ಬಂಟ್ವಾಳ: ಫರಂಗಿಪೇಟೆ ಸಮೀಪದ ಅಮ್ಮೆಮಾರ್ ಶಾಲಾ ಬಳಿ ತಂಡವೊಂದು ಹಳೆ ದ್ವೇಷದ ಹಿನ್ನೆಲೆಯಲ್ಲಿ ಇಬ್ಬರು ಯುವಕರ ಮೇಲೆ ತಲವಾರು ದಾಳಿ ನಡೆಸಿ ಕೊಲೆಯತ್ನ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಅಮ್ಮೆಮಾರಿನ ಘಟನಾ ಸ್ಥಳಕ್ಕೆ ಪಶ್ಚಿಮ ವಲಯ ಪೊಲೀಸ್ ಉಪಮಹಾನಿರೀಕ್ಷಕ(ಡಿಐಜಿ) ಅಮಿತ್ ಸಿಂಗ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಅವರು ಜತೆಗಿದ್ದು, ಮುಂದಿನ ತನಿಖೆಯ ಕುರಿತು ಡಿಐಜಿ ಅವರು ಸಲಹೆ-ಸೂಚನೆಗಳನ್ನು ನೀಡಿದರು. ಘಟನೆಗೆ ಸಂಬಂಧಿಸಿ ಸುಮಾರು 14 ಮಂದಿ ಆರೋಪಿಗಳ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದ್ದು, ಬಂಟ್ವಾಳ ಡಿವೈಎಸ್‌ಪಿಯವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನೂ ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದೆ.
ತಲವಾರಿ ದಾಳಿಗೆ ಸಂಬಂಧಿಸಿ ಸಿಸಿ ಕ್ಯಾಮರಾ ವಿಡಿಯೋ ಕೂಡ ಇಲಾಖೆಗೆ ಲಭ್ಯವಾಗಿದ್ದು, ದುಷ್ಕರ್ಮಿಗಳ ತಂಡ ತಲವಾರು ಹಿಡಿದು ಬೀಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಈ ಘಟನೆಯನ್ನು ಪೊಲೀಸ್ ಇಲಾಖೆ ಮಟ್ಟ ಹಾಕದೇ ಇದ್ದಲ್ಲಿ ಕಾನೂನು ಸುವಸ್ಥೆಗೆ ಹದಗೆಡುವ ಆತಂಕವೂ ಎದುರಾಗಿದ್ದು, ಹೀಗಾಗಿ ಪ್ರಕರಣವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಮಟ್ಟ ಹಾಕುವ ವಿಶ್ವಾಸ ವ್ಯಕ್ತಪಡಿಸಿದೆ.
ಅ. 22ರ ರಾತ್ರಿ 11.50ರ ಸುಮಾರಿಗೆ ಘಟನೆ ನಡೆಸಿದ್ದು, ಪೂರ್ವದ್ವೇಷದ ಹಿನ್ನೆಲೆಯಲ್ಲಿ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಹಾಗೂ ಇತರರು ಅಮ್ಮೆಮಾರ್ ನಿವಾಸಿಗಳಾದ ತಸ್ಲಿàಂ ಹಾಗೂ ಮಹಮ್ಮದ್ ಶಾಕೀರ್‌ನ ಮೇಲೆ ತಲವಾರು ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ್ದು, ಗಾಯಾಳುಗಳು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಡಿಐಜಿ ಭೇಟಿಯ ವೇಳೆ ಬಂಟ್ವಾಳ ಡಿವೈಎಸ್‌ಪಿ ಎಸ್.ವಿಜಯಪ್ರಸಾದ್, ಗ್ರಾಮಾಂತರ ಇನ್ಸ್‌ಪೆಕ್ಟರ್ ಶಿವಕುಮಾರ್, ಪಿಎಸ್‌ಐಗಳು ಹಾಗೂ ಪೊಲೀಸ್ ಸಿಬಂದಿ ಉಪಸ್ಥಿತರಿದ್ದರು.
ಪೋಟೊ: ಡಿಐಜಿ ಅಮಿತ್ ಸಿಂಗ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.