ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಕಾಣಿಸಿಕೊಂಡಿರುವ “ಅಂಫಾನ್ ಚಂಡಮಾರುತ” ವಲಸೆ ಕಾರ್ಮಿಕರು ತವರಿಗೆ ಮರಳುವ ಕನಸಿಗೆ ತಣ್ಣೀರೆರಚಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಸುಮಾರು 120 ಪಶ್ಚಿಮ ಬಂಗಾಳ ಮೂಲದ ವಲಸೆ ಕಾರ್ಮಿಕರಿದ್ದು, ಅವರೆಲ್ಲರೂ ಸ್ವಗ್ರಾಮಗಳಿಗೆ ತೆರಳುವ ರೈಲುಗಾಗಿ ಕಾದುಕುಳಿತಿದ್ದಾರೆ. ಆದರೆ, ಈಗ ಬಂಗಾಳ ಕೊಲ್ಲಿಯಲ್ಲಿ ಕಾಣಿಸಿಕೊಂಡಿರುವ ಅಂಫಾನ್ ಚಂಡಮಾರುತದಿಂದಾಗಿ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಭಾರೀ ಬಿರುಗಾಳಿ ಮಳೆಯಾಗುತ್ತಿದೆ.
ಈ ಹಿನ್ನೆಲೆಯಲ್ಲಿ ವಿಶೇಷ ರೈಲು ಸಂಚಾರ ವಿಳಂಬವಾಗಿದೆ. ಬೆಂಗಳೂರು ನಗರ ಜಿಪಂ ವ್ಯಾಪ್ತಿಯ ಯಲಹಂಕ ತಾಲೂಕಿನ ರಾಜಾನುಕುಂಟೆಯಲ್ಲಿ ಪಶ್ಚಿಮ ಬಂಗಾಳ ಮೂಲದ ಕಟ್ಟಡ ಕಾರ್ಮಿಕರು ಇದ್ದಾರೆ. ಅವರೆಲ್ಲರೂ ತಮ್ಮ ಸ್ವಗ್ರಾಮಗಳಿಗೆ ಮರಳುವ ಸಂಬಂಧ ಈಗಾಗಲೇ ಸಿದಟಛಿತೆ ಮಾಡಿಕೊಂಡಿದ್ದರು. ಆ ಕನಸಿಗೆ ಚಂಡಮಾರುತವು ತಾತ್ಕಾಲಿಕ ತಡೆಯೊಡ್ಡಿದೆ. ಯಲಹಂಕದ ಹಲವು ಪ್ರದೇಶಗಳಲ್ಲಿ ಕಟ್ಟಡ ಸೇರಿದಂತೆ ಇನ್ನಿತರೆ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳದವರು ಈಗ ರಾಜಾನುಕುಂಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಶ್ರಯ ಪಡೆದಿದ್ದಾರೆ.
ಅವರೆಲ್ಲರೂ ತಮ್ಮ ಊರುಗಳಿಗೆ ತೆರಳಲು ಈಗಾಗಲೇ ರೈಲು ಟಿಕೆಟ್ ಕೂಡ ಖಾತರಿಪಡಿಸಿ ಕೊಂಡಿ ದ್ದಾರೆ. ಈಗ ವಿಶೇಷ ರೈಲಿಗಾಗಿ ಎದುರು ನೋಡುತ್ತಿದ್ದಾರೆ. ಲೌಕ್‌ಡೌನ್ ಅವಧಿಯಿಂದಲೂ ಒಡಿಶಾ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ಮೂಲದ ಸುಮಾರು ಎರಡು ಸಾವಿರಕ್ಕೂ ಅಧಿಕ ವಲಸೆ ಕಾರ್ಮಿಕರು ರಾಜಾನುಕುಂಟೆ ಗ್ರಾಮ ಪಂಚಾಯ್ತಿಯನ್ನೇ ಆಶ್ರಯಿಸಿದ್ದರು.
ಅದರಲ್ಲಿ ಬಹುತೇಕ ಮಂದಿ ವಿಶೇಷ ರೈಲಿನ ಮೂಲಕ ಸ್ವಗ್ರಾಮ ಸೇರಿದ್ದಾರೆ ಎಂದು ರಾಜಾನುಕುಂಟೆ ಗ್ರಾಪಂ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದರಲ್ಲಿ ಕೆಲವರು ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ರೈಲು ಮೂಲಕ ಪ್ರಯಾಣಿ ಸಿದರೆ, ಇನ್ನೂ ಕೆಲವರು ನಗರದಿಂದ ರೈಲುಗಳಲ್ಲಿ ಊರುಗಳಿಗೆ ತೆರಳಿದ್ದಾರೆ. ಅಂಫಾನ್ ಚಂಡಮಾರುತದಿಂದ ವಿಶೇಷ ರೈಲು ಸಂಚಾರದಲ್ಲಿ ವಿಳಂಬವಾಗಿದೆ. ಹೀಗಾಗಿ ರೈಲು ಬಂದ ತಕ್ಷಣ ವಲಸಿಗರು ತೆರಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ಶಾಲೆಯಲ್ಲೇ ವಸತಿ, ಊಟೋಪಚಾರ: ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರು ಈಗಾಗಲೇ ರಾಜಾನುಕುಂಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಶ್ರಯ ಪಡೆದಿದ್ದಾರೆ. ಅವರೆಲ್ಲರಿಗೂ ಗ್ರಾಮ ಪಂಚಾಯ್ತಿಯ ಆವರಣದಲ್ಲಿ ಆಹಾರ ನೀಡಲಾಗುತ್ತದೆ. ರೆಡ್ ಕ್ರಾಸ್ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳು ಅಕ್ಕಿ ಸೇರಿದಂತೆ ಹಲವು ರೀತಿಯ ಆಹಾರ ಪದಾರ್ಥಗಳನ್ನು ನೀಡುತ್ತಿದ್ದು, ಸಾಮಾಜಿಕ ಅಂತರ ಕಾಪಾಡಿಕೊಂಡು ಊಟೋಪಚಾರ ನೀಡಲಾಗುತ್ತಿದೆ. ವಲಸೆ ಕಾರ್ಮಿಕರ ಊಟೋಪಚಾರಕ್ಕೆ ಯಾವುದೇ ರೀತಿಯ ಸಮಸ್ಯೆ ಇಲ್ಲ. ಅವರು ಎಷ್ಟು ದಿನ ಇಲ್ಲಿ ಇರುತ್ತಾರೆ. ಅಷ್ಟು ದಿನವೂ ಊಟ ತಯಾರು ಮಾಡಿ ನೀಡಲಾಗುತ್ತದೆ ಎಂದು ರಾಜಾನುಕುಂಟೆ ಗ್ರಾಪಂ ಅಧಿಕಾರಿಗಳು ತಿಳಿಸಿದ್ದಾರೆ.
ರಾಜಾನುಕುಂಟೆ ಗ್ರಾಪಂ ವ್ಯಾಪ್ತಿಯಲ್ಲಿ ಇನ್ನೂ 120 ಮಂದಿ ಪಶ್ಚಿಮ ಬಂಗಾಳ ಮೂಲದ ವಲಸೆ ಕಾರ್ಮಿಕರಿದ್ದಾರೆ. ಬಂಗಾಳ ಕೊಲ್ಲಿ ಕಾಣಿಸಿಕೊಂಡ ಅಂಫಾನ್ ಚಂಡಮಾರುತದ ಹಿನ್ನೆಲೆಯಲ್ಲಿ ವಿಶೇಷ ರೈಲು ಸಂಚಾರದಲ್ಲಿ ವಿಳಂಬವಾಗಿದ್ದು, ಶೀಘ್ರದಲ್ಲೇ ತಮ್ಮ ಸ್ವಗ್ರಾಮಗಳಿಗೆ ಮರಳಲಿದ್ದಾರೆ.
-ರಾಜೇಶ್, ರಾಜಾನುಕುಂಟೆ ಗ್ರಾಪಂ ಪಿಡಿಒ
* ದೇವೇಶ ಸೂರಗುಪ್ಪ