Advertisement
ಬರ್ಮಿಂಗ್‌ಹ್ಯಾಮ್‌ನಲ್ಲಿ ನಿಮ್ಮ ನಿರೀಕ್ಷೆ ಏನಿತ್ತು? ಪದಕ ಗೆದ್ದ ಕ್ಷಣ ಹೇಗಿತ್ತು?ಚಿನ್ನದ ಪದಕ ನನ್ನ ಗುರಿಯಾಗಿತ್ತು. ತಪ್ಪಿದರೆ ಬೆಳ್ಳಿಯಾದರೂ ಸಿಗುವ ನಿರೀಕ್ಷೆ ಹೊತ್ತಿದ್ದೆ. ಆದರೆ ಅಲ್ಲಿನ ವಾತಾವರಣ ಅಷ್ಟೊಂದು ಸೂಕ್ತವಾಗಿರಲಿಲ್ಲ. ಫಿಟ್‌ನೆಸ್ ಸಮಸ್ಯೆ ಕಾಡಿತು. ಆಹಾರ ಸಮಸ್ಯೆಯೂ ಎದುರಾಯಿತು. ನಾವು ಬಹಳ ದಿನಗಳ ಮೊದಲೇ ಬರ್ಮಿಂಗ್‌ಹ್ಯಾಮ್‌ಗೆ ಬಂದಿದ್ದೆವು. ಬಹುಶಃ ಈ ಅಭ್ಯಾಸವನ್ನು ಭಾರತದಲ್ಲೇ ನಡೆಸಿದ್ದರೆ ಅನುಕೂಲ ಆಗುತ್ತಿತ್ತೋ ಏನೋ. ಆದರೆ 61 ಪದಕಗಳಲ್ಲಿ ನನ್ನದೂ ಒಂದು ಎನ್ನುವಾಗ ವಿಪರೀತ ಸಂತೋಷವಾಗುತ್ತದೆ. 2018ರ ಗೇಮ್ಸ್‌ನಲ್ಲಿ ನನ್ನಿಂದಲೇ ಭಾರತದ ಪದಕ ಖಾತೆ ತೆರೆದಿತ್ತು. ಈ ಸಲ ಎರಡನೇ ಪದಕ ನನ್ನದಾಯಿತು. 61 ಕೆಜಿ ವಿಭಾಗದಲ್ಲಿ ದೇಶಕ್ಕೆ ಮೊದಲ ಪದಕ ತಂದಿತ್ತ ಹೆಮ್ಮೆ ನನ್ನದು.
ನಮಗೆ ಸಾಧನೆಯೊಂದೇ ಗುರಿ. ನಾಳೆ ಏನು ಮಾಡಬೇಕು ಎಂಬ ಯೋಚನೆ, ಯೋಜನೆಯತ್ತ ಹೆಚ್ಚಿನ ಗಮನ ನೀಡುತ್ತೇವೆ. ಎದುರಾಳಿಗಳ ಬಗ್ಗೆ ನಾವು ಹೆಚ್ಚು ಯೋಚಿಸುವುದಿಲ್ಲ. ನಮ್ಮ ಬಗ್ಗೆಯೇ ನಾವು ಯೋಚಿಸುವುದು ಜಾಸ್ತಿ. ಮೈಂಡ್‌ಸೆಟ್ ಯಾವತ್ತೂ ಗಟ್ಟಿಯಾಗಿಯೇ ಇರುತ್ತದೆ. ದೇಶದ ಅಷ್ಟೂ ಜನರ ನಿರೀಕ್ಷೆಯ ಭಾರ ನಮ್ಮ ಮೇಲಿರುತ್ತದೆ. ಅವರ ಹಾರೈಕೆಯನ್ನು ನಾವು ಸಾಕಾರಗೊಳಿಸಬೇಕು, ಅಷ್ಟೇ… ಬೇರೆ ದೇಶಗಳ ಸ್ಪರ್ಧಿಗಳ ಜತೆಗಿನ ಒಡನಾಟ?
ಅತ್ಯಂತ ಸ್ನೇಹಮಯಿ ಆಗಿರುತ್ತಿದ್ದರು. ಎಷ್ಟರ ಮಟ್ಟಿಗೆಂದರೆ, ನಾವೆಲ್ಲ ಪ್ರತಿಸ್ಪರ್ಧಿಗಳು ಎಂದು ಎಣಿಸುತ್ತಲೇ ಇರಲಿಲ್ಲ. ಅಷ್ಟೊಂದು ಕ್ಲೋಸ್ ಆಗಿರುತ್ತಿದ್ದೆವು. ಭಾರತೀಯರೆಂದರೆ ಉಳಿದವರಿಗೆ ಹೆಚ್ಚು ಕುತೂಹಲ, ಆಸಕ್ತಿ. ಅವರು ನಮ್ಮಿಂದ ನೆನಪಿನ ಕಾಣಿಕೆಯನ್ನೂ ಬಯಸುತ್ತಿದ್ದರು. ಭಾರತದ ಕರೆನ್ಸಿ ನೀಡಿದಾಗ ಅತ್ಯಂತ ಖುಷಿಪಡುತ್ತಿದ್ದರು.
Related Articles
ಪದಕ ಗೆಲ್ಲುವುದು ನಾವಾದರೂ ಅದು ದೇಶಕ್ಕೆ ಅರ್ಪಣೆ. “ಗುರುರಾಜ್ ಫ್ರಂ ಇಂಡಿಯಾ’ ಎಂದು ಪೋಡಿಯಂಗೆ ಕರೆಯು ವಾಗ ಆ ರೋಮಾಂಚನ ಬಣ್ಣಿಸಲು ಸಾಧ್ಯವಿಲ್ಲ. ತ್ರಿವರ್ಣ ಧ್ವಜದ ಮುಂದೆ ನಿಂತಾಗ, ರಾಷ್ಟ್ರಗೀತೆ ಮೊಳಗುವಾಗ, ಬೇರೆ ದೇಶದ ನೆಲದಲ್ಲಿ ಭಾರತದ ಹೆಸರು ಕೂಗುವಾಗ ಆಗುವ ಸಂತಸ ಅಪಾರ. ಹಾಗೆಯೇ ತವರಿಗೆ ಬಂದ ಬಳಿಕ ಎಲ್ಲರೂ ನನ್ನನ್ನು ಗುರುತಿಸುವಾಗ, ಇವರು ವೇಟ್‌ಲಿಫ್ಟಿಂಗ್‌ನಲ್ಲಿ ಪದಕ ಗೆದ್ದವರು ಎಂದು ಹೇಳುವಾಗ ಆಗುವ ಖುಷಿಯೇ ಬೇರೆ.
Advertisement
ಭವಿಷ್ಯದ ಕ್ರೀಡಾಪಟುಗಳಿಗೆ ನಿಮ್ಮ ಸಂದೇಶ?ಕ್ರೀಡೆಯಲ್ಲೂ ಉದ್ಯೋಗ ಸೃಷ್ಟಿಯ ವಿಪುಲ ಅವಕಾಶ ಗಳಿವೆ. ಹೀಗಾಗಿ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸಿ. ಅದು ಯಾವುದಾದರೂ ಆದೀತು. ನಾನು ಆರಂಭ ದಲ್ಲಿ ಖೋಖೊ, ಕುಸ್ತಿ, ಕಬಡ್ಡಿ ಮುಂತಾದ ಕ್ರೀಡೆಯಲ್ಲಿ ತೊಡಗಿದ್ದೆ. ರಾಜ್ಯ ಮಟ್ಟದಲ್ಲೊಮ್ಮೆ 42 ಕೆಜಿ ಕುಸ್ತಿಯಲ್ಲೂ ಪಾಲ್ಗೊಂಡಿದ್ದೆ. ಈಗ ವೇಟ್‌ಲಿಫ್ಟಿಂಗ್ ಗಟ್ಟಿ ಮಾಡಿಕೊಂಡಿದ್ದೇನೆ. ಶಿಸ್ತು, ಬದ್ಧತೆಯಿಂದ ಮುಂದುವರಿದರೆ ಯಶಸ್ಸು ಖಂಡಿತವಾಗಿಯೂ ಕೈಹಿಡಿಯಲಿದೆ. ಚಿಕ್ಕಂದಿನಿಂದಲೇ ಕ್ರೀಡೆಯಲ್ಲಿ ಸಾಧನೆ ಮಾಡ ಬೇಕು ಅಂದುಕೊಂಡಿದ್ದಿರಾ?
ಹೌದು. ಕ್ರೀಡೆಯಲ್ಲಿ ಚಿಕ್ಕಂದಿನಿಂದಲೇ ಅತೀವ ಆಸಕ್ತಿ. ಅದರೊಂದಿಗೆ ಸೈನ್ಯಕ್ಕೆ ಸೇರಬೇಕು ಎನ್ನುವ ಕನಸು ಇತ್ತು. ಆದರೆ ಆಯ್ಕೆಗೆ ತೆರಳಿದಾಗ ವಯಸ್ಸು (26 ಆಗಿತ್ತು. 21 ಆಗಿರಬೇಕಿತ್ತು) ಹಾಗೂ ಎತ್ತರ ಅಡ್ಡಿಯಾಯಿತು. ಈಗ ಕ್ರೀಡಾ ಕೋಟದಲ್ಲಿ ವಾಯು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬಗ್ಗೆ ಹೆಮ್ಮೆಯಿದೆ. ಶಾಲಾ ದಿನಗಳಲ್ಲಿ ಎಲ್ಲ ರೀತಿಯ ಕ್ರೀಡೆಯಲ್ಲೂ ನಾನು ತೊಡಗಿಸಿಕೊಂಡಿದ್ದೆ. ಖೋ-ಖೋ, ಕಬಡ್ಡಿ, ಕುಸ್ತಿ, ಹೀಗೆ ಎಲ್ಲವೂ.. ಕಾಲೇಜಿನಲ್ಲಿದ್ದಾಗ ಕುಸ್ತಿಯಲ್ಲಿ ಮುಂದುವರಿಯಲು ನಿರ್ಧರಿಸಿದ್ದೆ. ಆದರೆ ಸೂಕ್ತ ತರಬೇತುದಾರರಿಲ್ಲದ ಕಾರಣ, ವೇಟ್‌ಲಿಫ್ಟಿಂಗ್‌ನತ್ತ ದೃಷ್ಟಿ ಹರಿಸಿದೆ. ಅದರಲ್ಲಿ ಮುಂದುವರಿದು, ಈಗ ಈ ಹಂತದ ವರೆಗೆ ತಲುಪಿರುವ ಬಗ್ಗೆ ತೃಪ್ತಿಯಿದೆ. ಅಭ್ಯಾಸ, ಆಹಾರ ಕ್ರಮಗಳು ಹೇಗಿರುತ್ತದೆ?
ಪ್ರತಿ ನಿತ್ಯ ಟೂರ್ನಮೆಂಟ್ ಇಲ್ಲದಿದ್ದರೂ ದಿನವೂ ಕಠಿನ 6 ಗಂಟೆ ಅಭ್ಯಾಸ ಮಾಡಲೇಬೇಕು. ಇನ್ನು ಟೂರ್ನಮೆಂಟ್ ಇದ್ದಾಗ ಅಗತ್ಯಕ್ಕೆ ತಕ್ಕ ದೇಹತೂಕ ಕಾಪಾಡುವುದು ಸವಾಲಿನ ಸಂಗತಿ. ಅದಕ್ಕೆ ಬೇಕಾದ ಆಹಾರವನ್ನೇ ಸೇವಿಸಬೇಕು. ಜ್ವರ, ಮೈ-ಕೈ ನೋವಿದ್ದಾಗ ಡೋಪಿಂಗ್ ಪರೀಕ್ಷೆ ಇರುವುದರಿಂದ ಔಷಧ ಕೂಡ ತೆಗೆದುಕೊಳ್ಳುವಂತಿಲ್ಲ. ನೀರು ಸಹ ಕುಡಿಯುವಂತಿಲ್ಲ. ಕುಟುಂಬದ ಸಹಕಾರ ಹೇಗಿತ್ತು?
ನನ್ನ ಸಾಧನೆಯ ನಿಜವಾದ ಶಕ್ತಿಯೇ ನನ್ನ ಕುಟುಂಬ ಹಾಗೂ ಶಿಕ್ಷಕರು. ತಂದೆ- ತಾಯಿ, ಅಣ್ಣನವರು, ಪತ್ನಿ ಎಲ್ಲರೂ ಈ ರೀತಿಯ ಸಹಕಾರ ಹಾಗೂ ಆತ್ಮವಿಶ್ವಾಸ, ಶಕ್ತಿ ತುಂಬುತ್ತಿರುವುದರಿಂದ ಈ ಮಟ್ಟಕ್ಕೆ ಬೆಳೆದಿದ್ದೇನೆ. ನಿಮ್ಮ ಇತರ ಆಸಕ್ತಿ, ಹವ್ಯಾಸಗಳು?
ಸಮಯ ಸಿಕ್ಕಾಗ ಸಂಗೀತ ಕೇಳುತ್ತಿರುತ್ತೇನೆ. ಆಗಾಗ ಸಿನೆಮಾ ನೋಡುತ್ತೇನೆ. ಕನ್ನಡ, ತಮಿಳು, ತೆಲುಗು ಚಿತ್ರಗಳಿಷ್ಟ. ಯಕ್ಷಗಾನ ಹಾಡಂತೂ ತುಂಬಾ ಇಷ್ಟ. ಸಮಯ ಸಿಕ್ಕಾಗ ದೂರದ ಚಂಡೀಗಢ ದಲ್ಲಿದ್ದರೂ ಯಕ್ಷಗಾನ ನೋಡುತ್ತಿರುತ್ತೇನೆ. ಕಾಲೇಜು ದಿನಗಳಲ್ಲಿ ಯಕ್ಷಗಾನ ಪಾತ್ರವನ್ನು ಮಾಡಿದ್ದೆ. ನಿಮ್ಮೂರು ಕುಂದಾಪುರದ ಬಗ್ಗೆ?
ನನ್ನೂರೆಂದರೆ ತುಂಬಾ ಖುಷಿ. ಕುಂದಾಪುರವೆಂದರೆ ತತ್‌ಕ್ಷಣ ನೆನಪಾಗುವುದೇ ಮೀನು. ಹೌದು ಮೀನು, ಚಿಕನ್ ಅಂದ್ರೆ ಬಲು ಇಷ್ಟ. ಯಕ್ಷಗಾನ, ಇಲ್ಲಿನ ವಿಭಿನ್ನ ಸಂಸ್ಕೃತಿ ನನ್ನನ್ನು ತುಂಬಾ ಪ್ರೇರೆಪಿಸಿದೆ.