Advertisement

Karnataka: ಉಚ್ಚ ನ್ಯಾಯಾಲಯದಲ್ಲಿ ಮೊಳಗಿದ ನಾಡಗೀತೆ

11:21 PM Aug 17, 2023 | Team Udayavani |

ಬೆಂಗಳೂರು: ನಾಡಿನ ಸುಗಮ ಸಂಗೀತ ಲೋಕದ ದಿಗ್ಗಜ ಗಾಯಕರ ಕಂಠಸಿರಿಯಲ್ಲಿ ನಾಡಗೀತೆ ಮೊಳಗುವುದಕ್ಕೆ ಗುರುವಾರ ಹೈಕೋರ್ಟ್‌ ಸಾಕ್ಷಿಯಾಯಿತು. ನಾಡಗೀತೆ “ಜಯಭಾರತ ಜನನಿಯ ತನುಜಾತೆ’ ಹಾಡಿನ ವಿವಿಧ ಧಾಟಿಗಳಿರುವ ವ್ಯತ್ಯಾಸವನ್ನೂ ನ್ಯಾಯಾಲಯಕ್ಕೆ ವಿವರಿಸಲಾಯಿತು.

Advertisement

ದಿ| ಮೈಸೂರು ಅನಂತಸ್ವಾಮಿ ಸಂಯೋಜಿಸಿದ ಧಾಟಿಯಲ್ಲಿಯೇ ನಾಡಗೀತೆಯನ್ನು 2 ನಿಮಿಷ 30 ಸೆಕೆಂಡ್‌ಗಳಲ್ಲಿ ಹಾಡಬೇಕು ಎಂಬುದನ್ನು ಕಡ್ಡಾಯ
ಗೊಳಿಸಿ ರಾಜ್ಯ ಸರಕಾರ 2022ರ ಸೆ. 25ರಂದು ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಸುಗಮ ಸಂಗೀತ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ಅರ್ಜಿಯಲ್ಲಿ ನಮ್ಮನ್ನೂ ಮಧ್ಯಾಂತರ ಪ್ರತಿವಾದಿಗಳನ್ನಾಗಿ ಸೇರಿಸಿಕೊಳ್ಳಬೇಕು ಎಂದು ಅಖೀಲ ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಮೃತ್ಯುಂಜಯ ದೊಡ್ಡವಾಡ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಪೀಠ ವಿಚಾರಣೆಗೆ ಅಂಗೀಕರಿಸಿತು.

ಮಧ್ಯಾಂತರ ಅರ್ಜಿದಾರರ ಪರ ಹಿರಿಯ ವಕೀಲ ಸಿ.ಎಚ್‌. ಹನುಮಂತರಾಯ ವಾದ ಮಂಡಿಸಿ, ರಾಜ್ಯ ಸರಕಾರ ಈಗಾಗಲೇ ತನ್ನೆಲ್ಲ ಅಧಿಕೃತ ಕಾರ್ಯಕ್ರಮಗಳಲ್ಲಿ ಮೈಸೂರು ಅನಂತಸ್ವಾಮಿಯವರ ಧಾಟಿಯಲ್ಲೇ ಹಾಡುವಂತೆ ಸೂಕ್ತ ಎಂಬುದನ್ನು ತೀರ್ಮಾನಿಸಿ ಆದೇಶ ಹೊರಡಿಸಿದೆ. ಈ ಆದೇಶಕ್ಕೂ ಮುನ್ನ ಅರ್ಜಿದಾರರು ಈಗ ಎತ್ತಿರುವ ಎಲ್ಲ ತಕರಾರುಗಳನ್ನು ಕೂಲಂಕಷವಾಗಿ ಆಲಿಸಿ, ಚರ್ಚಿಸಿ ಅಂತಿಮಗೊಳಿಸಲಾಗಿದೆ. ಅಲ್ಲದೆ ಸ್ವತಃ ಕುವೆಂಪು ಮತ್ತು ಜಿ.ಎಸ್‌.ಶಿವರುದ್ರಪ್ಪ ಅವರು ಮೈಸೂರು ಅನಂತಸ್ವಾಮಿಯವರ ಧಾಟಿಗೆ ಅನುಮೋದಿಸಿದ್ದರು ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ವಿವಾದ ಬೇಗ ಮುಗಿಯಲಿ
ಮಧ್ಯಾಂತರ ಅರ್ಜಿದಾರರ ಪರವಾಗಿ 82 ವರ್ಷದ ಗಾಯಕಿ ಬಿ.ಕೆ.ಸುಮಿತ್ರಾ ಖುದ್ದು ಹಾಜರಾಗಿ ಮೈಸೂರು ಅನಂತಸ್ವಾಮಿ ಮತ್ತು ಸಿ.ಅಶ್ವತ್ಥ್ ಅವರ ಧಾಟಿಗಳ ಕುರಿತಾದ ವ್ಯತ್ಯಾಸವನ್ನು ನ್ಯಾಯಪೀಠಕ್ಕೆ ವಿವರಿಸಿದರು. ಅಲ್ಲದೆ ಈ ಕುರಿತ ವಿವಾದ ಆದಷ್ಟು ಶೀಘ್ರ ಮುಕ್ತಾಯವಾಗಲಿ ಎಂದು ಆಶಿಸಿದರು.

Advertisement

ಯುಧ್ದೋನ್ಮಾದದಲ್ಲಿ ಹಾಡುವುದು ಸಲ್ಲ
ಮಧ್ಯಾಂತರ ಅರ್ಜಿದಾರರೂ ಆಗಿರುವ ಅಖೀಲ ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಮೃತ್ಯುಂಜಯ ದೊಡ್ಡವಾಡ ಅವರು, ಅನಂತ ಸ್ವಾಮಿಯವರ ಧಾಟಿಯಲ್ಲಿ ಶಾಂತಭಾವ ಅಡಗಿದೆ. ನಾಡಗೀತೆಯನ್ನು ಯುಧ್ದೋನ್ಮಾದದಲ್ಲಿ ಹಾಡುವುದು ಸರಿಯಲ್ಲ ಎಂದು ಪ್ರತಿಪಾದಿಸಿದರು.

ಸಿ.ಅಶ್ವತ್ಥ್ ಧಾಟಿ ವೃಂದಗಾನಕ್ಕೆ ಹೇಳಿ ಮಾಡಿಸಿದ್ದು
ಕ್ಕಿಕ್ಕೇರಿ ಕೃಷ್ಣಮೂರ್ತಿ ಪರವಾಗಿ ಹಾಜರಾಗಿದ್ದ ಕವಿ ಬಿ.ಆರ್‌. ಲಕ್ಷ್ಮಣರಾವ್‌, ಸಿ.ಅಶ್ವತ್ಥ್ ಅವರ ಧಾಟಿಯು ವೃಂದಗಾನಕ್ಕೆ ಹೇಳಿ ಮಾಡಿಸಿದಂತಿದ್ದು, ಅವರ ಧಾಟಿಯನ್ನೇ ಮುಂದುರಿಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ನ್ಯಾಯಪೀಠದ ಮುಂದೆ ಮಂಡಿಸಿದರು.

ಅಶ್ವತ್ಥ್ ರಾಗವೇ ಸೂಕ್ತ
ಸುಗಮ ಸಂಗೀತ ಹಾಡುಗಾರ ವೈ. ಕೆ. ಮುದ್ದುಕೃಷ್ಣ ಅವರು, ಸಿ ಅಶ್ವತ್ಥ್ 1993ರಲ್ಲೇ, ಜಯ ಭಾರತ ಜನನೀಯ ತನಿಜಾತೆಯ ಹಾಡಿನ ಎಲ್ಲ ಚರಣಗಳಿಗೆ ರಾಗ ಸಂಯೋಜಿಸಿದ್ದಾರೆ. ಮೈಸೂರು ಅನಂತಸ್ವಾಮಿ ಕೇವಲ ಮೂರು ಚರಣಗಳಿಗೆ ಮಾತ್ರ ರಾಗ ಸಂಯೋಜಿಸಿದ್ದಾರೆ. ಹೀಗಾಗಿ ಅಶ್ವತ್ಥ್ ಅವರ ರಾಗದಲ್ಲೇ ಹಾಡುವುದು ಸೂಕ್ತ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next