Advertisement

ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್‌ ಪೈ

02:35 AM Nov 19, 2024 | Team Udayavani |

ಸ್ವಾವಲಂಬಿ ಬದುಕು ಮತ್ತು ಹೆಣ್ಣು ಮಕ್ಕಳ ಶಿಕ್ಷಣದ ಮುಖೇನ ಸಮಾಜ ವನ್ನು ಹೇಗೆ ವಿಕಸಿತಗೊಳಿಸಿ ನವ ಮನ್ವಂತರದತ್ತ ಸಾಗಿಸಬಹುದು ಎಂದು ಚಿಂತಿಸಿ, ಸಾಧಿಸಿ ಯಶ ಪಡೆದವರು ವಕೀಲ, ಶಿಕ್ಷಣತಜ್ಞ, ಬ್ಯಾಂಕರ್‌, ಸಮಾಜ ಸುಧಾರಕ ಅಮ್ಮೆಂಬಳ ಸುಬ್ಬರಾವ್‌ ಪೈ.

Advertisement

ಅಮ್ಮೆಂಬಳ ಸುಬ್ಬರಾವ್‌ ಪೈ ಹುಟ್ಟಿದ್ದು ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಮನೆತನದಲ್ಲಿ 1852ರ ನವೆಂ ಬರ್‌19 ರಂದು ಮಂಗಳೂರು ಸಮೀಪದ ಮೂಲ್ಕಿಯಲ್ಲಿ. ಪ್ರಾಥಮಿಕ, ಕಾಲೇಜು ಶಿಕ್ಷಣ ವನ್ನು ಮೂಲ್ಕಿ ಮತ್ತು ಮಂಗಳೂರಲ್ಲಿ ಪಡೆದ ಅನಂತರ ಚೆನ್ನೈಯಲ್ಲಿ ಕಾನೂನು ಶಿಕ್ಷಣ ಪಡೆದು ಅಲ್ಲಿಯೇ ವಕೀಲಿ ವೃತ್ತಿ ಆರಂಭಿಸಿದರು. ತಂದೆಯ ನಿಧನದ ಬಳಿಕ ಮಂಗಳೂರಿಗೆ ಬಂದು ವಕೀಲ ವೃತ್ತಿ ಮುಂದುವರಿಸಿದರು.

ವ್ಯಾಜ್ಯ- ತಕರಾರುಗಳನ್ನು ಈರ್ವರೂ ದೂರುದಾರರನ್ನು ಕರೆಸಿ ನ್ಯಾಯಾ ಲಯದ ಹೊರಗೆ ಇತ್ಯರ್ಥ ಮಾಡು ವುದರಲ್ಲಿ ನಿಸ್ಸೀಮರಾಗಿದ್ದ ಇವರು ಅನೇಕ ತಕರಾರುಗಳನ್ನು ಈ ರೀತಿ ಮಾಡಿ ಅಪರೂಪದ ಅನುಕರಣೀಯ ವಕೀಲರಾಗಿ ಖ್ಯಾತರಾಗಿದ್ದರು. ಉಚಿತ ವಾಗಿಯೂ ವಕೀಲ ವೃತ್ತಿಯ ಸೇವೆ ಮಾಡಿಯೂ ಜನಾನುರಾಗಿಯಾದರು.

ಅಂದು ನಾಲ್ಕು ಗೋಡೆಗಳ ನಡುವೆ ಸೀಮಿತವಾಗಿದ್ದ ಮಹಿಳೆಯರ ಶಿಕ್ಷಣ, ಸಶಕ್ತೀಕರಣ, ಸಾಧನೆಗಳಿಗೆ ಆದ್ಯತೆ ನೀಡ ತೊಡಗಿದರು. 1891ರಲ್ಲಿ ಕರಾವಳಿಯ ಸುಪ್ರಸಿದ್ಧ ಕೆನರಾ ಶಾಲೆ ಆರಂಭಿಸಿದರೆ 1894ರಲ್ಲಿ ಕೆನರಾ ಹೆಣ್ಮಕ್ಕಳ ಶಿಕ್ಷಣ ಸಂಸ್ಥೆಯನ್ನು ಕಟ್ಟಿದರು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನಾಂದಿ ಹಾಡಿದರು. ಬಡ ಹೆಣ್ಣು ಮಕ್ಕಳ ಕಲಿಕೆಗೆ ವಿದ್ಯಾರ್ಥಿವೇತನ ಇನ್ನಿತರ ಮಾರ್ಗಗಳಿಂದ ದಾರಿ ತೋರಿದರು. ಈ ಎಲ್ಲ ಕಾರ್ಯಗಳಲ್ಲಿ ಸುಬ್ಬರಾವ್‌ ಪೈ ಅವರಿಗೆ ಅಪೂರ್ವ ಯಶಸ್ಸೂ ದೊರೆಯಿತು. ಇಂದು ಕೆನರಾ ಶೈಕ್ಷಣಿಕ ಪರಿವಾರ ನಮ್ಮ ಶಿಕ್ಷಣ ರಂಗದಲ್ಲಿ ಗಳಿಸಿರುವ ಸ್ಥಾನಮಾನ ನಮ್ಮ ಕಣ್ಣೆದುರು ಇದೆ.

ಔಪಚಾರಿಕ ಶಿಕ್ಷಣದೊಂದಿಗೆ ಧಾರ್ಮಿಕ ಶಿಕ್ಷಣಕ್ಕೂ ಮಹತ್ವ ನೀಡಿ ಇವೇ ಸಾಮಾಜಿಕ ಪರಿವರ್ತನೆಯ ಮೂಲಾಧಾರ ಎಂದವರು ಬಲವಾಗಿ ನಂಬಿದ್ದರಲ್ಲದೆ ಅದನ್ನು ತಮ್ಮ ಜೀವನ ದುದ್ದಕ್ಕೂ ಅಕ್ಷರಶಃ ಪಾಲಿಸಿದರು. ಜನಸಾಮಾನ್ಯರು ಸ್ವಾವಲಂಬಿಗಳಾಗಿ ಬಾಳಲು ಅನುಕೂಲವಾಗುವಂತೆ 1906ರಲ್ಲಿ ಹಿಂದೂ ಪರ್ಮನೆಂಟ್‌ ಫಂಡ್‌ ಲಿ. ಸ್ಥಾಪಿಸಿದರು. ಹಣ ಉಳಿ ತಾಯಕ್ಕೆ ಪ್ರೇರಣೆ ನೀಡುವುದರೊಂದಿಗೆ ಈ ವಿತ್ತ ಸಂಸ್ಥೆ ಬಡ/ ಮಧ್ಯಮ ವರ್ಗದವರ ವಿತ್ತೀಯ ಆವಶ್ಯಕತೆಗಳಿಗೆ ಸಂಸ್ಥೆಯ ಧ್ಯೇಯ, ಆಶಯ ಗಳಿಗೆ ಅನುಗುಣವಾಗಿ ಸ್ಪಂದಿಸುವಲ್ಲಿ ಸಾರ್ಥಕತೆ ಕಂಡಿತು.

Advertisement

ಗ್ರಾಹಕರನ್ನು ಸಂಸ್ಥೆಯ ಔನ್ನತ್ಯದಲ್ಲಿ ಹೆಮ್ಮೆಯ ಭಾಗೀದಾರರನ್ನಾಗಿ ಮಾಡಿ ಸಂಸ್ಥೆಯು ಸಾಧನೆಯ ಶೃಂಗದತ್ತ ಸಾಗಿತು.ಇದುವೇ ಇಂದು ಜಾಗತಿಕ ಬ್ಯಾಂಕಿಂಗ್‌ ರಂಗದಲ್ಲಿ ಪ್ರಜ್ವಲಿಸುತ್ತಿರುವ ನಮ್ಮ ನಾಡಿನ ಅಭಿ ಮಾನದ ಕೆನರಾ ಬ್ಯಾಂಕ್‌. ಆ ಕಾಲದಲ್ಲಿಯೇ ಶೈಕ್ಷಣಿಕ ಸಾಲಕ್ಕೆ ವಿಶೇಷ ಪ್ರಾ ಧಾನ್ಯ ನೀಡಿದ್ದ ಅಮ್ಮೆಂಬಳ ಸುಬ್ಬರಾವ್‌ ಪೈ ಅವರು, ಅದರಲ್ಲೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆಯ ಮೇಲೆ ಸಾಲ ನೀಡಲಾರಂಭಿಸುವ ಮೂಲಕ ಬ್ಯಾಂಕಿಂಗ್‌ ಇತಿಹಾಸದಲ್ಲಿಯೇ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು.

ಅಮ್ಮೆಂಬಳ ಸುಬ್ಬರಾವ್‌ ಪೈ ಅವರು ಬಿತ್ತಿ ಬೆಳೆಸಿದ ಸಂಸ್ಥೆಗಳು ಗಿಡ, ಮರ, ಮಹಾವೃಕ್ಷಗಳಾಗಿ ಬೆಳೆದು ಕೋಟ್ಯಂತರ ಜನರ ಬಾಳಿಗೆ ನೆರಳು ನೀಡಿದ್ದು,
ಇಂದಿಗೂ ನೀಡುತ್ತಲಿದೆ. ದೇವರ ಮೇಲಣ ನಂಬಿಕೆ, ಗುರುಭಕ್ತಿ, ಹಾಗೂ ಧರ್ಮ ನಿಷ್ಠೆಯನ್ನು ಹೊಂದಿದ್ದ ಇವರು, ಸಮಾಜದಲ್ಲಿನ ಮೌಡ್ಯಗಳ ವಿರುದ್ಧವೂ ದನಿ ಎತ್ತುವ ಮೂಲಕ ಸಮಾಜ ಸುಧಾ ರಕರಾಗಿಯೂ ಗುರುತಿಸಿಕೊಂಡಿದ್ದರು.

1909ರ ಜುಲೈ 25 ರಂದು ಅನಾರೋಗ್ಯದಿಂದಾಗಿ ಅಮ್ಮೆಂಬಳ ಸುಬ್ಬ ರಾವ್‌ ಪೈ ಅವರು ಇಹಲೋಕವನ್ನು ತ್ಯಜಿಸಿದರು. ಈ ಮೂಲಕ ದೈಹಿಕವಾಗಿ ಅವರು ಮರೆಯಾದರೂ ತಾವು ಕಟ್ಟಿದ ಶಿಕ್ಷಣ, ಹಣಕಾಸು ಸಂಸ್ಥೆಗಳಿಂದ ನಾಡಿನ ಜನರ ಹೃನ್ಮನಗಳಲ್ಲಿ ಇಂದಿಗೂ ಜೀವಂತ ವಾಗಿದ್ದಾರೆ. ಅವರ ಚಿಂತನೆ, ಕಾಯಕ- ಸಾಧನೆಗಳು ಮಾತನಾಡುತ್ತಿವೆ, ಫಲ ನೀಡುತ್ತಿವೆ, ಪ್ರಗತಿ ಪಥದಲ್ಲಿ ಮುನ್ನಡೆ ಯುತ್ತಿವೆ. ಇಂತಹ ಮಹನೀಯರನ್ನು ನಾಡು ಸದಾ ಸ್ಮರಿಸಬೇಕು.

– ಸಂದೀಪ್‌ ನಾಯಕ್‌ ಸುಜೀರ್‌

Advertisement

Udayavani is now on Telegram. Click here to join our channel and stay updated with the latest news.

Next