Advertisement

ವರವಾಗುವುದೇ ಅಮೃತ ಸರೋವರ ಯೋಜನೆ?75 ಕೆರೆಗಳಿಗೆ ಅಭಿವೃದ್ಧಿ ಭಾಗ್ಯ

06:41 PM Jun 15, 2022 | Team Udayavani |

ಚಿಕ್ಕಬಳ್ಳಾಪುರ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಕೆರೆಗಳ ಜಿಲ್ಲೆಯಾಗಿದ್ದು, ಕೆರೆಗಳ ಅಕ್ರಮ ಒತ್ತುವರಿ ದೂರಗಳ ಮಧ್ಯೆಯೂ ಉಭಯ ಜಿಲ್ಲೆಗಳ ಜಿಲ್ಲಾಡಳಿತವು ಜಲಮೂಲಗಳಾದ ಕೆರೆ ಕುಂಟೆ ಮತ್ತು ಕಲ್ಯಾಣಿಗಳನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ಕೈಗೊಂಡಿವೆ.

Advertisement

ಪಂಚಾಯತ್‌ ರಾಜ್‌ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಮಿಷನ್‌ ಅಮೃತ್‌ ಸರೋವರ ಕಾರ್ಯಕ್ರಮದ ಘೋಷಣೆ ಮಾಡಿದರು. ಅದರಂತೆಯೇ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು 2022-23ನೇ ಸಾಲಿನಲ್ಲಿ ರಾಜ್ಯದ ಬಜೆಟ್‌ ನಲ್ಲಿ ಸಮಗ್ರ ಕೆರೆ ಅಭಿವೃದ್ಧಿ ಘೋಷಣೆ ಮಾಡಿದರು.

ಅದರ ಅನ್ವಯ ರಾಜ್ಯದಲ್ಲಿ 33 ಸಾವಿರ ಗ್ರಾಪಂ ಕೆರೆಗಳನ್ನು ಸರ್ವೆ ಮಾಡಿಸಿ ಪ್ರಸ್ತುತ ಪ್ರಾರಂಭಿಕ ಹಂತವಾಗಿ ಸಾವಿರ ಕೆರೆಗಳನ್ನು ಗುರುತಿಸಿ ಸಮಗ್ರವಾಗಿ ಅಭಿವೃದ್ಧಿಗೊಳಿಸಲು ಸರ್ಕಾರ ಉದ್ದೇಶಿಸಿದೆ. ಆಜಾದಿ ಕಾ ಅಮೃತ್‌ ಮಹೋತ್ಸವದ ಅಂಗವಾಗಿ ಮಿಷನ್‌ ಅಮೃತ್‌ ಸರೋವರ ಕಾರ್ಯಕ್ರಮದಡಿ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 75 ಹೊಸ ಜಲಮೂಲಗಳನ್ನು ನಿರ್ಮಿಸುವಂತೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದ್ದು ಅದರಂತೆಯೇ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್‌ಕೆ ಅತೀಖ್‌ ಅವರು ಈ ಸಂಬಂಧ ಆದೇಶವನ್ನು ಹೊರಡಿಸಿ ಪ್ರತಿ ಜಿಲ್ಲೆಯಲ್ಲಿ 75 ಕೆರೆಗಳನ್ನು
ಅಭಿವೃದ್ಧಿಗೊಳಿಸಲು ನಿರ್ದೇಶನ ನೀಡಿದ್ದಾರೆ.

ಕೆರೆಗಳೇ ಆಧಾರ: ನೀರಾವರಿಯು ಕೆರೆಗಳ ಪ್ರಮುಖ ಉಪಯೋಗವಾದರೆ ಕೆರೆಗಳಿಂದ ಮೀನುಗಾರಿಕೆ ಧನ ಕರುಗಳಿಗೆ ಕುಡಿಯುವ ನೀರು ಜನಸಾಮಾನ್ಯರಿಗೆ ಕುಡಿವ ಹಾಗೂ ದಿನಬಳಕೆಯ ನೀರು, ಪರಿಸರ ಬದಲಾವಣೆ ಹಾಗೂ ಪಶುಪಕ್ಷಿಗಳಿಗೆ ಕೆರೆಯೆ ಆಧಾರವಾಗಿದೆ. ಅಲ್ಲದೆ ಕೆರೆಗಳಿಂದ ಭೂ ಅಂತರ್ಜಲದ ಪ್ರಮಾಣ ಹೆಚ್ಚಾಗುತ್ತದೆ ಅದಕ್ಕಾಗಿಯೇ ಈ ಭಾಗದ ಜನರು ಕೆರೆಗಳನ್ನು ನಿರ್ಮಿಸಿ ಸಂರಕ್ಷಣೆ ಮಾಡಿದ ಪರಿಣಾಮ ಪರಿಸರ ಸಂರಕ್ಷಣೆಯೂ ಆಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಬರಪೀಡಿತ ಪ್ರದೇಶ ಅಂತರ್ಜಲಮಟ್ಟ ಪಾತಾಳಕ್ಕೆ ಕುಸಿದಿದೆ. ಕಳೆದ ಸಾಲಿನಲ್ಲಿ ಸುರಿದ ವ್ಯಾಪಕ ಮಳೆಯಿಂದಾಗಿ ಅನೇಕ ಕೆರೆ ಕುಂಟೆಗಳಿಗೆ ನೀರು ಹರಿದು ಬಂದಿದೆ ಆದರೂ ಸರ್ಕಾರ ಅಮೃತ್‌ ಸರೋವರ ಯೋಜನೆಯ ಮೂಲಕ ಕೆರೆಗಳನ್ನು ಅಭಿವೃದ್ಧಿಗೊಳಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು ಇದರಿಂದ ಜಿಲ್ಲೆಯಲ್ಲಿ ಕೆರೆಗಳ ಗತವೈಭವ ಮರುಕಳಿಸಬಹುದೇ ಎಂಬ ನಿರೀಕ್ಷೆ ಸ್ಥಳೀಯರಲ್ಲಿ ಹೆಚ್ಚಿದೆ.

Advertisement

ಅಮೃತ ಸರೋವರ ಯೋಜನೆಯ ಮೂಲಕ ಅಂತರ್ಜಲ ಮೂಲಗಳನ್ನು ಅಭಿವೃದ್ಧಿಗೊಳಿಸುವುದು, ಮುಂಬರುವ ದಿನಗಳಲ್ಲಿ ನೀರಿಗಾಗಿ ನಡೆಸುವ ಪೈಪೋಟಿಯನ್ನು ಸಮಗ್ರವಾಗಿ ನಿರ್ವಹಿಸಿ ಗ್ರಾಮೀಣ ಜಲಭದ್ರತೆ, ನೀರಿನ ಬವಣೆಯನ್ನು ಪರಿಹರಿಸುವುದೇ ಆಗಿದೆ.

ಏನಿದು ಯೋಜನೆ?: ಗ್ರಾಪಂನಲ್ಲಿ ನಡೆಯುವ ಗ್ರಾಮ ಸಭೆಯಲ್ಲಿ ಕೆರೆಗಳ ಆಯ್ಕೆ, ಅಭಿವೃದ್ಧಿ ವಿಷಯವನ್ನು ಮಂಡನೆ ಮಾಡಿ ಅನುಮೋದನೆ ಪಡೆದುಕೊಂಡು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ತಾಪಂ ಇಒ ಮೂಲಕ ಜಿಪಂ ಸಿಇಒಗೆ ವರದಿ ಸಲ್ಲಿಸುವುದು. ಜಿಪಂ ಇಒ ಸ್ವೀಕೃತವಾದ ಕ್ರಿಯಾ ಯೋಜನೆಗಳನ್ನು ಪರಿಶೀಲಿಸಿ ಮುಂದಿನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದು ಈ ಯೋಜನೆ ಪ್ರಕ್ರಿಯೆಯಾಗಿದೆ. ಜೊತೆಗೆ ಯೋಜನೆ ಅನುಷ್ಠಾನಗೊಳಿಸಲು ಆರ್ಥಿಕ ದೇಣಿಗೆ, ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನ, ಸಿಎಸ್‌ ಆರ್‌ ಅನುದಾನವನ್ನು ಒಗ್ಗೂಡಿಸಲು ಆದ್ಯತೆ ನೀಡಲಾಗುವುದು.

ಈ ಯೋಜನೆಯಡಿ ಕಂದಾಯ ಇಲಾಖೆಯಿಂದ ಕೆರೆಗಳ ಸರ್ವೆ, ನರೇಗಾ ಯೋಜನೆಯಡಿ ಕೆರೆಯ ಹೂಳನ್ನು ತೆಗೆಯುವುದು, ಗ್ರಾಪಂಯ ಸ್ವಂತ ಸಂಪನ್ಮೂಲ, ಕೇಂದ್ರ ರಾಜ್ಯ ಜಿಪಂ ಹಾಗೂ ತಾಪಂಗಳಿಗೆ ವಿವಿಧ ಯೋಜನೆಗಳಲ್ಲಿ ಲಭ್ಯವಿರುವ ಅನುದಾನವನ್ನು ಮಾರ್ಗಸೂಚಿಗಳನ್ವಯ ಒಗ್ಗೂಡಿಸುವಿಕೆಯಲ್ಲಿ ಅಮೃತ ಸರೋವರ ನಿರ್ಮಾಣ ಮಾಡುವುದು, ಕೆರೆಗೆ ನೀರು ಹರಿದು ಬರುವ ಕಾಲುವೆಗಳ ಪುನಶ್ಚೇತನ, ಬೆಳೆದಿರುವ ಗಿಡಗಂಟೆಗಳ ತೆರವು, ಕೆರೆ ಏರಿ ದುರಸ್ತಿ, ಕೆರೆಯ ಅಂಚಿನ ಖಾಲಿ ಪ್ರದೇಶದಲ್ಲಿ ಸಸಿ ಬೆಳೆಸುವುದು. ಕೆರೆ ಸೌಂದರ್ಯಿಕರಣ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ.

ಕೆರೆಗಳನ್ನು ಆಯ್ಕೆ ಮಾಡಲು ಸಮಿತಿ ರಚನೆ
ಅಮೃತ್‌ ಸರೋವರ ಯೋಜನೆಯಡಿ ಕೆರೆಗಳನ್ನು ಆಯ್ಕೆ ಮಾಡಲು ಸಮಿತಿಯನ್ನು ರಚಿಸಲಾಗಿದೆ. ಜಿಪಂ ಸಿಇಒ ಈ ಸಮಿತಿಯ ಅಧ್ಯಕ್ಷರಾಗಲಿದ್ದಾರೆ. ಅಪರ ಜಿಲ್ಲಾಧಿಕಾರಿ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಹಕ ಅಭಿಯಂತರರು, ಸಣ್ಣ ನೀರಾವರಿ ಇಲಾಖೆಯ ಅಭಿಯಂತರರು, ಉಪ ಕಾರ್ಯದರ್ಶಿ (ಅಭಿವೃದ್ಧಿ) ಉಪನಿರ್ದೇಶಕರು (ಭೂ ದಾಖಲೆಗಳು), ತಾಪಂ ಇಒ ಸದದಸ್ಯರಾಗಲಿದ್ದು ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಇಲಾಖೆಯ ಕಾರ್ಯಪಾಲಕ ಅಭಿಯಂತರರು ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಅವಶ್ಯಕತೆ ಇದ್ದಲ್ಲಿ ಕೆರೆಯ ಜಿಲ್ಲಾ ಕೆರೆ ಬಳಕೆದಾರರ ಸಂಘದ ಒಬ್ಬ ಪ್ರತಿನಿಧಿಯು ಆಯ್ಕೆ ಸಮಿತಿಯ ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರಬಹುದು, ಜಿಪಂ ಸಿಇಒ ನೋಡೆಲ್‌ ಅಧಿಕಾರಿಗಳಾಗಿರುತ್ತಾರೆ. ಜಿಲ್ಲಾ ಮಟ್ಟದಲ್ಲಿ ಈ ಕಾರ್ಯಕ್ರಮವನ್ನು ಉಸ್ತುವಾರಿ ವಹಿಸಿಕೊಂಡಿರುತ್ತಾರೆ.

ಯಾವ ತಾಲೂಕಿನಲ್ಲಿ ಎಷ್ಟು ಕೆರೆಗಳ ಆಯ್ಕೆ
ಬಾಗೇಪಲ್ಲಿ 14, ಚಿಕ್ಕಬಳ್ಳಾಪುರ 14, ಚಿಂತಾಮಣಿ 14, ಗೌರಿಬಿದನೂರು 14, ಶಿಡ್ಲಘಟ್ಟ 14,ಗುಡಿಬಂಡೆ 5 ಕೆರೆಗಳನ್ನು ಆಯ್ಕೆ ಮಾಡಲಾಗಿದೆ ಹೆಚ್ಚುವರಿಯಾಗಿ 20 ಕೆರೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು ಮುಂದಿನ ದಿನಗಳಲ್ಲಿ ಅದಕ್ಕೂ ನೀರು ಬರಲಿದೆ.

● ಎಂ.ಎ.ತಮೀಮ್‌ ಪಾಷ

 

Advertisement

Udayavani is now on Telegram. Click here to join our channel and stay updated with the latest news.

Next