Advertisement
ಪ್ರಾಮಾಣಿಕತೆ, ದೇಶಭಕ್ತಿ, ನಿಷ್ಠೆ ಯನ್ನೇ ತಮ್ಮ ಜೀವನದುದ್ದಕ್ಕೂ ಪಾಲಿ ಸುತ್ತಾ ಬಂದ ಡಾ| ಅಮ್ಮೆಂಬಳ ಬಾಳಪ್ಪ ಅವರು ಯಾವುದೇ ಸ್ಥಾನಾಪೇಕ್ಷೆ ಬಯಸದೆ ತತ್ತ್ವಾಪೇಕ್ಷೆಯಿಂದ ಕೂಡಿದ ಜೀವನವನ್ನು ತಮ್ಮ ದಾಗಿಸಿ ಕೊಂಡಿದ್ದರು. ಈ ತತ್ತ್ವಾದರ್ಶಗಳಿಂದಲೇ ಇಂದಿಗೂ ಅವರು ಜನಮಾನಸದಲ್ಲಿ ಅಜರಾಮರ ರಾಗಿದ್ದಾರೆ. ಈ ವರ್ಷ (2022) ಕೀರ್ತಿಶೇಷ ಡಾ| ಅಮ್ಮೆಂಬಳ ಬಾಳಪ್ಪ ಅವರ ಜನ್ಮಶತಮಾನೋತ್ಸವ ವರ್ಷ.
ಬಡತನದಿಂದಾಗಿ ಕುಟುಂಬ ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದರೂ ಬಾಳಪ್ಪ ಅವರು ದೇಶವನ್ನು ಪರಕೀಯರಿಂದ ಮುಕ್ತಗೊಳಿಸುವ ಪಣತೊಟ್ಟರು. ಆಗ ದೇಶಾದ್ಯಂತ ಸ್ವಾತಂತ್ರ್ಯ ಹೋರಾಟ ಕಾವೇರತೊಡಗಿತ್ತು. ದೇಶದ ಸ್ವಾತಂತ್ರ್ಯಕ್ಕಾಗಿ ಕಟಿಬದ್ಧರಾಗಿ ಹೋರಾಡುತ್ತಿದ್ದ ರಾಷ್ಟ್ರಪ್ರೇಮಿಗಳ ಸಾಲಿನಲ್ಲಿ ಅಮ್ಮೆಂಬಳ ಬಾಳಪ್ಪ ಅವರೂ ಸೇರಿಕೊಂಡರು. 1942ರಲ್ಲಿ ಮಹಾತ್ಮಾ ಗಾಂಧೀಜಿಯವರು ಕ್ವಿಟ್ ಇಂಡಿಯಾ ಚಳವಳಿಗೆ ಕರೆ ಕೊಟ್ಟಾಗ ಬಾಳಪ್ಪನವರಿಗೆ ಕೇವಲ 20 ವರ್ಷ. ಆಗಲೇ ಮನೆಯವರು ಬಾಳಪ್ಪ ಅವರಿಗೆ ವಿವಾಹ ಮಾಡಲು ಮುಂದಾಗಿದ್ದರು. ಆದರೆ ಇದಕ್ಕೆಲ್ಲ ತಲೆಕೆಡಿಸಿಕೊಳ್ಳದ ಬಾಳಪ್ಪನವರು ಆಗಿನ ಅವಿಭಜಿತ ದಕ್ಷಿಣ ಕನ್ನಡದ ಮೇರು ನಾಯಕರಾಗಿ ಕ್ವಿಟ್ ಇಂಡಿಯಾ ಚಳವಳಿಗೆ ಧುಮುಕಿದರು. ಮಂಗಳೂರಿನ ಜಿಲ್ಲಾ ನ್ಯಾಯಾಲಯವನ್ನು ಧ್ವಂಸಗೈಯುವ ಪ್ರಯತ್ನದಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗಿ ವೆಲ್ಲೂರು ಜೈಲಿಗೆ ರವಾನೆಯಾದರು. ಈ ಪ್ರಕರಣದಲ್ಲಿ 18 ತಿಂಗಳ ಶಿಕ್ಷೆ ಅನುಭವಿಸಿದರು. ಅದೇ ಜೈಲಿನಲ್ಲಿ ಬಂಧಿಯಾಗಿದ್ದ ಮಾಜಿ ಪ್ರಧಾನಿ ದಿ| ಪಿ.ವಿ. ನರಸಿಂಹ ರಾವ್ ಅವರ ಸ್ನೇಹ ರಾಜಕೀಯವಾಗಿ ಮತ್ತಷ್ಟು ಬೆಳೆಯಲು ಬಾಳಪ್ಪರಿಗೆ ಸಹಕಾರಿಯಾಯಿತು. ಇದೇ ವೇಳೆ ಹಿಂದಿ ಭಾಷೆಯನ್ನು ಕಲಿತುಕೊಂಡರು. ಆ ಬಳಿಕದ ದಿನಗಳಲ್ಲಿ ಜಯಪ್ರಕಾಶ್ ನಾರಾಯಣ, ಜವಾಹರಲಾಲ್ ನೆಹರೂ ಅವರಂಥ ಮಹಾನ್ ರಾಜಕೀಯ ನೇತಾರರ ಪರಿಚಯವಾಗಿ ಬಾಳಪ್ಪ ಅವರು ದೇಶದ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು.
Related Articles
Advertisement
ಇನ್ನು ಬಡವರೆಂದರೆ ಬಾಳಪ್ಪ ಅವರಿಗೆ ಎಲ್ಲಿಲ್ಲದ ಕಾಳಜಿ. ಬಂಟ್ವಾಳ ಭೂನ್ಯಾಯ ಮಂಡಳಿಯಲ್ಲಿ ಮೂರು ಅವಧಿಯಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಅವರು ಈ ಸಂದರ್ಭದಲ್ಲಿ ಬಹಳಷ್ಟು ಬಡವರಿಗೆ ಸಹಾಯ ಮಾಡಿದ್ದರು. ಬಡ ರೈತರಿಗೆ ಸ್ವತಃ ತಾವೇ ಅರ್ಜಿಗಳನ್ನು ಬರೆದುಕೊಡುತ್ತಿದ್ದುದೇ ಅಲ್ಲದೆ ಸರಕಾರಿ ಕಚೇರಿಗಳಿಗೆ ಅಲೆದಾಟ ನಡೆಸಿ ಕೆಲಸಗಳನ್ನು ಪೂರ್ಣಗೊಳಿಸಿಕೊಡುತ್ತಿದ್ದರು. ನ್ಯಾ| ವೆಂಕಟಸ್ವಾಮಿ ನೇತೃತ್ವದ ಕರ್ನಾಟಕ ಸರಕಾರದ 2ನೇ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾಗಿದ್ದರು. 1989 ರಿಂದ 92ರ ತನಕ ಮಂಗಳೂರು ವಿ.ವಿ. ಅಕಾಡೆಮಿ ಕೌನ್ಸಿಲ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.
ದೇಶ ಸೇವೆಯೇ ತನ್ನ ಪರಮ ಗುರಿಯೆಂದು ಅರಿತಿದ್ದ ಬಾಳಪ್ಪ ಅವರಿಗೆ 1989ರಲ್ಲಿ ಜನತಾದಳ (ಎಸ್) ವಿಧಾನಸಭೆಯ ಟಿಕೆಟ್ ಅನ್ನು ನೀಡಿತ್ತು. ಆದರೆ ಅದನ್ನು ನಯವಾಗಿಯೇ ತಿರಸ್ಕರಿಸಿದ್ದ ಅವರು, ತಮ್ಮ ಶಿಷ್ಯ ಜಾರ್ಜ್ ಫೆರ್ನಾಂಡಿಸ್ ಸಮತಾ ಪಕ್ಷಕ್ಕೆ ಸೇರ್ಪಡೆಗೊಳ್ಳುವಂತೆ ಆಹ್ವಾನ ನೀಡಿದಾಗಲೂ ನಿರಾಕರಿಸುವ ಮೂಲಕ ತಮ್ಮದೇನಿದ್ದರೂ ಸ್ಥಾನಾಪೇಕ್ಷೆ ರಹಿತ ಜೀವನ ಎಂದು ಸಾಬೀತುಪಡಿಸಿದರು.
ಸ್ವಾರ್ಥರಹಿತ ಬಡವರ ಸೇವೆಯೇ ಅವರ ಮುಂದಿದ್ದ ಗುರಿಯಾದ್ದರಿಂದ ಕೊನೆ ತನಕವೂ ಜನರೊಡನೇ ಬಾಳಿ ಬದುಕಿದರು. ಸಮಾಜದ ಆಗುಹೋಗುಗಳನ್ನು ಜನತೆಗೆ ಮತ್ತಷ್ಟು ಪ್ರಖರವಾಗಿ ಮುಟ್ಟಿಸಬೇಕೆಂಬ ನಿಟ್ಟಿನಲ್ಲಿ 1952ರಲ್ಲಿ ಕನ್ನಡದಲ್ಲಿ “ಮಿತ್ರ’ , 1970ರಲ್ಲಿ ತುಳು ಭಾಷೆಯಲ್ಲಿ ಮೊತ್ತ ಮೊದಲ “ಸಿರಿ’ ಎಂಬ ಪತ್ರಿಕೆಯನ್ನೂ ಪ್ರಾರಂಭಿಸಿದ್ದರು. 1980ರಲ್ಲಿ ಬಂಟ್ವಾಳದಲ್ಲಿ ಸಮಾಜ ಸೇವಾ ಸಹಕಾರಿ ಬ್ಯಾಂಕ್ ಸ್ಥಾಪಿಸಿ ಹಲವರಿಗೆ ಉದ್ಯೋಗವನ್ನು ನೀಡಿದ್ದರು. ಬಾಲ್ಯದಲ್ಲಿ ಆಯುರ್ವೇದ ಔಷಧ ಅನುಭವವಿದ್ದುದರಿಂದ ಸ್ವಲ್ಪ ಸಮಯ ಫಾರ್ಮಸಿಯಲ್ಲಿ ಕೆಲಸಕ್ಕೆ ಸೇರಿದ್ದರು. ಈ ಹಿನ್ನೆಲೆಯಲ್ಲಿ 1968ರಲ್ಲಿ ಆಯುರ್ವೇದ ಮತ್ತು ಹೋಮಿಯೋಪತಿ ವೈದ್ಯರೆಂಬ ನೋಂದಣಿ ಪಡೆದುಕೊಂಡಿದ್ದರು. ವಿವಿಧ ರಂಗಗಳಲ್ಲಿ ಸಮಾಜಮುಖೀ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಡಾ| ಅಮ್ಮೆಂಬಳ ಬಾಳಪ್ಪ ಎಲ್ಲರ ಪಾಲಿನ ಅಜಾತಶತ್ರುವಾಗಿ ಬಾಳಿ 2014ರ ಮೇ 15ರಂದು ನಿಧನ ಹೊಂದಿದರು.
ಡಾ| ಅಮ್ಮೆಂಬಳ ಬಾಳಪ್ಪ ಅವರ ಜನ್ಮ ಶತಮಾನೋತ್ಸವ ವರ್ಷಾಚರಣೆಯ ಈ ಸಂದರ್ಭದಲ್ಲಿ ಅವರು ಪಾಲಿಸಿ ಕೊಂಡು ಬಂದ ತತ್ತ್ವಾದರ್ಶಗಳನ್ನು ಕಿಂಚಿತ್ ಆದರೂ ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ದೇಶ ಸುಭಿಕ್ಷಗೊಳ್ಳಲು ಸಾಧ್ಯ. ವೈಯಕ್ತಿಕ ಪ್ರತಿಷ್ಠೆ, ಅಧಿಕಾರ ವ್ಯಾಮೋಹ, ಹಣ, ಆಸ್ತಿ ಇವೆಲ್ಲವೂ ನಶ್ವರ ಎಂಬುದನ್ನು ಅರಿತು ಸ್ಥಾನಾಪೇಕ್ಷೆಯನ್ನು ಬಿಟ್ಟು ತತ್ತ್ವಾಪೇಕ್ಷೆಯಿಂದ ಬದುಕಿದರೆ ಡಾ| ಅಮ್ಮೆಂಬಳ ಬಾಳಪ್ಪ ಅವರಿಗೆ ನಾವು ನೀಡುವ ಬಲುದೊಡ್ಡ ಗೌರವವೇ ಸರಿ. ಇನ್ನು ಸರಕಾರ ಇಂಥ ಅಪ್ಪಟ ದೇಶಪ್ರೇಮಿಯನ್ನು ಅವರ ಜನ್ಮಶತಮಾನೋತ್ಸವದ ಸಂದರ್ಭದಲ್ಲಾದರೂ ಗುರುತಿಸುವ ಕಾರ್ಯಕ್ಕೆ ಮುಂದಾದೀತು ಎಂಬ ಅಭಿಲಾಷೆ ಅವರ ಅಭಿಮಾನಿಗಳದ್ದಾಗಿದೆ.
-ಪ್ರೊ| ತುಕಾರಾಮ್ ಪೂಜಾರಿ, ಬಂಟ್ವಾಳ