Advertisement

25 ಸಾವಿರ ಒಬಿಸಿ ವಿದ್ಯಾರ್ಥಿಗಳ ಭವಿಷ್ಯಕ್ಕೆ “ಅಮೃತ ಮುನ್ನಡೆ’

10:33 PM Jun 09, 2022 | Team Udayavani |

ಬೆಂಗಳೂರು:  ಹಿಂದುಳಿದ ವರ್ಗಗಳ ಸುಮಾರು 25 ಸಾವಿರ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ನೀಡಿ ಉದ್ಯೋಗ ಒದಗಿಸಲು  “ಅಮೃತ ಮುನ್ನಡೆ’ ಯೋಜನೆ ಜಾರಿಗೊಳಿಸಲು ಸರಕಾರ ಮುಂದಾಗಿದೆ.

Advertisement

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಏಳಿಗೆಗೆ ರಾಜ್ಯ ಸರಕಾರದ ವಿವಿಧ ನಿಗಮಗಳು ಜಂಟಿಯಾಗಿ  ಅಮೃತ ಮುನ್ನಡೆ  ಯೋಜನೆ ಯನ್ನು ಜಾರಿಗೆ ತರಲು ನಿರ್ಧರಿಸಿವೆ.

ಅಲ್ಪಾವಧಿ ಕೋರ್ಸ್‌  :

ಎಸೆಸೆಲ್ಸಿ, ಪಿಯುಸಿ, ಡಿಪ್ಲೊಮಾ, ಪದವಿ ಹಾಗೂ ಎಂಜಿನಿಯರಿಂಗ್‌ ಮುಗಿಸಿದ 18ರಿಂದ 25 ವರ್ಷ ವಯೋಮಾನದ ಹಿಂದುಳಿದ ವರ್ಗಕ್ಕೆ ಸೇರಿದ 25 ಸಾವಿರ ನಿರುದ್ಯೋಗಿ ಯುವಕ-ಯುವತಿಯರಿಗೆ ಸರಕಾರಿ ಸ್ವಾಮ್ಯದಲ್ಲಿರುವ ಸಂಸ್ಥೆಗಳಾದ ಐಟಿಐ, ಜಿಟಿಟಿಸಿ, ಕೆಜಿಟಿಟಿಐಗಳಲ್ಲಿ ಲಭ್ಯವಿರುವ ಅಲ್ಪಾವಧಿ ಕೋರ್ಸ್‌ ಮೂಲಕ ಕೌಶಲ ತರಬೇತಿ ನೀಡಿ, ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಯೋಜನೆ ಜಾರಿಗೆ ಸರಕಾರ ಮುಂದಾಗಿದೆ.

ಈ ಯೋಜನೆಗೆ ಅರ್ಹರಾಗುವ ಅಭ್ಯರ್ಥಿಗಳ ಜಾತಿ ರಾಜ್ಯ ಸರಕಾರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರಬೇಕು. ಪ್ರವರ್ಗ 1ರ ಅಭ್ಯರ್ಥಿಗಳಿಗೆ  ಆದಾಯದ ಮಿತಿ ಇರುವುದಿಲ್ಲ. ಆದರೆ ಪ್ರವರ್ಗ 2ಎ, 3ಎ, 3ಬಿ  ಅಭ್ಯರ್ಥಿಗಳ ವಾರ್ಷಿಕ ಆದಾಯದ ಮಿತಿ 8 ಲಕ್ಷ ಮೀರಿರಬಾರದು ಎಂದು ತೀರ್ಮಾನಿಸಲಾಗಿದೆ.

Advertisement

ನಿಗಮಗಳಿಗೆ ವೆಚ್ಚದ ಜವಾಬ್ದಾರಿ :

ಸರಕಾರದ ಹಿಂದುಳಿದ ವರ್ಗಗಳ ಇಲಾಖೆ ವ್ಯಾಪ್ತಿಯ  ವಿವಿಧ ನಿಗಮಗಳು ಪ್ರತಿ ವರ್ಷ ತನ್ನ  ಅನುದಾನದಲ್ಲಿ ಶೇ.10 ಮೊತ್ತವನ್ನು ಈ ತರಬೇತಿಗೆ ಮೀಸಲಿಡಲು ತೀರ್ಮಾನಿಸಲಾಗಿದೆ.

ಕ್ಯಾಂಪಸ್‌  ಸಂದರ್ಶನಕ್ಕೆ ಆದ್ಯತೆ ಕೌಶಲಾಭಿವೃದ್ಧಿ ತರಬೇತಿಗೆ ಆಯ್ಕೆ :

ಯಾಗುವ ವಿದ್ಯಾರ್ಥಿಗಳಿಗೆ ಯಾವ ವಿಷಯದ ಮೇಲೆ ತರಬೇತಿ ಅಗತ್ಯ ವಿದೆಯೋ ಆ ವಿಷಯದಲ್ಲಿ ತರಬೇತಿ ನೀಡಿ, ಅಂತಹ ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸುವ ಜವಾಬ್ದಾರಿಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನೋಡಿಕೊಳ್ಳಲಿದೆ. ಕೈಗಾರಿಕೆಗಳ ಜತೆಗೆ ಸಂಪರ್ಕ ಸಾಧಿಸಿ ಕ್ಯಾಂಪಸ್‌ ಸಂದರ್ಶನ ಏರ್ಪಡಿಸುವುದು ಅಥವಾ ಇಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಉದ್ಯೋಗ ಮೇಳ ಏರ್ಪಡಿಸಿ ಉದ್ಯೋಗ ಕಲ್ಪಿಸಲು ಸರಕಾರ ತೀರ್ಮಾನಿಸಿದೆ.

ಹಿಂದುಳಿದ ವರ್ಗಗಳ 25,000 ವಿದ್ಯಾರ್ಥಿಗಳಿಗೆ ವೃತ್ತಿ ತರಬೇತಿ ನೀಡುವ ಯೋಜನೆ ರೂಪಿಸಲಾಗಿದೆ. ಅವರಿಂದ ಸ್ವಂತ ಉದ್ಯೋಗ ಮಾಡಿಸಲು ತರಬೇತಿ ನೀಡಲಾಗುವುದು. ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಒಂದು ವಾರದಲ್ಲಿ ಯೋಜನೆಗೆ ಚಾಲನೆ ನೀಡಲಾಗುವುದು. -ಕೋಟ ಶ್ರೀನಿವಾಸ ಪೂಜಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ

-ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next