ಹೈದರಾಬಾದ್ : ಅರುಣಾಚಲ ಪ್ರದೇಶದ ಲಿಪೋ ಸಮೀಪದ ಕಡಿದಾದ ಪರ್ವತ ಪ್ರದೇಶದಲ್ಲಿ ಪತನಗೊಂಡು 13 ಜೀವಗಳನ್ನು ಬಲಿಪಡೆದಿದ್ದ ಭಾರತೀಯ ವಾಯುಪಡೆಯ ಎಎನ್ 32 ಸಾರಿಗೆ ವಿಮಾನ ದುರಂತಕ್ಕೆ ಕಾರಣವೇನು ಎಂಬುದನ್ನು ಕಂಡುಕೊಳ್ಳಲಾಗುವುದು ಮತ್ತು ಈ ರೀತಿಯ ದುರಂತಗಳು ಇನ್ನು ಮುಂದೆ ಘಟಿಸದಂತೆ ನೋಡಿಕೊಳ್ಳಲಾಗುವುದು ಎಂದು ಐಎಎಫ್ ಮುಖ್ಯಸ್ಥ ಬಿ ಎಸ್ ಧನೋವಾ ಇಂದು ಶನಿವಾರ ಹೇಳಿದ್ದಾರೆ.
ಎಎನ್ 32 ವಿಮಾನ ಪತನಗೊಂಡ ಹತ್ತು ದಿನಗಳ ತರುವಾಯ ಅದರ ಅವಶೇಷಗಳು ಅರುಣಾಚಲ ಪ್ರದೇಶದ ಲಿಪೋ ಸಮೀಪದ ಎತ್ತರದ ಪರ್ವತ ಪ್ರದೇಶದ ದಟ್ಟಾರಣ್ಯದಲ್ಲಿ ಪತ್ತೆಯಾಗಿ ಎಲ್ಲ 13 ಮೃತ ದೇಹಗಳನ್ನು ಮೇಲೆತ್ತಲಾದುದನ್ನು ಅನುಸರಿಸಿ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಿದ್ದರು.
ಪತನಗೊಂಡ ವಿಮಾನದ ಫ್ಲೈಟ್ ಡಾಟಾ ರೆಕಾರ್ಡರ್ ಮತ್ತು ಕಾಕ್ ಪಿಟ್ ವಾಯ್‌ಸ್ ರೆಕಾರ್ಡರ್ ನಮಗೆ ಸಿಕ್ಕಿದೆ. ಈ ದುರಂತ ಹೇಗೆ ಸಂಭವಿಸಿತು ಎಂಬುದನ್ನು ನಾವು ಕೂಲಂಕಷವಾಗಿ ತಿಳಿಯಲಿದ್ದೇವೆ. ಹಾಗೆಯೇ ಈ ರೀತಿಯ ದುರಂತಗಳು ಮತ್ತೆ ಸಂಭವಿಸದಂತೆ ನಾವು ನೋಡಿಕೊಳ್ಳುವೆವು ಎಂದು ಧನೋವಾ ಸುದ್ದಿಗಾರರಿಗೆ ಹೇಳಿದರು.
ಇಲ್ಲಿಗೆ ಸಮೀಪದ ಡುಂಡಿಗಲ್ ಸಮೀಪದ ವಾಯು ಪಡೆ ಅಕಾಡೆಮಿಯ ಜಂಟಿ ಘಟಿಕೋತ್ಸವದ ಪಾರ್ಶ್ವದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.