Advertisement

ಬೆಳ್ತಂಗಡಿ ತಾಲೂಕಿನ 18 ಕೆರೆಗಳು ಆಯ್ಕೆ: ಅಮೃತ ಸರೋವರ ಯೋಜನೆ

11:53 AM Aug 11, 2022 | Team Udayavani |

ಬೆಳ್ತಂಗಡಿ: ಮಾನವನ ಅತಿಯಾದ ಚಟುವಟಿಕೆಗಳಿಂದ ಪಾರಂಪರಿಕ ಕೆರೆಗಳು ನಶಿಸುತ್ತಿವೆ. ಹೀಗೆ ಮುಂದುವರಿದರೆ ಭವಿಷ್ಯದ ಪೀಳಿಗೆಗೆ ಕೆರೆ ನೋಡಲು ಸಿಗುವುದೇ ಅಪರೂಪವಾಗಬಹುದು ಎನ್ನುವ ಆತಂಕವಿದೆ. ಇದನ್ನು ತಡೆಯುವ ಸಲುವಾಗಿ ಸರಕಾರವು ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಅಮೃತ ಸರೋವರ ಯೋಜನೆ ಮೂಲಕ ರಾಜ್ಯದ 750 ಕೆರೆಗಳ ಪುನಶ್ಚೇತನ ಹಾಗೂ ಸಮಗ್ರ ಅಭಿವೃದ್ಧಿಗೆ ಮುಂದಡಿಯಿಟ್ಟಿದೆ.

Advertisement

ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ನಡೆಸಲು ಉದ್ದೇಶಿಸಿದ್ದರಿಂದ ಈ ಯೋಜನೆಗೂ ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಧಾನಿ ನರೇಂದ್ರ ಮೋದಿ ಅಮೃತ ಸರೋವರ ಯೋಜನೆ ಎಂದು ಹೆಸರಿಡಲಾಗಿದೆ. ದ.ಕ. ಜಿಲ್ಲೆಯಲ್ಲಿ ಒಟ್ಟು 75 ಕೆರೆ ಪುನಶ್ಚೇತನಗೊಂಡರೆ ಬೆಳ್ತಂಗಡಿ ತಾಲೂಕಿನಲ್ಲಿ 18 ಕೆರೆಗಳನ್ನು ಆಯ್ಕೆ ಮಾಡಲಾಗಿದೆ.

ಗಣ್ಯರಿಗೆ ಆಹ್ವಾನ

ತಾಲೂಕಿನಲ್ಲಿ ಈಗಾಗಲೇ ಆಯ್ಕೆ ಮಾಡಿರುವ 18 ಕೆರೆಗಳ ಪುನಶ್ಚೇತನಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಈ ಮಧ್ಯೆ ಆ. 15ರ ಸ್ವಾತಂತ್ರ್ಯದಿನಾಚರಣೆ ನಡೆಸಲು 3 ಕೆರೆಗಳನ್ನು ಆಯ್ಕೆ ಮಾಡಲಾಗಿದೆ. ಮಡಂತ್ಯಾರು ಗ್ರಾ.ಪಂ. ಹೊಂದಿಕೊಂಡಿರುವ ಪಾರೆಂಕಿ ಗ್ರಾಮದ 0.65 ಎಕ್ರೆಯ ಅಂಕರಕಟ್ಟೆ ಕೆರೆ, ಅಳದಂಗಡಿ ಗ್ರಾಮದ 1.06 ಎಕ್ರೆಯಲ್ಲಿ ವ್ಯಾಪಿಸಿರುವ ಪಿಲ್ಯ ಗುತ್ತು ಕೆರೆ ಹಾಗೂ ಅಂಡಿಂಜೆ ಗ್ರಾಮದಲ್ಲಿ 2 ಎಕ್ರೆ ದೊಡ್ಡದಾದ ಕಂಚಕೆರೆಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಧ್ವಜಾರೋಹಣ ನಡೆಯಲಿದೆ. ಸಂಬಂಧಪಟ್ಟ ಗ್ರಾ.ಪಂ. ವ್ಯಾಪ್ತಿಯ ನಿವೃತ್ತ ಸೈನಿಕರು, ಸ್ವಾತಂತ್ರ್ಯ ಹೋರಾಟಗಾರರು, ಪದ್ಮಶ್ರೀ, ಪದ್ಮ ವಿಭೂಷಣ ಪಡೆದ ಗಣ್ಯರನ್ನು ಆಹ್ವಾನಿಸುವ ಮೂಲಕ ಅರ್ಥಪೂರ್ಣವಾಗಿ ಆಚರಣೆಗೆ ಮುಂದಾಗಿದೆ.

ಅಭಿವೃದ್ಧಿಗೆ ಅನುದಾನ

Advertisement

ಈಗಾಗಲೇ ಆಯ್ಕೆಯಾಗಿರುವ ಕೆರೆಗಳ ಪುನಶ್ಚೇತನ ಕಾರ್ಯಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಮಳೆ ಹೆಚ್ಚಿದ್ದರಿಂದ ಕಾಮಗಾರಿ ವಿಳಂಬವಾಗಿದೆ. ಉದ್ಯೋಗ ಖಾತ್ರಿ ಯೋಜನೆ ಸೇರಿ ಸ್ಥಳೀಯ ಆರ್ಥಿಕ ಮೂಲವನ್ನು ಬಳಸಿಕೊಳ್ಳಲು ಯೋಜಿಸಲಾಗಿದೆ. ಮುಖ್ಯಮಂತ್ರಿ ಬಜೆಟ್‌ ಘೋಷಣೆಯಲ್ಲಿ ಕೆರೆಗೆ ತಲಾ 10 ಲಕ್ಷ ರೂ.ನಂತೆ ಪಂಚಾಯತ್‌ರಾಜ್‌ ಎಂಜಿನಿಯರ್‌ ಇಲಾಖೆಯಡಿ ಅನುದಾನ ಲಭ್ಯವಾಗಲಿದೆ. ಪೂರಕವಾಗಿ 15ನೇ ಹಣಕಾಸು ಯೋಜನೆಯ ಅನುದಾನವನ್ನು ಬಳಸಿ ಮಾದರಿ ಕೆರೆಯನ್ನಾಗಿ ರೂಪಿಸುವುದು ಇದರ ಉದ್ದೇಶ.

ಜಾಗೃತಿಗಾಗಿ ಯೋಜನೆ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ವಿಶೇಷವಾಗಿ ನೀರಿಂಗಿಸುವಿಕೆ ಹಾಗೂ ನೀರಿನ ಬಳಕೆಯ ಜಾಗೃತಿಗಾಗಿ ಅಮೃತ ಸರೋವರ ಯೋಜನೆ ಅನುಷ್ಠಾನಕ್ಕೆ ತರಲಾಗಿದೆ. ಭವಿಷ್ಯದಲ್ಲಿ ಈ ಕೆರೆಗಳನ್ನು ಒಂದು ಮಾದರಿ ರೂಪದಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಬೆಳ್ತಂಗಡಿ ತಾಲೂಕಿನಲ್ಲಿ 18 ಕೆರೆ ಗಳನ್ನು ಗುರುತಿಸಿದ್ದು, ಆ. 15ರಂದು ಮೂರು ಕೆರೆಗಳ ವ್ಯಾಪ್ತಿಯಲ್ಲಿ ಸ್ವಾತಂತ್ರ್ಯ ಧ್ವಜಾ ರೋಹಣ ನಡೆಯಲಿದೆ. –ಕುಸುಮಾಧರ್‌ ಬಿ., ತಾ.ಪಂ. ಇಒ, ಬೆಳ್ತಂಗಡಿ

Advertisement

Udayavani is now on Telegram. Click here to join our channel and stay updated with the latest news.

Next