವಾಗಿ ಮನೆಯಿಂದ ಹೊರಗೆ ಓಡೋಡಿ ಬರುವುದು ನಡೆದೇ ಇದೆ. ಹಗಲು-ರಾತ್ರಿ ಎನ್ನದೇ ಸ್ಥಳೀಯರು ಮಕ್ಕಳು, ಮಹಿಳೆಯರನ್ನು ಕಟ್ಟಿಕೊಂಡು ಜೀವಭಯದಲ್ಲಿ ಬಯಲಲ್ಲೇ ನಿಂತಿದ್ದಾರೆ. ಇಷ್ಟಾದರೂ ಸ್ಥಳೀಯ ಅಧಿಕಾರಿಗಳು ರಿಕ್ಟರ್‌ ಮಾಪಕದಲ್ಲಿ ಭೂಕಂಪದ ಅನುಭವ ಆಗಿಲ್ಲ ಎಂದು ಹೇಳುತ್ತಿರುವುದು ಭೂಮಿ ಕಂಪಿಸುವ ಹಳ್ಳಿಗರನ್ನು ಕೆರಳುವಂತೆ ಮಾಡಿದೆ.

ಜಿಲ್ಲಾಡಳಿತ ಕಂದಾಯ ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕಳಿಸಿ ಪರಿಶೀಲಿಸಿದ್ದು, ಭೂಗರ್ಭ ಶಾಸ್ತ್ರಜ್ಞರ ತಂಡವನ್ನು ಸ್ಥಳಕ್ಕೆ ಕಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದೆ. ಸಾಲದ್ದಕ್ಕೆ ವಿಪತ್ತು ನಿರ್ವಹಣಾ ಘಟಕದ ನಿರ್ದೇಶಕರಿಗೆ ಕರೆ ಮಾಡಿ ಸ್ವಯಂ ಸ್ಥಾನಿಕ ಪರಿಸ್ಥಿತಿ ಗಂಭೀರತೆ ಕುರಿತು ಜಿಲ್ಲಾಧಿಕಾರಿ ಸುನೀಲಕುಮಾರ ಮನವರಿಕೆ ಮಾಡಿಕೊಟ್ಟಿದ್ದಾರೆ. ಇಷ್ಟಾದರೂ ಸರ್ಕಾರವಾಗಲಿ, ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿಗಳು ಮಾತ್ರ ತುರ್ತು ಭೇಟಿಗೆ ಮುಂದಾಗಿಲ್ಲ ಎಂದು ಭೂಕಂಪದ ಭೀತಿ ಅನುಭವಿಸುತ್ತಿರುವ ಗ್ರಾಮಸ್ಥರು ಆಕ್ರೋಶ ಹೊರ ಹಾಕುತ್ತಿದ್ದಾರೆ.

ಭೂಕಂಪನದಂಥ ಭೂಗರ್ಭ ವಿಜ್ಞಾನದ ವಿಷಯದಲ್ಲಿ ವೈಜ್ಞಾನಿಕ ವಿಶ್ಲೇಷಕ ತಜ್ಞರೇ ಸ್ಪಷ್ಟ ಉತ್ತರ ನೀಡಬೇಕಿದೆ. ಆದರೆ ಭೂವಿಜ್ಞಾನ ಬಲ್ಲವಿಜ್ಞಾನಿಗಳು ಸ್ಥಳಕ್ಕೆ ಬಂದು ಅಧ್ಯಯನ ನಡೆಸಿ, ವಾಸ್ತವಿಕತೆಯನ್ನು ಜನರಿಗೆ ತಿಳಿಸುವ ಕೆಲಸಮಾಡಿಲ್ಲ. ಹೀಗಾಗಿ ತಿಂಗಳಿಂದ ಭೂಕಂಪದ ಅನುಭವ ಹೇಳಿಕೊಳ್ಳುತ್ತಿರುವ ಜಿಲ್ಲೆಯ ಕೃಷ್ಣಾ ನದಿ ಪರಿಸರದ ಜನರಲ್ಲಿ ಸರ್ಕಾರ, ಆಡಳಿತ ವ್ಯವಸ್ಥೆ ವಿರುದ್ಧ ಜನಧ್ವನಿ ಬಿರುಸುಗೊಳ್ಳುತ್ತಿದೆ. ರಾಜ್ಯದ ವಿಧಾನಸಭೆ ಉಪ ಚುನಾವಣೆ, ಸ್ಥಳೀಯ ಸಂಸ್ಥೆಗಳ ಗದ್ದುಗೆ ಏರುವ ರಾಜಕೀಯ ಒತ್ತಡದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆಗೆ ಸ್ಥಳೀಯರು ಕರೆ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ಕಿಡಿ ಕಾರಿದ್ದಾರೆ.

Advertisement

ತಜ್ಞರು ಸ್ಥಳಕ್ಕೆ ಬಂದು ತಾಂತ್ರಿಕ ಕಾರಣ ಸಹಿತ

ವೈಜ್ಞಾನಿಕವಾಗಿ ಭೂಕಂಪನಕ್ಕೆ ಕಾರಣವಾಗುತ್ತಿರುವ ಅಂಶಗಳನ್ನು ಬಹಿರಂಗ ಪಡಿಸದ ಸ್ಥಳೀಯ ಅಧಿಕಾರಿಗಳು ಜನರಿಗೆ ಉತ್ತರಿಸಲಾಗದೇ ಸರ್ಕಾರಕ್ಕೆ ವರದಿ ನೀಡಿದ್ದೇವೆ. ತಜ್ಞರ ಭೇಟಿಗೆ ಮನವಿ ಮಾಡಿದ್ದೇವೆ ಎಂಬ ಸಿದ್ಧ ಉತ್ತರ ನೀಡಿ ಜಾರಿಕೊಳ್ಳುತ್ತಿದ್ದಾರೆ. ವಾಸ್ತವಿಕ ಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟು, ಭೂಕಂಪದ ಆತಂಕದಲ್ಲಿರುವ ಜನರಲ್ಲಿ ಆತ್ಮವಿಶ್ವಾಸ ತುಂಬುದ ಕೆಲಸವೂ ಆಗಿಲ್ಲ. ತಜ್ಞರು ಸ್ಪಷ್ಟೀಕರಿಸಿ, ಸರ್ಕಾರದ ಸೂಚನೆ ಬಾರದ ಹೊರತು ಜಿಲ್ಲಾಡಳಿತ ಪುನರ್ವಸತಿ ಸೇರಿದಂತೆ ತುರ್ತು ನೆರವಿವೆ ಧಾವಿಸುವ ಯಾವ ಕ್ರಮಕ್ಕೂ ಮುಂದಾಗದಂತೆ ಕೈ ಕಟ್ಟಿಹಾಕಿದೆ.

ಹೀಗಾಗಿ ಗಂಭೀರ ಸ್ವರೂಪದಲ್ಲಿ ದುರಂತ ಸಂಭವಿಸಿದ ಮೇಲೆ ಸರ್ಕಾರ, ಅಧಿಕಾರಿಗಳು ಎಚ್ಚೆತ್ತುಕೊಳ್ಳುವರೇ ಎಂದು ಆಕ್ರೋಶದ ಮಾತುಗಳು ಕೇಳಿ ಬರುತ್ತಿವೆ. ಸರ್ಕಾರ ಕೂಡ ಗಂಭೀರ ವಿಷಯದಲ್ಲಿ ನಿರ್ಲಕ್ಷ್ತ ಮಾಡದೇ ತುರ್ತು  ಕ್ರಮಕ್ಕೆ ಮುಂದಾಗದಿದ್ದಲ್ಲಿ ಭವಿಷ್ಯದಲ್ಲಿ ಸಂಭಿಸುವ ಅಪಾಯಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಸ್ಥಳೀಯರು ಎಚ್ಚರಿಸುತ್ತಿದ್ದಾರೆ.

ಭೂಕಂಪನ ಆಗಿದೆ ಎಂದು ಮಲಘಾಣ ಸುತ್ತಲ ಜನ ಹೇಳುತ್ತಿದ್ದರೂ, ಜಿಲ್ಲೆಯಲ್ಲಿ ಎಲ್ಲೂ ಭೂಕಂಪನ ಆಗಿರುವ ಕುರಿತು ರಿಕ್ಟರ್‌ ಮಾಪಕದಲ್ಲಿ ದಾಖಲಾಗಿಲ್ಲ. ಸರ್ಕಾರ ಹಾಗೂ ವಿಪತ್ತು ನಿರ್ವಹಣಾ ಘಟಕದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಪರಿಸ್ಥಿತಿಯ ಗಂಭೀರತೆ ಮನವರಿಕೆ ಮಾಡಿಕೊಟ್ಟಿದ್ದೇವೆ. ತಜ್ಞರು ವೈಜ್ಞಾನಿಕ ವಿಶ್ಲೇಷಣೆಗೆ ತುರ್ತಾಗಿ ಬರುವಂತೆ ಕೋರಿದ್ದೇವೆ. ಪಿ.ಸುನೀಲಕುಮಾರ ಜಿಲ್ಲಾಧಿಕಾರಿ, ವಿಜಯಪುರ

ಭೂಕಂಪದ ಕುರಿತು ಜಿಲ್ಲಾಡಳಿತಕ್ಕೆ ಮೂರು  ವಾರದ ಹಿಂದೆಯೇ ಮೌಖೀಕ ಮಾಹಿತಿ, ಲಿಖೀತ ಮನವಿ ಮಾಡಿಕೊಂಡಿದ್ದೇವೆ. ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಮೊರೆ ಇಟ್ಟರೂ ಜಿಲ್ಲಾ ಉಸ್ತುವಾರಿ ಸಚಿವೆ ತಾವು ಚುನಾವಣೆ ಒತ್ತಡದಲ್ಲಿ ಇರುವ ನೆಪ ಹೇಳುತ್ತಿದ್ದಾರೆ. ತುರ್ತು ಕ್ರಮ ಕೈಗೊಳ್ಳದೇ ದುರಂತ ಸಂಭವಿಸಿದ ಮೇಲೆ ಸಾಂತ್ವನ ಹೇಳಲು ಬಂದರೆ ಸುಮ್ಮನಿರುವುದಿಲ್ಲ. ಬಸನಗೌಡ ಪಾಟೀಲ, ತಾಲೂಕಾಧ್ಯಕ್ಷರು ರಾಷ್ಟ್ರೀಯ ಬಸವಸೈನ್ಯ, ಕೊಲ್ಹಾರ

ತಿಂಗಳಿಂದ ಭಾರಿ ಸದ್ದಿನೊಂದಿಗೆ ಭೂಮಿ ಕಂಪಿಸುತ್ತಿದೆ. ಮೇಲೆ ಹಾಕಿದ ಪಾತ್ರೆಗಳು ತೂರಾಡಿ ಮೇಲೆ ಬೀಳುತ್ತಿವೆ. ನಿನ್ನೆಯಿಂದ ಮನೆಯಲ್ಲಿ ಮಲಗುವ ಮಾತಿರಲಿ ಕುಳಿತುಕೊಳ್ಳಲೂ ಸಾಧ್ಯವಾಗದೇ ಮಕ್ಕಳೊಂದಿಗೆ ಬೀದಿಯಲ್ಲೇ ನಿಂತಿದ್ದೇವೆ. ಸರ್ಕಾರ ನಮ್ಮ ಜೀವ ರಕ್ಷಣೆ ವಿಷಯದಲ್ಲಿಇಷ್ಟೇಕೆ ನಿರ್ಲಕ್ಷ್ಯ ಮಾಡುತ್ತಿದೆ ತಿಳಿಯುತ್ತಿಲ್ಲ.  –ಶ್ರೀದೇವಿ ಶಿವಾನಂದ ವಠಾರ ಮಲಘಾಣ ನಿವಾಸಿ

 

ಜಿ.ಎಸ್‌.ಕಮತರ

Advertisement

Udayavani is now on Telegram. Click here to join our channel and stay updated with the latest news.

Next