Advertisement

ಅಮೃತ ಮಹಲ್‌ ರಾಸುಗಳ ನರಕ ಯಾತನೆ

04:09 PM Oct 29, 2019 | Suhan S |

ಚನ್ನರಾಯಪಟ್ಟಣ/ನುಗ್ಗೇಹಳ್ಳಿ: ತಾಲೂಕಿನ ನುಗ್ಗೇಹಳ್ಳಿ ಹೋಬಳಿಯ ರಾಯಸಂದ್ರ ಗ್ರಾಮದ ಅಮೃತ ಮಹಲ್‌ ತಳಿ ಸಂವರ್ಧನ ಉಪಕೇಂದ್ರದಲ್ಲಿ ಹಳ್ಳಿಕಾರ್‌ ತಳಿ ರಾಸುಗಳು ನಿತ್ಯವೂ ನರಕ ಯಾತನೆ ಅನುಭವಿಸುವಂತಾಗಿದೆ.

Advertisement

ರಾಸುಗಳ ಕೊಟ್ಟಿಗೆ ಕೆಸರು ಗದ್ದೆಯಾಗಿದ್ದು, ರಾಸುಗಳು ರಾತ್ರಿ ಪೂರ್ಣ ನಿಲ್ಲುವಂತಾಗಿದೆ. ರಾಸುಗಳು ರಾತ್ರಿ ವೇಳೆ ಕೆಸರು ಗದ್ದೆಯಂತಿರುವ ಕೊಳಕು ಕೊಟ್ಟಿಗೆಯಲ್ಲಿ ಕರುಹಾಕುತ್ತಿರುವುದರಿಂದ ಅವುಗಳು ಕೆಸರಿನಲ್ಲಿ ಮುಳುಗಿ ಸಾಯುತ್ತಿವೆ. ಕಳೆದ ಒಂದೂವರೆ ವರ್ಷದಿಂದ ರಾಸುಗಳ ಕೊಟ್ಟಿಗೆಯ ಸಗಣಿ ಹೊರಗೆ ತೆಗೆಯದೇ ಇರು ವುದರಿಂದ ಮಳೆಗಾಲದಲ್ಲಿ ಸಗಣಿ ನೀರಿನೊಂದಿಗೆ ಬೆರೆತು ಕೆಸರು ಗದ್ದೆಯಂತಾಗಿದೆ ಇದರಿಂದ ಕೊಟ್ಟಿಯಲ್ಲಿ ರಾಸುಗಳು ಮಲಗಲು ಸಾಧ್ಯವಾಗದೆ ಕೆಸರಿನಲ್ಲಿ ರಾತ್ರಿ ಕೆಳೆಯುತ್ತಿವೆ.

ಬೇರೆಡೆ ಸ್ಥಳಾಂತರ: ಹಳ್ಳಿಕಾರ್‌ ದೇಶಿಯತಳಿ ರಾಸುಗಳು ನಿತ್ಯ ಮರಣ ಹೊಂದುತ್ತಿರುವುದರಿಂದ ಸ್ಥಳಿಯರು ಹಾಗೂ ವಿಶ್ವ ಹಿಂದೂ ಪರಿಷದ್‌ ಕಾರ್ಯಕರ್ತರು ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಪಶುಪಾಲಕನ ಜೊತೆ ವಾಜ್ಯ ಮಾಡಿದ್ದರಿಂದ ಜಿಲ್ಲಾಧಿಕಾರಿಗಳು ಹಾಗೂ ಪಶು ಪಾಲನಾ ಇಲಾಖೆ ಅಧಿಕಾರಿಗಳು ಆಗಮಿಸಿ ಸುಮಾರು 230 ರಾಸುಗಳನ್ನು ಅರಸೀಕೆರೆ ತಾಲೂಕಿನ ಗಂಡಸಿ ಸಮೀಪದ ಬಿದಿರೆ ಕಾವಲು ಉಪಕೇಂದ್ರಕ್ಕೆ ಸ್ಥಳಾಂತರಿಸಿದರೂ ರಾಯಸಂದ್ರದಲ್ಲಿ 10ಕ್ಕೂ ಹೆಚ್ಚು ಅಂಗವಿಕಲ ರಾಸುಗಳು ಇವೆ.

ತಳಿ ಸಂವರ್ಧನ ಕೇಂದ್ರದ ನಿರ್ಲಕ್ಷ್ಯ: ಮೈಸೂರು ಮಹರಾಜರ ಕಾಲದಲ್ಲಿ ಕುಸ್ತಿಪಟುಗಳು, ಸೈನಿಕರಿಗೆ ಪೌಷ್ಟಿಕಾಂಶಯುಕ್ತ ಹಾಲು, ಮೊಸರು, ಬೆಣ್ಣೆ, ತುಪ್ಪ ನೀಡುವ ಸಲುವಾಗಿ ಹಳ್ಳಿಕಾರ್‌ ತಳಿ ರಾಸುಗಳ ಸಂವರ್ಧನೆಗೆ ಒತ್ತು ನೀಡುವ ಉದ್ದೇಶದಿಂದ ಚನ್ನರಾಯಪಟ್ಟಣ ತಾಲೂಕು ಚಿಕ್ಕೋನಹಳ್ಳಿ ಅಮರಗಿರಿ ರಂಗನಾಥ ಸ್ವಾಮಿ ಬೆಟ್ಟದ ಸುತ್ತ ಸುಮಾರು 1,700 ಎಕರೆ ಪ್ರದೇಶ ಮಂಜೂರು ಮಾಡಿ ಅಮೃತ್‌ ಮಹಲ್‌ ತಳಿ ಸಂವರ್ಧನ ಉಪಕೇಂದ್ರ ಸ್ಥಾಪಿಸಿದ್ದರು. ನಂತರ ರಾಜ್ಯ ಸರ್ಕಾರದ ಅಧೀನದಲ್ಲಿರುವ ರಾಸುಗಳ ತಳಿ ಅಭಿವೃದ್ಧಿ ಕೇಂದ್ರದಲ್ಲಿ ಪ್ರತಿ ವರ್ಷ ಜನವರಿ ತಿಂಗಳಿನಲ್ಲಿ ಹೋರಿಗಳು ಹಾಗೂ ಕೊಟ್ಟಿಗೆ ಗೊಬ್ಬರವನ್ನು ಹರಾಜಿನಿಂದ ಲಕ್ಷಾಂತ ರೂ. ಸರ್ಕಾರದ ಬೊಕ್ಕಸಕ್ಕೆ ಸೇರುತ್ತಿದ್ದರೂ ಅಭಿವೃದ್ಧಿ ಕಾರ್ಯ ನಡೆದಿಲ್ಲ.

ಜನಪ್ರತಿನಿಧಿಗಳಿಗೆ ಮಾಹಿತಿಯಿಲ್ಲ: ತಾಲೂಕಿನ ನುಗ್ಗೇಹಳ್ಳಿ ಹೋಬಳಿಯ ರಾಯಸಂದ್ರ ಗ್ರಾಮದ ಅಮೃತ್‌ ಮಹಲ್‌ ತಳಿ ಸಂವರ್ಧನ ಉಪಕೇಂದ್ರ ಇರುವುದು ಮಾತ್ರ ತಾಲೂಕಿನ ಜನಪ್ರತಿನಿಧಿಗಳಿಗೆ ಗೊತ್ತಿದೆ. ಅಮೃತ ಮಹಲ್‌ ತಳಿ ಸಂವರ್ಧನ ಕೇಂದ್ರದ ಕಚೇರಿ ಜಿಲ್ಲೆಯಲ್ಲಿ ಇಲ್ಲದೇ ಇಲ್ಲಿ ಎಷ್ಟು ರಾಸುಗಳಿವೆ ? ಇದರ ನಿರ್ವಹಣೆ ಮಾಡುತ್ತಿರುವ ಅಧಿಕಾರಿ ಯಾರು? ನಿರ್ವಹಣೆಗಾಗಿ ಎಷ್ಟು ಹಣ ಬಿಡುಗಡೆ ಆಗುತ್ತದೆ? ಎಷ್ಟು ಮಂದಿ ಕೆಲಸ ಮಾಡುತ್ತಿದ್ದಾರೆ ಎಂಬ ಕಿಂಚಿತ್ತು ಮಾಹಿತಿ ಜಿಲ್ಲಾ ಮತ್ತು ತಾಲೂಕು ಆಡಳಿತಕ್ಕಿಲ್ಲ.

Advertisement

ಕಾಯಂ ಸಿಬ್ಬಂದಿ ಅಗತ್ಯ: 50 ವರ್ಷದಿಂದ ಇಲ್ಲಿ ಕಾಯಂ ನೌಕರರಿಲ್ಲ ದಿನಗೂಲಿ ಕಾರ್ಮಿಕರು ಕೆಲಸ ಮಾಡುತ್ತಾರೆ. ಇವರಿಗೆ ಆರು ತಿಂಗಳಿಗೆ ಒಮ್ಮೆ ವೇತನ ನೀಡುವುದರಿಂದ ಒಮ್ಮೆ ವೇತನ ಪಡೆದ ಮೇಲೆ ಇಲ್ಲಿಗೆ ಕೆಲಸಕ್ಕೆ ಬರುವುದಿಲ್ಲ. ಈಗ ಪ್ರಸುತ ಏಳು ಮಂದಿ ಸೇವೆ ಸಲ್ಲಿಸುತ್ತಿದ್ದಾರೆ ಇದರಲ್ಲಿ ನಾಲ್ಕು ಮಂದಿ ರಾಸುಗಳನ್ನು ಮೇಯಿಸುವ ಕೆಲಸ ಮಾಡಿದರೆ, ಮೂರು ಮಂದಿ ಕಾವಲುಗಾರರಿದ್ದಾರೆ ಇವನ್ನು ನೋಡಿಕೊಳ್ಳಲು ಓರ್ವ ಕಾಯಂ ಸಿಬ್ಬಂದಿ ಇದ್ದರೂ ವರ್ಷದಿಂದ ಕೇಂದ್ರಕ್ಕೆ ಭೇಟಿ ನೀಡದೆ ಪಶು ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ಸರ್ಕಾರಿ ವೇತನ ಪಡೆಯುತ್ತಿದ್ದಾರೆ.

ಅನುದಾನವಿದ್ದರೂ ಕಾಮಗಾರಿ ಮಾಡಿಲ್ಲ: ರಾಸುಗಳಿಗೆ ಕೊಟ್ಟಿಗೆ ಹಾಗೂ ಇತರ ಮೂಲ ಸೌಲಭ್ಯ ನೀಡಲು ರಾಜ್ಯದ ಬಿಜೆಪಿ ಸರ್ಕಾರ ಈಗಾಗಲೇ ಸುಮಾರು 50 ಲಕ್ಷ ರೂ. ಹಣ ಬಿಡುಗಡೆ ಮಾಡಿದ್ದು ನಿರ್ಮಿತಿ ಕಾಮಗಾರಿ ಮಾಡಿಸುವಂತೆ ಕಳೆದ 2-3 ತಿಂಗಳ ಹಿಂದೆ ಸೂಚಿಸಿದರೂ ಇನ್ನೂ ಕಾಮಗಾರಿ ಆರಂಭವಾಗಿಲ್ಲ. ರಾಸುಗಳನ್ನು 15 ಕಿ.ಮೀ.ಓಡಿಸಿರು: ಅಮೃತ್‌ ಮಹಲ್‌ ತಳಿ ಸಂವರ್ಧನ ಉಪಕೇಂದ್ರಕ್ಕೆ ಜಿಲ್ಲಾಧಿಕಾರಿ ಹಾಗೂ ಜನ ಪ್ರತಿನಿಧಿಗಳು ಆಗಮಿಸುತ್ತಾರೆ ಎಂಬ ವಿಷಯ ತಿಳಿದ ತಳಿ ಸಂವರ್ಧನ ಕೇಂದ್ರದ ಸಿಬ್ಬಂದಿ ರಾಸುಗಳನ್ನು ಬೆಳಗ್ಗೆ 9 ಗಂಟೆಗೆ ಬೇರೆಡೆಗೆ ಸ್ಥಳಾಂತ ಮಾಡಲು ಸುಮಾರು 15 ರಿಂದ 20 ಕಿ.ಮೀ. ವರೆಗೆ ರಾಸುಗಳು ಹಾಗೂ ಸಣ್ಣ ಕರುಗಳನ್ನು ಓಡಿಸಿಕೊಂಡು ಹೋಗಿದ್ದಾರೆಂದು ಗ್ರಾಮಸ್ಥರು ಆಪಾದಿಸಿದ್ದಾರೆ.

ಸಾಂಕ್ರಾಮಿಕ ರೋಗ ಭೀತಿ: ನುಗ್ಗೇಹಳ್ಳಿ ಹೋಬಳಿಯ ರಾಯಸಂದ್ರ ಗ್ರಾಮದ ಅಮೃತ್‌ ಮಹಲ್‌ ತಳಿ ಸಂವರ್ಧನ ಉಪಕೇಂದ್ರದಲ್ಲಿ ಮೃತ ಪಟ್ಟಿರುವ ರಾಸುಗಳನ್ನು ಮಣ್ಣಿನಲ್ಲಿ ಹೂಳದೇ ಬಯಲು ಪ್ರದೇಶದಲ್ಲಿ ಕೊಟ್ಟಿಗೆ ಸಮೀಪ ಎಸೆಯಲಾಗಿದೆ. ಇದರಿಂದ ಮೃತರಾಸು ಕೊಳೆದು ಬ್ಯಾಕ್ಟೀರಿಯಗಳು ಹೆಚ್ಚಿದ್ದು ಆರೋಗ್ಯ ರಾಸುಗಳಿಗೆ ಕಾಯಿಲೆ ಹರಡುತ್ತಿವೆ.

 

-ಶಾಮಸುಂದರ್‌ ಕೆ.ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next