Advertisement

ಅಮೂಲ್ಯಾಗೆ ನಕ್ಸಲ್‌ ನಂಟು

10:23 AM Feb 23, 2020 | Sriram |

ಮೈಸೂರು/ ಬೆಂಗಳೂರು: ಪಾಕಿಸ್ಥಾನ ಪರ ಘೋಷಣೆ ಕೂಗಿದ ವಿದ್ಯಾರ್ಥಿನಿ ಅಮೂಲ್ಯಾ ಲಿಯೋನಾಗೆ ನಕ್ಸಲ್‌ ನಂಟು ಇರುವುದು ಸಾಬೀತಾ ಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ. ಈ ಮೂಲಕ ದೇಶದ್ರೋಹಿ ಹೇಳಿಕೆ ಪ್ರಕರಣ ಹೊಸ ತಿರುವು ಪಡೆದಿದೆ.

Advertisement

ಇದರ ಮಾರನೇ ದಿನವಾದ ಶುಕ್ರವಾರ ಮತ್ತೂಬ್ಬ ಯುವತಿ “ಫ್ರೀ ಕಾಶ್ಮೀರ’ ಫ‌ಲಕ ಪ್ರದರ್ಶಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಈಕೆಯನ್ನೂ ಬಂಧಿಸಿರುವ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಿಎಂ ಬಿಎಸ್‌ವೈ,ಅಮೂಲ್ಯಾ ಮತ್ತು ನಕ್ಸಲ್‌ ನಂಟಿನ ಬಗ್ಗೆ ಮಾತನಾಡಿ ದ್ದಾರೆ. ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆ ಹದಗೆಡಿಸುವ ಸಲುವಾಗಿ ಈ ರೀತಿಯ ಕೃತ್ಯಗಳು ನಡೆಯುತ್ತಿವೆ. ಇದರ ಹಿಂದಿರುವ ಸಂಘಟನೆಯನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಇಂಥವರ ಹಿಂದೆ ಇರುವ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳದೆ ಇದ್ದರೆ ಇದು ಇಲ್ಲಿಗೆ ಕೊನೆಯಾಗದು. ಆ ಹುಡುಗಿಗೆ ದೇಶದ್ರೋಹಿ ಘೋಷಣೆ ಕೂಗಲು ಯಾರು ಪ್ರೇರಣೆ ಕೊಟ್ಟರು ಅನ್ನುವುದನ್ನು ತನಿಖೆ ಮಾಡಿಸಿ, ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಕೊಡಿಸುತ್ತೇವೆ. ಆಗ ಮಾತ್ರ ಇಂತಹ ಘಟನೆಗಳು ಮರುಕಳಿಸವು ಎಂದು ಬಿಎಸ್‌ವೈ ಹೇಳಿದ್ದಾರೆ.

ಮಾಜಿ ನಕ್ಸಲರ ಜತೆ ಫೋಟೋಮೈಸೂರಿನಲ್ಲಿ ಸಿಎಂ ಬಿಎಸ್‌ವೈ ಅಮೂಲ್ಯಾಗೆ
ಇರುವ ನಕ್ಸಲ್‌ ನಂಟಿನ ಬಗ್ಗೆ ಹೇಳಿಕೆ ನೀಡಿದ ಬೆನ್ನಲ್ಲೇ ಪೊಲೀಸರು ಆಕೆಯ ಹಿನ್ನೆಲೆ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದಾರೆ. ಆಕೆ ಸಂಪರ್ಕ ಹೊಂದಿದ್ದ ಸಂಘಟನೆಗಳು, ಯಾರದ್ದಾದರೂ ಪ್ರಚೋದನೆ ಮೇರೆಗೆ ಹೇಳಿಕೆ ನೀಡಿದ್ದಳೇ ಎಂಬುದರ ಬಗ್ಗೆಯೂ ಗಮನಹರಿಸಲಾಗುತ್ತದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

ಚಿಕ್ಕಮಗಳೂರಿನ ಕೊಪ್ಪ ಮೂಲದ ಅಮೂಲ್ಯಾ ಹಲವು ಹೋರಾಟಗಳಲ್ಲಿ ಸಕ್ರಿಯವಾಗಿದ್ದಾಕೆ. ನಕ್ಸಲ್‌ ಚಟುವಟಿಕೆಯಿಂದ ಮುಖ್ಯವಾಹಿನಿಗೆ ಬಂದಿರುವ ನೂರ್‌ ಶ್ರೀಧರ್‌, ಸಿರಿಮನೆ ನಾಗರಾಜ್‌ ಅವರನ್ನು ಹಲವು ಬಾರಿ ಭೇಟಿಯಾಗಿದ್ದು, ಅವರ ಜತೆ ಫೋಟೋ ತೆಗೆಸಿಕೊಂಡಿದ್ದಳು. ಆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಚರ್ಚೆಗೂ ಗ್ರಾಸವಾಗಿವೆ. ಆಕೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಜತೆ ತೆಗೆಸಿಕೊಂಡ ಫೋಟೋ ಕೂಡ ವೈರಲ್‌ ಆಗಿದೆ.

14 ದಿನ ನ್ಯಾಯಾಂಗ ಬಂಧನ
ಬಂಧಿತೆ ಅಮೂಲ್ಯಾಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಮ್ಯಾಜಿಸ್ಟ್ರೇಟ್‌ ನ್ಯಾಯಾಧೀಶರು ಆದೇಶಿಸಿದ್ದಾರೆ. ಈಕೆಯ ವಿರುದ್ಧ ಉಪ್ಪಾರ ಪೇಟೆ ಪೊಲೀಸರು ದೇಶದ್ರೋಹ ಮತ್ತಿತರ ಆರೋಪ ಗಳ ಅನ್ವಯ ಪ್ರಕರಣ ದಾಖಲಿಸಿದ್ದು, ತೀವ್ರ ವಿಚಾರಣೆಗೆಗುರಿಪಡಿಸಿದ ಬಳಿಕ ತಡರಾತ್ರಿಯೇ ಕೋರಮಂಗಲದಲ್ಲಿರುವ 5ನೇ ಎಸಿಎಎಂ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಪರಪ್ಪನ ಅಗ್ರಹಾರ ಜೈಲಿಗೆ ತೆರಳುವ ವೇಳೆ ಆಕೆ ವಿಜಯದ ಸಂಕೇತ ತೋರಿಸಿರುವ ವಿಡಿಯೋ ಕೂಡ ವೈರಲ್‌ ಆಗಿದೆ.

ಜಾಮೀನು ಕೊಡಬೇಡಿ: ಅಮೂಲ್ಯಾ ತಂದೆಚಿಕ್ಕಮಗಳೂರಿನ ಕೊಪ್ಪದಲ್ಲಿ ವಾಸವಿರುವ ಅಮೂಲ್ಯಾಳ ತಂದೆ ಓಸ್ವಾಲ್ಡ್‌ ನೊರೊನ್ಹಾ ಪ್ರತಿಕ್ರಿಯಿಸಿ, ಅವಳಿಗೆ ಜಾಮೀನು ಕೊಡಬೇಡಿ, ಕೈ ಕಾಲು ಮುರಿಯಿರಿ, ನಾನು ಅವಳ ರಕ್ಷಣೆಗೆ ಹೋಗುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಗುಬ್ಬಗದ್ದೆಯಲ್ಲಿರುವ ಅಮೂಲ್ಯಾ ಮನೆ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಮನೆಯ ಕಿಟಕಿಗಳ ಗಾಜುಗಳು ಪುಡಿಯಾಗಿವೆ. ಈ ಸಂಬಂಧ ಓಸ್ವಾಲ್ಡ್‌ ನೊರೋನ್ಹಾ ಪೊಲೀಸರಿಗೆ ದೂರು ನೀಡಿದ್ದಾರೆ.

ಅಮೂಲ್ಯಾ ವರ್ತನೆಗೆ ಕಿಡಿ
ಅಮೂಲ್ಯಾ ವರ್ತನೆ ಬಗ್ಗೆ ರಾಜಕೀಯ ನಾಯಕರು ಪಕ್ಷಭೇದ ಮರೆತು ಕಿಡಿ ಕಾರಿ
ದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಇದೊಂದು ದೇಶದ್ರೋಹದ ಪ್ರಕರಣ ಎಂದು ಪರಿಗಣಿಸಿ, ಆಕೆಯನ್ನು ಗಡಿಪಾರು ಮಾಡಬೇಕು, ಆಕೆಗೆ ಕಠಿನ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ದೇಶದ ವಿಚಾರದಲ್ಲಿ ಒಗ್ಗಟ್ಟು ಇರಬೇಕು. ಒಗ್ಗಟ್ಟು ಒಡೆಯುವ ಕೆಲಸ ಆಗಬಾರದು ಎಂದೂ ಹೇಳಿದ್ದಾರೆ. ಪರಿಷತ್‌ನ ವಿಪಕ್ಷ ನಾಯಕ ಎಸ್‌.ಆರ್‌. ಪಾಟೀಲ್‌, ಇಂಥವರಿಗೆ ಬದುಕಿನ ಕೊನೆ ಉಸಿರಿರುವವರೆಗೂ ಪಶ್ಚಾತ್ತಾಪ ಪಡುವಂತೆ ಕಠಿನ ಕ್ರಮ ಜರುಗಿಸಬೇಕು. ಇಂಥವರಿಗೆ ಪ್ರಚೋದನೆ ನೀಡಿದವರಿಗೂ ಶಿಕ್ಷೆ ಆಗಬೇಕು ಎಂದು ಕಿಡಿ ಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next