Advertisement

ಅಮೃತ ಯೋಜನೆಗೆ ಅಧಿಕಾರಿಗಳ ವಿಷ!

05:20 PM May 25, 2018 | Team Udayavani |

ಹುಬ್ಬಳ್ಳಿ: ವಿವಿಧ ಇಲಾಖೆ ಅಧಿಕಾರಿಗಳ ನಡುವೆ ಸಮನ್ವಯತೆ ಕೊರತೆ ಹೆಚ್ಚಾಗಿದೆ. ಪ್ರತಿ ಸಭೆಯಲ್ಲೂ ನಿಗದಿತ ಅವಧಿಯೊಳಗೆ ಯೋಜನೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದರೂ ಪ್ರಯೋಜನವಾಗುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಗುರುವಾರ ಅಮೃತ ಯೋಜನೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ಕೆಲ ಕಾಮಗಾರಿಗಳ ಕುರಿತು ಕಳೆದ ಆರೇಳು ತಿಂಗಳಿನಿಂದ ಸೂಚನೆ ನೀಡಿದರೂ ಇನ್ನೂ ಆರಂಭಿಸಿಲ್ಲ ಎಂದು ಅಮೃತ ಯೋಜನೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ರಾಜ್ಯ ಸರಕಾರದಂತೆಯೇ ಇಲ್ಲಿನ ಅಧಿಕಾರಿಗಳು ಅಭಿವೃದ್ಧಿ ಕಾರ್ಯಗಳಲ್ಲಿ ಆಸಕ್ತಿ ತೋರುತ್ತಿಲ್ಲ. ಅಭಿವೃದ್ಧಿ ಯೋಜನೆಗಳಿಗೆ ಜನರು ವಿರೋಧ ವ್ಯಕ್ತಪಡಿಸಿದರೆ ನನ್ನ ಗಮನಕ್ಕೆ ತೆಗೆದುಕೊಂಡು ಬನ್ನಿ. ಅವರನ್ನು ಸಮಾಧಾನಪಡಿಸಿ ಒಪ್ಪಿಸುವ ಜವಾಬ್ದಾರಿ ನನ್ನದು. ವಿಳಂಬವಾಗುತ್ತಿರುವ ಕೆಲಸಗಳನ್ನು ಆದಷ್ಟು ಬೇಗ ಕೈಗೆತ್ತಿಕೊಳ್ಳಿ ಎಂದು ಸೂಚಿಸಿದರು.

ದಾಜಿಬಾನಪೇಟೆ ವ್ಯಾಪ್ತಿಯಲ್ಲಿ ಮೇ 28ರಿಂದ ಕಾಮಗಾರಿ ಆರಂಭಿಸುವುದಾಗಿ ಅಮೃತ ಯೋಜನೆಯ ಇಇ ರವೀಂದ್ರ ಭರವಸೆ ನೀಡಿದರು. 30 ದಿನದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ಪೊಲೀಸರು ತಾತ್ಕಾಲಿಕವಾಗಿ ಸಂಚಾರ ಮಾರ್ಗ ಬದಲಿಸಿದರೆ ಅನುಕೂಲವಾಗುತ್ತದೆ ಎಂದು ಸಭೆ ಗಮನಕ್ಕೆ ತಂದರು. ಡಿಸಿಪಿ ಬಿ.ಎಸ್‌. ನೇಮಗೌಡ ಮಾತನಾಡಿ, ಕಾಮಗಾರಿ ಆರಂಭಿಸುವ ಎರಡು ದಿನ ಮೊದಲು ನನ್ನ ಗಮನಕ್ಕೆ ತಂದರೆ ಇಲಾಖೆಯಿಂದ ಅಗತ್ಯವಿರುವ ಎಲ್ಲಾ ನೆರವು ನೀಡುವುದಾಗಿ ಭರವಸೆ ನೀಡಿದರು.

ಸಪ್ತಗಿರಿ ಪಾರ್ಕ್‌, ಶಿವ ಕಾಲೋನಿ, ಬಣಗಾರ ಲೇಔಟ್‌, ಗೋಲ್ಡನ್‌ ಪಾರ್ಕ್‌ ಪ್ರದೇಶಗಳಲ್ಲಿ ಯುಜಿಡಿ ಸಂಪರ್ಕ ನೀಡಲು ಅಮೃತ ಯೋಜನೆಯಲ್ಲಿ ಅವಕಾಶವಿಲ್ಲ. ಹೀಗಾಗಿ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಅಗತ್ಯ ಅನುದಾನ ಕೊಡಿಸುವುದಾಗಿ ಶೆಟ್ಟರ ಭರವಸೆ ನೀಡಿದರು.

ಕ್ರಮ ಕೈಗೊಳ್ಳಿ: ಸುಳ್ಳ ರಸ್ತೆಯಲ್ಲಿ ವೆಟ್‌ ವೆಲ್‌ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಅಧಿಕಾರಿಗಳು ಸಭೆ ಗಮನಕ್ಕೆ ತಂದರು. ಮಹಾಪೌರ ಸುಧೀರ ಸರಾಫ್ ಹಾಗೂ ಪಾಲಿಕೆ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದರು. ಕಾಮಗಾರಿಗೆ ವಿರೋಧ ವ್ಯಕ್ತಪಡಿಸುತ್ತಿರುವ ವ್ಯಕ್ತಿಗೆ ವಾಸ್ತವ ವಿವರಿಸಿ ಒಂದು ವೇಳೆ ಪುನಃ ವಿರೋಧ ವ್ಯಕ್ತಪಡಿಸಿದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ. ಅಭಿವೃದ್ಧಿ ಕಾರ್ಯಗಳಿಗೆ ಜನರು ಸಹಕಾರ ನೀಡಬೇಕೇ ವಿನಃ ವಿರೋಧ ವ್ಯಕ್ತಪಡಿಸಬಾರದು ಎಂದು ಜಗದೀಶ ಶೆಟ್ಟರ ಹೇಳಿದರು.

Advertisement

ಎಸ್‌ಟಿಪಿ ಘಟಕ ನಿರ್ಮಿಸಿ: ಶಾಸಕ ಅರವಿಂದ ಬೆಲ್ಲದ ಮಾತನಾಡಿ, ನವಲೂರು ಭಾಗದಲ್ಲಿ ತ್ಯಾಜ್ಯ ನೀರು ಸಂಸ್ಕರಣ ಘಟಕ ಆರಂಭಿಸುವ ಕುರಿತು ಪ್ರಸ್ತಾಪಿಸಿದರು. ಈ ಭಾಗದಲ್ಲಿ ಎಸ್‌ಟಿಪಿ ಘಟಕ ಮಾಡಿ ಶುದ್ಧೀಕರಿಸಿದ ನೀರನ್ನು ನವಲೂರು ಕೆರೆಗೆ ಹರಿಸಿದರೆ ಕೃಷಿಗೆ ಸಾಕಷ್ಟು ಅನುಕೂಲವಾಗುತ್ತದೆ ಎಂದರು.

ಮಹಾಪೌರ ಸುಧೀರ ಸರಾಫ್, ಪಾಲಿಕೆ ಸದಸ್ಯರಾದ ಮಹೇಶ ಬುರ್ಲಿ, ಮಲ್ಲಿಕಾರ್ಜುನ ಹೊರಕೇರಿ, ಬೀರಪ್ಪ ಖಂಡೇಕಾರ, ಉಮೇಶ ಕೌಜಗೇರಿ, ಆದರ್ಶ ಉಪ್ಪಿನ ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.

ಆಯುಕ್ತ ಮೈಗೂರ ವಿರುದ್ಧ ಅಸಮಾಧಾನ
ಪಾಲಿಕೆ ಆಯುಕ್ತರಾದವರಿಗೆ ನಗರದ ಅಭಿವೃದ್ಧಿ ಬಗ್ಗೆ ಕಾಳಜಿ ಇರಬೇಕು. ಆದರೆ ಈಗಿನ ಆಯುಕ್ತರಿಗೆ ಇಲ್ಲಿ ಕೆಲಸ ಮಾಡುವುದೇ ಬೇಡವಾಗಿದೆ ಎಂದು ಜಗದೀಶ ಶೆಟ್ಟರ ಅಸಮಾಧಾನ ವ್ಯಕ್ತಪಡಿಸಿದರು. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಅಂದರೆ ಅಧಿಕಾರಿಗಳಿಗೆ ಹಬ್ಬದಂತಾಗಿದೆ. ಏನೇ ಕೇಳಿದರೂ ಚುನಾವಣೆ, ನೀತಿ ಸಂಹಿತೆ ಎಂದು ಸಬೂಬು ನೀಡುತ್ತಾರೆ. ಜನಪರ ಕೆಲಸ ಮಾಡಲು ಯಾವ ಸಂಹಿತೆಯೂ ಅಡ್ಡ ಬರುವುದಿಲ್ಲ ಎಂದರು.

ಪಾಲಿಕೆ ಆಯುಕ್ತರು ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ. ಚುನಾವಣೆ ಕಾರ್ಯಕ್ಕೆ ಬಂದಿದ್ದೇನೆ ಎನ್ನುತ್ತ ಪಾಲಿಕೆ ಕಾರ್ಯದ ಬಗ್ಗೆ ಗಮನ ಹರಿಸುತ್ತಿಲ್ಲ. ಕೆಲಸ ಮಾಡಲು ಇಚ್ಛೆಯಿಲ್ಲದಿದ್ದರೆ ಜಾಗ ಖಾಲಿ ಮಾಡುವುದು ಒಳ್ಳೆಯದು. ಈ ಕುರಿತು ನಗರಾಭಿವೃದ್ಧಿ ಕಾರ್ಯದರ್ಶಿ ಜತೆ ಮಾತನಾಡಿದ್ದು, ಒಳ್ಳೆಯ ಅಧಿಕಾರಿ ನೀಡುವಂತೆ ಕೇಳಲಾಗಿದೆ ಎಂದು ತಿಳಿಸಿದರು. ಕುಡಿಯುವ ನೀರಿನ 26 ಕೋಟಿ ರೂ. ವೆಚ್ಚದ ಯೋಜನೆಗೆ ರಾಜ್ಯ ಸರಕಾರ ಅನುಮತಿ ನೀಡದ ಪರಿಣಾಮ ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಈ ಬಗ್ಗೆ ಸರಕಾರದ ಮೇಲೆ ಒತ್ತಡ ತರುವ ಕೆಲಸ ಮಾಡುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next