ಬೆಂಗಳೂರು: ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಈ ವರ್ಷ ಪ್ಲಾಸ್ಟರ್ ಆಫ್ ಪ್ಯಾರೀಸ್ ಮೂರ್ತಿಗಳ ಬಳಕೆ ನಿಷೇಧವಾಗಿರುವ ಹಿನ್ನೆಲೆಯಲ್ಲಿ ಮಣ್ಣಿನ ಮೂರ್ತಿಗಳ ಬಳಕೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬಿಬಿಎಂಪಿ ಅಧಿಕಾರಿಗಳು ಹಾಗೂ ನೌಕರರ ಕ್ಷೇಮಾಭಿವೃದ್ಧಿ ಮುಂದಾಗಿದೆ. ಇದಕ್ಕೆಂದೇ ಭಾನುವಾರ (ಆಗಸ್ಟ್ 20) ಬೆಳಗ್ಗೆ 8.30 ಕ್ಕೆ “ಜಾಗೃತಿ ಓಟ’ ಸಹ ಹಮ್ಮಿಕೊಂಡಿದ್ದು, ಅಧಿಕಾರಿಗಳು ಹಾಗೂ ನೌಕರರಿಗೆ ಆಯೋಜಿಸಿರುವ ಓಟದಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಗುವುದು.
ಜಾಗೃತಿ ಓಟದಲ್ಲಿ ಭಾಗವಹಿಸಿ ವಿಜೇತರಾಗುವವರಿಗೆ ನಗದು ಬಹುಮಾನ ಘೋಷಿಸಲಾಗಿದ್ದು, ಪ್ರಥಮ ಸ್ಥಾನಕ್ಕೆ ತಲಾ 10 ಸಾವಿರ, ದ್ವಿತೀಯ ಬಹುಮಾನ ತಲಾ ಐದು ಸಾವಿರ ಮತ್ತು ಮೂರನೇ ಬಹುಮಾನ 2,500 ರೂ. ನಗದು ಬಹುಮಾನ ಒಳಗೊಂಡಿರಲಿದೆ.
ಜಾಗೃತಿ ಓಟಕ್ಕೆ ಕಬ್ಬನ್ ಪಾರ್ಕ್‌ನ ಮುಖ್ಯದ್ವಾರದಲ್ಲಿ ಚಾಲನೆ ದೊರೆಯಲಿದ್ದು, ಸೆಂಚುರಿ ಕ್ಲಬ್ ಮುಖಾಂತರ ನೃಪತುಂಗ ರಸ್ತೆ, ಡಿ.ಸಿ.ಕಚೇರಿಯಿಂದ ಮತ್ತೆ ಕಬ್ಬನ್ ಪಾರ್ಕ್ ಮುಖ್ಯದ್ವಾರದಲ್ಲಿ ಮುಕ್ತಾಯವಾಗಲಿದೆ. ಓಟದಲ್ಲಿ ಭಾಗವಹಿಸಲಿರುವ ಎಲ್ಲ ಅಧಿಕಾರಿಗಳು ಮತ್ತು ನೌಕರರಿಗೆ ಟೀ-ಶರ್ಟ್ ವಿತರಣೆ ಹಾಗೂ ಲಘು ಉಪಹಾರ ವ್ಯವಸ್ಥೆ ಮಾಡಲಾಗಿದೆ.
ಪಿಒಪಿ ಮೂರ್ತಿಗಳಿಂದ ನಗರದಲ್ಲಿ ಜಲಮೂಲಗಳಿಗೆ ಹಾನಿಯಾಗಲಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಪರಿಸರ ಸ್ನೇಹಿ ಗೌರಿ ಹಾಗೂ ಗಣೇಶ ಮೂರ್ತಿಗಳನ್ನು ಬಳಸುವ ಮೂಲಕ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಬೇಕು ಎಂಬುದು ಓಟದ ಉದ್ದೇಶವಾಗಿದೆ.
ಕಳೆದ ವರ್ಷ ನಗರದಲ್ಲಿ 4.5ಲಕ್ಷ ಗೌರಿ-ಗಣೇಶ ವಿಗ್ರಹಗಳು ಬಿಬಿಎಂಪಿ ವ್ಯಾಪ್ತಿಯ ಕೆರೆಗಳು, ಪುಷ್ಕರಣಿ, ಟ್ಯಾಂಕರ್‌ಗಳಲ್ಲಿ ವಿಸರ್ಜಿಸಲಾಗಿದೆ. ಈ ಪೈಕಿ ಶೇ.40ರಷ್ಟು ಮೂರ್ತಿಗಳು ಪಿಒಪಿ ಗೌರಿ-ಗಣೇಶ ಮೂರ್ತಿಗಳಿದ್ದವು. ಪಿಓಪಿ ಮೂರ್ತಿಗಳು ವಿಸರ್ಜನೆ ಮಾಡಿದರೂ ನೀರಿನಲ್ಲಿ ಕರಗುವುದಿಲ್ಲ. ಜತೆಗೆ ಪರಿಸರ ಮತ್ತು ಜಲಮೂಲಗಳಿಗೆ ಹಾನಿಯಾಗಲಿದೆ.
ಹೀಗಾಗಿ, ಪ್ರಸಕ್ತ ಸಾಲಿನಲ್ಲಿ ಪಿಒಪಿ ಗೌರಿ-ಗಣೇಶ ಮೂರ್ತಿ ನಗರಕ್ಕೆ ಬರುವುದು ತಡೆಯುವುದು ಜತೆಗೆ ಪಿಒಪಿ ಮೂರ್ತಿಗಳನ್ನು ಖರೀದಿಸುವುದು ತಡೆಯುವ ನಿಟ್ಟಿನಲ್ಲಿ ಜಾಗೃತಿಗೆ ಪಾಲಿಕೆ ಅಧಿಕಾರಿಗಳು ಹಾಗೂ ನೌಕರರ ಸಂಘ ಈ ವರ್ಷದಿಂದ ಜಾಗೃತಿಗೆ ಮುಂದಾಗಿದೆ.
ಪಿಒಪಿ ಗೌರಿ-ಗಣೇಶ ಮೂರ್ತಿಗಳಿಂದ ಜಲಮೂಲಗಳಿಗೆ ತೊಂದರೆಯಾಗಲಿದೆ. ಆ ಹಿನ್ನೆಲೆಯಲ್ಲಿ ಈಗಾಗಲೇ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ಪಾಲಿಕೆಯ ಶಾಲಾ-ಕಾಲೇಜುಗಳಲ್ಲಿಯೂ ಜಾಗೃತಿ ಮೂಡಿಸಲಾಗಿದೆ. ಇದೀಗ ಬಿಬಿಎಂಪಿ ಅಧಿಕಾರಿಗಳು ಹಾಗೂ ನೌಕರರಲ್ಲಿಯೂ ಪರಿಸರ ಸ್ನೇಹಿ ಗಣಪ ಬಳಕೆಯ ಕುರಿತು ಜಾಗೃತಿ ಮೂಡಿಸಲು ಓಟ ಕೈಗೊಂಡಿರುವುದು ಸ್ವಾಗತಾರ್ಹ.
-ಜಿ.ಪದ್ಮಾವತಿ, ಮೇಯರ್