ಕಿನ್ನಿಗೋಳಿ: ಬಳ್ಕುಂಜೆ ಮೂಡುಗುತ್ತು ಕುಟುಂಬಸ್ಥರಿಗೆ ಸೇರಿದ್ದ ಜಮೀನಿನಲ್ಲಿ ಮುಚ್ಚಿಹೋಗಿದ್ದ ಬಾವಿ ಯಲ್ಲಿ 300 ವರ್ಷಗಳಷ್ಟು ಹಳೆಯ ದೈವದ ಮೂರ್ತಿ, ಪೂಜಾ ಪರಿಕರಗಳು ಪತ್ತೆಯಾಗಿವೆ.
ಈ ಜಾಗದಲ್ಲಿ ಹಲವು ದೈವಗಳು ನೆಲೆ ನಿಂತಿದ್ದು, ಮೂಡುಗುತ್ತು ಕುಟುಂಬದ ಹಿರಿಯರು ಪೂಜೆ ಪುನಸ್ಕಾರಗಳನ್ನು ನಡೆಸುತ್ತಿದ್ದರು.
ಕಾಲಾಂತರದಲ್ಲಿ ಜಮೀನು ಪರರ ಪಾಲಾಗಿ ಕುಟುಂಬದ ಸದಸ್ಯರು ಬೇರೆ ಬೇರೆ ನಗರಗಳಲ್ಲಿ ನೆಲೆನಿಂತಿದ್ದರು. ಇತ್ತೀಚಿನ ವರ್ಷಗಳಲ್ಲಿ ದೈವ ದೇವರು ಗಳ ನೆಲೆಯ ಜೀರ್ಣೋದ್ಧಾರ ಸಂಕಲ್ಪ ದೊಂದಿಗೆ ಅಲ್ಲಿ ಸ್ವಲ್ಪ ಜಾಗವನ್ನು ಖರೀದಿಸಿ ದೈವ ದೇವರುಗಳಿಗೆ ಸ್ಥಾನ ಕಟ್ಟಿಸಿದರು.
ಬಳಿಕ ಮುಂಡ್ಕೂರು ಜಾರಿಗೆಕಟ್ಟೆ ಕೊರಗಜ್ಜ ಕ್ಷೇತ್ರದ ದಿವಾಕರ ಪೂಜಾರಿ ಅವರನ್ನು ಕರೆಸಿ ದೈವ ದರ್ಶನ ಮಾಡಿಸಿ ದಾಗ “ತಮ್ಮ ಕುಟುಂಬದ ಮುಚ್ಚಿ ಹೋದ ಹಳೆ ಬಾವಿಯನ್ನು ಮತ್ತೆ ತೋಡ ಬೇಕು; ಆಗ 300 ವರ್ಷಗಳಷ್ಟು ಹಿಂದಿನ ದೈವದ ಮೂರ್ತಿ ಹಾಗೂ ಪೂಜಾ ಪರಿಕರಗಳು ಸಿಗುತ್ತವೆ’ ಎಂದು ದೈವದ ನುಡಿಯಾಯಿತು.
ಅದರಂತೆ ಸೋಮವಾರ ಹಳೆಯ ಬಾವಿಯನ್ನು ಅಗೆದಿದ್ದು, ದೈವದ ಮೂರ್ತಿ ಮತ್ತಿತರ ಪರಿಕರಗಳು ಲಭಿಸಿವೆ ಎಂದು ಗುತ್ತಿನ ಹಿರಿಯರಾದ ಮಲ್ಲಿಕಾ ಶೆಟ್ಟಿ ಬಳ್ಕುಂಜೆ ತಿಳಿಸಿದ್ದಾರೆ.