Advertisement

Article: ಮರಳಿ ಸಿಗದ ಅಮ್ಮನೂ, ಮಮತಾಮಯಿ ಕಂದನೂ…

01:37 AM Oct 01, 2023 | Team Udayavani |

ಅವನ ಹೆಸರು ಚಂದ್ರಶೇಖರ. ಈತ ಹೈಸ್ಕೂಲಿನಲ್ಲಿ ನನ್ನ ಜೂನಿಯರ್‌. ವಿಪರೀತ ಮಾತಾಡುತ್ತಿದ್ದ. ಎಲ್ಲ ರನ್ನೂ ಅನುಕರಿಸುತ್ತಿದ್ದ. ಕನ್ನಡ ಚಿತ್ರಗೀತೆಗಳನ್ನು ಕಂಗ್ಲಿ ಷಿನಲ್ಲಿ ಹಾಡುವುದು ಅವನ ಮೆಚ್ಚಿನ ಹವ್ಯಾಸವಾಗಿತ್ತು. ಇಂಥ ಹಿನ್ನೆಲೆಯ ಚಂದ್ರಶೇಖರನಿಗೆ, ನನ್ನೊಂದಿಗೆ ಅತೀ ಅನ್ನುವಷ್ಟು ಸಲುಗೆ ಇತ್ತು. ಮನಸಿಗೆ ಬಂದು ದನ್ನೆಲ್ಲ ಸಂಕೋಚವಿಲ್ಲದೆ ಹೇಳುತ್ತಿದ್ದ.

Advertisement

ಹೀಗಿದ್ಧಾಗಲೇ ಅದೊಂದು ದಿನ- ಅಲ್ಲ ಕಣೋ, ಇಲ್ಲಿಯ ತನಕ ಎಷ್ಟೊಂದು ವಿಷಯ ಮಾತಾ ಡಿದ್ದೀಯ. ಆದರೆ ನಿಮ್ಮ ಕುಟುಂಬದ ಬಗ್ಗೆ ಏನೂ ಹೇಳಲೇ ಇಲ್ಲವಲ್ಲ?’ ಎಂದೆ. “ಓ, ಅದಾ, ಕೇಳಿ. ನಮ್ತಂದೆ ಕೃಷಿಕರು. ನಾವು ಮೂವರು ಮಕ್ಳು. ನಾನೇ ಕೊನೆಯವನು. ಇಬ್ಬರು ಅಕ್ಕಂದಿರು’ ಅಂದ. “ನಿಮ್ಮ ಅಮ್ಮನ ಬಗ್ಗೆ ಹೇಳಲೇ ಇಲ್ವಲ್ಲ’ ಎಂದೆ. ಅಷ್ಟಕ್ಕೇ ಈ ಹುಡುಗನ ಮುಖ ಬಾಡಿತು. ಮಾತು ತಡವರಿಸಿತು. ಕಣ್ಣ ತುಂಬ ನೀರ ಪೊರೆ. “ಏನಾಯ್ತೋ’ ಎಂದು ಗಾಬರಿಯಿಂದ ಕೇಳಿದೆ. ಅವನು, ಒಮ್ಮೆ ಛಟ್ಟನೆ ತಲೆ ಕೊಡವಿದ. ಕಪಾಲಕ್ಕಿಳಿದ ಕಂಬನಿಯನ್ನು ಒರೆಸಿಕೊಂ ಡು ಹೇಳಿದ: “ನಮಗೆ ಅಮ್ಮ ಇಲ್ಲ. ಅಂದ್ರೆ ಸತ್ತು ಹೋಗಿದಾರೆ ಅಂತ ಅರ್ಥವಲ್ಲ. ಬದುಕಿದ್ದಾರೆ. ಆದರೆ ಬೇರೆಯವರ ಜತೆಯಲ್ಲಿದ್ದಾರೆ… ಹೇಳಿದ್ರೆ ಅದೊಂದು ದೊಡ್ಡ ಕಥೆ. ನಿಮ್‌ ಹತ್ರ ಮುಚ್ಚುಮರೆ ಎಂಥಾದ್ದು? ಇವತ್ತು ಎಲ್ಲ ಹೇಳಿಬಿಡ್ತೀನಿ’ ಅಂದವನೇ ನಿರ್ವಿಕಾರ ಭಾವದಲ್ಲಿ ಹೇಳುತ್ತಾ ಹೋದ.

“ನಮ್ಮದು ಬಡತನದ ಕುಟುಂಬ. ಅಮ್ಮ ಆಫೀ ಸೊಂದರಲ್ಲಿ ಆಯಾ ಆಗಿದ್ದಳಂತೆ. ಆಕೆಗೆ ಒಂದಿಷ್ಟು ಜಾಸ್ತಿ ಆಸೆಗಳೂ, ಕನಸುಗಳೂ ಇದ್ದವು. ಅದೇನು ಕಾರಣವೋ, ಅಪ್ಪ- ಅಮ್ಮನಿಗೆ ಹೊಂದಾಣಿಕೆ ಇರಲಿ ಲ್ಲವಂತೆ. ಪರಿಣಾಮ, ಆಗಾಗ್ಗೆ ಮುನಿಸು- ವೈಮನಸ್ಸು ಕಾಮನ್‌ ಆಗಿತ್ತಂತೆ. ಅದೊಂದು ದಿನ ಯಾವುದೊ ಕಾರಣಕ್ಕೆ ಜಗಳವಾಡಿಕೊಂಡ ಅಮ್ಮ, ಗಂಡನಿಗೂ, ಚಿಕ್ಕ ವಯಸ್ಸಿನ ಮೂರು ಮಕ್ಕಳಿಗೂ ಗುಡ್‌ ಬೈ ಹೇಳಿ ಹೋಗಿಯೇಬಿಟ್ಟಳಂತೆ.

ಕೃಷಿಕನಾಗಿದ್ದ ಅಪ್ಪ ಅನಂತರದ ದಿನಗಳಲ್ಲಿ ಅನು ಭವಿಸಿದ ಸಂಕಟಕ್ಕೆ ಮಿತಿಯಿಲ್ಲ. ಆದರೆ ಆತ ಅದನ್ನು ಯಾರೊಂದಿಗೂ ಹೇಳಿಕೊಳ್ಳಲಿಲ್ಲ. ಕಂಡವರ ಮುಂ ದೆಲ್ಲ ಹೆಂಡತಿಯನ್ನು ಬೈದುಕೊಂಡು ತಿರುಗಲಿಲ್ಲ. ಮರುಮದುವೆಯಾಗಲಿಲ್ಲ. ಯಾರೊಬ್ಬರ ಅನುಕಂಪವನ್ನೂ ಬಯಸಲಿಲ್ಲ. ಬದಲಿಗೆ- “ನನ್ನ ಹಣೇಲಿ ಬರೆದಿರೋದು ಇಷ್ಟೇ. ಕಳೆದುಹೋಗಿದ್ದಕ್ಕೆ ಚಿಂತಿಸಿ ಪ್ರಯೋಜನವಿಲ್ಲ. ಕಣ್ಣೆದುರಿಗೆ ಮಕ್ಕಳಿದ್ದಾರೆ. ಅವ ರನ್ನು ಸಾಕುವ ಜವಾಬ್ದಾರಿ ನನ್ನ ಮೇಲಿದೆ ಅಂದು ಕೊಂಡು ಮೌನವಾಗಿ ಉಳಿದುಬಿಟ್ಟ.

ತಲೆ ಬಗ್ಗಿಸಿಕೊಂಡೇ ಇದಿಷ್ಟನ್ನೂ ಹೇಳಿದ ಚಂದ್ರ ಶೇಖರ ಬಳಿಕ ಹೀಗೆಂದ: “ನನ್ನ ಎದೆಯೊಳಗೆ ಎಂದೆಂ ದಿಗೂ ಮುಗಿಯದಂಥ ನೋವಿದೆ. ಅದನ್ನೆಲ್ಲ ತೋರ್ಪಡಿಸಿಕೊಳ್ಳದೆ ನಗೆಯ ಮುಖವಾಡ ಹಾಕ್ಕೊಂ ಡು ಬದುಕ್ತಾ ಇದೀನಿ. ಇವತ್ತು ನಿಮ್ಮ ಜತೆ ಎಲ್ಲವನ್ನೂ ಹೇಳಿಕೊಂಡೆ. ನನ್ನ ಮನಸ್ಸಿಗೂ ಸ್ವಲ್ಪ ಸಮಾಧಾನ ಆಯ್ತು. ನಮ್ಮ ಅಮ್ಮ ಏನೇ ಮಾಡಿರಬಹುದು. ಆದರೆ ಅವಳು ಯಾವತ್ತಿಗೂ ನಂಗೆ ಅಮ್ಮನೇ. ಆಕೆ ಯನ್ನು ದ್ವೇಷಿಸುವುದು ನನ್ನಿಂದ ಸಾಧ್ಯವಿಲ್ಲ. ಮನೆ ಬಿಟ್ಟು ಹೋದಾಗ ಅವಳ ಆಸೆ ಏನಿತ್ತೂ ಏನೋ; ಈಗ ಇಷ್ಟು ವರ್ಷದ ಬಳಿಕ ಆಕೆಗೆ ಖಂಡಿತ ಪಶ್ಚಾತ್ತಾಪ ಆಗಿ ರ್ತದೆ. ಆಕೆ ಮನೆಯಿಂದ ಹೋದಾಗ ನನಗೆ 4 ವರ್ಷವಂತೆ. ಈಗ ಇಪ್ಪತ್ತೂಂದು ತುಂಬಿದೆ. ಈ ಹದಿ ನೇಳು ವರ್ಷಗಳ‌ಲ್ಲಿ ಆಕೆ ಬದಲಾಗಿರಬಹುದು. ಗಂಡ-ಮಕ್ಕಳ ಮೇಲೆ ಪ್ರೀತಿ ಹುಟ್ಟಿರಬಹುದು. ಆಕೇನ ಹುಡುಕ್ತೀನಿ. ಹೇಗಾದ್ರೂ ಮಾಡಿ ವಾಪಸ್‌ ಕರ್ಕೊಂಡು ಬರ್ತೀನಿ…’

Advertisement

ಚಂದ್ರಶೇಖರನ ಮಾತುಗಳಲ್ಲಿ ಖಚಿತತೆ ಇತ್ತು. ಡಿಗ್ರಿ ಮುಗಿದ ತತ್‌ಕ್ಷಣ ಅವನು ದುಡಿಮೆಗೆ ನಿಂತಿದ್ದ. ಬಹುಶಃ ಮುಂದೆ ಏನೇನು ಮಾಡಬೇಕೆಂದು ಮೊದ ಲೇ ನಿರ್ಧರಿಸಿದ್ದನೇನೋ; ಸಂಪಾದನೆಯಲ್ಲಿ ಒಂದಿ ಷ್ಟು ದುಡ್ಡನ್ನು “ಕಷ್ಟಕಾಲಕ್ಕೆಂದು’ ತೆಗೆದಿಟ್ಟಿದ್ದ. ಅಮ್ಮ ನನ್ನು ಹುಡುಕಬೇಕು, ಅವಳನ್ನು ವಾಪಸ್‌ ಮನೆಗೆ ಕರೆತರಬೇಕು ಎಂಬುದಷ್ಟೇ ಅವನ ಆಸೆಯಾಗಿತ್ತು.
ಒಂದೆರಡಲ್ಲ, ಹನ್ನೊಂದು ಪ್ರಯತ್ನಗಳಲ್ಲೂ ಚಂದ್ರಶೇಖರನಿಗೆ “ಅಮ್ಮ’ ಸಿಕ್ಕಿರಲಿಲ್ಲ. ಹಾಗಂತ ಇವನು ಹುಡುಕುವುದನ್ನು ನಿಲ್ಲಿಸಲಿಲ್ಲ. ಹನ್ನೆರಡನೇ ಬಾರಿಯ ಹುಡುಕಾಟದಲ್ಲಿ ಅದೇ ದಾವಣಗೆರೆಯಲ್ಲಿ ಸಿಕ್ಕಿಯೇಬಿಟ್ಟಳು-ಅವನ ತಾಯಿ! ಅವತ್ತು, ಆ ಕ್ಷಣದ ಮಟ್ಟಿಗೆ ಕಾಲ ಸ್ತಂಭಿಸಿತು. ಈ ಹುಡುಗ ಸಂಭ್ರ ಮದಿಂದ- “ಅಮ್ಮಾ’ ಎಂದು ಹತ್ತಿರ ಹೋದರೆ- ಆಕೆ ಮುಖ ತಿರುಗಿಸಿ ಮುಂದೆ ಹೋದಳಂತೆ. ಇವನು ಬಿಡಲಿಲ್ಲ. ಹಿಂದೆ ಬಿದ್ದ. ಕೈಮುಗಿದ. ಕೈ ಹಿಡಿದ. ಕಂ ಬನಿ ಮಿಡಿಯುತ್ತಾ ತನ್ನ ಪರಿಚಯ ಹೇಳಿಕೊಂಡ. “ಊರಿಗೆ ಹೋ ಗಿಬಿಡೋಣ ಬಾರಮ್ಮ, ನಾನು ಸಾಕ್ತೇನೆ… ‘ ಎಂದ. ಆದರೆ ಆಕೆಯ ಬದುಕಿನ ದಾರಿ ಯೇ ಬೇರೆ ಇತ್ತೇನೋ; ಆಕೆ ಒಪ್ಪಲಿಲ್ಲ.

ಆಗ ನಾನು “ಈವರೆಗಿನ ಬದುಕಿನ ಬಗ್ಗೆ ನೀನೂ ಹೇಳಬೇಡ, ನಾವೂ ಕೇಳುವುದಿಲ್ಲ. ಅಪ್ಪ ನನ್ನು ಒಪ್ಪಿ ಸುವುದು ನನ್ನ ಜವಾಬ್ದಾರಿ. ಬಾರಮ್ಮ ಹೋ ಗೋಣ…’ ಎಂದು ಒತ್ತಾಯಿಸಿದೆ.
ಆದರೆ ಆ ತಾಯಿ ಸುತಾರಾಂ ಒಪ್ಪಲಿಲ್ಲ. “ನೀನು ದೇವರಂಥವನು ಮಗಾ. ನಿನ್ನ ನೆರಳು ನೋಡುವ ಯೋಗ್ಯತೆ ಕೂಡ ನನಗಿಲ್ಲ. ನಾನು ಬಹಳ ದೂರ ಬಂದು ಬಿಟ್ಟಿದ್ದೀನಿ. ನೀವು ಗುಣವಂತರಾಗಿ ಬದುಕಿ ದ್ದೀರಿ. ಊರಿನಲ್ಲಿ ಒಳ್ಳೆಯ ಹೆಸರು ತಗೊಂಡಿದ್ದೀರಿ. ನಾನು ಇವತ್ತೋ ನಾಳೆಯೋ ಬಿದ್ದುಹೋಗುವ ಮರ. ನನ್ನನ್ನು ಮರೆತು ಬದುಕಿ. ಆದ್ರೆ ಮಗಾ… ಮಾಡಿದ್ದು ತಪ್ಪು ಅಂತ ನನಗೆ ಒಮ್ಮೆಯಲ್ಲ, ಸಾವಿರ ಸಲ ಅನ್ನಿಸಿದೆ. ಆಗೆಲ್ಲ ಒಬ್ಬಳೇ ಅತ್ತಿದ್ದೇನೆ. ಅವತ್ತು ಅದ್ಯಾವ ಮಾಯೆ ಆವರಿಸಿತ್ತೋ, ತಿರುಗಿ ಮನೆಗೆ ಬರುವ ಮನಸ್ಸಾ ಗಲಿಲ್ಲ. ಈಗ ನೀನು ಅಕ್ಕರೆಯಿಂದ ಕರೀತಿದ್ದೀಯ. ಆದ್ರೆ ಬರಲಿಕ್ಕೆ ನನಗೆ ಮುಖವಿಲ್ಲ, ಯೋಗ್ಯತೆ ಇಲ್ಲ. ನನ್ನನ್ನು ಒತ್ತಾಯಿಸಬೇಡ. ನೀವೆಲ್ಲರೂ ಚೆನ್ನಾಗಿರಿ. ನಿಮ್ಮ ತಂದೆಯವರನ್ನು ಚೆನ್ನಾಗಿ ನೋಡಿಕೋ. ಸಾಧ್ಯ ವಾದರೆ ನನ್ನನ್ನು ಕ್ಷಮಿಸಿಬಿಡಪ್ಪಾ… ನಿನಗೆ ಕೈಮುಗಿದು ಕೇಳ್ತೇನೆ, ನನ್ನನ್ನು ಮತ್ತೆ ಹುಡುಕಿಕೊಂಡು ಬರ ಬೇಡ…’ಅಂದು ಭರ್ರನೆ ಹೋಗಿಬಿಟ್ಟರಂತೆ.

ನಾಲ್ಕಾರು ತಿಂಗಳುಗಳಿಂದ ಮಗ ಪದೇಪದೆ ಸಿಟಿಗೆ ಹೋಗುತ್ತಿರುವುದನ್ನು ಅವನ ತಂದೆ ಗಮನಿಸಿದ್ದರು. ನನಗೆ ಗೊತ್ತಿಲ್ಲದಂತೆ ಏನೋ ನಡೀತಿದೆ ಅಂದು ಕೊಂಡವರು ದಿಢೀರ್‌ ಅನಾರೋಗ್ಯಕ್ಕೆ ತುತ್ತಾದರು. ವಿಪರೀತ ಜ್ವರ, ಲೋ ಬಿಪಿ ಕಾರಣಕ್ಕೆ ಆಸ್ಪತ್ರೆಗೆ ಸೇರಿಸಿದ್ದಾಯಿತು. ಈ ಹುಡುಗ ಅಪ್ಪನ ಮುಂದೆ ನಡೆದ ¨ªೆಲ್ಲವನ್ನೂ ಹೇಳಿಬಿಟ್ಟ. ಅವತ್ತೇ ಸಂಜೆ ಆಗಬಾರದ ಅನಾಹುತ ಆಗಿ ಹೋಯಿತು. ಚಂದ್ರಶೇಖರನ ತಂದೆ ಹೃದಯಾಘಾತದಿಂದ ತೀರಿಕೊಂಡರು!

ಚಂದ್ರಶೇಖರನ ಬದುಕಿನಲ್ಲಿ ನಿಜವಾದ ಹೋ ರಾಟ ಶುರುವಾಗಿದ್ದೇ ಆಗ. ಅಪ್ಪ ಜತೆಗಿಲ್ಲ, ಅಮ್ಮ ಸಿಗೋದಿಲ್ಲ ಎಂಬ ಕಠೊರ ಸತ್ಯ ಎದುರಿಗಿತ್ತು. ಪಿತ್ರಾರ್ಜಿತ ಆಸ್ತಿಯನ್ನೆಲ್ಲ ಮಾರಿದ. ಬಂದ ಹಣದಲ್ಲಿ ಅಕ್ಕಂದಿರ ಮದುವೆ ಮಾಡಿದ. ಸಾಲ ಮಾಡಿ ಡಬಲ್‌ ಡಿಗ್ರಿ ಮಾಡಿಕೊಂಡ. ಕೆಲಸ ಹುಡುಕಿಕೊಂಡು ಬೆಂಗ ಳೂರಿಗೆ ಬಂದ. ದಿನಕ್ಕೆ ಮೂರು ಶಿಫ್ಟ್‌ಗಳಲ್ಲಿ ದುಡಿದ. ಬಿಡುವಿನಲ್ಲಿ ಕೋಚಿಂಗ್‌ ಪಡೆದ. ಅನಂತರ ಪ್ರತೀ ಎರಡು ತಿಂಗಳಿಗೊಂದು ಸ್ಪರ್ಧಾತ್ಮಕ ಪರೀಕ್ಷೆ ಬರೆದು, 8ನೇ ಪ್ರಯತ್ನದಲ್ಲಿ ಸರಕಾರಿ ನೌಕರಿ ಪಡೆದೇ ಬಿಟ್ಟ.

ಚಂದ್ರಶೇಖರನಿಗೆ ನೌಕರಿ ಸಿಕ್ಕಿ 15 ವರ್ಷಗಳು ಕಳೆ ದವು. ಅವನೀಗ ದೊಡ್ಡ ಹುದ್ದೆಯಲ್ಲಿದ್ದಾನೆ. ಕಷ್ಟದಲ್ಲಿ ಇರುವವರಿಗೆ, ಸ್ಪರ್ಧಾತ್ಮಕ ಪರೀಕ್ಷೆಗೆ ಕೂರು ವವರಿಗೆ ಉಚಿತವಾಗಿ ತರಗತಿಗಳನ್ನು ನಡೆಸುವ ಉದ್ದೇಶ ಅವನಿಗಿದೆ. ಮೊನ್ನೆ ಸಿಕ್ಕವನು, ತನ್ನ ಕನಸುಗಳ ಬಗ್ಗೆ ಹೇಳಿಕೊಂಡ. ಬದುಕು ನನ್ನನ್ನು ಹೇಗೆಲ್ಲ ಸತಾಯಿ ಸಿಬಿಡ್ತಲ್ಲ ಸಾರ್‌ ಅನ್ನುತ್ತಾ ಮೌನಿಯಾದ.
ಯಾಕೋ ಇದನ್ನೆಲ್ಲ ಹೇಳಿಕೊಳ್ಳಬೇಕು ಅನ್ನಿಸಿತು….

 ಎ.ಆರ್‌.ಮಣಿಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next