ಕುಂದಾಪುರ: ತೀರ್ಥಹಳ್ಳಿ – ಕುಂದಾಪುರ ರಾಜ್ಯ ಹೆದ್ದಾರಿಯ ಅಂಪಾರು, ಕಂಡ್ಲೂರು ರಸ್ತೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕೇಂದ್ರ ರಸ್ತೆ ನಿಧಿಯಡಿ ಮರು ಡಾಮರೀಕರಣ ಕಾರ್ಯವನ್ನು ಕೈಗೆತ್ತಿಕೊಂಡಿದೆ.
ಸಿದ್ದಾಪುರ – ಕುಂದಾಪುರ ರಾಜ್ಯ ಹೆದ್ದಾರಿಯ ಮೂಡುಬಗೆ, ಅಂಪಾರು, ಕಂಡ್ಲೂರು ಭಾಗದ ರಸ್ತೆಯಿಡೀ ಹೊಂಡ – ಗುಂಡಿಗಳಿಂದಾಗಿ ಈ ಮಾರ್ಗವಾಗಿ ಸಂಚಾರ ದುಸ್ತರವಾಗಿತ್ತು. ಈಗ ಈ ರಾಜ್ಯ ಹೆದ್ದಾರಿಯ ಅಲ್ಲಲ್ಲಿ ಹದಗೆಟ್ಟ ಸುಮಾರು 7 ಕಿ.ಮೀ. ರಸ್ತೆಗೆ ಮರು ಡಾಮರೀಕರಣ ಹಾಗೂ ಕಿರಿದಾದ ರಸ್ತೆ ಇರುವ ಕಡೆ ಅಗಲೀಕರಣ ಕಾಮಗಾರಿ ಆರಂಭಗೊಂಡಿದೆ.
ಈ ತೀರ್ಥಹಳ್ಳಿ – ಕುಂದಾಪುರ ರಜ್ಯ ಹೆದ್ದಾರಿಯನ್ನು ಮುಂದಿನ 10 ವರ್ಷಗಳ ಕಾಲ ಅಭಿವೃದ್ಧಿಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗಿದೆ. ಸುಮಾರು 7 ಕಿ.ಮೀ. ದೂರದ ಮರು ಡಾಮರೀಕರಣ ಹಾಗೂ ಅಗಲೀಕರಣಕ್ಕೆ ಹೆದ್ದಾರಿ ಪ್ರಾಧಿಕಾರವು ಕೇಂದ್ರ ರಸ್ತೆ ನಿಧಿಯಡಿ (ಸಿಆರ್‌ಎಫ್) 10 ಕೋ.ರೂ. ಅನುದಾನದಲ್ಲಿ ಕಾಮಗಾರಿಯನ್ನು ನಡೆಸುತ್ತಿದೆ.
ಸಿದ್ದಾಪುರ – ಕುಂದಾಪುರ ರಾಜ್ಯ ಹೆದ್ದಾರಿ ಹದಗೆಟ್ಟ ಬಗ್ಗೆ ಅದರಲ್ಲೂ ಅಂಪಾರುನಿಂದ ಕಂಡ್ಲೂರುವರೆಗಿನ ರಸ್ತೆಯ ದುಃಸ್ಥಿತಿ ಬಗ್ಗೆ ಪತ್ರಿಕೆ ಹಲವು ಬಾರಿ ವಿಶೇಷ ವರದಿ ಪ್ರಕಟಿಸಿ, ಸಂಬಂಧಪಟ್ಟವರ ಗಮನಸೆಳೆದಿತ್ತು.
ಮಾರ್ಚ್‌ಗೆ ಪೂರ್ಣ
ಈಗಾಗಲೇ ಮರು ಡಾಮರೀಕರಣ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿದೆ. ಒಟ್ಟು ಅಲ್ಲಲ್ಲಿ 7 ಕಿ.ಮೀ. ಉದ್ದದ ರಸ್ತೆಗೆ ಡಾಮರೀಕರಣ ನಡೆಯುತ್ತಿದೆ.
– ನಾಗರಾಜ್
ಸಹಾಯಕ ಎಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ