Advertisement

ಘಟಬಂಧನ್‌ ಸಾರ್ಥಕ್ಕಾಗಿ ಸಿದ್ದು ಬಲಿಪಶು ಮಾಡುವ ಯತ್ನ; ಗೋಪಾಲ್‌

04:50 PM Oct 19, 2022 | Team Udayavani |

ಕೋಲಾರ: ಕೆಲವು ನಾಯಕರು ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ಸಿಗೆ ವಲಸಿಗರಾಗಿ ಬಂದ ಕೆಲವು ಮುಖಂಡರು ರಚಿಸಿಕೊಂಡಿರುವ ಮಹಾ ಘಟಬಂಧನ್‌ ಎಂಬ ಡ್ರಾಮ ಕಂಪನಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಕೋಲಾರಕ್ಕೆ ತಂದು ಬಲಿಪಶುವಾಗಿಸುವ ಪ್ರಯತ್ನ ನಡೆಸಿದೆ ಎಂದು ಹಿರಿಯ ಕಾಂಗ್ರೆಸ್‌ ಮುಖಂಡ ಶೇಷಾಪುರ ಗೋಪಾಲ್‌ ಲೇವಡಿ ಮಾಡಿದ್ದಾರೆ.

Advertisement

ಈ ಕುರಿತು ಹೇಳಿಕೆ ನೀಡಿರುವ ಅವರು, ಪಕ್ಷಾಂತರ ಮತ್ತು ಅವಕಾಶವಾದವನ್ನು ಅಸ್ತ್ರವಾಗಿಸಿಕೊಂಡು ವಲಸಿಗರಾಗಿ ಕಾಂಗ್ರೆಸ್ಸಿಗೆ ಬಂದು ಕಾರ್ಯ ಸಾಧನೆ ನಂತರ ಎಲ್ಲಾ ಸಿದ್ಧಾಂತಗಳನ್ನು ಉಲ್ಲಂಘಿಸಿ ತಮ್ಮ ಪ್ರತಿಷ್ಠೆಯಿಂದ ಹುಟ್ಟು ಹಾಕಿದ ಘಟಬಂಧನ್‌ ಡ್ರಾಮಾ ಕಂಪನಿಯ ರಾಜಕಾರಣ ಇಂದಿನ ಕಾಂಗ್ರೆಸ್‌ ದುಸ್ಥಿತಿಗೆ ಕಾರಣವಾಗಿದೆ ಎಂದು ಶಾಸಕ ರಮೇಶ್‌ಕುಮಾರ್‌ ಹಾಗೂ ಕೆ. ಶ್ರೀನಿವಾಸಗೌಡರ ವಿರುದ್ಧ ವಾಗ್ಧಾಳಿ ನಡೆಸಿದರು. ಅವಿಭಜಿತ ಕೋಲಾರ ಮತ್ತು ಅವಳಿ ಜಿಲ್ಲೆಗಳು ಕಾಂಗ್ರೆಸ್ಸಿನ ಭದ್ರಕೋಟೆಗಳು.

ತುರ್ತುಪರಿಸ್ಥಿತಿಯ ನಂತರದ ದಿನಗಳಲ್ಲಿ ಕೆಲವೊಂದು ಏಳು ಬೀಳುಗಳ ನಡುವೆಯೂ ಈ ಜಿಲ್ಲೆಯ ಮತದಾರರು ಎಂದು ಕಾಂಗ್ರೆಸ್ಸಿನ ಕೈಬಿಟ್ಟಿಲ್ಲ. ಕಾರಣ ಈ ಭಾಗದಲ್ಲಿ ರಾಜಕಾರಣದ ಬುನಾದಿಯನ್ನು ಹಾಕಿಕೊಟ್ಟ ನಾಯಕರು ಕೆ.ಸಿ.ರೆಡ್ಡಿ ಅವರಿಂದ ಹಿಡಿದು ಪಟ್ಟಾಭಿರಾಮನ್‌, ಟಿ ಚೆನ್ನಯ್ಯನವರು, ಎಂ ವಿ ಕೃಷ್ಣಪ್ಪನವರು, ಕೃಷ್ಣರಾಯರು, ಚೌಡರೆಡ್ಡಿ ಅವರು, ವಿ.ಮುನಿಯಪ್ಪ ಹಾದಿಯಾಗಿ ಕೆ.ಎಚ್‌ ಮುನಿಯಪ್ಪನವರವರೆಗೂ ಈ ಎಲ್ಲಾ ನಾಯಕರು ಹಾಕಿಕೊಂಡ ಸಮಾಜಮುಖೀ ಕಾರ್ಯ ಕ್ರಮಗಳ ಮೂಲಕ ಕಾಂಗ್ರೆಸ್‌ ಭದ್ರಕೋಟೆಯಾಗಿದೆ.

ಆದರೆ ಇದೇ ಸಮಯದಲ್ಲಿ ಕೆಲವು ನಾಯಕರು ತಮ್ಮ ರಾಜಕೀಯ ಉಳಿವಿಗಾಗಿ ಪಕ್ಷಾಂತರ ಮತ್ತು ಅವಕಾಶವಾದವನ್ನು ಅಸ್ತ್ರವಾಗಿಟ್ಟುಕೊಂಡು ವಲಸಿಗರಾಗಿ ಕಾಂಗ್ರೆಸ್ಸಿಗೆ ಬಂದು ಕಾರ್ಯ ಸಾಧನೆ ಮಾಡಿಕೊಂಡರು. ಬಳಿಕ ಎಲ್ಲಾ ಸಿದ್ಧಾಂತಗಳನ್ನು ಗಾಳಿಗೆ ತೂರಿ ತಮ್ಮ ಪ್ರತಿಷ್ಠೆಯಿಂದ ಹುಟ್ಟು ಹಾಕಿದ ಘಟಬಂಧನ್‌ ಡ್ರಾಮ ಕಂಪನಿ ಸೃಷ್ಟಿಸಿದರು. ಜಿಲ್ಲೆಯ ಕಾಂಗ್ರೆಸ್‌ ದುಸ್ಥಿತಿಗೆ ಕಾರಣವಾಗಿದೆ.ಈ ನಾಯಕರು ಜಿಲ್ಲೆಯಲ್ಲಿ ಪಕ್ಷ ಕಟ್ಟಿ ಬೆಳೆಸಲಿಕ್ಕೆ ಶ್ರಮ ಪಟ್ಟಿದ್ದಂತೂ ಇಲ್ಲ. ಅದರ ಬದಲಾಗಿ ಈ ಪಕ್ಷವೇ ನಮ್ಮಿಂದ ಎಂದು ರಾಜಕೀಯ ಮಾಡುತ್ತಿದ್ದಾರೆ.

ಮತದಾರರ ತ್ಯಾಗಕ್ಕೆ ಬೆಲೆಯೇ ಇಲ್ಲವೇ?
ಸಿದ್ದರಾಮಯ್ಯ ಅವರನ್ನು ಜಿಲ್ಲೆಯ ಅಭಿವೃದ್ಧಿಗಾಗಿ ತರುತ್ತಿದ್ದೇವೆ ಎಂದ ಮೇಲೆ 40 ವರ್ಷದಿಂದ ಜಿಲ್ಲೆಯಲ್ಲಿ ನಿಮ್ಮಗಳ ರಾಜಕೀಯ ಜೀವನದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳೇನು? ಶ್ರೀನಿವಾಸ್‌ ಗೌಡ್ರು ಹಾಗೂ ರಮೇಶ್‌ ಕುಮಾರ್‌ ಅವರು ದಿಗ್ಗಜ ನಾಯಕರು. ಇವರನ್ನ ಬೆಳೆಸಲಿಕ್ಕೆ ಕ್ಷೇತ್ರದ ಮತದಾರರು ಪಟ್ಟಕಷ್ಟ ಹಾಗೂ ಮಾಡಿದ ತ್ಯಾಗಗಳು ವ್ಯರ್ಥವಾದವೇ? ಎಂದು ಹಿರಿಯ ಕಾಂಗ್ರೆಸ್‌ ಮುಖಂಡ ಶೇಷಾಪುರ ಗೋಪಾಲ್‌ ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ಸಿದ್ದರಾಮಯ್ಯನವರು ನಿಮ್ಮನ್ನು ನಂಬಿ ಈ ಕ್ಷೇತ್ರಕ್ಕೆ ಏಕೆ ಬರಬೇಕು? ಇವತ್ತಿನವರೆಗೂ ನಿಮ್ಮ ಸಾರ್ವಜನಿಕ ಹಾಗೂ ರಾಜಕೀಯ ಜೀವನದಲ್ಲಿ ನೀವು ವಿಶ್ವಾಸಕ್ಕೆ ಅರ್ಹರು ಅಂತ ಸಾಬೀತುಪಡಿಸುವ ಯಾವುದಾದರೂ ಒಂದು ಘಟನೆಯನ್ನು ಸಾರ್ವಜನಿಕವಾಗಿ ಹೇಳಬಲ್ಲಿರಾ ಎಂದು ಪ್ರಶ್ನಿಸಿದ್ದು, ಪ್ರಶ್ನೆಗಳಿಗೆ ಉತ್ತರ ನೀಡಬೇಕೆಂದು ಮುಖಂಡರನ್ನು ಆಗ್ರಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next