ನವದೆಹಲಿ: ಜೂನ್ ತಿಂಗಳ ಆರಂಭದಲ್ಲಿ ಅರುಣಾಚಲಪ್ರದೇಶದ ಪರ್ವತ ಪ್ರದೇಶದಲ್ಲಿ ಎಎನ್ 32 ವಿಮಾನ ಪತನಗೊಂಡಿದ್ದು, ಸತತ ಪರಿಶ್ರಮದ ಮೂಲಕ ವಾಯುಸೇನೆಯ 12 ಮಂದಿ ರಕ್ಷಣಾ ತಂಡ ಕೊನೆಗೂ 13 ಶವಗಳನ್ನು ಪತ್ತೆಹಚ್ಚಿ ರವಾನಿಸಿದ್ದರು. ಆದರೆ ಇದೀಗ ರಕ್ಷಣಾ ತಂಡವೇ ಪರ್ವತ ಪ್ರದೇಶದಲ್ಲಿ ಸಿಕ್ಕಿಹಾಕಿಕೊಂಡಿರುವ ಘಟನೆ ನಡೆದಿದೆ.
ನಾಪತ್ತೆಯಾಗಿದ್ದ ಎಎನ್ 32 ವಿಮಾನ ಬಿದ್ದ ಸ್ಥಳದಲ್ಲಿ ಶೋಧ ಕಾರ್ಯ ನಡೆಸಲು ಜೂನ್ 12ರಂದು ವಾಯುಪಡೆ ಅರುಣಾಚಲದ ಪರ್ವತ ಪ್ರದೇಶದ ಮೇಲೆ 12 ಮಂದಿಯನ್ನು ಏರ್ ಡ್ರಾಪ್(ವಿಮಾನದಿಂದ ಕೆಳಕ್ಕಿಳಿಸಿದ್ದು) ಮಾಡಲಾಗಿತ್ತು. ಅಲ್ಲದೇ ಅವರಿಗೆ ಬೇಕಾಗುವಷ್ಟು ರೇಷನ್ ಅನ್ನು ನೀಡಲಾಗಿತ್ತು.
ಆದರೆ ಇದೀಗ ಕಳೆದ 17ದಿನಗಳಿಂದ ಬರೋಬ್ಬರಿ 12 ಸಾವಿರ ಅಡಿ ಎತ್ತರದ ಪರ್ವತ ಪ್ರದೇಶದಲ್ಲಿ 12 ಮಂದಿ ರಕ್ಷಣಾ ತಂಡ ಸಿಲುಕಿಕೊಂಡಿದೆ. ಹವಾಮಾನ ವೈಪರೀತ್ಯದಿಂದಾಗಿ ಆ ಪ್ರದೇಶದಲ್ಲಿ ಏರ್ ಲಿಫ್ಟ್ ಮಾಡುವುದು ಕಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾವು ಅವರೊಂದಿಗೆ ಸತತವಾಗಿ ಸಂಪರ್ಕದಲ್ಲಿದ್ದು, ಶೀಘ್ರವೇ ಅವರನ್ನು ಸುರಕ್ಷಿತವಾಗಿ ಕರೆತರಲು ಪ್ರಯತ್ನಿಸಲಾಗುತ್ತಿದೆ ಎಂದು ರಕ್ಷಣಾ ಪಿಆರ್ ಒ ವಿಂಗ್ ಕಮಾಂಡರ್ ರತ್ನಾಕರ್ ಸಿಂಗ್ ಮಾಹಿತಿ ನೀಡಿದ್ದಾರೆ.
ರಕ್ಷಣಾ ತಂಡದಲ್ಲಿ ಐಎಎಫ್ ನ ಒಂಬತ್ತು ಮಂದಿ, ಪರ್ವತಾರೋಹಿ ಟಾಕಾ ಟಾಮ್ಟು ಮತ್ತು ಆತನ ಇಬ್ಬರು ಸಹಾಯಕರು ಸೇರಿ 12 ಜನರ ತಂಡವಿದೆ. ಒಂದು ವೇಳೆ ಆ ಪ್ರದೇಶದಲ್ಲಿ ಏರ್ ಲಿಫ್ಟ್ ಮಾಡುವುದು ಕಷ್ಟವಾದರೆ ಕಾಲ್ನಡಿಗೆಯ ಹಾದಿಯಲ್ಲಿ ಬರಲು ನೆರವು ನೀಡಲು ಸಿದ್ದರಾಗಿದ್ದೇವೆ ಎಂದು ಶಿ ಯೋಮಿ ಜಿಲ್ಲಾಡಳಿತ ತಿಳಿಸಿದೆ.