Advertisement
ಕರ್ನಾಟಕದ ಜಾನಪದ ಶಿವನಕುರಿತ ಗೊರವರ ಕುಣಿತ, ಕಂಸಾಳೆ, ಡೊಳ್ಳು ಕುಣಿತ ನೃತ್ಯಗಳಲ್ಲಿ ವೀರಗಾಸೆಯೂ ಒಂದಾಗಿದೆ. ವೀರಗಾಸೆ ಹಾಗೂ ವೀರಭದ್ರನ ಕುಣಿತಕ್ಕೆ ಸಾಮ್ಯತೆ ಇದ್ದಷ್ಟೆ ವ್ಯತ್ಯಾಸವೂ ಇದೆ.
Related Articles
Advertisement
ಶೈವಪಂಥದ ಉಚ್ಚ್ರಾಯ ಕಾಲದಲ್ಲಿ ಉಗಮವಾಗಿ ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲೂ ವೀರಗಾಸೆ ಉತ್ತಮ ಸ್ಥಿತಿಯಲ್ಲಿತ್ತು. ವಿಜಯನಗರದ ಕೆಲವು ಶಾಸನಗಳಲ್ಲಿ ವೀರಭದ್ರನ ಕೆತ್ತನೆ ಇದೆ. ವೀರಗಾಸೆ ಎಂದರೆ ವೀರ+ಕಾಸೆ ಕಾಲ ಕ್ರಮೇಣ ವೀರಕಾಸೆಯಾಗಿ ವೀರಗಾಸೆಯಾಗಿ ಬದಲಾಗಿದೆ.
ವೀರಗಾಸೆ ಶಿವನ ಕಥೆಗಳನ್ನು ಸಾರುತ್ತಾ ಕುಣಿತದ ಮೂಲಕ ನಮ್ಮ ಪರಂಪರೆಯನ್ನು ಮನೋಜ್ಞವಾಗಿ ಜನಸಾಮಾನ್ಯರ ಮನಸ್ಸಿಗೆ ತಲುಪಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ವೀರಗಾಸೆ ನೃತ್ಯದ ಕಡೆ ಒಲವು ತೋರುತ್ತಿದ್ದಾರೆ. ವಿಲಾಸಕ್ಕೆ ಮಾತ್ರವಲ್ಲದೆ ವಿಕಾಸಕ್ಕೂ ಕಲೆ ಸಾಧನವಾಗಿದೆ. ಜನಸಾಮಾನ್ಯರ ಒಳದನಿ ಕಲೆಯ ಪ್ರಕಾರವಾಗಿ ರೂಪಾಂತರವಾಗಿ ಕರ್ನಾಟಕದ ಕಲಾಶ್ರೀಮಂತಿಗೆ ವೀರಗಾಸೆ ಸಾಕ್ಷಿಯಾಗಿದೆ.
ವೀರಗಾಸೆಯ ವೇಷಭೂಷಣ ರೌದ್ರವಾಗಿಯೂ, ಕಲಾತ್ಮಕವಾಗಿಯೂ ಇರುತ್ತದೆ. ಗಾಢವರ್ಣದ ಉಡುಪು, ಬಿಳಿ ಜಟೆ, ಕೊರಳಲ್ಲಿ ನಾಗಾಭರಣ , ಸೊಂಟದ ಪಟ್ಟಿ ರುದ್ರಮುಖೀ, ರುದ್ರಾಕ್ಷಿ, ವಿಭೂತಿ, ಓಲೆ ತೊಟ್ಟು ಕತ್ತಿ ಬೀಸುತ್ತಾ ನೃತ್ಯ ಮಾಡುತ್ತಾರೆ. ವೀರಗಾಸೆ ಕುಣಿಯುವವರನ್ನು ಜಂಗಮ ಅಥವಾ ಲಿಂಗದೇವರು ಎನ್ನುತ್ತಾರೆ. ಒಂದು ನೃತ್ಯದಲ್ಲಿ ಸಾಮಾನ್ಯವಾಗಿ ಎರಡರಿಂದ ಆರು ಮಂದಿ ಇರುತ್ತಾರೆ.
ಮುಖ್ಯ ನೃತ್ಯಗಾರ ನೇಮದಿಂದ ನಿಷ್ಠೆಯಿಂದ ಇರಬೇಕು. ಲಿಂಗಾಯತ ಅನುಸಾರ ಕಾಸೆ ಹಾಕಿ ಲಿಂಗವನ್ನು ಧರಿಸಿರಬೇಕು. ನೃತ್ಯ ಮಾಡುವಾಗ ಶಿವನ ಪುರಾಣದ ಕಥೆ ವಿವರಿಸುತ್ತಾರೆ. ಸಂಗಡಿಗರು ಲಯ ಬದ್ಧವಾಗಿ ಹೆಜ್ಜೆ ಹಾಕುತ್ತಾರೆ. ಕತ್ತಿ ದೂರ ಎಸೆದು ತೆಂಗಿನಕಾಯಿ ಒಡೆಯುವುದು, ಅಕ್ಕಿ ತುಂಬಿದ ಬಿಂದಿಗೆಯನ್ನು ಕತ್ತಿಯಿಂದ ಎತ್ತುವುದು ಮುಂತಾದ ಸಾಹಸಗಳು ಪ್ರೇಕ್ಷಕರಿಗೆ ರೋಮಾಂಚನ ನೀಡುತ್ತದೆ.
ಸುರಭಿ ಶರ್ಮ, ಮೈಸೂರು ವಿ.ವಿ.