Advertisement

ಜಗಳಗಂಟರಿಗೆ ರಂಗವ್ವನ ಪಾಠ

11:39 PM Nov 12, 2021 | Team Udayavani |

ಒಂದು ವಿದ್ಯಾಸಂಸ್ಥೆಯಲ್ಲಿ ದಶಕದ ಹಿಂದೆ ಪ್ರಾಂಶುಪಾಲರಿಗೂ ಒಬ್ಬ ಪ್ರಾಧ್ಯಾಪಕರಿಗೂ ತಗಾದೆ ಬಂತು. ಪ್ರಾಧ್ಯಾಪಕರನ್ನು ಕೆಲಸದಿಂದ ತೆಗೆದುಹಾಕಿದರು. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತು. ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗುವಾಗ ಹತ್ತು ವರ್ಷ ತಗಲಿತ್ತು. ಸರ್ವೋಚ್ಚ ನ್ಯಾಯಾಲಯದಲ್ಲಿ “ನ್ಯಾಯ’ ಪಡೆಯಬೇಕಾದರೆ ಪ್ರಾಯಃ ಕಾಲೇಜಿನ ಆಡಳಿತ ಮಂಡಳಿಗೂ ಪ್ರಾಧ್ಯಾಪಕನಿಗೂ ತಲಾ ಕನಿಷ್ಠ 50 ಲ.ರೂ. ಖರ್ಚು ತಗಲಿರಬಹುದು. ಏತನ್ಮಧ್ಯೆ ಪೊಲೀಸ್‌ ಠಾಣೆಗೆ ಹೋದ ಪ್ರಕರಣಗಳೂ ಇದ್ದವು.

Advertisement

ಹತ್ತು ವರ್ಷಗಳಲ್ಲಿ ಜೀವನೋಪಾಯಕ್ಕಾಗಿ ಪ್ರಾಧ್ಯಾ ಪಕ ಬೇರೆ ವ್ಯವಹಾರ ನೋಡಿ ಕೊಳ್ಳಬೇಕಾಯಿತು. ನ್ಯಾಯಾಲಯದ ತೀರ್ಪಿನ ಮೇರೆಗೆ ಪ್ರಾಧ್ಯಾಪಕ ಮತ್ತೆ ಕಾಲೇಜಿನ ಕರ್ತವ್ಯಕ್ಕಾಗಿ ನಿಯೋಜನೆ ಗೊಂಡರು. ಆದರೆ ಈ ಹತ್ತು ವರ್ಷಗಳ ವೇತನ ಪಡೆ ಯಲು ಆಗಲಿಲ್ಲ. ಏತನ್ಮಧ್ಯೆ ಹಲವು ಪ್ರಾಂಶುಪಾಲರು ಬಂದರು, ಹೋದರು. ಮೊದಲೇ ನಿವೃತ್ತಿಯಂಚು, ನ್ಯಾಯಾಲಯದಿಂದ ಬಂದವರೆಂಬ ಹೆಚ್ಚುಗಾರಿಕೆ ಬೇರೆ, ಒಟ್ಟಾರೆ ಪ್ರಾಂಶುಪಾಲರ ಕುರ್ಚಿಯಲ್ಲಿ ಕುಳಿತವರಿಗೆ ಇವರನ್ನು ಎದುರಿಸುವುದು ವಿದ್ಯಾರ್ಥಿ ಗಳನ್ನು ಎದುರಿಸುವುದಕ್ಕಿಂತ ದೊಡ್ಡ ಸವಾಲು. ಪ್ರಾಧ್ಯಾಪಕರ ಉಪಯುಕ್ತ ಯವ್ವನ ದಾವೆಗೆ ಮೀಸಲಾಯಿತು. ಜಗಳ ಮಾಡಿಕೊಂಡಿದ್ದ ಪ್ರಾಂಶು ಪಾಲರಿಗೂ ಸಂಸ್ಥೆಗೂ ನಿವೃತ್ತಿ ಬಳಿಕ ಯಾವುದೇ ಸಂಬಂಧವಿಲ್ಲದಿದ್ದರೂ ಪ್ರಕರಣದ ಭಾರವನ್ನು ಸಂಸ್ಥೆ ಹೊರಲೇಬೇಕು. ಸಾಮಾನ್ಯವಾಗಿ ಆಡಳಿತ ಮಂಡಳಿಗೂ ಸಿಬಂದಿಗೂ ಯಾವುದೇ ವೈಮನಸ್ಸು ಇರುವುದಿಲ್ಲ. ಕೊನೆಗೆ ಭಾರ ಹೊರಬೇಕಾದದ್ದು ಆಡಳಿತ ಮಂಡಳಿಯೇ. ಇಂತಹ ಪ್ರಕರಣಗಳು ಹೆಚ್ಚಾದಂತೆ ಬಳಲುತ್ತಿರುವ ಸಂಸ್ಥೆಗಳು ಮತ್ತಷ್ಟು ಮುರುಟಿಕೊಳ್ಳುತ್ತವೆ. ಒಟ್ಟಾರೆ ಎಲ್ಲರಿಗೂ ಹೊರೆ, ಯಾರಿಗೂ ನೆಮ್ಮದಿ ಇಲ್ಲ.

***

ಸಾಹಿತ್ಯೋಪಾಸಕ ಬೆಳಗೆರೆ ಕೃಷ್ಣ ಶಾಸ್ತ್ರಿಗಳು ತುಮಕೂರು ಜಿಲ್ಲೆಯ ಹೆಗ್ಗೆರೆಯಲ್ಲಿ ಶಿಕ್ಷಕರಾಗಿದ್ದಾಗ ಒಂದು ಮದುವೆ ನಿಶ್ಚಯವಾಯಿತು. ವಧುವರರಿಬ್ಬರೂ ಶಾಸ್ತ್ರಿಗಳ ವಿದ್ಯಾರ್ಥಿಗಳಾಗಿದ್ದರು. ಒಂದು ಕ್ಷುಲ್ಲಕ ಕಾರಣಕ್ಕೆ ಮದುವೆ ಮುರಿದುಬಿತ್ತು.

ಹಬ್ಬದ ಒಂದು ದಿನ ಹುಡುಗ ಹುಡುಗಿಯನ್ನು ಕರೆದುಕೊಂಡು ಹೋಗಿಯೇ ಬಿಟ್ಟ. ಹುಡುಗಿಯ ತಂದೆ “ಶತ ಒರಟ’. ಎಲ್ಲಿ ಹೆಣ ಉರುಳಿ ಕ್ರಿಮಿನಲ್‌ ಪ್ರಕರಣ ದಾಖಲಾಗುವುದೋ ಎಂಬ ಭಯ.

Advertisement

ಹುಡುಗಿಯ ಅಕ್ಕನ ಮನೆ ಕಪಿಲೆ ಎಂಬ ಹಳ್ಳಿಯಲ್ಲಿತ್ತು. ಅಲ್ಲಿಗೆ ನವದಂಪತಿ ಹೋಗಿದ್ದರು. ಶಾಸ್ತ್ರಿಗಳು ಒಂದು ದಿನ ಕಪಿಲೆಗೆ ಹೊರಟರು. ದಾರಿಯಲ್ಲಿ ಹುಡುಗಿ ತಾಯಿ ರಂಗವ್ವ ಸಿಕ್ಕಿದಾಗ “ಮಗಳನ್ನು ಮಾತನಾಡಿಸಿಕೊಂಡು ಬರೋಣ’ ಎಂದು ಶಾಸ್ತ್ರಿಗಳು ಹೇಳಿದ್ದೇ ತಡ “ಯಾಕ್‌ ಬರ್ಬೇಕು ಆ ಮುಸುಡಿ ನೋಡೋಕೆ’ ಎಂದು ಆರ್ಭಟಿಸಿದಳು. “ಹಾಗಲ್ಲ, ನೀನು ಹೆತ್ತ ತಾಯಿ, ಬಾ’ ಎಂದು ಸಮಾಧಾನಪಡಿಸಿ ಕರೆದುಕೊಂಡು ಹೊರಟರು. ನೂತನ ಜೋಡಿ ಹೆದರಿಕೆಯಿಂದ ಅಡಗಿ ಕುಳಿತಿತ್ತು. ಶಾಸ್ತ್ರಿಗಳ ಆಗಮನದಿಂದ ಹೊರಗೆ ಬಂದರು. ಇಬ್ಬರನ್ನೂ ತಾಯಿ ಕಾಲಿಗೆ ನಮಸ್ಕರಿಸಲು ಶಾಸ್ತ್ರಿಗಳು ಹೇಳಿದರು. ಕಾಲಿಗೆ ಬಿದ್ದದ್ದೆ ತಡ ಮಗಳನ್ನು ರಂಗವ್ವ ಝಾಡಿಸಿ ಒದ್ದಳು. ಹುಡುಗಿ ಒಂದಷ್ಟು ದೂರ ಹೋಗಿ ಬಿದ್ದಳು. “ರಂಗವ್ವ, ನೀನು ಮಾಡಿದ ತಪ್ಪಿಗೆ ಅನುಭವಿಸಬೇಕಾಗುತ್ತೆ’ ಎಂದು ಶಾಸ್ತ್ರಿಗಳು ಹೇಳಿದಾಗ “ಏನ್‌ ಅನುಭವಿಸಬೇಕಾಗುತ್ತೆ, ಬಿಡಿಸ್ವಾಮಿ’ ಎಂದು ಸಿಟ್ಟಿನಿಂದಲೇ ಹೇಳಿದಳು. ಆಗ ರಂಗವ್ವನಲ್ಲಿ ಶಕ್ತಿ ಇತ್ತು. “ಏನ್‌ ಅನುಭವಿಸುದಾ? ನೀನೇ ತೊಟ್ಟಿಲು ತೂಗಬೇಕಾಗತ್ತೆ’ ಎಂದರು ಶಾಸ್ತ್ರಿಗಳು. ಎಲ್ಲರೂ ನಕ್ಕರು, ಊಟ ಮಾಡಿ ಹೊರಟರು.

ಕೆಲವು ವರ್ಷಗಳ ಅನಂತರ ಚಿತ್ರದುರ್ಗಕ್ಕೆ ಹೋದಾಗ ಇಬ್ಬರು ಹುಡುಗರು ಶಾಸ್ತ್ರಿಗಳನ್ನು ತೋರಿಸಿ “ಬೆಳಗರೆ ತಾತ’ ಎಂದರು. ಹೀಗೆಂದಾಗ ಶಾಸ್ತ್ರಿಗಳಿಗೂ ಕುತೂಹಲವಾಗಿ ಮಾತನಾಡಿಸಿದರು. ಮಕ್ಕಳು ತಮ್ಮನ್ನು “ರಾಮಣ್ಣನ ಮಕ್ಕಳು’ ಎಂದರು. ಹೆಗ್ಗೆರೆ ರಾಮಣ್ಣ ಎನ್ನುವುದು ಗೊತ್ತಾಗಿ ಮನೆ ಕಡೆ ಶಾಸ್ತ್ರಿಗಳನ್ನು ಮಕ್ಕಳು ಕರೆದೊಯ್ದರು. ಅಂದು ರಾಮಣ್ಣನ ಮೂರನೆಯ ಮಗುವಿನ ನಾಮಕರಣ, ಸತ್ಯನಾರಾಯಣ ಪೂಜೆ ಇತ್ತು. ರಂಗವ್ವ ತೊಟ್ಟಿಲಲ್ಲಿ ಮಗುವನ್ನು ತೂಗುತ್ತಿದ್ದಾಳೆ. “ನೋಡಿದ್ಯಾ ರಂಗವ್ವ, ನಾನವತ್ತು ಹೇಳಿದ್ದೆನಲ್ಲಾ? ನೀನು ಒದ್ದದ್ದಕ್ಕೆ ಅನುಭವಿಸಬೇಕಾಗುತ್ತೆ. ತೊಟ್ಟಿಲು ತೂಗಬೇಕಾಗುತ್ತೆ ಎಂದು ಹೇಳಿದ್ದು ನಿಜ ವಾಯ್ತಾ?’ ಎಂದರು ಶಾಸ್ತ್ರಿಗಳು. “ಸ್ವಾಮ್ಯಾರು ಇನ್ನು ಮರೆತಿಲ್ಲ’ ಎಂದು ರಂಗವ್ವ ನಗುತ್ತ ಹೇಳಿದಳು. ಕಾಲ ಉರುಳಿತ್ತು, ರಂಗವ್ವನ ಗಂಡ ಮೃತಪಟ್ಟು ಗಂಡು ಮಕ್ಕಳು ಯಾರೂ ನೋಡಿಕೊಳ್ಳದೆ ಮಗಳ ಮನೆಯಲ್ಲಿ ಇರಬೇಕಾದ ಪರಿಸ್ಥಿತಿ ಬಂದಿತ್ತು.

***

ಜಾಗತೀಕರಣದ ಬೆಳವಣಿಗೆ ಗಮನಿಸಿದಾಗ ಜಗಳ ಮಾಡಿಕೊಂಡಿದ್ದ ಪ್ರಾಂಶುಪಾಲ-ಪ್ರಾಧ್ಯಾಪಕರ ಮೂರ್‍ನಾಲ್ಕು ತಲೆಮಾರಿನ ಅನಂತರದವರು ಪರಸ್ಪರ ಪ್ರೀತಿಸಿ ಮದುವೆಯಾಗಿ ಹೊಸ ತಲೆಮಾರನ್ನು ಸೃಷ್ಟಿಸಿದರೂ ಅಚ್ಚರಿ ಪಡಬೇಕಾಗಿಲ್ಲ. ಆಗ ಹಿಂದಿನ ಎರಡು ಜಗಜಟ್ಟಿಗಳು ಮಾಡಿಕೊಂಡ ಆಜೀವಪ ರ್ಯಂತದ ಜಗಳಕ್ಕೆ ಯಾವುದೇ ಅರ್ಥವಿರುವುದಿಲ್ಲ. ರಂಗವ್ವನ ಪ್ರಕರಣವೂ ಎಲ್ಲ ಪ್ರಕರಣಗಳೂ ಇಷ್ಟೆ. ವ್ಯತ್ಯಾಸವೆಂದರೆ ಮ್ಯಾಟರ್‌ ಆಫ್ ಟೈಮ್‌ ಅಷ್ಟೆ.

ಬಹುತೇಕ ಎಲ್ಲ ಸಂಸ್ಥೆಗಳೂ ಇಂತಹ ಪ್ರಕರಣಗಳನ್ನು ಎದುರಿಸುತ್ತಲೇ ಇರುತ್ತವೆ. ರಂಗವ್ವನ ಪ್ರಕರಣ ಈಗ ತೀರಾ ಸಹಜ. ಇನ್ನೊಬ್ಬರ ಮನೆಯಲ್ಲಿ ಪ್ರಕರಣವಾದರೆ ನಮ್ಮ ಮನೆಯವರ ಬಾಯಿಗೆ ಒಂದಿಷ್ಟು ಸುದ್ದಿ. ನಮ್ಮ ಮನೆಯಲ್ಲಿಯಾದರೆ ಇತರರ ಮನೆಯವರ ಬಾಯಿಗೆ ಒಂದಿಷ್ಟು ಸುದ್ದಿ. ಎಲ್ಲರ ಮನೆಗಳಲ್ಲಿಯೂ ಪ್ರಕರಣಗಳು ನಡೆದೇ ಇರುತ್ತವೆ. ಇಂತಹ ವೈಮನಸ್ಸು, ದ್ವೇಷಾಸೂಯೆಗಳಿಂದ ಆಗುವ ಹಾನಿ, ನಷ್ಟ ಎಷ್ಟು? ಸುದೀರ್ಘ‌ ಕಾಲದಲ್ಲಿ ಕಿಸಿದದ್ದು ಏನು? ಹಣ, ಸಮಯ, ಶ್ರಮ, ಆಯುಷ್ಯ, ಬಾಯಿಚಪಲ (ಮಾತು) ವ್ಯರ್ಥವಾಯಿತಷ್ಟೆ.  ಕೆಲವು ಪ್ರಕರಣಗಳು ಇತ್ಯರ್ಥವಾಗುವ ಮೊದಲೇ ಗತಿಸಿರುತ್ತಾರೆ. ಆರಂಭದಲ್ಲೇ ವಿವೇಚನೆಯನ್ನು ಕಿಂಚಿತ್ತಾದರೂ ಬಳಸಿದರೆ ಎಷ್ಟೋ ಹಣ, ಸಮಯ, ಶ್ರಮ, ಆಯುಷ್ಯ ಉಳಿತಾಯವಾಗುತ್ತದೆ. ಉಳಿತಾಯವಾದ ಈ ಶಕ್ತಿ ಇನ್ನೆಲ್ಲೂ ಹೋಗದೆ ನಮ್ಮ ಒಳಿತಿಗೇ ವಿನಿಯೋಗವಾಗುತ್ತದೆ. ರಚನಾತ್ಮಕ ಚಟುವಟಿಕೆಗಳನ್ನು ಮನೆಯೊಳಗೆ ನಡೆಸಲಿ ಅಥವಾ ಹೊರಗೆ (ಸಮಾಜದಲ್ಲಿ) ನಡೆಸಲಿ ಅದರ ಉಪಯೋಗ ಊರಿಗೆ, ಕೊನೆಗೆ ದೇಶಕ್ಕೆ. ವ್ಯಕ್ತಿಗಳು ಸಶಕ್ತರಾಗುತ್ತಾ ದೇಶವೂ ಸಶಕ್ತವಾಗುತ್ತದೆ. ಪ್ರತೀ ವ್ಯಕ್ತಿಗಳ ಶಕ್ತಿ ಲುಪ್ತವಾದರೆ, ಪೋಲಾದರೆ ದೇಶದ ಶಕ್ತಿಯೂ ಲುಪ್ತವಾದಂತೆ, ಪೋಲಾದಂತೆ…

-ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next