Advertisement

ವೇಗ ಪಡೆಯದ “ಅಮೃತ ಗ್ರಾಮೀಣ ವಸತಿ’

12:58 AM Mar 19, 2023 | Team Udayavani |

ಮಂಗಳೂರು: ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮಾಚರಣೆಯ ಸವಿನೆನಪಿನಲ್ಲಿ ರಾಜ್ಯದಲ್ಲಿ ಘೋಷಿಸಲಾದ “ಅಮೃತ ಗ್ರಾಮೀಣ ವಸತಿ ಯೋಜನೆ’ ಅನುಷ್ಠಾನದಲ್ಲಿ ಮಾತ್ರ ನಿರೀಕ್ಷಿತ ಪ್ರಗತಿ ಕಂಡಿಲ್ಲ.

Advertisement

“ಅಮೃತ ಯೋಜನೆ’ಯ ಸಮೀಕ್ಷೆಯ ವೇಳೆ ದ. ಕ. ಜಿಲ್ಲೆಯಲ್ಲಿ ಆಯ್ಕೆಯಾದ 27 ಗ್ರಾ.ಪಂ.ಗಳಲ್ಲಿ ಒಟ್ಟು 6,059 ವಸತಿ ರಹಿತ ಹಾಗೂ ನಿವೇಶನ ರಹಿತರಿದ್ದರು. ಈ ಪೈಕಿ ಪರಿಶೀಲನೆ ಆದ ಬಳಿಕ 1,025 ಅರ್ಜಿ ಸ್ವೀಕೃತವಾಗಿ ಅವರು ಮನೆ-ನಿವೇಶನದ ನಿರೀಕ್ಷೆಯಲ್ಲಿದ್ದರು. ಆದರೆ ಇಲ್ಲಿಯ ವರೆಗೆ ಸಿಕ್ಕಿದ್ದು 137 ಮಂದಿಗೆ ಮಾತ್ರ. ಉಳಿದವು ಪ್ರಗತಿಯಲ್ಲಿ ಇವೆ. ಉಡುಪಿ ಜಿಲ್ಲೆಯಲ್ಲಿ ಆಯ್ಕೆಯಾದ 19 ಗ್ರಾ.ಪಂ.ಗಳಲ್ಲಿ 7,002 ವಸತಿ, ನಿವೇಶನ ರಹಿತರಿದ್ದರು. ಪರಿಶೀಲನೆಯ ಬಳಿಕ 1,136 ಅರ್ಜಿ ಸ್ವೀಕೃತವಾಗಿತ್ತು. 170 ಮಂದಿಗೆ ಮಾತ್ರ ವಸತಿ, ನಿವೇಶನ ಹಂಚಿಕೆಯಾಗಿದ್ದು, ಉಳಿದದ್ದು ಪ್ರಗತಿಯಲ್ಲಿದೆ!

ಸರಕಾರದಿಂದ ಮನೆ ಮಂಜೂರಾದ ಪ್ರಕಾರ ಅಮೃತ ವಸತಿ ಯೋಜನೆಯಡಿ ನೀಡಲಾಗಿದೆ. ಉಳಿದದ್ದಕ್ಕೆ ಅನುಮೋದನೆ ಇನ್ನಷ್ಟೇ ದೊರೆಯಬೇಕಿದೆ. ಜತೆಗೆ ಕೆಲವು ಗ್ರಾ.ಪಂ.ಗಳಲ್ಲಿ ನಿವೇಶನದ ಕೊರತೆಯೂ ಇದೆ. ಹೀಗಾಗಿ ವಿಳಂಬವಾಗಿದೆ ಎನ್ನುತ್ತಾರೆ ಅಧಿಕಾರಿಗಳು.

“ಅಮೃತ ಗ್ರಾಮೀಣ ವಸತಿ ಯೋಜನೆ’ಗೆ ರಾಜ್ಯದ 31 ಜಿಲ್ಲೆಗಳಿಂದ 750 ಗ್ರಾ.ಪಂ.ಗಳನ್ನು ಆಯ್ಕೆ ಮಾಡಿ ರಾಜೀವ್‌ ಗಾಂಧಿ ವಸತಿ ನಿಗಮಕ್ಕೆ ಸಲ್ಲಿಸಲಾಗಿತ್ತು. ಗ್ರಾ.ಪಂ.ಗಳನ್ನು ಆಯಾ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಆಯ್ಕೆ ಮಾಡಲಾಗಿದೆ. ಆಯಾ ಗ್ರಾ.ಪಂ.ಗಳಲ್ಲಿ ವಸತಿರಹಿತ ಹಾಗೂ ನಿವೇಶನ ರಹಿತರ ಸಮೀಕ್ಷೆ ನಡೆಸಲಾಗಿತ್ತು. ಈ ಗ್ರಾ.ಪಂ.ಗಳಿಗೆ ವಿವಿಧ ವಸತಿ ಯೋಜನೆಗಳಲ್ಲಿ ಮನೆ ಮಂಜೂರು ಮಾಡಲಾಗಿತ್ತು. ಗ್ರಾಮಸಭೆಯಲ್ಲಿ ಆಯ್ಕೆ ಮಾಡಿ ಫಲಾನುಭವಿಗಳಿಗೆ ನಿಗಮದ ಮೂಲಕ ಅಂತಿಮ ಅನುಮೋದನೆ ನೀಡಲಾಗಿತ್ತು. ಇವೆಲ್ಲವನ್ನೂ 2023ರ ಒಳಗೆ ಅನುಷ್ಠಾನ ಮಾಡುವ ಸಂಕಲ್ಪವನ್ನು ಮುಖ್ಯಮಂತ್ರಿಗಳು ಹೊಂದಿದ್ದರು. ಆದರೆ ಸದ್ಯ ಅನುಷ್ಠಾನದ ಪ್ರಗತಿ ಕುಂಠಿತವಾಗಿದೆ.

ಕರಾವಳಿಯ 46 ಗ್ರಾ.ಪಂ.ಗಳು
ದ.ಕ. ಜಿಲ್ಲೆಯ ಅಮಾrಡಿ, ಕುಕ್ಕಿಪಾಡಿ, ಪಂಜಿಕಲ್ಲು, ಸರಪಾಡಿ, ಇಡ್ಕಿದು , ಇರಾ, ಅಳದಂಗಡಿ, ಮಡಂತ್ಯಾರು, ಕೊಕ್ಕಡ, ಉಜಿರೆ, ಹೊಸಂಗಡಿ, ಪಡಂಗಡಿ, ಅಲಂಕಾರು, ಎಡಮಂಗಲ, ಮುನ್ನೂರು, ಐಕಳ, ಮುಚ್ಚಾರು, ಚೇಳಾçರು, ಎಕ್ಕಾರು, ಬೆಳುವಾಯಿ, ತೆಂಕಮಿಜಾರು, ನಿಡ್ಪಳ್ಳಿ, ಬಲ್ನಾಡು, ಪಾಣಾಜೆ, ಬಾಳಿಲ, ಮರ್ಕಂಜ, ಮಂಡೆಕೋಲು. ಉಡುಪಿ ಜಿಲ್ಲೆಯ ಶಂಕರನಾರಾಯಣ, ಸಿದ್ದಾಪುರ, ಅಂಪಾರು, ನಾಡ, ಬಿಜೂರು, ಕೋಟೇಶ್ವರ, ಕಾಳಾವರ, ಬೆಳ್ವೆ, ಕೋಟ, ತೆಂಕನಿಡಿಯೂರು, ನಾಲ್ಕೂರು, 38 ಕಳತ್ತೂರು, 80 ಬಡಗಬೆಟ್ಟು, ಎಲ್ಲೂರು, ಪಲಿಮಾರು, ಕುಕ್ಕುಂದೂರು, ನಿಟ್ಟೆ, ಮುಡಾರು, ಹೆಬ್ರಿ ಗ್ರಾ.ಪಂ.ಗಳು “ಅಮೃತ ಗ್ರಾಮೀಣ ವಸತಿ ಯೋಜನೆ’ಗೆ ಆಯ್ಕೆಯಾಗಿವೆ.

Advertisement

ಯೋಜನೆ ಹಳೆಯದು; ಹೆಸರು “ಅಮೃತ’!
ಲಭ್ಯ ಮಾಹಿತಿಯ ಪ್ರಕಾರ, 2021-22ರ ಸಾಲಿನಲ್ಲಿ ಎಲ್ಲ ಗ್ರಾ.ಪಂ.ಗಳಿಗೆ ಬಸವ ವಸತಿ ಯೋಜನೆ ಹಾಗೂ ಡಾ| ಬಿ.ಆರ್‌. ಅಂಬೇಡ್ಕರ್‌ ನಿವಾಸ್‌ ಯೋಜನೆಯಲ್ಲಿ ಮನೆ ನೀಡಲಾಗಿತ್ತು. ಇದೇ ವಸತಿ ಯೋಜನೆಯನ್ನು “ಅಮೃತ ಯೋಜನೆ’ಯಡಿ ಆಯ್ಕೆಯಾದ ಗ್ರಾಮಗಳಲ್ಲಿ ಆದ್ಯತೆಯ ಮೇರೆಗೆ ಕಾರ್ಯಗತಗೊಳಿಸಲಾಗಿದೆ. ಹೀಗಾಗಿ ಅಮೃತ ಯೋಜನೆಯನ್ನು ಇದರೊಂದಿಗೆ ಸೇರಿಸಿಕೊಳ್ಳಲಾಗಿದೆ.

2017-18ರ ಬಳಿಕ 2021-22ರಲ್ಲಿ ವಸತಿ ಯೋಜನೆ ಲಭಿಸಿದೆ. ಮುಂದೆ 2022-23ರ ಯೋಜನೆ ಈಗಾಗಲೇ ಅನುಷ್ಠಾನವಾಗಬೇಕಿತ್ತಾದರೂ ಇನ್ನೂ ಘೋಷಣೆಯಾಗಿಲ್ಲ !

“ಅಮೃತ ಗ್ರಾಮೀಣ ವಸತಿ ಯೋಜನೆ’ ಪ್ರಗತಿ ದ.ಕ. ಜಿಲ್ಲೆ
ಮನೆ, ನಿವೇಶನ: ಸರಕಾರದ ಗುರಿ 1,025
ಗ್ರಾಮ ಸಭೆಯಲ್ಲಿ ಅನುಮೋದನೆ: 1,001
ರಾಜೀವ್‌ಗಾಂಧಿ ವಸತಿ ನಿಗಮದ ಅನುಮೋದನೆ: 988
ಪೂರ್ಣವಾಗಿರುವುದು: 137
ಉಡುಪಿ ಜಿಲ್ಲೆ
ಮನೆ, ನಿವೇಶನ: ಸರಕಾರದ ಗುರಿ 1,136
ಗ್ರಾಮ ಸಭೆಯಲ್ಲಿ ಅನುಮೋದನೆ: 1,006
ರಾಜೀವ್‌ಗಾಂಧಿ ವಸತಿ ನಿಗಮದ ಅನುಮೋದನೆ: 926
ಪೂರ್ಣವಾಗಿರುವುದು: 170

ವಸತಿ ರಹಿತರ ಹಾಗೂ ಆಶ್ರಯರಹಿತರನ್ನು ಗುರುತಿಸಿ ಸರ್ವರಿಗೂ ವಸತಿ ಕಲ್ಪಿಸುವ ಯೋಜನೆ ಈಗಾಗಲೇ ಅನುಷ್ಠಾನ ಹಂತದಲ್ಲಿದೆ. ದ.ಕ. ಜಿಲ್ಲೆಗೆ ಲಭಿಸಿರುವ ಒಟ್ಟು 7 ಸಾವಿರ ವಸತಿಯ ಪೈಕಿ ಮೊದಲ ಆದ್ಯತೆಯಾಗಿ “ಅಮೃತ ಯೋಜನೆ’ಯಡಿ ಆಯ್ಕೆಯಾದ ಗ್ರಾ.ಪಂ.ನಲ್ಲಿ ಅನುಷ್ಠಾನ ಮಾಡಲಾಗಿದೆ.
– ಡಾ| ಕುಮಾರ್‌,
ಸಿಇಒ, ದ.ಕ. ಜಿ. ಪಂ.

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next