Advertisement

ತಂತ್ರಜ್ಞಾನ ಸಾಮಾನ್ಯೀಕರಣಕ್ಕೆ “ಆ್ಯಂಪ್‌ವರ್ಕ್‌’ದೀಕ್ಷೆ !

06:40 AM Jul 01, 2019 | Lakshmi GovindaRaj |

ಹುಬ್ಬಳ್ಳಿ: ತಂತ್ರಜ್ಞಾನ ಎನ್ನುವುದು ಉದ್ಯಮದಲ್ಲೂ ಪರಿಣಾಮಕಾರಿ ಬಳಕೆಯಾಗಬೇಕು; ಎಲ್ಲ ವರ್ಗದವರಿಗೂ ಸುಲಭವಾಗಿ ಹಾಗೂ ಕೈಗೆಟುಕುವ ದರದಲ್ಲಿ ಸಿಗಬೇಕೆಂಬ ಉದ್ದೇಶದೊಂದಿಗೆ ಅದರ ಸಾಮಾನ್ಯೀಕರಣ ದೀಕ್ಷೆಗೆ “ಆ್ಯಂಪ್‌ವರ್ಕ್‌’ ಮುಂದಾಗಿದೆ.

Advertisement

ಪ್ರಧಾನಿ ಮೋದಿ 2015, ಜು.1ರಂದು “ಡಿಜಿಟಲ್‌ ಇಂಡಿಯಾ’ ಘೋಷಣೆ ಮಾಡಿದ ಬಳಿಕ ಅದರಿಂದ ಪ್ರೇರಿತರಾಗಿ ಅದೇ ವರ್ಷ ಆಸ್ವಿತ್ತಕ್ಕೆ ಬಂದಿದ್ದೇ “ಆ್ಯಂಪ್‌ವರ್ಕ್‌’ ನವೋದ್ಯಮಿ ಕಂಪನಿ. ಯುವ ಸಾಧಕ ಅನಿಲ್‌ ಪ್ರಭು ನೇತೃತ್ವದ ಉತ್ಸಾಹಿ ತಂಡ, ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ತರಬೇತಿ ಹಾಗೂ ನವೋದ್ಯಮಿಗಳಿಗೆ ತಂತ್ರಜ್ಞಾನಾಧಾರಿತ ಮಾರ್ಗದರ್ಶನ ನೀಡುತ್ತಾ ಸಾರ್ಥಕ ಸೇವೆಗಾಗಿ ಇಂಡಿಯಾ ಇಂಟರ್‌ನ್ಯಾಶನಲ್‌ ಬಿಸಿನೆಸ್‌ ಸಮ್ಮೇಳನದಲ್ಲಿ “ಉದಯೋನ್ಮುಖ ಕಂಪನಿ’ ಪ್ರಶಸ್ತಿಗೂ ಭಾಜನವಾಗಿದೆ.

ಅನಿಲ್‌ ಪ್ರಭು ಅವರು ದಕ್ಷಿಣ ಕನ್ನಡದ ಉಜಿರೆಯ ಎಸ್‌ಡಿಎಂ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದು, ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಚಿಂತನೆ ಮೂಡಿಸಲು ಮುಂದಾಗಿದ್ದರು. ಆದರೆ ಸ್ವತಃ ಉದ್ಯಮಿಯಾಗದೆ, ಆ ಬಗ್ಗೆ ಬೋಧನೆ ಎಷ್ಟು ಸರಿ ಎಂಬ ಆತ್ಮಾವಲೋಕನದ ಪ್ರಶ್ನೆಗೆ ಉತ್ತರ ರೂಪದಲ್ಲಿ ಮೂಡಿದ್ದೇ “ಆ್ಯಂಪ್‌ವರ್ಕ್‌’. ಉಡುಪಿಯಲ್ಲಿ ಮೊಳಕೆಯೊಡೆದ ಈ ಕಂಪನಿ ಇದೀಗ ಹುಬ್ಬಳ್ಳಿ ಹಾಗೂ ಬೆಂಗಳೂರಿನಲ್ಲಿ ಕಚೇರಿ ಹೊಂದಿದೆ. ದೇಶ-ವಿದೇಶಗಳಿಗೂ ಸೇವೆಯನ್ನು ವಿಸ್ತರಿಸಿ ಮುನ್ನಡೆಯುತ್ತಿದೆ.

100ಕ್ಕೂ ಹೆಚ್ಚು ಗ್ರಾಹಕರು: “ಆ್ಯಂಪ್‌ವರ್ಕ್‌’ ಸಾಫ್ಟ್ವೇರ್‌ ವಿನ್ಯಾಸ ಮತ್ತು ಅಭಿವೃದ್ಧಿ, ವೆಬ್‌ ಅಪ್ಲಿಕೇಶನ್‌ ವಿನ್ಯಾಸ ಮತ್ತು ಅಭಿವೃದ್ಧಿ, ಮೊಬೈಲ್‌ ಅಪ್ಲಿಕೇಶನ್‌, ಇ-ಕಾಮರ್ಸ್‌ ಸಲ್ಯೂಶನ್ಸ್‌, ಡಿಜಿಟಲ್‌ ಮಾರ್ಕೆಟಿಂಗ್‌, ಸರ್ವರ್‌ ನಿರ್ವಹಣೆ, ಸಂಶೋಧನೆ ಮತ್ತು ಅಭಿವೃದ್ದಿ ಹಾಗೂ ತರಬೇತಿ ಕಾರ್ಯದಲ್ಲಿ ತೊಡಗಿದೆ. ಶಿಕ್ಷಣ, ಸಾರಿಗೆ, ಮಾಧ್ಯಮ, ಆಸ್ಪತ್ರೆ, ಉತ್ಪಾದನೆ ಮತ್ತು ವಿತರಣೆ ಉದ್ಯಮ, ಸರ್ಕಾರಿ ವಲಯ, ಆಡಳಿತಾತ್ಮಕ ಮತ್ತು ನಿರ್ವಹಣೆ ಬಿಜಿನೆಸ್‌ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವಿಶ್ವದಾದ್ಯಂತ ಸುಮಾರು 100ಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದೆ.

ಮಹಾನಗರವಷ್ಟೇ ಅಲ್ಲದೇ ನಗರ, ಪಟ್ಟಣ, ಅರೆ ಪಟ್ಟಣ ಹಾಗೂ ಗ್ರಾಮೀಣ ಭಾಗದ ಕಿರಾಣಿ ಅಂಗಡಿಗಳು, ಬೇಕರಿ ಇನ್ನಿತರ ಮಾರಾಟ ಮಳಿಗೆಗಳವರೂ ತಂತ್ರಜ್ಞಾನವನ್ನು ಸುಲಭವಾಗಿ ಬಳಸುವಂತಾಗಬೇಕೆಂಬ ನಿಟ್ಟಿನಲ್ಲಿ ಸುಲಭ ರೀತಿಯ ಪರಿಹಾರಗಳು, ಉತ್ಪನ್ನಗಳನ್ನು “ಆ್ಯಂಪ್‌ವರ್ಕ್‌’ ನೀಡುತ್ತಿದೆ. ಅಷ್ಟೇ ಅಲ್ಲ, ಅದೆಷ್ಟೋ ಜನರಿಗೆ ಉಚಿತವಾಗಿ ತಂತ್ರಜ್ಞಾನ ಸೇವೆ ನೀಡುತ್ತಾ ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.

Advertisement

ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು, ಧಾರವಾಡ, ಗದಗ ಜಿಲ್ಲೆಗಳ ವಿವಿಧ ಕಾಲೇಜುಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ “ಆ್ಯಂಪ್‌ವರ್ಕ್‌’ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಕುರಿತು 1ರಿಂದ 6 ತಿಂಗಳವರೆಗೆ ತರಬೇತಿ ನೀಡಿದೆ. ಸುಮಾರು 90ಕ್ಕೂ ಹೆಚ್ಚು ನವೋದ್ಯಮಿಗಳು, ಉದ್ಯಮಿಗಳು ಹಾಗೂ 50ಕ್ಕೂ ಹೆಚ್ಚು ಸ್ಥಳೀಯರಿಗೂ ತರಬೇತಿ ನೀಡುವ ಮೂಲಕ ತಂತ್ರಜ್ಞಾನ ಸಾಕ್ಷರತೆಯ ಸಾರ್ಥಕ ಸೇವೆಯಲ್ಲಿ ತೊಡಗಿದೆ.

ಉತ್ತರ ಕನ್ನಡ ಜಿಲ್ಲೆಯ ಸೋದೆ ಮಠದಲ್ಲಿ ಭಕ್ತರಿಗೆ ಆನ್‌ಲೈನ್‌ ಮೂಲಕ ವಿವಿಧ ಸೇವೆಗಳ ಮಾಹಿತಿ, ಬುಕಿಂಗ್‌, ಕಾಣಿಕೆ ಸಲ್ಲಿಕೆ, ದಾಖಲೆಗಳ ಸುಲಭ ದಾಖಲೀಕರಣ, ಸಂಗ್ರಹ ಹಾಗೂ ಲೆಕ್ಕಪತ್ರ ನಿರ್ವಹಣೆಗೂ ತಂತ್ರಜ್ಞಾನ ಕಲ್ಪಿಸಿದೆ. ಏಷ್ಯಾ ಫೌಂಡೇಶನ್‌ಗೂ ರೆಕಾರ್ಡ್‌ ಸಿಸ್ಟಂ ವಿಚಾರದಲ್ಲಿ ಪ್ರೊಜೆಕ್ಟ್ ಮಾಡಿಕೊಟ್ಟಿದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಂಪನಿ ಗುರುತಿಸಿಕೊಳ್ಳುವಂತೆ ಮಾಡಿದೆ. ಅದೇ ರೀತಿ ಉಡುಪಿಯಲ್ಲಿ ಅನಿವಾಸಿ ಭಾರತೀಯ ಉದ್ಯಮಿ ಡಾ|ಬಿ.ಆರ್‌.ಶೆಟ್ಟಿಯವರು ನಿರ್ಮಿಸಿರುವ ತಾಯಿ ಮತ್ತು ಮಗು ಆಸ್ಪತ್ರೆಗೂ ತಂತ್ರಜ್ಞಾನ ಸೇವೆ ನೀಡಿದೆ.

ಹೀಗೆ ಹತ್ತು ಹಲವು ಕ್ಷೇತ್ರಗಳಿಗೆ ತಂತ್ರಜ್ಞಾನ ಪರಿಹಾರ, ಸೌಲಭ್ಯದ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದೆ. ತಂತ್ರಜ್ಞಾನ ಕ್ರಾಂತಿಯ ಈ ಸೇವೆಯಲ್ಲಿ “ಆ್ಯಂಪ್‌ವರ್ಕ್‌’ ಸಿಇಒ ಅನಿಲ್‌ ಪ್ರಭು ಅವರಿಗೆ ಮಂಜುನಾಥ ಪ್ರಭು ಮಾರ್ಗದರ್ಶನದ ಜತೆಗೆ ವಿಜಯ ತಲ್ಲೊಳ್ಳಿ, ಅಸ್ಮಾ ಖಾಜಿ, ರಷ್ಮಿ, ಹೀನಾ ಕೌಸರ್‌, ದೀಪಾ ಸಂಜಯ ಇನ್ನಿತರರು ಹೆಗಲು ಕೊಟ್ಟಿದ್ದಾರೆ.

ಡಿಜಿಟಲ್‌ ಇಂಡಿಯಾ’ ಘೋಷಿಸಿದ್ದ ಪ್ರಧಾನಿ ಮೋದಿಯವರ ಆಶಯದಂತೆ ತಂತ್ರಜ್ಞಾನ ಕ್ರಾಂತಿಗೆ ಪೂರಕವಾಗಿ ಅಳಿಲು ಸೇವೆಗೆ ಮುಂದಾಗಿದ್ದೇವೆ. ಸಾಮಾನ್ಯ ಜನರು, ಕೃಷಿಕರು, ವಿದ್ಯಾರ್ಥಿಗಳು, ವೈದ್ಯರು, ವ್ಯಾಪಾರಿಗಳಿಗೆ ಪ್ರಯೋಜನಕಾರಿ ಸುಲಭ ತಂತ್ರಜ್ಞಾನ ಪರಿಹಾರ ನಮ್ಮ ಮಹದಾಸೆ. ಕೌಶಲ ಪರಿಣಾಮಕಾರಿ ಬಳಕೆ ಹಾಗೂ ಡಿಜಿಟಲ್‌ ಇಂಡಿಯಾ ಚಳವಳಿಯಲ್ಲಿ ಪಾಲುದಾರಿಕೆ ನಮ್ಮ ಜವಾಬ್ದಾರಿಯೂ ಕೂಡ.
-ಅನಿಲ್‌ ಪ್ರಭು, ಸಿಇಒ, ಆ್ಯಂಪ್‌ವರ್ಕ್‌ ಕಂಪನಿ

* ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next