ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಸಂಸ್ಥೆ ನಿರ್ದೇಶಕ ಪ್ರೊ. ಎಸ್.ಸಿ. ಶರ್ಮಾ ಸಾಧಕರಿಗೆ ಚಿನ್ನದ ಪದಕದ ಜತೆಗೆ ಪದವಿ ಪ್ರಮಾಣ ಪತ್ರ ಪ್ರದಾನ ಮಾಡಿದರು.
ಅಂಧೆಯಾಗಿದ್ದರೂ ಸ್ನಾತಕೋತ್ತರ ಪದವಿ ಇಂಗ್ಲಿಷ್ ವಿಷಯದಲ್ಲಿ ಸಿ.ಎಂ.ಅಮೃತ ಪ್ರಥಮ ರ್‍ಯಾಂಕ್‌ನೊಂದಿಗೆ ಮೂರು ಚಿನ್ನದ ಪದಕ ಗಳಿಸಿದರು.
ಪದವಿಯಲ್ಲಿ ರ್‍ಯಾಂಕ್ ತಪ್ಪಿದ್ದಕ್ಕೆ ಛಲದಿಂದ ಓದಿ ಸ್ನಾತಕೋತ್ತರ ಪದವಿ ವಾಣಿಜ್ಯ ಶಾಸ್ತ್ರದಲ್ಲಿ 6 ಚಿನ್ನದ ಪದಕಗಳಿಸಿದ ಮೆಕ್ಯಾನಿಕ್ ಮಗಳು ಕೆ.ಸಿ.ತೇಜಸ್ವಿನಿ, ಗಾರೆ ಕೆಲಸಗಾರನ ಪುತ್ರಿ ರೋಶನ್ ಎಂಬಿಎ ವಿಭಾಗದಲ್ಲಿ ನಾಲ್ಕು ಚಿನ್ನದ ಪದಕ, ಎಂಎಸ್ಸಿ ಬಯೋಕೆಮಿಸ್ಟ್ರಿ ವಿಷಯದಲ್ಲಿ ಪ್ರಥಮ ರ್‍ಯಾಂಕ್‌ನೊಂದಿಗೆ 3 ಪದಕ ಪಡೆದಿರುವ ಆಟೋರಿಕ್ಷಾ ಚಾಲಕನ ಪುತ್ರಿ ಎಫ್.ರುಕ್ಸಾನ, ರೈತನ ಮಗಳು ಎಸ್.ಜಿ.ನೇತ್ರಾವತಿ ಸ್ನಾತಕೋತ್ತರ ಪದವಿ ಕನ್ನಡ ವಿಷಯದಲ್ಲಿ ಮೂರು ಸ್ವರ್ಣ ಪದಕ ಪಡೆದು ಎಲ್ಲರೂ ಹುಬ್ಬೇರಿಸುವಂಥ ಸಾಧನೆ ಮಾಡಿದ್ದಾರೆ. ನಗರದ ಹೆಸರಾಂತ ವೈದ್ಯ ಎಸ್.ಎಂ.ಎಲಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ಡಾ|ಮನು ಬಳಿಗಾರಗೆ ನಾಡೋಜ ಪುರಸ್ಕಾರ: ಈ ಮಧ್ಯೆ, ಕಸಾಪ ರಾಜ್ಯಾಧ್ಯಕ್ಷ , ಡಾ| ಮನು ಬಳಿಗಾರ ಅವರಿಗೆ ಬುಧವಾರ ಹಂಪಿ ಕನ್ನಡ ವಿವಿ ನುಡಿಹಬ್ಬದಲ್ಲಿ ನಾಡೋಜ ಪುರಸ್ಕಾರ ಪ್ರದಾನ ಮಾಡಲಾಯಿತು. ಬುಧವಾರ ನಡೆದ ವಿಶ್ವವಿದ್ಯಾಲಯದ 27ನೇ ನುಡಿಹಬ್ಬ (ಘಟಿಕೋತ್ಸವ)ದಲ್ಲಿ ಕುಲಪತಿ ಡಾ| ಮಲ್ಲಿಕಾ ಘಂಟಿ ಡಾ| ಮನು ಬಳಿಗಾರ ಅವರಿಗೆ ನಾಡೋಜ ಪುರಸ್ಕಾರ ಪ್ರದಾನ ಮಾಡಿದರು.
ರಾಜ್ಯಪಾಲರು ಗೈರು: ದಾವಣಗೆರೆ ವಿವಿ 6 ನೇ ಘಟಿಕೋತ್ಸವ ಹಾಗೂ ಹಂಪಿ ವಿಶ್ವವಿದ್ಯಾಲಯದ ನುಡಿಹಬ್ಬಕ್ಕೆ ಎರಡೂ ವಿಶ್ವವಿದ್ಯಾಲಯಗಳ ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ವಿ.ಆರ್.ವಾಲಾ ಹಾಗೂ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಗೈರು ಹಾಜರಾಗಿದ್ದರು