ವಿಜಯಪುರ: ಕೇಂದ್ರ ಪುರಸ್ಕೃತ ಅಮೃತ ಯೋಜನೆಯಲ್ಲಿ ನಗರದಲ್ಲಿ ಅನುಷ್ಠಾನದಲ್ಲಿರುವ ಕುಡಿಯುವ ನೀರು ಸರಬರಾಜು ಯೋಜನೆ ಪ್ರಗತಿ ನಿರೀಕ್ಷಿತ ಪ್ರಗತಿ ಕಂಡಿಲ್ಲ. ಅಕ್ಟೋಬರ್ ಮಾಸಾಂತ್ಯದೊಳಗೆ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಮುಗಿಸುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಮೃತ ಯೋಜನೆಯಡಿ ಸಾಧಿಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಸೂಚನೆ ನೀಡಿದ ಅವರು, 177 ಕೋಟಿ ರೂ. ವೆಚ್ಚದ ಈ ಯೋಜನೆಯಲ್ಲಿ ಈವರೆಗೆ 6 ವಲಯಗಳಲ್ಲಿ ಮಾತ್ರ ಕಾಮಗಾರಿ ಪೂರ್ಣಗೊಂಡಿದೆ. ಇತರೆ ವಲಯಗಳಲ್ಲಿ ಆರ್ಥಿಕ ಗುರಿಗೆ ತಕ್ಕಂತೆ ಭೌತಿಕ ಪ್ರಗತಿ ಕಂಡಿಲ್ಲ. ಇನ್ನುಳಿದ 9 ವಲಯಗಳಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಿ ಜನರಿಗೆ ಕುಡಿಯುವ ನೀರಿನ ಸೌಲಭ್ಯ ದೊರೆಯುವಂತೆ ನೋಡಿಕೊಳ್ಳಲು ಸೂಚಿಸಿದರು.
ಸದರಿ ಯೋಜನೆಯಲ್ಲಿ 53,453 ಕುಡಿಯುವ ನೀರು ಸಂಪರ್ಕ ನಳ ಜೋಡಿಸುವ ಗುರಿ ಇದ್ದರೂ ಆರ್ಥಿಕ ಸಾಧನೆಗೆ ತಕ್ಕಂತೆ ಭೌತಿಕ ಪ್ರಗತಿ ಸಾಧನೆಯಾಗಿಲ್ಲ. ಅಧಿಕಾರಿಗಳು ಯಾವುದೇ ರೀತಿಯ ಸಬೂಬು ನೀಡದೆ ಮುಂದಿನ ಅಕ್ಟೋಬರ್ ಅಂತ್ಯದೊಳಗೆ ಯೋಜನೆ ಪೂರ್ಣಗೊಳಿಸಿ ನಾಗರಿಕರಿಗೆ ನೆರವಾಗುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಅದರಂತೆ ಈ ಯೋಜನೆಯ ಅನುಷ್ಠಾನ ಜವಾಬ್ದಾರಿ ಹೊಂದಿರುವ ಜೈನ್ ಸಂಸ್ಥೆ ಮಂದಗತಿ ಕಾಮಗಾರಿ ಕುರಿತಂತೆ ಸಂಬಂಧಪಟ್ಟ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಮಾಹಿತಿ ರವಾನಿಸುವುದರ ಜೊತೆಗೆ ಸರ್ಕಾರದ ಗಮನಕ್ಕೆ ತರಲಾಗುವುದು. ಅದರಂತೆ ಸಂಬಂಧಿಸಿದ ನೀರು ಸರಬರಾಜು ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರರು ಕೂಡಾ ಈ ಯೋಜನೆಯಡಿ ಸಾಧಿಸಿದ ಆರ್ಥಿಕ ಮತ್ತು ಭೌತಿಕ ಸೇರಿದಂತೆ ಸಮಗ್ರ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.
ನಗರದಲ್ಲಿ 15 ವಲಯಗಳ ಪೈಕಿ 6 ವಲಯಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಜುಲೈ ಅಂತ್ಯಕ್ಕೆ ಇನ್ನು ಮೂರು ವಲಯಗಳಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದೆ. ಅಕ್ಟೋಬರ್ ಅಂತ್ಯಕ್ಕೆ ಎಲ್ಲ 15 ವಲಯಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಈ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಕಾರ್ಯನಿರ್ವಾಹಕ ಅಭಿಯಂತರ ಪಟ್ಟಣಶಟ್ಟಿ ಅವರು ಸಭೆಗೆ ತಿಳಿಸಿದರು. ಪಾಲಿಕೆ ಆಯುಕ್ತ ಹರ್ಷಾ ಶಟ್ಟಿ ಇದ್ದರು.