Advertisement

ಅಮೃತಾನಂದಮಯಿ ಮಠದಿಂದ ಸಾಮಾಜಿಕ ಸೇವೆ

12:41 PM Feb 07, 2017 | Team Udayavani |

ಮೈಸೂರು: ಮಾತಾ ಅಮೃತಾನಂದಮಯಿ ಮಠ 40 ವರ್ಷಗಳಿಂದ ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ ಎಂದು ಮಾತಾ ಅಮೃತಾನಂದಮಯಿ ದೇವಿಯವರ ಹಿರಿಯ ಶಿಷ್ಯರಾದ ಸ್ವಾಮಿ ಅಮೃತಸ್ವರೂಪಾನಂದ ಪುರಿ ತಿಳಿಸಿದರು.

Advertisement

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ದಿನಕ್ಕೆ 20ರಿಂದ 22ಗಂಟೆಗಳ ಕಾಲ ಅಮೃತಾನಂದಮಯಿ ಅವರು ಸಾರ್ವಜನಿಕರಿಗೆ ದರ್ಶನ ನೀಡುತ್ತಿದ್ದು, ಉಚಿತ ಕೌನ್ಸಿಲಿಂಗ್‌ ನಡೆಸುತ್ತಾ ಬಂದಿದ್ದಾರೆ ಎಂದರು. ಕೇರಳದ ಕೊಚ್ಚಿಯಲ್ಲಿರುವ ಅಮೃತಾನಂದಮಯಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಜತೆಗೆ ಮಠದಿಂದ ಶಿಕ್ಷಣಕ್ಕೂ ಒತ್ತು ನೀಡಲಾಗಿದ್ದು, ಬಡ ವರ್ಗದವರಿಗೆ ದೇಶಾದ್ಯಂತ 50 ಸಾವಿರ ಮನೆಗಳನ್ನು ಕಟ್ಟಿಸಿಕೊಡಲಾಗಿದೆ.

ಇದರ ಜತೆಗೆ ಪ್ರಾಕೃತಿಕ ವಿಕೋಪದಂತಹ ಸಂದರ್ಭದಲ್ಲೂ ಶ್ರೀಮಠ ಸಹಾಯಹಸ್ತ ಚಾಚುತ್ತಾ ಬಂದಿದ್ದು, 2009ರಲ್ಲಿ ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ನೆರೆ ಬಂದ ಸಂದರ್ಭದಲ್ಲಿ ಸಂತ್ರಸ್ತರಾದ ಜನರಿಗೆ 2500 ಮನೆ ನಿರ್ಮಿಸಿಕೊಡುವ ಜವಾಬ್ದಾರಿಯನ್ನು ಮಠ ಹೊತ್ತಿದ್ದು, ಈವರೆಗೆ 200 ಮನೆಗಳ ಕೀಲಿ ಕೈ ವಿತರಿಸಲಾಗಿದೆ.

ಇದಲ್ಲದೆ, ರಾಜ್ಯದ ಬೆಂಗಳೂರು, ಮೈಸೂರು, ಮಂಗಳೂರು, ದಾವಣಗೆರೆ, ಕಾರವಾರ, ಶಿವಮೊಗ್ಗ ಶಾಖಾ ಮಠಗಳ ಮೂಲಕ ಸುಮಾರು 5 ಸಾವಿರ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಸುಮಾರು 60 ಸಾವಿರ ಬಡ ಮಕ್ಕಳಿಗೆ ಶಿಷ್ಯ ವೇತನ, ವಿಧವೆಯರಿಗೆ ಮಾಸಾಶನ ನೀಡಲಾಗುತ್ತಿದೆ. ಪ್ರತಿ ವರ್ಷ ಈ ಸಂಖ್ಯೆ ಹೆಚ್ಚುತ್ತಾ ಹೋಗುತ್ತಿದೆ ಎಂದರು. 

ಹರ್ಯಾಣದ ಫ‌ರಿದಾಬಾದ್‌ನಲ್ಲೂ ಅತ್ಯಾಧುನಿಕ ಆಸ್ಪತ್ರೆ ನಿರ್ಮಿಸಲಾಗುತ್ತಿದ್ದು, 2018ಕ್ಕೆ ಸಾರ್ವಜನಿಕ ಸೇವೆಗೆ ಮುಕ್ತಗೊಳ್ಳಲಿದೆ. ಅಲ್ಲದೆ, ಮೈಸೂರಿನ ರೂಪಾ ನಗರದಲ್ಲಿರುವ 20 ಹಾಸಿಗೆ ಸಾಮರ್ಥ್ಯದ ಶ್ರೀಮಠದ ಅಮೃತಾ ಕೃಪಾ ಆಸ್ಪತ್ರೆಯನ್ನು ಇನ್ನೂ 50 ಹಾಸಿಗೆಗಳನ್ನು ಹೆಚ್ಚಳ ಮಾಡ ಲಾಗುವುದು.

Advertisement

ಬೆಂಗಳೂರಿನ ಬಿಡದಿ ಬಳಿ ಸರ್ಕಾರ ನೀಡಿರುವ 25 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಸದ್ಯ ಸಣ್ಣ ಪ್ರಮಾಣದ ಆಸ್ಪತ್ರೆ ಜನರಿಗೆ ಆರೋಗ್ಯ ಸೇವೆ ಒದಗಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಈ ಜಾಗದಲ್ಲಿ ದೊಡ್ಡ ಪ್ರಮಾಣದ ಆಸ್ಪತ್ರೆ ನಿರ್ಮಿಸಲಾಗುವುದು ಎಂದು ಹೇಳಿದರು. ಅಲ್ಲದೆ, ಪ್ರತಿ ತಿಂಗಳು ಅತ್ಯಾಧುನಿಕ ಸೌಲಭ್ಯವುಳ್ಳ ಟೆಲಿಮೆಡಿಷನ್‌ ವಾಹನ ಮೈಸೂರಿಗೆ ಬರುತ್ತಿದ್ದು, ಈ ಭಾಗದ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಶಿಬಿರಗಳನ್ನು ನಡೆಸುತ್ತಾ ಬರಲಾಗುತ್ತಿದೆ ಎಂದರು.

ಮೈಸೂರಿಗೆ ಅಮ್ಮ…
ಜಗತ್ತಿನಾದ್ಯಂತ ಅಮ್ಮ ಎಂದು ಪ್ರೇಮ ದಿಂದ ಕರೆಯಲ್ಪಡುವ ಮಾತಾ ಅಮೃತಾನಂದಮಯಿ ಅವರು ಮಾರ್ಚ್‌ 5, 6ರಂದು ಮೈಸೂರಿಗೆ ಆಗಮಿಸುತ್ತಿದ್ದಾರೆ. ಸಾಂಸಾರಿಕ ಜೀವನದ ಸಮಸ್ಯೆಗಳಿಂದ ಜರ್ಜರಿತ ರಾದ ಜನರ ನೋವು, ಕಣ್ಣೀರನ್ನು ಒರೆಸುವ ಅಮ್ಮ, ಅಮೃತ ಸಿಂಚನ ಮಾಡಲಿದ್ದಾರೆ.

ಅಮ್ಮ ಅವರ ಮೈಸೂರು ಭೇಟಿ ಸಂದರ್ಭದಲ್ಲಿ ಬೋಗಾದಿ 2ನೇ ಹಂತದಲ್ಲಿರುವ ಮಾತಾ ಅಮೃತಾನಂದಮಯಿ ಮಠದಲ್ಲಿ ಎರಡು ದಿನಗಳ ಕಾಲ ಪ್ರವಚನ, ಭಜನೆ, ಧ್ಯಾನ ಮತ್ತು ಅಮ್ಮನ ವೈಯಕ್ತಿಕ ದರ್ಶನ ಏರ್ಪಡಿಸ ಲಾಗಿದೆ ಎಂದು ಸ್ವಾಮಿ ಅಮೃತ ಸ್ವರೂಪಾನಂದ ಪುರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next