Advertisement

ಅದ್ಯಾವ ಸಂಘಟನೆ ಅಂತ ಪತ್ತೆಹಚ್ಚಿ!ಆಕೆ ದೇಶದ್ರೋಹಿ…ಅಮೂಲ್ಯ ಬಗ್ಗೆ ತಂದೆ ಆಕ್ರೋಶ

10:11 AM Feb 22, 2020 | Nagendra Trasi |

ಚಿಕ್ಕಮಗಳೂರು: ಬೆಂಗಳೂರಿನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನಾ ಸಮಾವೇಶದಲ್ಲಿ “ಪಾಕಿಸ್ತಾನ ಜಿಂದಾಬಾದ್” ಘೋಷಣೆ ಕೂಗಿರುವ ಅಮೂಲ್ಯ ಹೇಳಿಕೆಯನ್ನು ತಂದೆ ವಾಜಿ ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೇ ಆಕೆಗೆ ನೀವೇ ಸರಿಯಾಗಿ ಬುದ್ದಿಕಲಿಸಿ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

Advertisement

ಅಮೂಲ್ಯ ಬಂಧನ ಹಾಗೂ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಂದೆ, ಇಂತಹ ದೇಶದ್ರೋಹದ ಹೇಳಿಕೆ ಸಹಿಸಲು ಸಾಧ್ಯವಿಲ್ಲ. ದೋಷಿಯಾದವರು ಕಾನೂನಿನ ಪ್ರಕಾರ ಶಿಕ್ಷೆ ಅನುಭವಿಸಲೇಬೇಕು ಎಂದು ತಿಳಿಸಿದ್ದಾರೆ.

ನನ್ನ ಮಗಳ ಹಿಂದೆ ಯಾವ ಸಂಘಟನೆ ಇದೆ ಎಂಬುದನ್ನು ಪತ್ತೆ ಹಚ್ಚಿ!

ನಾನು ನನ್ನ ಮಗಳಿಗೆ ಹಲವು ಬಾರಿ ಬುದ್ದಿವಾದ ಹೇಳಿದ್ದೆ. ಆದರೆ ಆಕೆ ಕೇಳಿಸಿಕೊಳ್ಳಲು ತಯಾರಿಲ್ಲ. ನಾನು ಬೆಂಗಳೂರಿಗೆ ಹೋಗಿದ್ದಾಗ ನನಗೆ ಅಚ್ಚರಿಯಾಗಿತ್ತು…ಈಕೆಗೆ ತಿರುಗಾಡಲು ಒಲಾ, ಊಬರ್, ವಿಮಾನ ತಿರುಗಾಟಕ್ಕೆ ಹಣಕಾಸಿನ ನೆರವು ಕೊಡುತ್ತಾರೆ? ಈಕೆ ಹಿಂದೆ ಯಾರಿದ್ದಾರೆ ಎಂಬುದನ್ನು ದಯವಿಟ್ಟು ಸರ್ಕಾರ ಕೂಲಂಕಷ ತನಿಖೆ ನಡೆಸಿ ಬಹಿರಂಗಪಡಿಸಬೇಕು ಎಂದು ತಂದೆ ವಾಜಿ ವಿನಂತಿ ಮಾಡಿಕೊಂಡಿದ್ದಾರೆ.

ಬೆಂಗಳೂರಿನ ಸ್ಥಳೀಯ ಕಾಲೇಜೊಂದರಲ್ಲಿ ಅಮೂಲ್ಯ (24ವರ್ಷ) ಪತ್ರಿಕೋದ್ಯಮ ವಿದ್ಯಾರ್ಥಿನಿಯಾಗಿದ್ದಾಳೆ. ಈಕೆ ಚಿಕ್ಕಮಗಳೂರಿನ ಕೊಪ್ಪ ಎಂಬ ಊರಿನವಳು. ಅಲ್ಲದೇ “ಹಮ್ ಭಾರತ್ ಕೆ ಲೋಗ್(ನಾವು ಭಾರತೀಯ ಜನರು)” ಎಂಬ ಸಂಘಟನೆ ಜತೆ ಗುರುತಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.

Advertisement

ಗುರುವಾರ ಬೆಂಗಳೂರಿನಲ್ಲಿ ಎಐಎಂಐಎಂ ಸಿಎಎ ವಿರೋಧಿ ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿದ್ದ ವೇಳೆ ದಿಢೀರನೆ ವೇದಿಕೆ ಏರಿ ಪಾಕಿಸ್ತಾನ್ ಜಿಂದಾಬಾದ್, ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಳು. ನಂತರ ಕಾರ್ಯಕ್ರಮದ ಆಯೋಜಕರು, ಒವೈಸಿ ಆಗಮಿಸಿ ಮೈಕ್ ಕಸಿದುಕೊಂಡಿದ್ದರು. ಬಳಿಕ ನಾವೆಲ್ಲರು ಭಾರತೀಯರು ಎಂದು ಸಮಜಾಯಿಷಿ ನೀಡಿದ್ದರು. ಅಲ್ಲದೇ ಅಮೂಲ್ಯಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.

ಕೋಲಾರದಲ್ಲಿ ನಡೆದ ಸಮಾವೇಶದಲ್ಲಿಯೂ ಅಮೂಲ್ಯ ಕಿರಿಕ್!

ಕೆಲವು ತಿಂಗಳ ಹಿಂದೆ ಕೋಲಾರದಲ್ಲಿ ನಡೆದ ಸಮಾವೇಶದಲ್ಲಿಯೂ ಅಮೂಲ್ಯ ಜಮ್ಮು-ಕಾಶ್ಮೀರದ ವಿಚಾರವಾಗಿ ಭಾಷಣ ಬಿಗಿದಿದ್ದಳು. ಅಲ್ಲಿಯೂ ಕಾಶ್ಮೀರ ಯಾರಿಗೆ ಸೇರಬೇಕು ಎಂಬುದನ್ನು ಕಾಶ್ಮೀರದ ಜನರು ತೀರ್ಮಾನಿಸಬೇಕು. ಅದನ್ನು ಭಾರತ ಸರ್ಕಾರ ಮಾಡುವುದಲ್ಲ. ಅಲ್ಲಿ ಶೋಷಣೆ ನಡೆಯುತ್ತಿದೆ. ಅದಕ್ಕಾಗಿ ಅಲ್ಲಿನ ಜನರು ಬೀದಿಗಿಳಿದು ಹೋರಾಟ ಮಾಡುತ್ತಿದ್ದರೆ, ಅವರ ಮೇಲೆ ಗುಂಡು ಹಾರಿಸಲಾಗುತ್ತಿದೆ. ನಾನು ನನ್ನ ಅಪ್ಪ, ಅಮ್ಮನಿಗೆ ಹುಟ್ಟಿದ ಮಗಳು, ಬೇರೆ ಯಾರೋ ಬಂದು ನೀನು ನನ್ನ ಮಗಳು ಎಂದು ಹೇಳಿ ಎಳೆದೊಯ್ದರೆ ನಾನು ಬಿಡುತ್ತೇನೆಯೇ..ಅದೇ ರೀತಿ ಜಮ್ಮು-ಕಾಶ್ಮೀರದ ವಿಚಾರದಲ್ಲಿ ಭಾರತ ಕೂಡ ಅದು ತನಗೆ ಸೇರಿದ್ದು ಎಂದು ಹೇಳುತ್ತಿದೆ ಎಂಬುದಾಗಿ ಪ್ರಚೋದನಾಕಾರಿ ಭಾಷಣ ಮಾಡಿರುವುದಾಗಿ ಮಾಧ್ಯಮವೊಂದು ಆಕೆ ಭಾಷಣದ ವಿಡಿಯೋ ಪ್ರಸಾರ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next