Advertisement

ದೇಶಾಂಶ ಪತ್ನಿಗೆ ಅಮ್ಮ ಗೌರವ ಪ್ರದಾನ

04:33 PM Dec 22, 2020 | Suhan S |

ಬೀದರ: “ಬೀದರ ಶಬ್ದಕೋಶ’ದ ಮೂಲಕ ಕನ್ನಡವನ್ನು ಶ್ರೀಮಂತಗೊಳಿಸಿದ ನಾಡಿನ ಹಿರಿಯ ಲೇಖಕರಾಗಿದ್ದ ದೇಶಾಂಶಹುಡಗಿ ಅವರ ನಿಧನದ ಹಿನ್ನೆಲೆಯಲ್ಲಿ ನಗರದ ಚಿಟ್ಟಾವಾಡಿಯ “ಜಯಶಂಕರ’ ಮನೆಯಲ್ಲಿ “ಅಮ್ಮ ಗೌರವ’ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು.

Advertisement

ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್‌ ಪ್ರತಿಷ್ಠಾನ ಕೊಡ ಮಾಡುವ “ಅಮ್ಮ ಪ್ರಶಸ್ತಿ-20’ಗೆ ಹಿರಿಯ ಸಾಹಿತಿದೇಶಾಂಶ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ, ನ.25ರಂದು ಅವರ ನಿಧನ ಹಿನ್ನೆಲೆಯಲ್ಲಿ ಬೀದರಿನ ಅವರ ಮನೆಯಲ್ಲಿ, ದೇಶಾಂಶ ಅವರ ಪತ್ನಿ ಮಹಾದೇವಮ್ಮ ಹುಡಗಿ ಅವರಿಗೆ ಅಮ್ಮ ಗೌರವ ಪ್ರದಾನ ಮಾಡಲಾಯಿತು. ಶಾಲು ಸತ್ಕಾರ, ಅಭಿನಂದನಾ ಪತ್ರ, ಫಲಪುಷ್ಪಗಳೊಂದಿಗೆ, ತೊಗರಿ ಬೇಳೆ ಮತ್ತು ಸೀರೆಯನ್ನು ಕಾಣಿಕೆಯಾಗಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚೆನ್ನಶೆಟ್ಟಿ, ಧರಿನಾಡಿಗೆ ಕೀರ್ತಿಯನ್ನು ತಂದ ದೇಶಾಂಶಹುಡಗಿ ಅವರನ್ನು ಹುಡುಕಿಕೊಂಡು ಬಂದ ಅಮ್ಮ ಪ್ರಶಸ್ತಿಯ ಗೌರವ ಪುರಸ್ಕಾರದ ಆಯ್ಕೆ ಸಮಿತಿಯು ಅತ್ಯುತ್ತಮರನ್ನು ಆಯ್ಕೆ  ಮಾಡಿದೆ. ಸಾಹಿತಿಗಳನ್ನು ಬೆಳೆಸುವಲ್ಲಿ ಅಹರ್ನಿಶಿ ಶ್ರಮಿಸಿದ ದೇಶಾಂಶ ಅವರ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯ. ಕೆಂಪು ನೆಲದ ಈ ಧರಿನಾಡಿನಲ್ಲಿ ಅವರ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ. ಬೀದರ ಎಂಬ ಹೆಸರು ಪ್ರಸ್ತಾಪವಾದಗಲೆಲ್ಲ ದೇಶಾಂಶ ಅವರ ಹೆಸರು ನೆನಪಿಗೆ ಬರುತ್ತದೆ ಎಂದು ಸ್ಮರಿಸಿದರು.

ಅಮ್ಮ ಪ್ರಶಸ್ತಿ ಸಂಸ್ಥಾಪಕ ಸಂಚಾಲಕ ಮಹಿಪಾಲರೆಡ್ಡಿ ಮುನ್ನೂರ್‌ ಮಾತನಾಡಿ, ಕಳೆದ 20 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮನೆಗೆ ತೆರಳಿ ಅಮ್ಮ ಪುರಸ್ಕಾರ ನೀಡಲಾಗುತ್ತಿದೆ. ಸಂಭ್ರಮ ಪಡಬೇಕಾದ ವ್ಯಕ್ತಿತ್ವದ ಅಗಲಿಕೆಯ ನಡುವೆಯೂ ದೇಶಾಂಶ ಅವರ ಬೆನ್ನ ಹಿಂದಿನ ಬೆಳಕಂತೆ ಜೀವನವನ್ನು ಸವೆಸಿದ ಪತ್ನಿ ಮಹಾದೇವಮ್ಮ ಅವರನ್ನು ಸತ್ಕರಿಸುವ ಮೂಲಕ ಆ ಹಿರಿಯ ಚೇತನಕ್ಕೆ ನೆನಪು ಮಾಡಿಕೊಂಡಂತಾಯಿತು ಎಂದು ಹೇಳಿದರು.

ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ, ಹಿರಿಯ ಲೇಖಕಿ ಜಗದೇವಿ ದುಬಲಗುಂಡಿ, ಸಾಹಿತಿಗಳಾದ ಪ್ರೇಮಾ ಹೂಗಾರ, ವಿಜಯಲಕ್ಷ್ಮೀ ಸುಜೀತಕುಮಾರ, ವಿಜಯ ಭಾಸ್ಕರರೆಡ್ಡಿ, ಮಹಾದೇವರೆಡ್ಡಿ, ಬಸವರಾಜ, ಕನ್ಯಾಕುಮಾರಿ ಅನೇಕರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next