ಕುಷ್ಟಗಿ: ಆಲಮಟ್ಟಿ ಜಲಾಶಯದಿಂದ ಜಿಂದಾಲ್ಗೆ ಸರಬರಾಜಾಗುವ ಪೈಪ್‌ಲೈನ್ ಒಡೆದು ರೈತರ ಜಮೀನುಗಳಲ್ಲಿ ಹಳ್ಳದಂತೆ ಹರಿದಿದ್ದು, ಫಲವತ್ತಾದ ಮಣ್ಣು ಕೊಚ್ಚಿ ಹೋಗಿದೆ. ಚೇತರಿಕೆ ಹಂತದ ಬೆಳೆಗಳು ಜಲಾವೃತಗೊಂಡಿದ್ದು ಅಪಾರ ಹಾನಿ ಸಂಭವಿಸಿದ ಘಟನೆ ಕುಷ್ಟಗಿ ಸೀಮಾದಲ್ಲಿ ನಡೆದಿದೆ.
ನೀರಿನ ರಭಸಕ್ಕೆ ರೇಣವ್ವ ಕಂದಗಲ್ ಅವರ 4 ಎಕರೆ, ಚಂದಪ್ಪ ಕಂದಗಲ್ ಅವರ 3 ಎಕರೆ, ಮಂಜುನಾಥ ಮಹಾಲಿಂಗಪೂರ, ರಮೇಶ ಮಹಾಲಿಂಗಪುರ ಅವರ 10 ಎಕರೆ, ಹುಸೇನಸಾಬ್ ಕಾಯಿಗಡ್ಡಿ ಅವರ 3 ಎಕರೆಯಲ್ಲಿ ಬಿತ್ತನೆ ಮಾಡಿದ್ದ ಹೆಸರು ಬೆಳೆ ಜಲಾವೃತಗೊಂಡಿದೆ. ಜಿಂದಾಲ್ ಪೈಪ್‌ಲೈನ್ ವ್ಹಾಲ್ ಇರುವ ಪ್ರದೇಶಕ್ಕೆ ಪಿಎಸ್‌ಐ ವಿಶ್ವನಾಥ ಹಿರೇಗೌಡ್ರು, ಗ್ರಾಮ ಲೆಕ್ಕಾಧಿಕಾರಿ ಶರಣಪ್ಪ ದಾಸರ ಭೇಟಿ ನೀಡಿ ಪರಿಶೀಲಿಸಿದರು.
ಪೈಪ್‌ಲೈನ್ ವ್ಹಾಲ್ ಯಾರೋ ದುಷ್ಕರ್ಮಿಗಳು ಕಲ್ಲಿನಿಂದ ಧ್ವಂಸಗೊಳಿಸಿದ್ದರಿಂದಲೇ ಈ ರೀತಿಯಾಗಿದೆ ಎಂದು ಸಂತೋಷ ಮೂಲಿಮನಿ ರೆೈತರಿಗೆ ತಿಳಿಸಿದರು, ನಂತರ ಪಿಎಸ್‌ಐ ವಿಶ್ವನಾಥ ಹಿರೇಗೌಡ್ರು ಆಗಮಿಸಿದ್ದ ವೇಳೆ ಪೈಪ್‌ನಲ್ಲಿ ವ್ಹಾಲ್ಗೆ ಪ್ಲಾಸ್ಟಿಕ್ ಇತರೇ ತ್ಯಾಜ್ಯ ಕಟ್ಟಿಕೊಂಡಾಗ ವ್ಹಾಲ್ನಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ತಿಳಿಸಿದರು. ಈ ಧ್ವಂದ್ವ ಹೇಳಿಕೆ ಪ್ರಶ್ನಾರ್ಹವಾಗಿದೆ. ಇಲಕಲ್ ಪೈಪ್‌ಲೈನ್ ಮೇಲುಸ್ತುವಾರಿ ಸಿಬ್ಬಂದಿ ಸಿದ್ರಾಮಪ್ಪ ಅವರು ವ್ಹಾಲ್ನಿಂದ ನೀರು ಹರಿದು ಜಮೀನು ಹಾಳಾಗಿರುವ ಬಗ್ಗೆ ಮೇಲಾಧಿಕಾರಿಗಳ ಚಿತ್ರ ಸಮೇತ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
Advertisement
10 ವರ್ಷಗಳ ಹಿಂದೆ ಆಲಮಟ್ಟಿ ಜಲಾಶಯದಿಂದ ಕುಷ್ಟಗಿ ಮೂಲಕ ಜಿಂದಾಲ್ (ಜೆಎಸ್‌ಡಬ್ಲ್ಯೂ) ಕೈಗಾರಿಕಾ ಸಮೂಹಕ್ಕೆ ಬೃಹತ್ ಪೈಪ್‌ಲೈನ್ ಅಳವಡಿಸಲಾಗಿದೆ. ಪೈಪಲೈನ್ ಮಾರ್ಗದಲ್ಲಿ ಅಲ್ಲಲ್ಲಿ ನೀರಿನ ರಭಸ ನಿಯಂತ್ರಿಸಲು ವ್ಹಾಲ್ ಅಳವಡಿಸಲಾಗಿದೆ. ಕುಷ್ಟಗಿ ವ್ಯಾಪ್ತಿಯಲ್ಲಿ ರೇಣವ್ವ ಕಂದಗಲ್ ಅವರ ಜಮೀನಿನಲ್ಲಿ ವ್ಹಾಲ್ ಅಳವಡಿಸಲಾಗಿದ್ದು ಕಳೆದ ಸೋಮವಾರ ಪೈಪ್‌ಲೈನ್ ನೀರಿನ ಒತ್ತಡಕ್ಕೆ ಒಡೆದಿದೆ. ನೀರು ಸುಮಾರು ಆರು ಅಡಿ ಎತ್ತರ ಚಿಮ್ಮಿದ್ದು, ಅಪಾರ ಪ್ರಮಾಣದಲ್ಲಿ ನೀರು 18 ಗಂಟೆಗಳ ಕಾಲ ಹರಿದಿದೆ. ಮಂಗಳವಾರ ಬೆಳಗ್ಗೆ ಜಮೀನು, ಹಳ್ಳದಲ್ಲಿ ನೀರು ಹರಿಯುತ್ತಿರುವುದು ಅಚ್ಚರಿ ಮೂಡಿಸಿತು. ನಂತರ ಗಮನಿಸಿದಾಗ ರೇಣವ್ವ ಕಂದಗಲ್ ಅವರ ಜಮೀನಿನಲ್ಲಿರುವ ಪೈಪ್‌ಲೈನ್ ಒಡೆದಿರುವುದು ಬೆಳಕಿಗೆ ಬಂದಿದೆ. ಕೂಡಲೇ ಪೈಪ್‌ಲೈನ್ ಮೇಲುಸ್ತುವಾರಿಯ ಜಿಂದಾಲ್ ಕಂಪನಿಯ ಸಂತೋಷ ಮೂಲಿಮನಿ, ಇಲಕಲ್ ಮೇಲುಸ್ತುವಾರಿಯ ಸಿದ್ರಾಮಪ್ಪ ಅವರ ಗಮನಕ್ಕೆ ತಂದು ನೀರು ಸರಬರಾಜು ನಿಲ್ಲಿಸುವಂತೆ ಒತ್ತಾಯಿಸಲಾಯಿತು. ನಂತರ ಆಗಮಿಸಿದ ಮೇಲುಸ್ತುವಾರಿ ಸಿಬ್ಬಂದಿ ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಸಂಪೂರ್ಣ ನಿಯಂತ್ರಣಕ್ಕೆ ಬಂತು.
ಜಿಂದಾಲ್ ಕಂಪನಿಯ ಪೈಪ್‌ಲೈನ್ ವ್ಹಾಲ್ ಬಿರುಕು ತಾಂತ್ರಿಕ ದೋಷದಿಂದ ನೀರು ಹರಿದು ಬೆಳೆ, ಜಮೀನು ಹಾಳಾಗಿರುವ ಬಗ್ಗೆ ರೆೈತರು ದೂರು ನೀಡಿದರೆ, ಸಂಬಂಧಿಸಿದ ಕಂಪನಿ ಅಧಿಕಾರಿಯನ್ನು ಕರೆಸಿ ವಿಚಾರಿಸಲಾಗುವುದು.•ಕೆ.ಎಂ. ಗುರುಬಸವರಾಜ್, ತಹಶೀಲ್ದಾರ್