Advertisement

ಅಮ್ಮ@46

08:59 PM May 16, 2019 | Sriram |

ಅಮ್ಮ ರೆಡಿ ಆಗಿದಿಯಾ? ಕರೆದುಕೊಂಡು ಹೋಗಲು ಮಂಜ ಗಾಡಿ ತಂದಿದ್ದಾನೆ” ಅಂತ ಮಗ ಕೂಗಿದ. ನನ್ನ ನೋಡಿ, “ಜರಿ ಸೀ…ರೆ! ಉಟ್ಟಿದ್ದೀಯಾ? ಒಂದು ನಿಮಿಷ ಇರು ಒಂದು ಫೋಟೋ ತೆಗೀತಿನಿ” ಅಂತ ಸಂಭ್ರಮದಿಂದ ಅಪ್ಪನ ಮೊಬೈಲ್‌ ತೆಗೆದುಕೊಂಡು ಬಂದ. ನಾನು, “ಒಳ್ಳೆಯ ಆ್ಯಂಗಲ್‌ನಿಂದ ತೆಗಿಯೋ ಕೋಲೋ ಸ್ಟೋಮಿ ಬ್ಯಾಗ್‌ ಇದೆ ಹೊಟ್ಟೆ ದಪ್ಪ ಕಾಣುತ್ತೆ” ಅಂದೆ. ಫೋಟೋ ತೆಗೆದವನೆ ಅವನ ಅವ್ವನಿಗೆ (ನನ್ನ ಅಮ್ಮನಿಗೆ) ವಾಟ್ಸಾಪ್‌ ಮಾಡಿದ “ಅಮ್ಮ@46′ ಅಂತ.

Advertisement

ಎಂಟು ತಿಂಗಳಿಂದ ಮನೆಯಲ್ಲಿಯೇ ಮುದುಡಿಕೊಂಡು ಕೂತಿದ್ದ ಅಮ್ಮ ಅಚಾನಕ್ಕಾಗಿ ಚೌಡಮ್ಮ ದೇವಿಯ ಜಾತ್ರೆ ನೋಡಲು ಕಾಂಜೀವರಂ ಸೀರೆ ಉಟ್ಟು ರೆಡಿಯಾಗಿದ್ದಾಳೆ ಅಂದರೆ, ಮಗನಿಗೂ ಹಿಗ್ಗಾಯಿತು. ನನ್ನ ಫೋಟೋವನ್ನು ಮೊಬೈಲ್‌ನಲ್ಲಿ ನೋಡಿ ನಾನೇ ಸಂಭ್ರಮಿಸಿದೆ. ಶರೀರ ಕೃಶವಾಗಿತ್ತು, ಹಣೆಮೇಲೆ ಗೆರೆಗಳು, ಕೂದಲು ಉದುರಿ ನಾಲ್ಕೇ ಕೂದಲು ಕ್ಲಿಪ್‌ ಜೊತೆ ನೇತಾಡುತ್ತಿತ್ತು. ಮುಖದಲ್ಲಿ ಮೊದಲಿದ್ದ ಕಳೆ ನೋಡಿ ಸಂತೋಷವಾಯಿತು. ಇದಕ್ಕೆಲ್ಲ ಕಾರಣಕರ್ತರಾದ ಆಯುರ್ವೇದ ಡಾಕ್ಟರಿಗೆ ಧನ್ಯವಾದ ಹೇಳಲೇಬೇಕು.

ಮೊನ್ನೆ ಬೆಂಗಳೂರಿಗೆ ತೋರಿಸಲು ಹೋದಾಗ “ನಿಮ್ಮ ತೂಕ ಹೆಚ್ಚಾಗಿದೆ, ಕ್ಯಾನ್ಸರ್‌ನ ಯಾವ ಲಕ್ಷಣಗಳೂ ಕಾಣಿಸ್ತಾ ಇಲ್ಲ” ಎಂದು ಡಾಕ್ಟರ್‌ ಹೇಳಿದಾಗ ಅಮೃತ ಸಿಂಚನವಾಗಿ ಮುಖ ಅರಳಿತು. “ಹೀಗೆ ಖುಷಿಯಾಗಿರಿ. ಉಳಿದ ತೊಂದರೆಗಳು ವಾಸಿ ಆಗುತ್ತೆ” ಅಂದರು. ಕಳೆದ ತಿಂಗಳು ನಾನು ಇದೇ ಡಾಕ್ಟರ್‌ಗೆ ಮೊದಲ ಬಾರಿ ತೋರಿಸಿದಾಗ “ಡಾಕ್ಟರೇ, ನನಗೆ ಕ್ಯಾನ್ಸರ್‌ ಇಲ್ಲ, ಕ್ಯಾನ್ಸರ್‌ ಅಂದುಕೊಂಡು ಕ್ಯಾನ್ಸರ್‌ ಸರ್ಜನ್‌ ನನಗೆ ಕರುಳಿನಲ್ಲಿದ್ದ ಗೆಡ್ಡೆ ತೆಗೆದರು. ಆದರೆ, ಅದರಿಂದ ಒಂದು ಅಚಾತುರ್ಯ ನಡೆದು, ನನಗೆ ಈಗ ಪಿಸ್ತುಲಾ ಆಗಿದೆ, ಕೋಲೋಸ್ಟಮಿ ಬ್ಯಾಗ್‌ ಹಾಕಿದ್ದಾರೆ. ಈಗಾಗಲೇ ಎರಡು ಆಪರೇಷನ್‌ ಆಗಿದೆ. ಮತ್ತೆ ಆಪರೇಷನ್‌ ಅಂತಿದ್ದಾರೆ” ಎಂದು ಗೊಳ್ಳೋ ಅಂತ ಅತ್ತೆ. ಸೊರಗಿದ ಶರೀರ, ಮುಖದಲ್ಲಿ ಕಪ್ಪು ಕಲೆಗಳು, ಗುಳಿಬಿದ್ದ ಕಣ್ಣುಗಳು ಹಾಗೂ ಉದುರಿದ ಕೂದಲು ನೋಡಿ ಡಾಕ್ಟರ್‌ ಏನು ಅಂದುಕೊಂಡರೋ ಗೊತ್ತಿಲ್ಲ. ನನ್ನ ಈ ಪರಿಸ್ಥಿತಿಗೆ ಕ್ಯಾನ್ಸರ್‌ ಖಂಡಿತವಾಗಿಯೂ ಕಾರಣವಲ್ಲ ಅಂತ ನನಗೆ ದೃಢವಾಗಿ ಗೊತ್ತಿತ್ತು.

ಸಂಸಾರವೆಂದರೆ “ಸುಖ ಹಾಗೂ ರಕ್ಷಣೆ’ ಎಂಬ ಭ್ರಮೆಯಲ್ಲಿ ನಾನು ನಂಬಿದ ಸಂಸಾರ ನನಗೆ ಕೊಟ್ಟ ಬರೆಗಳೇ ಈ ಕಪ್ಪು ಕಲೆಗಳಾಗಿದ್ದವು. ನಾನು ಎಷ್ಟು ಓದಿದರೇನು? ಸಂಸಾರದಲ್ಲಿ ಎದ್ದೇಳುವ ಅಲೆಗಳ ಹೊಡೆತವನ್ನು ನಿಭಾಯಿಸಲು ಸೋತುಹೋಗಿದ್ದು ಸ್ಪಷ್ಟವಾಗಿ ಎದ್ದುಕಾಣುತ್ತಿತ್ತು. ಆದರೆ, ಕ್ಯಾನ್ಸರ್‌ ಸರ್ಜನ್‌ಗೆ ಕಂಡಿದ್ದು ನನ್ನ ಕರುಳಿನಲ್ಲಿದ್ದ ಗೆಡ್ಡೆ, ಅದನ್ನು ತೆಗೆದರೆ ಆರಾಮ ಆಗುತ್ತದೆ ಅನ್ನುವ ಅಂಶ ಮಾತ್ರ. ಆಯುರ್ವೇದ ಮೂಲವನ್ನು ಹುಡುಕಿ ಔಷಧಿ ಕೊಡುತ್ತದೆ ಅನ್ನುವ ನಂಬಿಕೆಯಿಂದ ಆರ್ಯುರ್ವೇದ ಡಾಕ್ಟರ್‌ ಹತ್ತಿರ ಬಂದಿದ್ದೆ. ಎರಡನೆಯ ಭೇಟಿಗೆ ಡಾಕ್ಟರ್‌ ನನ್ನ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಿದ್ದರಿಂದ ನನ್ನ ಸಂತೋಷಕ್ಕೆ ಪಾರವೇ ಇಲ್ಲ. ಅದೇ ಸಮಯದಲ್ಲಿ ಧೈರ್ಯವಾಗಿ ಕಾಂಜೀವರಂ ಸೀರೆ ಉಟ್ಟು ಚೌಡಮ್ಮ ದೇವಿಯ ಜಾತ್ರೆಗೆ ತಯಾರಾಗಿದ್ದೆ.

ಆಪರೇಷನ್‌ ಥಿಯೇಟರ್‌ಗೆ ಹೋಗುವುದಕ್ಕಿಂತ ಮೊದಲು ನಾನು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾಗ ಜೊತೆಯಲ್ಲಿದ್ದ ಗೆಳತಿಯರನ್ನೆಲ್ಲ ಒಂದು ಸಲ ನೆನೆದೆ. ಬಹಳ ವರ್ಷಗಳೇ ಕಳೆದುಹೋದವು. ಹೃದಯದಲ್ಲಿ ಅವರಿದ್ದರೂ ಅವರ ಫೋನ್‌ ನಂಬರ್‌ ಕಳೆದುಹೋಗಿತ್ತು. ಅವರೂ ಕೂಡ ನನ್ನನ್ನು ನೆನಪಿಸಿಕೊಳ್ಳುತ್ತಿರಬಹುದು ಅಂತ ಅಂದುಕೊಂಡೆ. ಹಾಗೇ ಆಯಿತು. ನನ್ನ ಗೆಳತಿಯೊಬ್ಬಳು ಫೋನ್‌ ಮಾಡಿ “ನಾನು ಯಾರು ಹೇಳು” ಅಂದಳು. “ಕತ್ತೆ, ವಾಟ್ಸಾಪ್‌ನಲ್ಲಿ ಇಲ್ಲ. ನಿನ್ನನ್ನು ಹೇಗೆ ಹುಡುಕುವುದು? ಅಂತೂ ಸಿಕ್ಕೆಯಲ್ಲ ಚೆನ್ನಾಗಿದ್ದೀಯಾ?” ಅಂದಳು. ನನ್ನ ಖುಷಿಗೆ ಎಣೆಯಿಲ್ಲ. ನನ್ನ ಟೆಲಿಪತಿ ಕೆಲಸ ಮಾಡಿತ್ತು. ಪರಿಸ್ಥಿತಿ ವಿವರಿಸಿದೆ. “ಯೋಚನೆ ಮಾಡಬೇಡ, ಈ ವಯಸ್ಸೇ ಅಷ್ಟು ನಾವು ಐವತ್ತು ವರ್ಷ ದಾಟಿದ ಮೇಲೆ ಎಲ್ಲ ಅಡ್ಜಸ್ಟ್‌ ಆಗುತ್ತದೆ. ಹ್ಯಾವ್‌ ಕಾನ್‌ಫಿಡೆನ್ಸ್‌” ಅಂತ ಧೈರ್ಯ ತುಂಬಿ ಫೋನ್‌ ಇಟ್ಟಳು.

Advertisement

ಹೌದು! ಸ್ವೀಟ್‌ ಹದಿನೈದರಲ್ಲಿ ಮಕ್ಕಳು ತಳಮಳ ಅನುಭವಿಸುತ್ತಾರೆ. ಆ ಕಡೆ ದೊಡ್ಡವರಲ್ಲಿ ಶರೀರದ ಬದಲಾವಣೆಗಳು ದೊಡ್ಡವರು ಅಂದುಕೊಳ್ಳುವ ಧೈರ್ಯ ಕೊಡುತ್ತಿದ್ದರೂ, ಅಪ್ಪ-ಅಮ್ಮನ ಹಿಡಿತ, ಓದುವ ಜವಾಬ್ದಾರಿಗಳು “ನೀನು ಇನ್ನೂ ಸಣ್ಣವನು’ ಎಂದು ಎಚ್ಚರಿಸುತ್ತಿರುತ್ತದೆ. ಹಾಗೆಯೇ, ಮಹಿಳೆಯರ ಸ್ವೀಟ್‌ 45ರಿಂದ 50 ವರ್ಷ ವಯಸ್ಸಿಗೂ ಇದೇ ಗೊಂದಲಗಳು. ಬೇಗ ಮದುವೆ ಆಗಿದ್ದರೆ ಸೊಸೆ ಬಂದಿರುತ್ತಾಳೆ. ಮೊಮ್ಮಕ್ಕಳು ಬರಲೂ ಸಾಕು.

ಅವ್ವ-ಅಜ್ಜಿ ಅಂತ ಕರೆಸಿಕೊಳ್ಳಲು ನಾಚಿಕೆಯಾಗಿ, “ಅಮ್ಮ ಅಮ್ಮ ಅಂತ ಕರಿ, ಇಲ್ಲವೆ ಗ್ರಾನೀ ಅಂತ ಕರಿ” ಅಂತ ಮೊಮ್ಮಕ್ಕಳಿಗೆ ತಾಕೀತು ಮಾಡುವವರಿದ್ದಾರೆ. 45ಕ್ಕೇ ನನಗೆ ವಯಸ್ಸಾಯಿತೇ ಎಂದು ಕನ್ನಡಿ ನೋಡಿಕೊಂಡರೆ ಅಡ್ಡಾದಿಡ್ಡಿ ದಪ್ಪನಾದ ಶರೀರ, ಕೆಲವರಿಗೆ ಅಲ್ಲೊಂದು ಇಲ್ಲೊಂದು ಬಿಳಿ ಕೂದಲು (ಈಗೇನು ಮಕ್ಕಳಿಗೂ ಕೂದಲು ಬಿಳಿಯಾಗುತ್ತದೆ) ಯಾವ ಹೇರ್‌ಡೈ ಒಳ್ಳೆಯದು ಎನ್ನುವ ಯೋಚನೆ, ಅಲ್ಲೊಂದು ಇಲ್ಲೊಂದು ಕಾಣುವ ಚಿಂತೆಯ ಸುಕ್ಕುಗಳು, ಜವಾಬ್ದಾರಿ ತೆಗೆದುಕೊಂಡು ಸೋತ ಮುಖ, ಬಹಳ ಮಹಿಳೆಯರಿಗೆ ಮುಟ್ಟು ನಿಂತೇ ಹೋಗಿರುತ್ತದೆ. ಅಥವಾ ನಿಲ್ಲುವ ಸೂಚನೆ ಕೊಡುತ್ತಿರುತ್ತದೆ. ಅದರ ಕಿರಿಕಿರಿ, ಗಂಡ ನನ್ನನ್ನು ಇನ್ನು ಉಪಯೋಗವಿಲ್ಲ ಅಂತ ಕತ್ತು ಹಿಡಿದು ದಬ್ಬಬಹುದು ಅನ್ನುವ ಆತಂಕ. ಸೊಸೆ, “ಅತ್ತೆ’ ಅಂತ ಕರೆದಾಗ ಹೊಸ ಜವಾಬ್ದಾರಿ, ಹೊಂದಾಣಿಕೆಯ ಚಿಂತೆ, ಅಧಿಕಾರಕ್ಕೆ ಏರಿದ್ದೀನಾ ಅಥವಾ ಅಧಿಕಾರ ಕಳೆದುಕೊಳ್ಳುತ್ತಿದ್ದೀನಾ ಅನ್ನುವ ತಳಮಳ, ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುವ ಸಕ್ಕರೆ ಕಾಯಿಲೆ, ಬ್ಲಿಡ್‌ಪ್ರಷರ್‌, ಅಸಿಡಿಟಿ, ಮಂಡಿನೋವು, ನಿಶ್ಶಕ್ತಿ.

ಮನಸ್ಸು ಮುದವಾದ ಮಾತುಗಳನ್ನು ಗಂಡ-ಮಕ್ಕಳಿಂದ ಬೇಡುತ್ತಿದ್ದರೂ, ಓದಿನ ಅಥವಾ ಕೆಲಸದ ಒತ್ತಡದಲ್ಲಿರುವ ಮಕ್ಕಳು, “ನಿನ್ನನ್ನು ನೋಡಿಕೊಂಡು ಸಾಕಾಯಿತು’ ಅನ್ನುವ ದರ್ಪದ ಮಾತುಗಳು, ಗಂಡನಿಗೆ “ಇವಳು ಇಷ್ಟೇ… ಎಲ್ಲಾ ಹಣೆಬರಹ’ ಅನ್ನುವ ತಿರಸ್ಕಾರದ ಮಾತುಗಳು, ದುಡಿಯುವ ಮಹಿಳೆಗೆ ದುಡಿದು ಸಾಕಾಯಿತು, ಇನ್ನಾದರೂ ಕೆಲಸ ಬಿಡಲಾ ಅಂದುಕೊಂಡರೆ, ಗೃಹಿಣಿಗೆ ಎಲ್ಲರೂ ನನ್ನನ್ನು ತಿರಸ್ಕರಿಸುತ್ತಾರೆ ನಾನು ಗಳಿಸಲು ಪ್ರಾರಂಭಿಸಬೇಕು ಅನ್ನುವ ಛಲ, ಮೊದಲಿನಂತೆಯೇ ಅಲಂಕಾರ ಮಾಡಿಕೊಳ್ಳಲಾ ಅಥವಾ ಸೊಸೆ ಮೊಮ್ಮಕ್ಕಳಿಗೆ ಹೆದರಿ ನನ್ನ ಅಭಿರುಚಿ ಬದಲಾಯಿಸಲಾ? “ನಿಮಗೆ ವಯಸ್ಸಾಯಿತಲ್ಲಾ’ ಅಂತ ಯಾರಾದರೂ ಅಂದರೆ ಜೀವ ಚುರ್‌ ಅನ್ನುತ್ತದೆ.

ನಾನು ಅಕ್ಕನಿಗೆ ಹೇಳುತ್ತಿದ್ದೆ, “ನಿನಗೆ ಗೊತ್ತಲ್ಲ, ನನಗೆ ಸ್ವಲ್ಪ ಶೃಂಗಾರ ರಸ ಕಡಿಮೆ ಅಂತ, ಗಂಡಸರು ಲುಂಗಿ ಉಟ್ಟುಕೊಂಡು ಬರೀ ಮೈಯಲ್ಲಿ ತಿರುಗಾಡುತ್ತಾರಲ್ಲ , ಹಾಗೆಯೇ ಡಾಕ್ಟರ್‌ ನನ್ನ ಗರ್ಭಕೋಶ ತೆಗೆದಾಗಿನಿಂದ ಬಿಂದಾಸ್‌ ಆಗಿ ನೈಟಿ ಹಾಕಿಕೊಂಡೇ ಮನೆಯಲ್ಲೇ ಇರುತ್ತೀನಿ. ಯಾರು ಮನೆಗೆ ಬಂದರೂ ಮುಜುಗರ ಆಗಲ್ಲ” ಅಂದೆ.
ನಾನು ಮದುವೆ ಆದ ಮೇಲೂ ಚೂಡಿದಾರ ಹಾಕುತ್ತೀನಿ. ನಮ್ಮತ್ತೆ-ನಾದಿನಿಯರು “ಅಪಸ್ಮಾರ’ ಅಂತ ಮೂಗು ಮುರಿಯುತ್ತಿದ್ದರು. ಮೊನ್ನೆ ಬೆಂಗಳೂರಿನಲ್ಲಿ ಓಡಾಡುವಾಗ ನೋಡುತ್ತಾ ಇದ್ದೆ. ಅಮ್ಮ ಹಾಗೂ ಅಮ್ಮಮ್ಮ ಕೂಡಾ ಪ್ಯಾಂಟ್‌ ಹಾಕುತ್ತಾರೆ. ತಮ್ಮ ಅನುಕೂಲಕ್ಕೆ ತಕ್ಕಂತೆ ಮರ್ಯಾದೆಯ ಪರಿಧಿಯಲ್ಲಿ ನಾವಿದ್ದರೆ ತಪ್ಪೇನು?
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಸಂಸಾರಕ್ಕೆ ಸಂಬಂಧಗಳಿಗೆ ಬಹಳ ಪ್ರಶಸ್ತವಾದ ಸ್ಥಾನ ಕೊಡುವುದ ರಿಂದಲೇ ಏನೋ ಛಿದ್ರ ಸಂಸಾರಗಳ ಸಂಖ್ಯೆಯ ನಡುವೆಯೂ ಗಟ್ಟಿ ಸಂಸಾರಗಳು ಬೇಕಷ್ಟಿವೆ. ಮಕ್ಕಳ ಮನಸ್ಸು ಆರೋಗ್ಯವಾಗಿರಬೇಕಾದರೆ ಸಂಸಾರ ಗಟ್ಟಿ ಯಾಗಿರಬೇಕು ಎನ್ನುವ ಸತ್ಯಕ್ಕೆ ಬೆಲೆ ಇದೆ. ಇಷ್ಟಾದರೂ ಗಂಡಸರಿಗೆ ಯಾಕೆ ತಿಳಿಯುವುದಿಲ್ಲ? ತನಗೆ ವಯಸ್ಸಾ ದಂತೆ ತನ್ನ ಹೆಂಡತಿಗೂ ವಯಸ್ಸಾಗಿದೆ ಅಂತ. ಹೆಂಡತಿಗೆ ವಯಸ್ಸಾಯಿತು ಅಥವಾ ಕಾಯಿಲೆಯ ನೆಪದಲ್ಲಿ ಅಡ್ಡ ಸಂಬಂಧಗಳು ಹೆಚ್ಚಾಗುತ್ತಿರುವುದನ್ನು ಪತ್ರಿಕೆಗಳಲ್ಲಿ ಬರುವ ಕಾಲಮ್‌ ಹಾಗೂ ಟಿವಿ ಸೀರಿಯಲ್‌ಗ‌ಳನ್ನು ನೋಡಿದರೆ ಸಾಕು.

ನನ್ನ ಗೆಳತಿ ನನಗಿಂತ ವಯಸ್ಸಿನಲ್ಲಿ ದೊಡ್ಡವರು. ಇತ್ತೀಚೆಗಿನ ವಾಟ್ಸಾಪ್‌ನಲ್ಲಿ ಪ್ರೊಪೈಲ್‌ ಫೋಟೋ ಬೇರೆ ತರ ಇತ್ತು. ಸೊಸೇದಾ ಅಂತ ದೊಡ್ಡದು ಮಾಡಿ ನೋಡಿದರೆ ಅವಳೇ, ಬಿಗಿಯಾದ ಹೂವಿನ ಫ್ರಾಕ್‌ ಚೂಡಿದಾರ್‌ ಹಾಕಿಕೊಂಡಿದ್ದಳು. ತುಂಬಾ ಸುಂದರವಾಗಿ ಕಾಣುತ್ತಿದ್ದರು. ನಮ್ಮ ವಯಸ್ಸಿನವರನ್ನು ನಾವೇ ಹೊಗಳ್ಳೋಣ! ಎದುರು ಗಡೆ ಮನೆ ಅಕ್ಕ, “”ನೀವು ಧೈರ್ಯವಾಗಿರಿ ಗಂಡನಿಗೆ ಏಕೆ ಹೆದರುತ್ತೀರಾ? ಹೊಟ್ಟೆ ತುಂಬಾ ಉಂಡು ಮಕ್ಕೊರಿ” ಅನ್ನುವ ಧೈರ್ಯದ ಮಾತುಗಳನ್ನಾಡುತ್ತಾರೆ. “”ಗಂಡ ಸತ್ತಮೇಲೆ ಎರಡು ಹೆಣ್ಣು ಮಕ್ಕಳ ಸಂಸಾರ ಹೇಗೆ ನಿಭಾಯಿಸುತ್ತಿದ್ದೀನಿ ದೇವರಿಗೇ ಗೊತ್ತು. ಹೆಣ್ಣು ಸೋಲಬಾರದು ಅನುರಾಧಾ” ಅನ್ನುವ ಪಕ್ಕದ ಮನೆ ಆಂಟಿಯ ಕಿವಿಮಾತು. “”ಸೀರೆ ಸೇಲ್ಸ್‌ ಬಂದಿದೆ. ನಿನಗೆ ಎರಡು ತೆಗೀಲಾ” ಅಂತ ಅಮ್ಮ ಅಂದಾಗ “”ಸದ್ಯ ನಾನು ಎದ್ದು ಕೂರುವಂತಾಗಲಿ. ಆಮೇಲೆ ಮುಂದಿನದು. ನೈಟಿ ಬಿಟ್ಟರೆ ಯೋಚನೆ ಇಲ್ಲ” ಎಂದಾಗ, “”ನೀನೇನು ಹೀಗೇ ಇರುತ್ತೀಯಾ? ನಾಲ್ಕು ದಿನ ಅಷ್ಟೇ…. ಆಮೇಲೆ” ಎಂದು ಕನಸು ಬಿತ್ತುವ ಅಮ್ಮ , ಎಷ್ಟೋ ಸಲ ಗಂಟಲು ಆಪರೇಷನ್‌ ಆಗಿ ಕಲೆಗಳಿದ್ದರೂ ಉದ್ದ ಕಾಲರ್‌ ಹಾಕಿಕೊಂಡು ಕಲೆ ಮುಚ್ಚಿಕೊಂಡು ಧೈರ್ಯವಾಗಿ ಬದುಕುತ್ತಿರುವ ಗೆಳತಿಯ ಸಲಹೆ, “”ನಿಮಗೆ ಏನಾದರೂ ತಿನ್ನೋಕೆ ಬೇಕಾದರೆ ಮುಜುಗರ ಇಲ್ಲದೆ ನಮ್ಮನ್ನು ಕೇಳಿ” ಅಂತ ಸಹಾನುಭೂತಿ ತೋರಿಸುವ ಪಕ್ಕದ ಮನೆ ಟೀಚರ್‌, “”ಬೇಗ ರಿಕವರ್‌ ಆಗಿ ಆಂಟಿ” ಅಂತ ಹಾರೈಸುವ ಮಗನ ದೋಸ್ತರು ಇರುವಾಗ ನಾವೇಕೆ ನಮ್ಮ ಸ್ವೀಟ್‌ 46 ಅನ್ನು ಕಳೆದುಕೊಳ್ಳಬೇಕು! ಸಂಭ್ರಮಿಸೋಣ.

-ಎಸ್‌. ಬಿ. ಅನುರಾಧಾ

Advertisement

Udayavani is now on Telegram. Click here to join our channel and stay updated with the latest news.

Next