ಕೋಟ: ಇತ್ತೀಚೆಗೆ ಕೋಟ ಚಿಕ್ಕನಕೆರೆಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕೃತ್ಯದಲ್ಲಿ ಭಾಗಿಯಾದ ಅಪರಾಧಿಗಳು ಹಾಗೂ ಅವರಿಗೆ ಸಹಕಾರ ನೀಡಿದವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಬೇಡಿಕೆ ಸಲ್ಲಿಸಿ ಮೃತ ಯುವಕರ ಕುಟುಂಬಸ್ಥರು ಹಾಗೂ ಸ್ನೇಹಿತರು, ಊರಿನವರು ಫೆ.13ರಂದು ಕೋಟ ಅಮೃತೇಶ್ವರೀ ದೇವಿಗೆ ಸಂಕ್ರಾತಿ ಪೂಜೆಯ ದರ್ಶನದಲ್ಲಿ ಹುಯಿಲು ನೀಡಿ ನ್ಯಾಯ ಕೋರಿದರು.
ಕಣ್ಣೀರ ಮೊರೆ
ನಮ್ಮ ಕುಟುಂಬಗಳಿಗೆ ರಕ್ಷಣೆ ನೀಡುವಂತೆ ಹಾಗೂ ಅಪರಾಧಿಗಳಿಗೆ ಸೂಕ್ತ ಶಿಕ್ಷೆಯಾಗಬೇಕು ಎಂದು ಯುವಕರ ಮನೆಯವರು ಹಾಗೂ ಪ್ರಕರಣದ ಪ್ರತ್ಯಕ್ಷದರ್ಶಿ ಲೋಹಿತ್ ಪೂಜಾರಿ ಮುಂತಾದವರು ದರ್ಶನ ಸಂದರ್ಭ ಕಣ್ಣೀರು ಹರಿಸಿ ಮೊರೆ ಇಟ್ಟರು.
ಅಪರಾಧಿಗಳಿಗೆ ಸೂಕ್ತ ಶಿಕ್ಷೆಯಾದರೆ ಮನೆ-ಮನೆಯಲ್ಲಿ ಬೇಡಿ ನಾಣ್ಯದ ಕಾಣಿಕೆಯ ತುಲಾಭಾರ ಸೇವೆ ಸಲ್ಲಿಸುವುದಾಗಿ ಭಕ್ತಾಧಿಗಳು ಈ ಸಂದರ್ಭ ಹರಿಕೆ ಸಲ್ಲಿಸಿದರು.
ವ್ಯವಸ್ಥಾಪನ ಸಮಿತಿ ಸದಸ್ಯರಾದ ಚಂದ್ರ ಆಚಾರ್ಯ, ವಿಶ್ವನಾಥ ಶೆಟ್ಟಿ, ಚಂದ್ರ ಪೂಜಾರಿ, ಸುಬ್ರಾಯ ಜೋಗಿ ಹಾಗೂ ಸ್ಥಳೀಯ ಮುಖಂಡರಾದ ದಿನೇಶ್ ಗಾಣಿಗ, ಪ್ರಸಾದ್ ಬಿಲ್ಲವ ಮುಂತಾದವರು ಉಪಸ್ಥಿತರಿದ್ದರು.