ಬೆಂಗಳೂರು: ನಗರದ ಪ್ರಮುಖ ರಸ್ತೆಗಳನ್ನಾದರೂ ಶಾಶ್ವತವಾಗಿ ಗುಂಡಿ ಮುಕ್ತಗೊಳಿಸುವ ಉದ್ದೇಶದಿಂದ ಸರ್ಕಾರದ ಮಹತ್ವಾಕಾಂಕ್ಷಿ “ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ’ದಡಿ ಗರಿಷ್ಠ ಮೊತ್ತವನ್ನು ವೈಟ್ ಟಾಪಿಂಗ್ ರಸ್ತೆಗಳ ನಿರ್ಮಾಣಕ್ಕೆ ವಿನಿಯೋಗಿಸಲು ಚಿಂತನೆ ನಡೆದಿದೆ.
ಇತ್ತೀಚೆಗಷ್ಟೇ ಆರು ಸಾವಿರ ಕೋಟಿ ಅಂದಾಜು ಮೊತ್ತದ ಉದ್ದೇಶಿತ ಅಮೃತ ನಗರೋತ್ಥಾನ ಯೋಜನೆಗೆ ಸರ್ಕಾರ ತಾತ್ವಿಕ ಅನುಮೋದನೆ ನೀಡಿದೆ. ಇದರಡಿ ನಗರದ ರಸ್ತೆ, ಗ್ರೇಡ್ ಸಪರೇಟರ್, ಕೆರೆ, ಬೃಹತ್ ನೀರು ಗಾಲುವೆ, ಕಟ್ಟಡಗಳು, ಘನತ್ಯಾಜ್ಯ ನಿರ್ವಹಣೆ, ಬೀದಿ ದೀಪಗಳು, ಉದ್ಯಾನಗಳು, ಆಸ್ಪತ್ರೆ, ಕೊಳಚೆಪ್ರದೇಶ, ಶಾಲಾ ಕಟ್ಟಡದ ನಿರ್ಮಾಣ ಮತ್ತಿತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ. ಈ ಪೈಕಿ ರಸ್ತೆ ಅಭಿವೃದ್ಧಿಯಲ್ಲಿ ಅತಿಹೆಚ್ಚು ವೈಟ್‌ಟಾಪಿಂಗ್ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಯೋಚನೆ ನಡೆದಿದೆ.
ಇದು ಸಾಧ್ಯವಾದರೆ, ನೂರಾರು ಕಿ.ಮೀ. ಮುಖ್ಯರಸ್ತೆ ಗಳು ಶಾಶ್ವತ ಗುಂಡಿಮುಕ್ತವಾಗಿ ಪರಿವರ್ತನೆ ಆಗಲಿವೆ. “ನಗರದಲ್ಲಿ ಕಳೆದ ಐದು ವರ್ಷಗಳಲ್ಲಿ ಬಿದ್ದ ಮಳೆ ಮತ್ತು ಅದರಿಂದ ಉಂಟಾದ ದಿಢೀರ್ ನೆರೆ ನಡುವೆಯೂ ಒಂದೇ ಒಂದು ಗುಂಡಿ ಸೃಷ್ಟಿಯಾಗದ ರಸ್ತೆಗಳೆಂದರೆ ವೈಟ್‌ಟಾಪಿಂಗ್ ಮತ್ತು ಟೆಂಡರ್‌ಶ್ಯೂರ್. ಈ ಮಾದರಿಯ ರಸ್ತೆಗಳ ಬಾಳಿಕೆ ಒಂದು ತಲೆಮಾರು ಅಂದರೆ 20-25 ವರ್ಷ. ಆ ರಸ್ತೆಗಳೇ ತಮ್ಮ ಗುಣಮಟ್ಟದ ಬಗ್ಗೆ ಮಾತನಾಡುತ್ತಿವೆ. ಅಷ್ಟಕ್ಕೂ ಬೆಳೆಯುತ್ತಿರುವ ಬೆಂಗಳೂರು ಮತ್ತು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಮಳೆ ಹಾಗೂ ನೆರೆ ಹಾವಳಿಗೆ ವೈಟ್‌ಟಾಪಿಂಗ್ ಹೇಳಿ ಮಾಡಿಸಿದಂತಿವೆ. ಆದ್ದರಿಂದ ಅಮೃತ ನಗರೋತ್ಥಾನದಡಿ ಸಾಧ್ಯವಾದಷ್ಟು ಹೆಚ್ಚು ಅನುದಾನವನ್ನು ಈ ಮಾದರಿಯ ರಸ್ತೆಗಳ ನಿರ್ಮಾಣಕ್ಕೆ ವಿನಿಯೋಗಿಸುವ ಚಿಂತನೆ ಇದೆ. ಅಂತಿಮವಾಗಿ ಸರ್ಕಾರದ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಬಿಬಿಎಂಪಿ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವರ್ಷಕ್ಕೆ 200 ಕಿ.ಮೀ. ನಿರ್ಮಿಸುವ ಸಾಮರ್ಥ್ಯ: “ಕಳೆದ ಸುಮಾರು ನಾಲ್ಕೂವರೆ ವರ್ಷಗಳಲ್ಲಿ ನಗರದಲ್ಲಿ ಅಂದಾಜು ಸಾವಿರ ಕೋಟಿ ರೂ. ವೆಚ್ಚದಲ್ಲಿ ನೂರು ಕಡೆಗಳಲ್ಲಿ ಒಟ್ಟಾರೆ 105 ಕಿ.ಮೀ. ವೈಟ್‌ಟಾಪಿಂಗ್ ರಸ್ತೆ ಗಳನ್ನು ನಿರ್ಮಿಸಲಾಗಿದೆ. ಕೊರೊನಾ ಹಾವಳಿ ಮತ್ತು ಲಾಕ್‌ಡೌನ್ ಹಾಗೂ ಕಾರ್ಮಿಕರ ವಲಸೆ ನಡುವೆ ಈಕೆಲಸ ಆಗಿದೆ. ಗುರಿ ಇರುವುದು 152 ಕಿ.ಮೀ. ಮಾರ್ಚ್ ಅಂತ್ಯಕ್ಕೆ 47 ಕಿ.ಮೀ. ಕೂಡ ಪೂರ್ಣ ಗೊಳ್ಳಲಿದೆ. ಇದೇ ಅನುಭವದಿಂದ ಸಮರ್ಪಕ ಮತ್ತು ಸಕಾಲಿಕ ಅನುದಾನ ದೊರೆತರೆ, ಮುಂದಿನ ಐದು ವರ್ಷಗಳಲ್ಲಿ ಕನಿಷ್ಠ 800-1000 ಕಿ.ಮೀ. ರಸ್ತೆಗಳನ್ನು ವೈಟ್‌ಟಾಪಿಂಗ್‌ಗೆಪರಿವರ್ತನೆ ಮಾಡಬಹುದು. ಮುಖ್ಯವಾಗಿ ಇಲ್ಲಿ ಯುಟಿಲಿಟಿ ಸ್ಥಳಾಂತರಕ್ಕೆ ಹೆಚ್ಚು ಸಮಯ ವ್ಯಯವಾಗುತ್ತದೆ. ನಗರದಲ್ಲಿ 1,300 ಕಿ.ಮೀ. ಮುಖ್ಯರಸ್ತೆಗಳಿವೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
“ಸಾಂಪ್ರದಾಯಿಕ ಡಾಂಬರು ರಸ್ತೆಗಳಿಗೆ ಹೋಲಿಸಿದರೆ, ವೈಟ್ ಟಾಪಿಂಗ್ ರಸ್ತೆಗಳ ನಿರ್ಮಾಣ ತುಸು ದುಬಾರಿ. ಡಾಂಬರು ರಸ್ತೆಗೆ ಪ್ರತಿ ಕಿ.ಮೀ.ಗೆ 4-6 ಕೋಟಿ ರೂ. ಖರ್ಚಾಗಲಿದ್ದು, ಬಾಳಿಕೆ 3-5 ವರ್ಷ. ಅದೇ ರೀತಿ ವೈಟ್‌ಟಾಪಿಂಗ್‌ಗೆ 10-12 ಕೋಟಿ ರೂ. ಆಗಲಿದ್ದು, ಬಾಳಿಕೆ20-25 ವರ್ಷ ಆಗಿದೆ. ನಿರ್ವಹಣೆ ಕಿರಿಕಿರಿ ಇರುವುದಿಲ್ಲ’ಎಂದು ಮತ್ತೂಬ್ಬ ಹಿರಿಯ ಅಧಿಕಾರಿ ತಿಳಿಸಿದರು.
ದಕ್ಷಿಣ ಭಾರತದ ಮೊದಲ ವೈಟ್‌ಟಾಪಿಂಗ್ :
ಹೊಸೂರು ರಸ್ತೆಯ ಮಡಿವಾಳ ಅಂಡರ್‌ಪಾಸ್ ದಕ್ಷಿಣ ಭಾರತದ ಮೊದಲ ವೈಟ್‌ಟಾಪಿಂಗ್ ರಸ್ತೆ ಆಗಿದೆ! ಸುಮಾರು 11 ವರ್ಷಗಳ ಹಿಂದೆ ಸುಮಾರು 500 ಮೀಟರ್ ಉದ್ದದ ಅಂಡರ್‌ಪಾಸ್ ಅನ್ನು ವೈಟ್‌ಟಾಪಿಂಗ್ ಮಾಡಲಾಗಿತ್ತು. ಈಗಲೂ ಆ ರಸ್ತೆಯಲ್ಲಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಇದೇ ಮಾದರಿಯನ್ನು ಇಟ್ಟು ಕೊಂಡು ಮುಂಬೈನಲ್ಲಿ ಅನೇಕ ಉಪ ಮುಖ್ಯ ರಸ್ತೆಗಳನ್ನು ವೈಟ್ ಟಾಪಿಂಗ್ ಆಗಿ ಪರಿವರ್ತಿಸಲಾಗಿದೆ.
–ವಿಜಯಕುಮಾರ ಚಂದರಗಿ