Advertisement
ತೊಗಲು ಬೊಂಬೆಯಾಟ ಕಲೆಯನ್ನು ಪೋಷಿಸಲು ತಂಡವೊಂದು ಪೌರಾಣಿಕ ಕಥೆಗಳನ್ನು ನವೀನ ಕಲ್ಪನೆಗಳೊಂದಿಗೆ ಯುವ ಜನತೆಗೆ ಪರಿಚಯಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದೆ. ಪಾರಂಪರಿಕ ಗ್ರಾಮೀಣ ಕಲೆಯಾದ ತೊಗಲು ಗೊಂಬೆಯಾಟವನ್ನು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನೂರಾರು ಪ್ರದರ್ಶನಗಳನ್ನು ಯಶಸ್ವಿಯಾಗಿ ನೀಡಿದೆ.
Related Articles
Advertisement
ಒಂದೊಂದು ಬೊಂಬೆ 12 ಕೆ.ಜಿ. ತೂಕ: ಇತರೆ ಬೊಂಬೆಯಾಟಕ್ಕೂ ಸಲಾಕೆ ಸೂತ್ರದ ಬೊಂಬೆಯಾಟಕ್ಕೂ ವ್ಯತ್ಯಾಸವಿದೆ. ಮಾಗಡಿ ನೆಲದ ರಂಗಪುತ್ಥಳಿ ತಂಡದವರು ಪರಿಚಯ ಮಾಡಿರುವ ಬೊಂಬೆಯಾಟದಲ್ಲಿ ಸೂತ್ರದ ಜೊತೆಗೆ ಕಬ್ಬಿಣದ ಸಲಾಕೆಗಳನ್ನು ಬಳಕೆ ಮಾಡಲಾಗಿದೆ. ಬೇರೆ ಬೇರೆ ಬೊಂಬೆಗಳು ಚಿಕ್ಕದಾಗಿ ಹಗುರವಾಗಿವೆ. ಆದರೆ, ಈ ಸೂತ್ರದ ಸಲಾಕೆ ಬೊಂಬೆಯೂ 12 ಕೆ.ಜಿ ತೂಗುತ್ತದೆ. ಇವುಗಳನ್ನು ಮರದಿಂದ ತಯಾರು ಮಾಡಲಾಗಿದೆ. ಮರೆಯಾದ ಬೊಂಬೆ ಪ್ರದರ್ಶನ: ಇಷ್ಟೆಲ್ಲಾ ಹೆಗ್ಗಳಿಕೆ ಇರುವ ಬೊಂಬೆಯಾಟಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರೋತ್ಸಾಹ ಸಿಗದಿರುವುದು ದುರಂತ.
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬೊಂಬೆಯಾಟದಂತಹ ಕಲೆಯನ್ನು ಬಳಸಿಕೊಂಡರೆ, ಕಲೆ ಮತ್ತು ಕಲಾವಿದರಿಗೆ ಜೀವ ಕೊಟ್ಟಂತಾಗುತ್ತದೆ. ಸಲಾಕೆ ಬೊಂಬೆಯಾಟದಲ್ಲಿ ನರಕಾಸುರನ ವಧೆ, ಭಕ್ತ ಮಾರ್ಕೆಂಡೇಯ, ರಾಮಾಯಣ, ಶ್ರೀಕೃಷ್ಣಪರಿಜಾತ, ಭಕ್ತಪಹ್ಲಾದ, ಇತ್ತೀಚೆಗೆ ಸ್ವಾಮಿ ವಿವೇಕಾನಂದರ ಜೀವನವನ್ನು ಬೊಂಬೆಯಾಟಕ್ಕೆ ಅಳವಡಿಸಿಕೊಂಡಿದ್ದಾರೆ. ಪ್ರಾಚೀನ ಕಲೆಯಾದ ಜನಪದ ಕಲೆಗಳಲ್ಲಿ ಸೂತ್ರದ ಬೊಂಬೆ ಸಲಾಕೆ ಬೊಂಬೆ ಹಾಗೂ ತೊಗಲು ಬೊಂಬೆಗಳಿಗೆ ತನ್ನದೆಯಾದ ಮಹತ್ವವಿದೆ. ಕಲಾವಿದರ ಎಷ್ಟೋ ಕುಟುಂಬಗಳು ಜೀವನ ನಿರ್ವಹಣೆ ಸಾಧ್ಯವಾಗದೆ, ಈ ಕಲೆಯ ಸಹವಾಸವೇ ಬೇಡ ಎನ್ನುವ ಸ್ಥಿತಿಗೆ ತಲುಪಿವೆ.
ಸೂತ್ರದ ಸಲಾಕೆ ಬೊಂಬೆಯಾಟ ಸಾಂಪ್ರದಾಯಿಕ ಕಲೆ. ಇದನ್ನು ಕರ್ನಾಟಕ ಸರ್ಕಾರ ಬಯಲಾಟ ಅಕಾಡಮಿಗೆ ಸೇರಿಸಿದೆ. ಆದರೆ, ಈ ಕಲೆಯಲ್ಲಿ ಸಂಗೀತ ಮತ್ತು ಸಾಹಿತ್ಯ ಎರಡಕ್ಕೂ ಹೆಚ್ಚಿನ ಮಹತ್ವವನ್ನು ನೀಡಿ ನಾಟಕ ಸ್ವರೂಪದಲ್ಲಿ ಇರುವ ಕಾರಣ, ಬೊಂಬೆಯಾಟವನ್ನು ನಾಟಕ ಅಕಾಡಮಿಗೆ ಸೆರಿಸಿದರೆ, ಈ ಕಲೆಗೆ ಇನ್ನಷ್ಟು ಜನರಿಗೆ ಮತ್ತು ಪ್ರದೇಶಗಳಿಗೆ ತಲುಪಲು ಅನುಕೂಲವಾಗುತ್ತದೆ. – ಎಂ.ಆರ್.ರಂಗನಾಥ್ ರಂಗಪುತ್ಥಳಿ ಕಲಾವಿದ
ಅದ್ಭುತ ಕಲೆಯಾದ ಬೊಂಬೆಯಾಟಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರೋತ್ಸಾಹ ಸಿಗದಿರುವುದು ದುರಂತ. ಆಯಾ ಜಿಲ್ಲೆಗಳಲ್ಲಿ ಆಚರಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬೊಂಬೆಯಾಟದಂತಹ ಕಲೆಯನ್ನು ಬಳಸಿಕೊಳ್ಳಬೇಕು. ಇದರಿಂದ ಕಲಾವಿದರಿಗೆ ಮತ್ತು ಕಲೆ ಎರಡಕ್ಕೂ ಜೀವ ಕೊಟ್ಟಂತಾಗುತ್ತದೆ. – ಗಂ.ದಯಾನಂದ್ ಮಾಜಿ ಅಧ್ಯಕ್ಷ, ಕಸಾಪ
ನಿರ್ಜೀವ ಬೊಂಬೆಗಳನ್ನು ಜೀವಂತವಾಗಿ ಕಾಣುವಂತೆ ಮಾಡಲು ಉತ್ತಮ ಪರಿಣತಿಯ ಅಗತ್ಯವಿದೆ. ಪೌರಾಣಿಕ ಗ್ರಂಥಗಳು ಮತ್ತು ಜನಪ್ರಿಯ ಕಥೆಗಳಿಂದ ಇನ್ನೂ ಸ್ಫೂರ್ತಿ ಪಡೆದಿವೆ. ಟೆಕ್ ಯುಗದಿಂದಾಗಿ ಈ ಮನರಂಜನೇಯ ಮೂಡ್ ತನ್ನ ಜನಪ್ರಿಯತೆಯನ್ನು ವೇಗವಾಗಿ ಕಳೆದುಕೊಳ್ಳುತ್ತಿದೆ. – ಕೆ.ಆರ್.ಯತಿರಾಜು ತಾಪಂ ಮಾಜಿ ಅಧ್ಯಕ್ಷ
– ಕೆ.ಎಸ್.ಮಂಜುನಾಥ್