ರಾಕಿಂಗ್ಸ್ಟಾರ್ ಯಶ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ, ಭಾರತೀಯ ಚಿತ್ರರಂಗದಲ್ಲಿ ತನ್ನದೇ ಆದ ಅಲೆ ಎಬ್ಬಿಸಿರುವ “ಕೆಜಿಎಫ್’ ಚಿತ್ರದ ಹವಾ ಮುಂದುವರೆದಿದ್ದು, ಇಲ್ಲಿಯವರೆಗೂ ನೂರು ಕೋಟಿಗೂ ಆದಾಯ ಗಳಿಸಿದೆ. ಅಲ್ಲದೇ ಚಿತ್ರವನ್ನು ಈಗಾಗಲೇ ನಿರ್ದೇಶಕರು, ನಿರ್ಮಾಪಕರು, ಸ್ಟಾರ್ಸ್ ಸೇರಿದಂತೆ ಚಿತ್ರರಂಗದ ಹಲವರು ಕೂಡ ನೋಡಿ ಮೆಚ್ಚಿಕೊಂಡಿದ್ದಾರೆ.
ಇದೀಗ ಸ್ಯಾಂಡಲ್‍ವುಡ್‍ನ ಖ್ಯಾತ ನಟಿಯೊಬ್ಬರು ಒಮ್ಮೆಲೇ 25 ಟಿಕೆಟ್ ಬುಕ್ ಮಾಡಿ ಚಿತ್ರತಂಡಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಹೌದು, ನಟಿ ಅಮೂಲ್ಯ 25 ಜನರೊಟ್ಟಿಗೆ “ಕೆಜಿಎಫ್’ ಸಿನಿಮಾ ನೋಡಿ ಫುಲ್ ಖುಷ್ ಆಗಿದ್ದು, ಈ ಬಗ್ಗೆ ಟ್ವೀಟರ್ನಲ್ಲಿ ಬರೆದುಕೊಂಡಿದ್ದಾರೆ. “ಕೆಜಿಎಫ್’ ಚಿತ್ರವನ್ನು ಅದ್ಬುತ ಎಂದು ಬಣ್ಣಿಸಿರುವ ಗಜಕೇಸರಿ ಚೆಲುವೆ ಅಮೂಲ್ಯ ತಮ್ಮ ಕುಟುಂಬಸ್ಥರಿಗಾಗಿ 25 ಟಿಕೆಟ್‍ಗಳನ್ನು ಬುಕ್ ಮಾಡಿ ಟಿಕೆಟ್‍ಗಳ ಚಿತ್ರವನ್ನು ಶೇರ್ ಮಾಡಿದ್ದಾರೆ.
“ರಾಖಿ ಭಾಯ್ ರಾಕಡ್ ಎವೆರಿ ಸಿಂಗಲ್ ಫ್ರೇಮ್, ಪ್ರತಿಯೊಂದು ಸೀನ್‍ನಲ್ಲಿಯೂ ರಾಖಿ ಭಾಯ್ ಮಿಂಚಿದ್ದಾರೆ. ಇಡೀ “ಕೆಜಿಎಫ್’ ಚಿತ್ರತಂಡಕ್ಕೆ ಹ್ಯಾಟ್ಸ್ ಆಫ್. ಕನ್ನಡ ಸಿನಿಮಾವನ್ನು ಬೇರೆ ಲೆವೆಲ್‍ಗೆ ಕೊಂಡೊಯ್ದಿದ್ದಕ್ಕಾಗಿ ಧನ್ಯವಾದ. ನಾವು ಹೆಮ್ಮೆ ಪಡುವಂತೆ “ಕೆಜಿಎಫ್’ ಮಾಡಿದೆ.. ಕೆಜಿಎಫ್ ಚಾಪ್ಟರ್ 2ಗೆ ಕಾಯುತ್ತಿದ್ದೇನೆ’ ಎಂದು ಟ್ವೀಟ್ ಮಾಡಿದ್ದಾರೆ.