Advertisement
ಶನಿವಾರ ತಡರಾತ್ರಿ ಸುಮಾರು 2.10ರ ಸುಮಾರಿಗೆ ಅಪರಿಚಿತ ದುಷ್ಕರ್ಮಿಯ ಈ ಅನಿರೀಕ್ಷಿತ ಕೃತ್ಯಕ್ಕೆ ಲಗುಮಪ್ಪ ಲೇಔಟ್‌ನ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ದುಷ್ಕರ್ಮಿಯ ಗುಂಡೇಟಿನಿಂದ ಸ್ವಲ್ಪದರಲ್ಲಿಯೇ ಬಚಾವಾದ ಸ್ಥಳೀಯ ಯುವಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ತೆರಳಿದ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು, ದುಷ್ಕರ್ಮಿಯ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ್ದು, ಅಷ್ಟರಲ್ಲಾಗಲೇ ಆರೋಪಿ ಪರಾರಿಯಾಗಿದ್ದ.
Related Articles
Advertisement
ನಡೆದಿದ್ದೇನು?: ಲಗುಮಪ್ಪ ಲೇಔಟ್‌ನಲ್ಲಿ ಲೋಕೇಶ್, ಶಂಕರ್ ಸೇರಿದಂತೆ ಅವರ ಸಹೋದರರಿಗೆ ಸೇರಿದ 100ಕ್ಕೂ ಅಧಿಕ ಮನೆಗಳನ್ನು ಒಳಗೊಂಡ ವಠಾರಗಳಿವೆ. ಎಲ್ಲ ಮನೆಗಳನ್ನು ಬಾಡಿಗೆಗೆ ನೀಡಿದ್ದಾರೆ. ಶನಿವಾರ ತಡರಾತ್ರಿ 1.30ರ ಸುಮಾರಿಗೆ ಪಲ್ಸರ್ ಬೈಕ್‌ನಲ್ಲಿ ಬಂದ ಅಪರಿಚಿತ ದುಷ್ಕರ್ಮಿ, ಕೆಲವು ಮನೆಗಳ ಬಾಗಿಲು ಬಡಿದು, ಲತಾ, ಪುರುಷೋತ್ತಮ್ ಇದ್ದಾರಾ? ಎಂದು ಕೇಳಿದ್ದಾನೆ. ಜತೆಗೆ ಕೂಗಾಟ ಕೂಡ ನಡೆಸಿದ್ದಾನೆ. ಇದರಿಂದ ಆತಂಕಗೊಂಡ ಬಾಡಿಗೆದಾರರು ಲೋಕೇಶ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಲೋಕೇಶ್ ಸ್ಥಳಕ್ಕೆ ತೆರಳಿ ಬಾಡಿಗೆದಾರರ ಬಳಿ ಅಪರಿಚಿತನ ಬಗ್ಗೆ ವಿಚಾರಿಸುತ್ತಿರುವಾಗಲೇ ಮತ್ತೂಂದು ಮನೆಯ ಮಹಡಿಯ ಮೆಟ್ಟಿಲುಗಳಿಂದ ದುಷ್ಕರ್ಮಿ ಇಳಿದು ಬರುತ್ತಿದ್ದುದನ್ನು ನೋಡಿದ ಲೋಕೇಶ್ ಹಾಗೂ ಇತರರು ಆತನನ್ನು ಹಿಡಿಯಲು ಮುಂದಾಗಿದ್ದಾರೆ. ಕೂಡಲೇ ಕಾಂಪೌಂಡ್ ಹಾರಿದ ದುಷ್ಕರ್ಮಿ ಓಡತೊಡಗಿದ್ದಾನೆ.
ಲೋಕೇಶ್ ಹಾಗೂ ಇತರೆ ಯುವಕರು ಆತನ ಬೆನ್ನುಬಿದ್ದಾಗ ಗಾಣಿಗರ ಬಡವಾಣೆಯ ರಸ್ತೆಯಲ್ಲಿ ನಿಂತು ತನ್ನ ಬಳಿಯಿದ್ದ ಪಿಸ್ತೂಲ್‌ನಿಂದ ನೇರವಾಗಿ ಲೋಕೇಶ್ ಕಡೆಗೆ ಒಂದು ಗುಂಡು ಹಾರಿಸಿದ್ದಾನೆ. ಲೋಕೇಶ್ ತಪ್ಪಿಸಿಕೊಂಡಿದ್ದಾರೆ. ಗುಂಡಿನ ದಾಳಿ ಕಂಡು ಲೋಕೇಶ್ ಹಾಗೂ ಇತರರು ಹೆದರಿದ್ದಾರೆ. ಕೂಡಲೇ ದುಷ್ಕರ್ಮಿ ಸ್ಥಳದಿಂದ ಚಪ್ಪಲಿ ಕೂಡ ಅಲ್ಲಿಯೇ ಬಿಟ್ಟು ಕತ್ತಲಲ್ಲಿ ಪರಾರಿಯಾಗಿದ್ದಾನೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು, ಸ್ಥಳೀಯರ ನೆರವಿನೊಂದಿಗೆ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಆರೋಪಿಯ ಸುಳಿವು ಸಿಕ್ಕಿಲ್ಲ. ಆತ ಬಿಟ್ಟು ಹೋಗಿರುವ ಪಲ್ಸರ್ ಬೈಕ್ ಜಪ್ತಿಯಾಗಿದೆ ಎಂದು ಹಿರಿಯ ಅಧಿಕಾರಿ ವಿವರಿಸಿದರು.
ಹದಿನೈದು ಜನರ ಕೈ ಬದಲಾಗಿರುವ ಬೈಕ್!: ಜಪ್ತಿಯಾಗಿರುವ ಬೈಕ್ ನೋಂದಣಿ ಸಂಖ್ಯೆಯನ್ನು ಪರಿಶೀಲಿಸಿದಾಗ ಮೂಲ ಮಾಲೀಕರು ಸೇರಿ 15 ಮಂದಿಯ ಕೈ ಬದಲಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಬೈಕ್ ಸುಳಿವನ್ನೇ ಆಧರಿಸಿ ಕೆಲವರನ್ನು ವಿಚಾರಣೆಗೆ ಒಳಪಡಿಸಿ ಹೇಳಿಕೆ ದಾಖಲಿಸಿಕೊಳ್ಳಬೇಕಿದೆ ಎಂದು ಅಧಿಕಾರಿ ಹೇಳಿದರು.
ಆತ ನನ್ನನ್ನು ಕೊಲ್ಲಲೆಂದೇ ಬಂದಿದ್ದ!: “ರಿಯಲ್ ಎಸ್ಟೇಟ್, ಕ್ಯಾಬ್ ಚಾಲನೆ ಸೇರಿ ಹಲವು ವ್ಯವಹಾರ ಮಾಡಿಕೊಂಡಿರುವ ನಾನು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು, ಹಲವರಿಗೆ ಸಹಾಯ ಮಾಡಿದ್ದೇನೆ. ರಾತ್ರಿ ನಾವು ಬೆನ್ನುಹತ್ತಿದಾಗ ದುಷ್ಕರ್ಮಿ ನನ್ನ ಕಡೆಯೇ ಗುರಿ ಇಟ್ಟು ಗುಂಡು ಹಾರಿಸಿದ್ದು, ಆತ ನನ್ನನ್ನು ಕೊಲ್ಲುವ ಉದ್ದೇಶಕ್ಕೆ ಆಗಮಿಸಿದ್ದ ಎಂಬುದು ಸ್ಪಷ್ಟವಾಗುತ್ತದೆ ಎಂದು ದೂರುದಾರ ಲೋಕೇಶ್ “ಉದಯವಾಣಿ’ಗೆ ತಿಳಿಸಿದರು.
ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪರಿಚಿತ ದುಷ್ಕರ್ಮಿ ಗುಂಡು ಹಾರಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದು, ಆರೋಪಿ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ.-ಇಶಾ ಪಂತ್, ಆಗ್ನೇಯ ವಿಭಾಗ ಡಿಸಿಪಿ