Advertisement

Editorial: ಕೇರಳದಲ್ಲಿ ಅಮೀಬಾ ಸೋಂಕು- ರಾಜ್ಯದಲ್ಲೂ ಮುಂಜಾಗ್ರತೆ ಅಗತ್ಯ

11:14 AM Jul 08, 2024 | Team Udayavani |

ತೀರಾ ಅಪರೂಪದ ಅಮೀಬಾ ಸೋಂಕಿನ ಮತ್ತೂಂದು ಪ್ರಕರಣ ನಮ್ಮ ನೆರೆಯ ಕೇರಳದಲ್ಲಿ ವರದಿಯಾಗಿದೆ. ಇದು ಕಳೆದ ಎರಡು ತಿಂಗಳ ಅವಧಿಯಲ್ಲಿ ಕೇರಳದಲ್ಲಿ ದೃಢಪಟ್ಟ ಅಮೀಬಾ ಸೋಂಕಿನ ನಾಲ್ಕನೇ ಪ್ರಕರಣವಾಗಿದ್ದು ಜನತೆಯನ್ನು ಆತಂಕಕ್ಕೀಡು ಮಾಡಿದೆ. ಈವರೆಗೆ ಸೋಂಕು ಬಾಧಿತರೆಲ್ಲರೂ ಮಕ್ಕಳಾಗಿರುವುದರಿಂದ ಹೆತ್ತವರಲ್ಲಿ ಈ ಸೋಂಕಿನ ಕುರಿತಂತೆ ಭೀತಿ ಮೂಡಿದೆ.

Advertisement

ಕಲುಷಿತ ನೀರಿನಲ್ಲಿರುವ ನೆಗ್ಲೆರಿಯಾ ಫೌಲೇರಿ ಎನ್ನುವ ಬ್ಯಾಕ್ಟೀರಿಯಾ ಮಾನವ ಕಲುಷಿತ ನೀರಿನಲ್ಲಿ ಸ್ನಾನ ಮಾಡಿದ ಸಂದರ್ಭದಲ್ಲಿ ಮೂಗಿನ ಮೂಲಕ ದೇಹಕ್ಕೆ ಸೇರಿ, ನೇರವಾಗಿ ಮೆದುಳಿನ ಮೇಲೆ ದಾಳಿ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಈ ಸೋಂಕಿಗೆ ಮೆದುಳು ತಿನ್ನುವ ಅಮೀಬಾ ಎಂದು ಕರೆಯಲಾಗುತ್ತದೆ. ಇದು ತೀರಾ ಮಾರಣಾಂತಿಕವಾಗಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸುವುದು ಅತೀ ಮುಖ್ಯ. 2017 ಮತ್ತು 2023ರಲ್ಲಿ ಈ ಸೋಂಕು ಕೇರಳದ ಆಲಪ್ಪುಳದಲ್ಲಿ ಪತ್ತೆಯಾಗಿತ್ತು. ಈಗ ಮತ್ತೆ ರಾಜ್ಯದಲ್ಲಿ ಮೆದುಳು ತಿನ್ನುವ ಅಮೀಬಾ ಬ್ಯಾಕ್ಟೀರಿಯಾದ ಹಾವಳಿ ಒಂದಿಷ್ಟು ತೀವ್ರ ಸ್ವರೂಪದಲ್ಲಿಯೇ ಕಾಡಲಾರಂಭಿಸಿದೆ.

ಮೆದುಳು ತಿನ್ನುವ ಅಮೀಬಾ ಬ್ಯಾಕ್ಟೀರಿಯಾ ಮಾನವನ ಮೆದುಳಿನ ಅಂಗಾಂಶಕ್ಕೆ ಹಾನಿ ಉಂಟುಮಾಡುವುದರಿಂದ ಈ ಸೋಂಕಿನಿಂದ ಬಾಧಿತನಾದ ವ್ಯಕ್ತಿಯ ಪ್ರಾಣ ರಕ್ಷಣೆ ಅತ್ಯಂತ ಗಂಭೀರವಾದ ಸವಾಲಾಗಿದೆ. ಇದಕ್ಕಿಂತಲೂ ಮುಖ್ಯವಾಗಿ ಈ ಸೋಂಕು ತಗಲಿರುವುದನ್ನು ದೃಢಪಡಿಸಿಕೊಳ್ಳುವುದೇ ಜನತೆ ಮತ್ತು ವೈದ್ಯಕೀಯ ಲೋಕಕ್ಕೆ ಬಲುದೊಡ್ಡ ಸವಾಲಾಗಿದೆ. ಈ ಬ್ಯಾಕ್ಟೀರಿಯಾದಿಂದ ಬಾಧಿತನಾದ ವ್ಯಕ್ತಿಯಲ್ಲಿ ಸಾಮಾನ್ಯವಾಗಿ ತಲೆನೋವು, ಜ್ವರ, ವಾಂತಿಯಂತಹ ಸಾಮಾನ್ಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಮಳೆಗಾಲದ ಅವಧಿಯಲ್ಲಿ ಇವೆಲ್ಲವೂ ಸಾಮಾನ್ಯ ಕಾಯಿಲೆಗಳಾಗಿರುವುದರಿಂದ ಇದನ್ನು ಜನರು ಅಷ್ಟೊಂದು ಗಂಭೀರವಾಗಿ ಪರಿಗಣಿಸುವುದಿಲ್ಲ. ವ್ಯಕ್ತಿಯ ಆರೋಗ್ಯ ತೀರಾ ಹದೆಗೆಟ್ಟಾಗ ಹೆಚ್ಚಿನ ಚಿಕಿತ್ಸೆಗಾಗಿ ತಜ್ಞ ವೈದ್ಯರ ಬಳಿ ತೆರಳಿ ಪರೀಕ್ಷೆ ನಡೆಸಿದಾಗಲಷ್ಟೇ ಅಮೀಬಾ ಸೋಂಕು ತಗಲಿರುವುದು ದೃಢಪಡುತ್ತದೆ. ಆದರೆ ಆ ಹಂತದಲ್ಲಿ ಪರಿಸ್ಥಿತಿ ಕೈಮೀರಿರುವುದರಿಂದ ವ್ಯಕ್ತಿ ಯಾವುದೇ ತೆರನಾದ ಚಿಕಿತ್ಸೆಗೂ ಸ್ಪಂದಿಸದೆ ಸಾವನ್ನಪ್ಪುತ್ತಾನೆ. ಇನ್ನು ಈ ಬ್ಯಾಕ್ಟೀರಿಯಾ ಬಹುತೇಕ ಎಳೆಯ ಮಕ್ಕಳನ್ನು ಕಾಡಲು ಮುಖ್ಯ ಕಾರಣವೆಂದರೆ ಮಕ್ಕಳು ನೀರಿನಲ್ಲಿ ಹೆಚ್ಚು ಕಾಲ ಕಳೆಯುವುದು.

ಅದರಲ್ಲೂ ಮಳೆಗಾಲದ ಅವಧಿಯಲ್ಲಿ ಸುತ್ತಮುತ್ತಲಿನ ಕೆರೆ, ತೊರೆ, ಹಳ್ಳಗಳಲ್ಲಿನ ಕಲುಷಿತ ನೀರಿನಲ್ಲಿ ಈಜಾಡುವುದರಿಂದ ಈ ಸೋಂಕು ಮಕ್ಕಳಿಗೆ ತಗಲುತ್ತದೆ. ಇನ್ನು ಕೇರಳದಲ್ಲಿ ಎಚ್‌1ಎನ್‌1, ಝೀಕಾ ವೈರಸ್‌, ಡೆಂಗ್ಯೂ ಸಹಿತ ವಿವಿಧ ಸಾಂಕ್ರಾಮಿಕ ರೋಗಗಳು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಸಾರ್ವಜನಿಕರಿಗೆ ಸೂಕ್ತ ಮುಂಜಾಗ್ರತೆ ವಹಿಸುವಂತೆ ಸಲಹೆ ನೀಡಿದೆ.

Advertisement

ಅಷ್ಟು ಮಾತ್ರವಲ್ಲದೆ ಯಾವುದೇ ತುರ್ತು ಆರೋಗ್ಯ ಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿರುವಂತೆ ಆಸ್ಪತ್ರೆಗಳಗೆ ನಿರ್ದೇಶನ ನೀಡಿದೆ. ಕೇರಳಕ್ಕೆ ಹೊಂದಿಕೊಂಡಿ ರುವ ಕರ್ನಾಟಕದಲ್ಲೂ ಈ ಅಪರೂಪದ ಆದರೆ ತೀರಾ ಮಾರಣಾಂತಿಕವಾದ ಅಮೀಬಾ ಸೋಂಕಿನ ಬಗೆಗೆ ಜನರು ಎಚ್ಚರಿಕೆ ವಹಿಸಬೇಕು. ಈಗಾಗಲೇ ರಾಜ್ಯದಲ್ಲಿ ಡೆಂಗ್ಯೂ ಹಾವಳಿ ವ್ಯಾಪಕವಾಗಿದ್ದರೆ, ಈಗ ಝೀಕಾ ಸೋಂಕು ಕೂಡ ಕಾಣಿಸಿಕೊಂಡಿದೆ. ಹೀಗಾಗಿ ಜನರು ಸಾಂಕ್ರಾಮಿಕ ಕಾಯಿಲೆಗಳ ಬಗೆಗೆ ಹೆಚ್ಚಿನ ಮುಂಜಾಗ್ರತೆ ವಹಿಸುವ ಅಗತ್ಯವಿದೆ. ಆರೋಗ್ಯ ಇಲಾಖೆ ಕೂಡ ಅಮೀಬಾ ಸೋಂಕಿನ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಬೇಕಲ್ಲದೆ ಸಂಭಾವ್ಯ ಪರಿಸ್ಥಿತಿಯನ್ನು ಎದುರಿಸಲು ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕು.

Advertisement

Udayavani is now on Telegram. Click here to join our channel and stay updated with the latest news.

Next