ಕಾರ್ಕಳ: ಪ್ರತಿಯೊಬ್ಬರು ಮತದಾನದ ಮಹತ್ವ ಅರಿತು ಮತ ಚಲಾಯಿಸಬೇಕು. ಮತವನ್ನು ವರ್ಗಾಯಿಸಲು ಸಾಧ್ಯವಿಲ್ಲ, ಹೀಗಾಗಿ ಅದು ಶ್ರೇಷ್ಠವಾಗುತ್ತದೆ. ಉತ್ತಮ ಸಮಾಜ ರೂಪಿಸುವಲ್ಲಿ ಮತದಾನ ಬಹುಮಖ್ಯ ಪಾತ್ರ ವಹಿಸುತ್ತದೆ. ಯುವಜನತೆ ಮತಚಲಾಯಿಸುವ ಮೂಲಕ ಇತರರನ್ನೂ ಮತದಾನಕ್ಕೆ ಪ್ರೇರೇಪಿಸಬೇಕು ಎಂದು ಸಿವಿಲ್ ನ್ಯಾಯಾಧೀಶೆ, ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷೆ ಅಮೃತಾ ಎಸ್. ರಾವ್ ಹೇಳಿದರು.
ತಾಲೂಕು ಆಡಳಿತ ಮತ್ತು ಸಹಾಯಕ ಮತದಾರರ ನೋಂದಣಿ ಅಧಿಕಾರಿ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿಯ ಆಶ್ರಯದಲ್ಲಿ ಜ. 25ರಂದು ಶ್ರೀ ಭುವನೇಂದ್ರ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಸಹಾಯಕ ಪೊಲೀಸ್ ಅಧೀಕ್ಷಕ ಪಿ. ಕೃಷ್ಣಕಾಂತ್ ಅವರು ಮಾತನಾಡಿ, ಭಾರತ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿರುವ ದೇಶ. ದೇಶದಲ್ಲಿ ಪ್ರತೀ ವರ್ಷ 2 ಕೋಟಿಯಷ್ಟು ಹೊಸ ಮತದಾರರು ಮತದಾನದ ಹಕ್ಕು ಪಡೆಯುತ್ತಾರೆ. ಸಮಾಜದ ಬದಲಾವಣೆ, ಏಳಿಗೆಯಲ್ಲಿ ಮತದಾನ ಪ್ರಮುಖವಾಗುತ್ತದೆ ಎಂದರು.
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮೇ| ಹರ್ಷ ಅವರು ಮಾತನಾಡಿ, ಯಾವುದೇ ಆಸೆ ಆಕಾಂಕ್ಷೆಗಳಿಗೆ ಒಳಗಾಗದೇ ನಿಷ್ಪಕ್ಷವಾಗಿ ಮತಚಲಾವಣೆ ಮಾಡಬೇಕು. ಯುವ ಜನತೆ ಖಡ್ಡಾಯ ಮತದಾನ ಮಾಡಬೇಕು. ಆದರೆ ವಿದ್ಯಾವಂತೆರೇ ಇಂದು ಮತದಾನದಿಂದ ವಿಮುಕ್ತರಾಗುತ್ತಿರುವುದು ವಿಷಾದನೀಯ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಚುನಾ ವಣಾ ಗುರುತಿನ ಚೀಟಿ ವಿತರಿಸಲಾಯಿತು.ತಹಶೀಲ್ದಾರ್ ಮಹಮ್ಮದ್ ಇಸಾಕ್ ಅಧ್ಯಕ್ಷತೆ ವಹಿಸಿದ್ದರು. ಪುರಸಭೆಯ ಮುಖ್ಯಾಧಿಕಾರಿ ಮೇಬಲ್ ಡಿ’ಸೋಜಾ ಉಪಸ್ಥಿತರಿದ್ದರು. ರವಿ ಕುಮಾರ್ ಸ್ವಾಗತಿಸಿ, ವನಿತಾ ನಿರೂಪಿಸಿದರು.
ದಾನ ಎನ್ನುವುದು ಯಾವರೀತಿ ಶ್ರೇಷ್ಠವೋ ಅದೇರೀತಿ ಮತದಾನವೂ ಪವಿತ್ರವಾಗಿರುತ್ತದೆ. ಸಮಾಜದ ಸ್ವಾಸ್ಥ್ಯ, ಪ್ರಗತಿ ಯಲ್ಲಿ ಮತದಾನದ ಪಾತ್ರವು ಬಹುಮುಖ್ಯ.
– ಡಾ| ಮಂಜುನಾಥ ಕೋಟ್ಯಾನ್, ಪ್ರಾಂಶುಪಾಲರು