ಬೆಂಗಳೂರು: ನಕಲಿ ಡೈಮಂಡ್ ಹರಳುಗಳನ್ನು ಅಸಲಿ ಎಂದು ನಂಬಿಸಿ ವ್ಯಕ್ತಿಯೊಬ್ಬರಿಗೆ ವಂಚಿಸಲು ಯತ್ನಿಸಿದ ಆರೋಪದಡಿ ನಾಲ್ವರು ಆರೋಪಿಗಳನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಮೂಲದ ರವಿ, ನವೀನ್‌ಕುಮಾರ್, ಗೂರ್‌ಅಹ ಮದ್ ಹಾಗೂ ಅಬ್ದುಲ್ ದಸ್ತಗಿರ್ ಬಂಧಿತರು. ಆರೋಪಿಗಳಿಂದ ನಕಲಿ ಡೈಮಂಡ್ ಹರಳುಗಳು, ಪರೀಕ್ಷಿಸುವ ಯಂತ್ರಗಳು ಸೇರಿ ಕೆಲ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಘಟನೆ ಸಂಬಂಧ ಹೈದ್ರಾಬಾದ್‌ನ ರಾಜ ಮಂಡ್ರಿ ಮೂಲದ ಲಕ್ಷ್ಮೀನಾರಾ ಯಣ ಎಂಬವರು ದೂರು ನೀಡಿ ದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾ ಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಏನಿದು ಘಟನೆ?: ಮಾ.14ರಂದು ಮಧ್ಯಾಹ್ನ 3.30ಕ್ಕೆ ದೂರುದಾರ ಲಕ್ಷ್ಮೀನಾರಾಯಣಗೆ ಕರೆ ಮಾಡಿ, ಡೈಮಂಡ್ ವ್ಯವಹಾರ ಮಾತನಾಡಬೇಕೆಂದು ವಿಮಾನ ನಿಲ್ದಾಣದ ತಾಜ್ ಹೋಟೆಲ್‌ಗೆ ಬರುವಂತೆ ಹೇಳಿದ್ದಾನೆ. ಹೀಗಾಗಿ ಲಕ್ಷ್ಮೀನಾರಾಯಣ ಮಾ.15ರಂದು ಬೆಳಗ್ಗೆ 11.30ಕ್ಕೆ ತಮ್ಮ ಸ್ನೇಹಿತರಾದ ನಾಗೇಂದ್ರ ಮತ್ತು ರಾಮುಕುಮಾರ್ ಎಂಬವರ ಜತೆ ಹೋಟೆಲ್‌ಗೆ ಬಂದಿದ್ದಾರೆ. ಈ ವೇಳೆ ಹೋಟೆಲ್ 403ನೇ ರೂಂನಲ್ಲಿದ್ದ ಶ್ರೀಶೈಲ ಸ್ವಾಮೀಜಿ ತಂಗಿರುವ ವಿಚಾರ ತಿಳಿದ ದೂರುದಾರರು ಹಾಗೂ ಅವರ ಸ್ನೇಹಿತರು ಸ್ವಾಮೀಜಿಯನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ಅಷ್ಟರಲ್ಲಿ ಆರೋಪಿ ರವಿ ಸಹ ಸ್ವಾಮೀಜಿ ಬಳಿಗೆ ಬಂದು, ಆತನೂ ಸ್ವಾಮೀಜಿ ಆಶೀರ್ವಾದ ಪಡೆದು ಎಲ್ಲರೂ ಅಲ್ಲಿಂದ ಹೊರಟು ಹೋಟೆಲ್ ಆವರಣದಲ್ಲಿ ಕುಳಿತುಕೊಂಡಿದ್ದಾರೆ.
ನಕಲಿ ಡೈಮಂಡ್ ತೋರಿಸಿದ ರವಿ ಮತ್ತು ತಂಡ: ಈ ಸಂದರ್ಭದಲ್ಲಿ ರವಿ ತನ್ನ ಜತೆಯಲ್ಲಿದ್ದ ನವೀನ್ ಕುಮಾರ್, ಗೂರ್ ಅಹಮದ್ ಮತ್ತು ಅಬ್ದುಲ್ ದಸ್ತಗಿರ್ ಎಂಬುವವರನ್ನು ಪರಿಚಯಿಸಿ, ಇವರು ಡೈಮಂಡ್ ವ್ಯವಹಾರ ಮಾಡುತ್ತಿದ್ದಾರೆ ಎಂದು ದೂರುದಾರರಿಗೆ ಪರಿಚಯಿಸಿದ್ದಾನೆ. ನಂತರ ಆರೋಪಿಗಳು ತಮ್ಮ ಬಳಿ ಇದ್ದ 10 ಒಡವೆ ಬಾಕ್ಸ್‌ಗಳನ್ನು ತೆಗೆದು ಇವು ಡೈಮಂಡ್ ಹರಳುಗಳು. ಇವುಗಳ ಮಾರುಕಟ್ಟೆ ಬೆಲೆ 10 ಕೋಟಿ ರೂ. ಇದೆ. ಅಲ್ಲದೆ, ತಮ್ಮ ಬಳಿಯಿದ್ದ ಯಂತ್ರದ ಮೂಲಕ ಪರೀಕ್ಷಿಸಿ ಹರಗಳುಗಳನ್ನು ತಪಾಸಣೆ ಮಾಡಿ ಇವು ಅಸಲಿ ಡೈಮಂಡ್ ಹರಳುಗಳು. ನೀವು ಒಪ್ಪಿಕೊಂಡರೆ, 1ರಿಂದ 3 ಕೋಟಿ ರೂ.ಗೆ ಮಾರುತ್ತೇನೆ ಎಂದಿದ್ದಾರೆ.
ವಂಚನೆ ತಿಳಿದು ದೂರು ನೀಡಿದ ಲಕ್ಷ್ಮೀ ನಾರಾಯಣ: ಆದರೆ, ದೂರುದಾರರು ಹರಳುಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಕಲಿ ಡೈಮಂಡ್ ಹರಳುಗಳು ಎಂಬುದು ಗೊತ್ತಾಗಿದೆ. ಹೀಗಾಗಿ ಮತ್ತೂಮ್ಮೆ ಬರುವುದಾಗಿ ತಿಳಿಸಿ ಸ್ಥಳದಿಂದ ಹೊರ ನಡೆದಿದ್ದಾರೆ. ಬಳಿಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಗೆ ಬಂದು ಆರೋಪಿಗಳ ವಿರುದ್ಧ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.