ಶಂಕರ್‌ನಾಗ್ ಕನ್ನಡಚಿತ್ರರಂಗ ಕಂಡ ಮೇರು ನಟ-ನಿರ್ದೇಶಕ. ಅವರು ನಿರ್ದೇಶಿಸಿ, ಅಭಿನಯಿಸಿದ ಒಂದೊಂದು ಚಿತ್ರವೂ ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಅದಕ್ಕೆ ಉತ್ತಮ ಉದಾಹರಣೆ 1985ರಲ್ಲಿ ಬಿಡುಗಡೆಗೊಂಡ “ಆ್ಯಕ್ಸಿಡೆಂಟ್’ ಚಿತ್ರ.
ಈ ಚಿತ್ರ ದಾರಿ ತಪ್ಪು ಯುವ ಜನಾಂಗ, ಅಧಿಕಾರದ ದರ್ಪ, ಪತ್ರಿಕೋದ್ಯಮದಲ್ಲಿ ಪತ್ರಕರ್ತನಿಗೆ ಎದುರಾಗುವ ಸವಾಲುಗಳು ಬಗ್ಗೆ ಬೆಳಕು ಚೆಲ್ಲುತ್ತದೆ. ಅಷ್ಟೇ ಅಲ್ಲದೆ ಡ್ರಗ್ಸ್, ಗಾಂಜಾ ಹೇಗೆ ಸಮಾಜಕ್ಕೆ ಹೇಗೆ ಕಂಟಕವಾಬಲ್ಲದು ಎನ್ನುವುದನ್ನು ಸವಿಸ್ತಾರವಾಗಿ ತಿಳಿಸಿದೆ. ಇದೇ ಕಾರಣಕ್ಕೆ “ಆ್ಯಕ್ಸಿಡೆಂಟ್’ ಆ ಸಾಲಿನ ರಾಷ್ಟ್ರ ಪ್ರಶಸ್ತಿಯ ಗರಿ ಮುಡಿಗೇರಿಸಿಕೊಂಡಿತ್ತು.
ಶಂಕರ್‌ನಾಗ್ ಅವರ ಆಲೋಚನ ಶಕ್ತಿ ನಿಜಕ್ಕೂ ಇಂದಿನ ಯುವಜನಾಂಗಕ್ಕೆ ಸ್ಫೂರ್ತಿ. “ಆ್ಯಕ್ಸಿಡೆಂಟ್’ ಚಿತ್ರದ ಮೂಲಕ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿದ್ದಾರೆ.
“ಆ್ಯಕ್ಸಿಡೆಂಟ್’ ಒಂದು ರಹಸ್ಯ ಕಾರ್ಯಾಚರಣೆಗೆ ಸಂಬಂಧಪಟ್ಟ ಚಿತ್ರವಾಗಿದ್ದು, ರಾಜಕಾರಣಿ ಧರ್ಮಾಧಿಕಾರಿ(ಅನಂತನಾಗ್)ಯ ಮಗನ ದರ್ಪ, ಧರ್ಮಾಧಿಕಾರಿಯ ಪ್ರಭಾವ ಹಾಗೂ ಪತ್ರಕರ್ತನ ಪ್ರಾಮಾಣಿಕತೆಯ ಸುತ್ತ ನಡೆಯುವ ಕಥೆ. ಧರ್ಮಾಧಿಕಾರಿಯ ಮಗ ಸನೇಹಿತರ ಜತೆ ಪಾರ್ಟಿ ಮಾಡಲು ಹೋಗಿ ಅಲ್ಲಿ ಮದ್ಯ, ಡ್ರಗ್ಸ್, ಗಾಂಜಾವನ್ನು ಸೇವಿಸಿ ರಾತ್ರಿ ನಶೆಯಲ್ಲಿ ಕಾರು ಚಲಾಯಿಸಿಕೊಂಡು ಬರುತ್ತಾನೆ. ಆಗ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ಕಾರು ಹರಿದು ಕಾರ್ಮಿಕರು ಮೃತಪಡುತ್ತಾರೆ. ಆ ಪೈಕಿ ಓರ್ವ ಕಾರ್ಮಿಕ ಈ ಘಟನೆಯನ್ನು ಕಣ್ಣಾರೆ ನೋಡಿರುತ್ತಾನೆ. ಈ ಒಂದು ಸಾಕ್ಷಿ ಇಡೀ ಚಿತ್ರಕ್ಕೆ ಒಂದು ದೊಡ್ಡ ತಿರುವನ್ನು ನೀಡುತ್ತದೆ.
ತನಿಖೆಯನ್ನು ಆರಂಭಿಸಿದ ಪೊಲೀಸ್ ಜತೆ ಪತ್ರಕರ್ತ ರವಿ(ಶಂಕರ್‌ನಾಗ್)ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಪರಿಶೀಲನೆ ಸಂದರ್ಭ ಕಾರಿನ ಚಕ್ರದ ಗುರುತು ಎರಡನೇ ಸಾಕ್ಷಿಯಾಗುತ್ತದೆ. ಈ ಚಕ್ರದ ಗುರುತಿನ ಜಾಡು ಹಿಡಿದು ಹೊರಡುವ ರವಿ ಧರ್ಮಾಧಿಕಾರಿಯ ಕಾರಿನ ಮೇಲೆ ಸಂಶಯವನ್ನು ಇಟ್ಟುಕೊಂಡು ಅವರ ಮನೆಗೆ ತೆರಳುತ್ತಾರೆ. ಕಾರಿನ ಚಕ್ರಕ್ಕೆ ನೀಲಿ ಬಣ್ಣವನ್ನು ಬಳಿದು ಅನಂತರ ಬಿಳಿಹಾಳೆ ಮೂಲಕ ಚಕ್ರದ ಗುರುತನ್ನ ಪತ್ತೆಹಚ್ಚಿ ಹೋಗುತ್ತಾರೆ. ಈ ವಿಚಾರವನ್ನು ತಿಳಿದ ಧರ್ಮಾಧಿಕಾರಿ ರವಿ ಮೇಲೆ ಹಲ್ಲೆ ನಡೆಸುತ್ತಾರೆ.
ಕೊನೆಯಲ್ಲಿ ಧರ್ಮಾಧಿಕಾರಿಯ ಮಗ ಅದೇ ವ್ಯಸನದಿಂದ ಜೀವ ಕಳೆದುಕೊಳ್ಳುತ್ತಾನೆ. ಒಮ್ಮೆ ಮಕ್ಕಳು ತಪ್ಪು ಮಾಡಿದರೆ ಪಾಲಕರು ತಿದ್ದುವ ಕೆಲಸ ಮಾಡಬೇಕು. ಶಿಕ್ಷೆ ನೀಡಬೇಕು. ಆದರೆ ಧರ್ಮಾಧಿಕಾರಿ ಪುತ್ರ ವ್ಯಾಮೋಹದಿಂದ ತಪ್ಪನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಾರೆ. ಇಲ್ಲಿ ಧರ್ಮಾಧಿಕಾರಿ ಧರ್ಮದ ಪಾಲನೆಯಲ್ಲಿ ಎಡವುದನ್ನು ಗಮನಿಸಬಹುದು.
ಈ ಚಿತ್ರದ ಮೂಲಕ ಶಂಕರ್‌ನಾಗ್ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಕೆಲವು ಪ್ರಭಾವಿಗಳ ನೆರಳಿನಲ್ಲಿ ಏನೆಲ್ಲ ಅನಾಚಾರ ನಡೆಯುತ್ತದೆ ಎನ್ನುವುದನ್ನು ತೋರಿಸಿದ್ದಾರೆ. ವಾಸ್ತವ ಎಷ್ಟು ಕಠೊರವಾಗಿರುತ್ತದೆ ಎನ್ನುವುದನ್ನು ತಿಳಿ ಹೇಳಿದ್ದಾರೆ. ಪತ್ರಕರ್ತರಿಗೆ ಸಮಾಜವನ್ನು ಸರಿಪಡಿಸಲು ಮುಕ್ತ ಅವಕಾಶವಿದೆ ಎಂಬುದರ ಪರಿಚಯ ಮಾಡಿ ಕೊಡುತ್ತಾರೆ. ಬಡವರ ನೋವಿಗೆ, ಸಾವಿಗೆ ನ್ಯಾಯ ಹುಡುಕುವ ಪತ್ರಕರ್ತನ ಸಾಹಸ ಪ್ರತಿಯೊಬ್ಬ ಮಾಧ್ಯಮ ಪ್ರತಿನಿಧಿಗೂ ಪ್ರೇರಣೆಯಾಗಬಲ್ಲದು. ಒಟ್ಟಿನಲ್ಲಿ 80ರ ದಶಕದಲ್ಲಿ ಬಂದ ಚಿತ್ರವೊಂದು ಈಗಲೂ ಪ್ರಸ್ತುತವಾಗಿರುವುದು ಶಂಕರ್‌ನಾಗ್ ಪ್ರತಿಭೆಗೆ ಹಿಡಿದ ಕನ್ನಡಿ.
ಭರತ್ ಕುಮಾರ್ , ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ, ತುಮಕೂರು