ನವದೆಹಲಿ: ಮಹಾರಾಷ್ಟ್ರದ ಅಮರಾವತಿಯಲ್ಲಿ ಇತ್ತೀಚೆಗೆ ಹತ್ಯೆಗೀಡಾದ ಉಮೇಶ್ ಕೊಲ್ಹೆ ಅವರನ್ನು ಒಂದು ದಿನ ಮೊದಲೇ ಕೊಲೆ ಮಾಡಲು ಹಂತಕರು ಯತ್ನಿಸಿದ್ದರು ಎಂದು “ಎನ್‌ಡಿಟಿವಿ’ ವರದಿ ಮಾಡಿದೆ.
ಉಮೇಶ್ ತಮ್ಮ ಅಂಗಡಿಯಿಂದ 10 ಗಂಟೆ ಹೊತ್ತಿಗೆ ಮನೆಗೆ ಹೊರಡುತ್ತಾರೆ ಎಂದು ಅರಿತಿದ್ದ ಹಂತಕರು, ಜೂ.20ರಂದೇ 10 ಗಂಟೆ ಹೊತ್ತಿಗೆ ಅಂಗಡಿ ಬಳಿ ಬಂದಿದ್ದರು. ಆದರೆ ಉಮೇಶ್ ಅಂದು ಬೇಗ ಮನೆಗೆ ಹೋಗಿದ್ದರಿಂದಾಗಿ ಹಂತ ಕರ ಯೋಜನೆ ವಿಫಲವಾಗಿತ್ತು. ಮಾರನೇ ದಿನ 10.10ಕ್ಕೇ ಅಂಗಡಿ ಬಳಿ ಬಂದ ಹಂತಕರು ಕೊಲೆ ಗಾಗಿ ಹೊಂಚು ಹಾಕಿ ಕುಳಿತಿದ್ದು. 10.27ಕ್ಕೆ ಅಂಗಡಿ ಯಿಂದ ಹೊರಬಂದ ಉಮೇಶ್ ಮೇಲೆ ದಾಳಿ ನಡೆಸಿದ್ದರು.
ಉಮೇಶ್ ಕುತ್ತಿಗೆಗೆ 5 ಇಂಚು ಅಗಲ, 7 ಇಂಚು ಉದ್ದ ಮತ್ತು 5 ಇಂಚು ಆಳಕ್ಕೆ ಚಾಕು ವಿನಿಂದ ಚುಚ್ಚಿರುವುದಾಗಿ ಮರಣೋತ್ತರ ಪರೀಕ್ಷೆ ವರದಿಯಿಂದ ತಿಳಿದುಬಂದಿದೆ.
ಎನ್‌ಐಎ-ಶಾ ಚರ್ಚೆ: ಉದಯ್‌ಪುರ ಮತ್ತು ಅಮರಾವತಿಯಲ್ಲಿ ಹಿಂದೂಗಳ ಕೊಲೆ ವಿಚಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ಭಯೋತ್ಪಾದನಾ ನಿಗ್ರಹ ಸಂಸ್ಥೆಯ ಮುಖ್ಯಸ್ಥರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಉಮೇಶ್ ಹತ್ಯೆ ಪ್ರಕರಣದ ಏಳು ಬಂಧಿತ ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳವು ತನ್ನ ವಶಕ್ಕೆ ತೆಗೆದುಕೊಂಡಿದೆ. ಅವರನ್ನು ಜು.8ರಂದು ಮುಂಬೈನ ಎನ್‌ಐಎ ನ್ಯಾಯಾಲಯದೆದುರು ಹಾಜರುಪಡಿಸುವ ಸಾಧ್ಯತೆಯಿದೆ.
ಇದೇ ವೇಳೆ, ಉದಯ್‌ಪುರದಲ್ಲಿ ಟೈಲರ್ ಕನ್ಹಯ್ಯ ಅವರನ್ನು ಹತ್ಯೆ ಮಾಡಿದ್ದ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದ ಐವರನ್ನು ರಾಜಸ್ಥಾನದಲ್ಲಿ ಸೋಮವಾರ ಬಂಧಿಸಲಾಗಿದೆ. ಇತ್ತೀಚೆಗೆ ನಡೆದ ಹತ್ಯೆಗಳಲ್ಲಿ ಬಲಿಯಾದ ಹಿಂದೂಗಳಿಗೆ ಸಂತಾಪ ಸೂಚಿಸುವ ನಿಟ್ಟಿನಲ್ಲಿ ಆಸ್ಟ್ರೇಲಿಯಾದಲ್ಲಿರುವ ಹಿಂದೂಗಳು ಭಾನುವಾರ ಪ್ರತಿಭಟನಾ ರ್ಯಾಲಿ ನಡೆಸಿದ್ದಾರೆ.