Advertisement

ಜಲಕ್ಷಾಮ ಹೋಗಲಾಡಿಸಿದ ರಾಮಕುಂಜದ ಅಮೈ ಕೆರೆ

11:13 PM May 29, 2019 | mahesh |

ಕಡಬ: ಪಾಳು ಬಿದ್ದು ನಿಷ್ಟ್ರಯೋಜಕವಾಗಿದ್ದ ರಾಮಕುಂಜದ ಅಮೈ ಕೆರೆ ಸರ್ವಋತು ಕೆರೆಯಾಗಿ ಅಭಿವೃದ್ಧಿಯಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮೂಲಕ ಲೋಕಾರ್ಪಣೆಗೊಂಡು ಈಗಾಗಲೇ 2 ವರ್ಷಗಳು ಕಳೆದಿವೆ. ಒಂದು ಕಾಲದಲ್ಲಿ ಹೂಳು ತುಂಬಿ ಮೈದಾನದಂತಾಗಿದ್ದ ಅಮೈ ಕೆರೆಯಲ್ಲಿ ಈ ಬಿರು ಬಿಸಿಲಿನಲ್ಲಿಯೂ ನೀರು ಸಾಕಷ್ಟಿದೆ. ಮಾತ್ರವಲ್ಲದೇ ಪರಿಸರದ ಬಾವಿಗಳಲ್ಲಿಯೂ ಈ ಬಾರಿ ನೀರು ಬತ್ತಿಲ್ಲ. ಅಮೈ ಕೆರೆಯ ಅಭಿವೃದ್ಧಿಯ ಯಶೋಗಾಥೆ ನಾಡಿನ ಎಲ್ಲೆಡೆ ಪಾಳುಬಿದ್ದಿರುವ ಕೆರೆಗಳ ಅಭಿವೃದ್ಧಿಗೆ ಪ್ರೇರಣೆಯಾಗಿದೆ.

Advertisement

55 ಲಕ್ಷ ರೂ. ವೆಚ್ಚದ ಕಾರ್ಯ
ಕೆರೆ ಅಭಿವೃದ್ಧಿಯ ಸಹಭಾಗಿತ್ವ ವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿ‌ೃದ್ಧಿ ವಿಭಾಗದ 5 ಲಕ್ಷ ರೂ. ಅನುದಾನ, ಶಾಸಕ ಎಸ್‌. ಅಂಗಾರ ಅವರ ಶಿಫಾರಸಿನ ಮೇರೆಗೆ ಸಣ್ಣ ನೀರಾವರಿ ಇಲಾಖೆ ನೀಡಿದ 20 ಲಕ್ಷ ರೂ., ಉಳಿದಂತೆ ಉದ್ಯೋಗ ಖಾತ್ರಿ ಯೋಜನೆಯ 25 ಲಕ್ಷ ರೂ. ಹೀಗೆ ಒಟ್ಟು 55 ಲಕ್ಷ ರೂ. ವೆಚ್ಚದಲ್ಲಿ ಕೆರೆಯನ್ನು ಅಭಿವೃದ್ಧಿಪಡಿಸಲಾಗಿತ್ತು.

ಊರಿಗೇ ನೀರುಣಿಸುತ್ತಿದ್ದ ಕೆರೆ
ಬೇಸಗೆ ಕಾಲ ಮಳೆಗಾಲ ಎನ್ನುವ ಬೇಧವಿಲ್ಲದೆ ಇಂದು ಕಾಲದಲ್ಲಿ ಸಮೃದ್ಧವಾಗಿ ನೀರಿನಿಂದ ತುಂಬಿದ್ದ ಅಮೈ ಕೆರೆ ಊರಿನ ಗೋವುಗಳಿಗೆ ಹಾಗೂ ಜನರಿಗೆ ನೀರುಣಿಸುವ ಮೂಲವಾಗಿತ್ತು. ವಿಶಾಲವಾದ ಪ್ರದೇಶದಲ್ಲಿ ಹರಡಿಕೊಂಡು ಸರೋವರದಂತೆ ಕಂಡುಬರುತ್ತಿದ್ದ ಕರೆ ಕಾಲಕ್ರಮೇಣ ನಿರ್ಲಕ್ಷ ್ಯಕ್ಕೊಳಗಾಗಿ ಹೂಳು ತುಂಬಿ ಮೈದಾನದ ರೂಪಕ್ಕೆ ಬಂದಿತ್ತು. ಕಳೆದ ಕೆಲ ವರ್ಷಗಳಿಂದ ಪರಿಸರದಲ್ಲಿ ಕುಡಿಯುವ ನೀರಿಗೂ ತತ್ವಾರ ಎನ್ನುವ ಪರಿಸ್ಥಿತಿ ಎದುರಾದಾಗ ಗ್ರಾ.ಪಂ.ನ ಕಣ್ಣಿಗೆ ಬಿದ್ದ ಅಮೈ ಕೆರೆ ಇಂದು ಪರಿಸರದ ಜನರ ನೀರಿನ ಬವಣೆಯನ್ನು ಹೋಗಲಾಡಿಸಿದ ಜಲಮೂಲವಾಗಿ ಪರಿವರ್ತನೆಯಾಗಿದೆ.

ಅಂತರ್ಜಲಮಟ್ಟ ಏರಿಕೆ
ಕೆರೆ ಅಭಿವೃದ್ಧಿಯಾಗಿರುವುದರಿಂದ ಪರಿಸರದಲ್ಲಿ ಅಂತರ್ಜಲ ಮಟ್ಟ ಏರಿಕೆಯಾಗಿದೆ. ಕೆರೆಯ ಆಸುಪಾಸಿನಲ್ಲಿ ಗ್ರಾ.ಪಂ.ನ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಿಸಲಾದ ತೆರೆದ ಬಾವಿಗಳಲ್ಲಿ ಬೇಸಗೆಯಲ್ಲಿಯೂ ಭರಪೂರ ನೀರು ಸಿಗುವ ಲಕ್ಷಣಗಳು ಗೋಚರಿಸುತ್ತಿವೆ. ಕೆರೆಯ ಅಭಿವೃದ್ಧಿಯಿಂದಾಗಿ ಇಲ್ಲಿನ 225ಕ್ಕೂ ಹೆಚ್ಚು ಮನೆಗಳಿಗೆ ಕುಡಿಯುವ ನೀರಿನ ತೊಂದರೆ ದೂರವಾಗಿದೆ. ಕೃಷಿ ತೋಟಗಳ ಜಲಮೂಲಗಳಲ್ಲಿಯೂ ನೀರಿನ ಮಟ್ಟ ಏರಿಕೆಯಾಗಿದೆ. ಈ ಹಿಂದೆ ಕೆರೆಯ ಆಸುಪಾಸಿನಲ್ಲಿ ಕೊರೆಸಲಾಗಿದ್ದ ಹಲವು ಕೊಳವೆಬಾವಿಗಳು ನೀರಿಲ್ಲದೆ ವಿಫಲವಾಗಿತ್ತು. ಕೆರೆ ಅಭಿವೃದ್ಧಿಯಾದ ಬಳಿಕ ಕೆರೆಯ ಬಳಿ ಕೊರೆಯಲಾದ ಕೊಳವೆಬಾವಿಯಲ್ಲಿ ಸಮೃದ್ಧವಾಗಿ ನೀರು ಲಭಿಸಿದ ಕಾರಣ ಈ ಬಾರಿ ಪರಿಸರದ ಜನರಿಗೆ ನೀರಿನ ಸಮಸ್ಯೆ ಕಾಡಲೇ ಇಲ್ಲ. ಕೆರೆ ಅಭಿವೃದ್ಧಿ ಮಾಡಿ ಭವಿಷ್ಯದಲ್ಲಿ ನೀರಿನ ಕೊರತೆ ನೀಗಿಸುವ ಕನಸು ಕಂಡ ಗ್ರಾ.ಪಂ.ನ ಯುವ ಅಧ್ಯಕ್ಷ ಪ್ರಶಾಂತ್‌ ಆರ್‌.ಕೆ., ಅಂದಿನ ಪಿಡಿಒ ರವಿಚಂದ್ರ ಹಾಗೂ ಗ್ರಾ.ಪಂ.ನ ಆಡಳಿತ ಮಂಡಳಿ ಹಾಕಿಕೊಂಡ ಯೋಜನೆ ಇಂದು ಫಲದಾಯಕವಾಗಿದೆ.

ಬವಣೆ ನೀಗಲು ಸಾಧ್ಯ

ಎಲ್ಲೆಡೆ ಈ ರೀತಿಯ ಕೆರೆಗಳ ಅಭಿವೃದ್ಧಿಯಾಗಬೇಕಿದೆ. ಅಮೈ ಕೆರೆ ಅಭಿವೃದ್ಧಿಯ ಕಿರು ಸಾಕ್ಷ ್ಯಚಿತ್ರ ಬೆಂಗಳೂರಿನಲ್ಲಿ ಜರಗಿದ ಸಂಸದರ ಸಭೆಯಲ್ಲಿ ಪ್ರದರ್ಶನಗೊಂಡು ಬಹಳಷ್ಟು ಮೆಚ್ಚುಗೆ ಪಡೆದಿದೆ. ಜಲಸಂರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಉಂಟಾದರೆ ಮಾತ್ರ ಈ ರೀತಿಯ ಕೆಲಸಗಳು ನಡೆಯಲು ಸಾಧ್ಯ. ಪ್ರತಿ ಗ್ರಾಮದಲ್ಲಿ ಈ ರೀತಿ ಒಂದೊಂದು ಕೆರೆಗಳನ್ನು ಅಭಿವೃದ್ಧಿಪಡಿಸಿದರೆ ನಮ್ಮ ನೀರಿನ ಬವಣೆಯನ್ನು ನೀಗಿಸಲು ಸಾಧ್ಯವಾದೀತು.
– ನವೀನ್‌ ಭಂಡಾರಿ ಎ.ಡಿ., ಉದ್ಯೋಗ ಖಾತರಿ ಯೋಜನೆ, ಪುತ್ತೂರು

ಇನ್ನೊಂದು ಕೆರೆಯೂ ಅಭಿವೃದ್ಧಿ

ಅಮೈ ಕೆರೆಯ ಅಭಿವೃದ್ಧಿ ಬೇಸಗೆಯಲ್ಲಿ ನಮಗೆ ಸವಾಲಾಗಿದ್ದ ಕುಡಿಯುವ ನೀರಿನ ಸಮಸ್ಯೆ ಸಂಪೂರ್ಣವಾಗಿ ಬಗೆಹರಿದಿದೆ. ಕೆರೆ ನಿರ್ಮಾಣಕ್ಕೂ ಮುನ್ನ ಈ ಭಾಗದಲ್ಲಿನ ಕೊಳವೆ ಬಾವಿಗಳು ಬೇಸಿಗೆಯಲ್ಲಿ ಬತ್ತಿ ಹೋಗುತ್ತಿತ್ತು. ಈಗ ಅಂತಹ ಸಮಸ್ಯೆ ಇಲ್ಲ. ಧನಾತ್ಮಕ ಆಶಯವಿಟ್ಟುಕೊಂಡು ಕೆರೆ ನಿರ್ಮಾಣ ಮಾಡಿರುವುದು ಸಾರ್ಥಕತೆ ಪಡೆದಿದೆ. ನಮ್ಮ ಗಾ.ಪಂ. ವ್ಯಾಪ್ತಿಯ ಹಳೆನೇರೆಂಕಿಯ ಎತ್ತರಪಡ್ಪುವಿನಲ್ಲಿ ಪಾಳುಬಿದ್ದಿರುವ ಪುರಾತನ ಕೆರೆಯನ್ನು ಕೂಡ ಇದೇ ರೀತಿ ಅಭಿವೃದ್ಧಿಪಡಿಸಬೇಕೆಂಬ ಯೋಜನೆ ನಮ್ಮ ಮುಂದಿದೆ.
– ಪ್ರಶಾಂತ್‌ ಆರ್‌.ಕೆ. ಅಧ್ಯಕ್ಷರು, ರಾಮಕುಂಜ ಗ್ರಾ.ಪಂ.
Advertisement

-ನಾಗರಾಜ್‌ ಎನ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next