ನಿಷೇಧಿತ ಉಗ್ರಗಾಮಿ ಸಂಘಟನೆಯಾಗಿರುವ ಐಸಿಸ್‌ನ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಅಲಿಗಢ ಮುಸ್ಲಿಂ ವಿಶ್ವ ವಿದ್ಯಾನಿಲಯದ ಆರು ವಿದ್ಯಾರ್ಥಿಗಳನ್ನು ಉತ್ತರಪ್ರದೇಶ ಉಗ್ರ ನಿಗ್ರಹ ದಳದ ಪೊಲೀಸರು ಬಂಧಿಸಿರುವುದು ತೀರಾ ಆತಂಕಕಾರಿ ಬೆಳವಣಿಗೆಯಾಗಿದೆ.
ಆಲಿಗಢ ವಿ.ವಿ.ಯ ವಿದ್ಯಾರ್ಥಿ ಸಂಘಟನೆಯು ಐಸಿಸ್ ಉಗ್ರಗಾಮಿ ಸಂಘಟನೆಯೊಂದಿಗೆ ನಂಟು ಹೊಂದಿರುವ ಮಾಹಿತಿಯನ್ನು ಕಲೆಹಾಕಿದ ಪೊಲೀಸರು ಆ ಬಳಿಕ ಈಗ ಬಂಧಿತರಾಗಿರುವ ವಿದ್ಯಾರ್ಥಿಗಳ ಚಲನವಲನಗಳ ಮೇಲೆ ನಿಗಾ ಇರಿಸಿ, ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಇವರೆಲ್ಲರನ್ನು ಬಂಧಿಸಿದ್ದಾರೆ.
ಈ ವಿದ್ಯಾರ್ಥಿಗಳು ಐಸಿಸ್‌ಗೆ ಸದಸ್ಯರ ನೇಮಕಾತಿಗೆ ಸಹಕರಿಸುತ್ತಿದ್ದ ವಿಚಾರ ಪೊಲೀಸರ ತನಿಖೆಯ ವೇಳೆ ಬೆಳಕಿಗೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಅಲಿಗಢ ವಿ.ವಿ.ಯ ಕಾರ್ಯ ಚಟುವಟಿಕೆಗಳ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಿ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.
ದೇಶದ ಕೆಲವೊಂದು ವಿಶ್ವವಿದ್ಯಾನಿಲಯಗಳು, ಉನ್ನತ ಶಿಕ್ಷಣ ಸಂಸ್ಥೆಗಳು ಉಗ್ರಗಾಮಿ ಸಂಘಟನೆಗಳ ಕಾರ್ಯಚಟುವಟಿಕೆಗಳ ಕಾರಸ್ಥಾನವಾಗಿ ಬದಲಾಗುತ್ತಿರುವುದು ಅತ್ಯಂತ ಕಳವಳಕಾರಿ ಬೆಳವಣಿಗೆಯಾಗಿದೆ. ದೇಶದಲ್ಲಿ ಈ ಹಿಂದೆಯೂ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಉಗ್ರರ ಜತೆ ನಂಟು ಹೊಂದಿದ್ದ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಈಗ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘಟನೆಯೊಂದು ನೇರವಾಗಿ ಐಸಿಸ್‌ನೊಂದಿಗೆ ನಂಟು ಹೊಂದಿರುವ ಜತೆಯಲ್ಲಿ ಸಂಘಟನೆಗೆ ಸದಸ್ಯರ ಸೇರ್ಪಡೆಗೆ ಸಹಕರಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿರುವುದು ಸಹಜವಾಗಿಯೇ ಆತಂಕಕ್ಕೆ ಕಾರಣವಾಗಿದೆ.
ಪುಣೆ ಉಗ್ರ ಮಾಡ್ಯೂಲ್ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ಎಂಜಿನಿಯರ್ ಶಿಕ್ಷಣ ಪಡೆದು, ವಿವಿಧ ಕಂಪೆನಿಗಳಲ್ಲಿ ಉನ್ನತ ಉದ್ಯೋಗ ಗಳಲ್ಲಿ ತೊಡಗಿಸಿಕೊಂಡಿದ್ದರು. ಈಗ ಎನ್‌ಐಎ, ಈ ಆರೋಪಿಗಳ ವಿರುದ್ಧ ನ್ಯಾಯಾ ಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಸುಧಾರಿತ ಸ್ಫೋಟಕಗಳ ತಯಾರಿ ಯಲ್ಲಿ ಬಳಸಲಾಗುವ ಅಗತ್ಯ ರಾಸಾಯನಿಕಗಳ ಖರೀದಿಗೆ ಕೋಡ್‌ವರ್ಡ್ ಗಳ ಬಳಕೆ, ಸ್ಫೋಟ ನಡೆಸಲುದ್ದೇಶಿಸಿರುವ ಸ್ಥಳಗಳ ಪರಿಶೀಲನೆಗೆ ಡ್ರೋನ್‌ಗಳ ಬಳಕೆ, ದಟ್ಟಾರಣ್ಯಗಳಲ್ಲಿ ತಾವು ತಯಾರಿಸಿದ ಸ್ಫೋಟಕಗಳ ಪ್ರಯೋಗ ನಡೆಸುತ್ತಿದ್ದುದು ಮತ್ತಿತರ ಆಘಾತಕಾರಿ ಅಂಶಗಳನ್ನು ಉಲ್ಲೇಖಿಸಿದೆ.
ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಉಗ್ರಗಾಮಿ ಸಂಘಟನೆಗಳೊಂದಿಗೆ ನಂಟು ಹೊಂದಿರುವುದು, ಉನ್ನತ ಶಿಕ್ಷಣ ಪಡೆಯುತ್ತಿರುವವರು, ಪಡೆದವರು ಉಗ್ರಗಾಮಿ ಸಂಘಟನೆಗಳಿಗೆ ಸೇರ್ಪಡೆಗೊಳ್ಳುತ್ತಿರುವುದು, ಉಗ್ರರು ತಮ್ಮ ದುಷ್ಕೃತ್ಯಗಳನ್ನು ಎಸಗಲು ತಂತ್ರಜ್ಞಾನ ಮತ್ತು ನೈಪುಣ್ಯವನ್ನು ವ್ಯಾಪಕವಾಗಿ ಬಳಸಿಕೊಳ್ಳಲಾರಂಭಿಸಿ ರುವುದನ್ನು ಗಮನಿಸಿದಾಗ ದೇಶದಲ್ಲಿ ಉಗ್ರರ ಜಾಲ ಅತ್ಯಂತ ಗೌಪ್ಯವಾಗಿ ವಿಸ್ತರಣೆಗೊಳ್ಳುತ್ತಿರುವಂತೆ ಕಂಡುಬರುತ್ತಿದೆ. ಉಗ್ರಗಾಮಿ ಚಟುವಟಿಕೆಗಳಿಗೆ ಪ್ರೇರಣೆ, ಆಶ್ರಯ ನೀಡುತ್ತಿರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ತನಿಖಾ ಸಂಸ್ಥೆಗಳು ಮತ್ತು ಸರಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಇಂತಹ ಅಕ್ರಮಗಳನ್ನು ಮೊಳಕೆ ಹಂತದಲ್ಲಿಯೇ ಚಿವುಟಿ ಹಾಕಬೇಕು.