Advertisement

Gadag; ಮಹದಾಯಿ ಯೋಜನೆ ಜಾರಿಗೆ ಪ್ರಧಾನಿ ಬಳಿ ಶೀಘ್ರ ಸರ್ವಪಕ್ಷಗಳ ನಿಯೋಗ: ಎಚ್.ಕೆ. ಪಾಟೀಲ್

06:09 PM Sep 06, 2024 | Team Udayavani |

ಗದಗ: ಮಹದಾಯಿ ಯೋಜನೆ ಜಾರಿಗೆ ಕೇಂದ್ರ ಸರಕಾರ ವನ್ಯಜೀವಿ ಮಂಡಳಿಯಿಂದ ಅಡೆತಡೆ ಉಂಟು‌ ಮಾಡುತ್ತಿದೆ. ಈ ಕುರಿತು ರಾಜ್ಯ ಸರಕಾರ ಗಂಭೀರವಾಗಿ ಚಿಂತನೆ ಮಾಡಿದ್ದು, ಸರ್ವಪಕ್ಷಗಳ ಸಭೆ ಕರೆದು, ಪ್ರಧಾನಿ ಬಳಿ ಸರ್ವಪಕ್ಷ ನಿಯೋಗ ತೆಗೆದುಕೊಂಡು ಹೋಗಲು ಸಿಎಂ ಸಿದ್ದರಾಮಯ್ಯ ಅವರು ತೀರ್ಮಾನಿಸಿದ್ದಾರೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

Advertisement

ನಗರದ ದಿ. ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಬೆಂಬಲ ಬೆಲೆ ಯೋಜನೆಯಡಿ ಹೆಸರು ಖರೀದಿಸಲು ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಹದಾಯಿ ವಿಚಾರವಾಗಿ ಕಾನೂನು ತಜ್ಞರನ್ನು ಸಂಪರ್ಕಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಚಿಂತನೆ ನಡೆಸಲಾಗುತ್ತಿದೆ ಎಂದರು.

ರಾಜ್ಯದ ಅಭಿವೃದ್ಧಿ ಕಡೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಜೈವಿಕ ತಂತ್ರಜ್ಞಾನದ ಸಲುವಾಗಿ ವಿಶೇಷ ನೀತಿಯನ್ನು ಜಾರಿಗೆ ತಂದಿದ್ದು, ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಆರಂಭಿಸಿದ್ದೇವೆ ಎಂದರು.

ಕಾಂಗ್ರೆಸ್ ಪಕ್ಷದಲ್ಲಿಯೇ ಸಿಎಂ ಕುರ್ಚಿಗಾಗಿ ದೋಣಿ ಕೊರೆಯುವ ಕೆಲಸವಾಗುತ್ತಿದೆ. ಮುಂದಿನ ಎರಡು ತಿಂಗಳೊಳಗಾಗಿ ರಾಜ್ಯಪಾಲರ ವರದಿ ಬರುತ್ತದೆ, ಸಿಎಂ ಸಿದ್ದರಾಮಯ್ಯ ಅವರು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಬಸವರಾಜ ಬೊಮ್ಮಾಯಿ ಅವರು ಸ್ನೇಹಿತರಾಗಿ ಆ ರೀತಿ ಎಚ್ಚರಿಕೆ ಕೊಟ್ಟಿದ್ದರೆ, ಅವುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದರು.

ನಗರದ ದಿ. ಕಾಟನದ ಸೇಲ್ ಸೊಸೈಟಿ ಕೇಂದ್ರದಲ್ಲಿ ಹೆಸರು ಖರೀದಿ ಕೇಂದ್ರವನ್ನು ಆರಂಭ ಮಾಡಿದ್ದೇವೆ. ಪ್ರತಿ ಕ್ವಿಂಟಾಲ್‌ಗೆ 8,682 ರೂ. ಬೆಂಬಲ ಬೆಲೆ ಯೋಜನೆಯಡಿ ಸಮಯಕ್ಕೆ ಸರಿಯಾಗಿ ಖರೀದಿ ಕೇಂದ್ರಗಳನ್ನು ಆರಂಭ ಮಾಡಲಾಗಿದೆ. ಕೆಲವರು 15 ದಿನಗಳ ಮುಂಚೆ ಆರಂಭಗೊಳ್ಳಬೇಕಿತ್ತು ಎಂಬ ಅನಿಸಿಕೆ ವ್ಯಕ್ತಪಡಿಸಿದ್ದರು. ಆದರೆ, ತಾಂತ್ರಿಕ ತೊಂದರೆಯಿಂದಾಗಿ ಖರೀದಿ ಕೇಂದ್ರಗಳನ್ನು ಈಗ ಆರಂಭಿಸಿದ್ದೇವೆ ಎಂದು ಹೇಳಿದರು.

Advertisement

ಬೆಂಬಲ ಯೋಜನೆಯಡಿ ಖರೀದಿಸುವ ಹೆಸರಿನ ಹಣ ನೇರವಾಗಿ ರೈತರಿಗೆ ಮುಟ್ಟಬೇಕು. ಈ ಯೋಜನೆಯನ್ನು ಯಾವ ಕಾರಣಕ್ಕೂ ಮಧ್ಯವರ್ತಿಗಳು ಲಾಭ ಪಡೆಯುವಂತಾಗಬಾರದು. ರೈತನಿಗೆ ಅನಾನುಕೂಲವಾಗಬಾರದು. ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿ ಎಂದು ಈಗಾಗಲೇ ಮಾರ್ಕೆಟಿಂಗ್ ಫೆಡರೇಶನ್‌ದವರಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next