ಕುಂಬಳೆ: ನಾಲ್ಕು ವರ್ಷಗಳ ಹಿಂದೆ ನಡೆದ ಘಟನೆಯನ್ನು ಫೆ. 9ರಂದು ನಡೆದ ರೀತಿಯಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಗೈದು ಕೋಮು ಗಲಭೆ ಸೃಷ್ಟಿಸಲು ಯತ್ನಿಸಿದ ಆರೋಪದಂತೆ ಐವರ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ.
ನೌಶಾದ್, ಸಲಾಂ, ಖಾದರ್, ಹಬೀಬ್ ಮತ್ತು ಮುಸ್ತಫ ವಿರುದ್ಧ ಕೇಸು ದಾಖಲಿಸಿದ್ದಾರೆ.2020ರಲ್ಲಿ ಬಂಬ್ರಾಣದಲ್ಲಿ ಘಟನೆಯೊಂದು ನಡೆದಿತ್ತು.
ಆ ಘಟನೆಯ ವರದಿ ಕೆಲವು ಆನ್‌ಲೈನ್ ಮಾಧ್ಯಮಗಳಲ್ಲಿ ಪ್ರಚಾರವಾಗಿತ್ತು. ಇದೀಗ ಆ ಘಟನೆಯ ದೃಶ್ಯಗಳನ್ನು ತಿದ್ದುಪಡಿ ಮಾಡಿ ಫೆ. 9ರಂದು ನಡೆದುದಾಗಿ ಚಿತ್ರೀಕರಿಸಿ ತಂಡ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿದೆ. ಕುಂಬಳೆಯ ಕೆಲವು ವಾಟ್ಸ್ ಆ್ಯಪ್ ಗ್ರೂಪ್ ಗಳಲ್ಲಿ ನಕಲಿ ಘಟನೆ ಪ್ರಚಾರವೂ ನಡೆದಿದ್ದು, ಇದು ಪೊಲೀಸರ ಗಮನಕ್ಕೂ ಬಂದಿದ್ದು, ಕೂಡಲೇ ಎಸ್‌ಐ ಟಿ.ಎಂ.ವಿಪಿನ್, ಇನ್‌ಸ್ಪೆಕ್ಟರ್ ಬಿಜೋಯ್ ಎಂ.ಎನ್. ತನಿಖೆ ಆರಂಭಿಸಿದ್ದಾರೆ.
ಈ ಘಟನೆಯಲ್ಲಿ ಐವರು ಒಳಗೊಂಡಿದ್ದಾರೆಂದು ತನಿಖೆಯಲ್ಲಿ ತಿಳಿದು ಬಂದಿದ್ದು ಅವರ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಘಟನೆಯನ್ನು ಪ್ರಚಾರಗೈದ ವಾಟ್ಸ್ ಆ್ಯಪ್ ಗ್ರೂಪ್ ಅಡ್ಮಿನ್‌ಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು.
ಉಪ್ಪಳ: ಕೊಠಡಿಯೊಳಗೆ
ಸಿಲುಕಿದ ಮಗು ರಕ್ಷಣೆ
ಉಪ್ಪಳ: ಉಪ್ಪಳ ಕೋಡಿಬೈಲಿನ ಮನೆಯೊಂದರ ಕೊಠಡಿಯೊಳಗೆ ತೆರಳಿದ ಎರಡು ವರ್ಷದ ಹೆಣ್ಣು ಮಗು ಬಾಗಿಲಿನ ಚಿಲಕ ಹಾಕಿ ಕೊಠಡಿಯೊಳಗೆ ಸಿಲುಕಿಕೊಂಡಿದ್ದು, ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಉಪ್ಪಳದ ಅಗ್ನಿಶಾಮಕ ದಳ ಬಾಗಿಲು ತೆರೆದು ಮಗುವನ್ನು ರಕ್ಷಿಸಿದೆ.
ಮನೆಯವರು ಕೆಲಸದಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಮಗು ಕೊಠಡಿಯೊಳಗೆ ಹೋಗಿ ಚಿಲಕ ಹಾಕಿದೆ. ಕೆಲವು ಹೊತ್ತಿನ ಬಳಿಕ ಮಗು ಕಾಣದಿದ್ದಾಗ ಹುಡುಕಾಡಿದಾಗ ಕೊಠಡಿಯೊಳಗೆ ಸಿಲುಕಿಕೊಂಡಿರುವುದು ತಿಳಿಯಿತು. ಅಗ್ನಿಶಾಮಕ ದಳಕ್ಕೆ ತಿಳಿಸಲಾಯಿತು. ಕೂಡಲೇ ಸ್ಥಳಕ್ಕೆ ಧಾವಿಸಿ ಮಗುವನ್ನು ರಕ್ಷಿಸಿತು.