Advertisement

ಚುನಾವಣಾ ವ್ಯೂಹಾಚಾರ್ಯ ಅಮಿತ್‌ ಶಾ

03:45 AM Mar 12, 2017 | Team Udayavani |

ಲೋಕಸಭೆ ಚುನಾವಣೆಯ ಯೋಜನೆಯೇ ಮುಂದುವರಿಕೆ
ಲಕ್ನೋ:
ಚುನಾವಣೆಯ ಚಕ್ರವ್ಯೂಹ ರಚಿಸಿ ಮತಗಳನ್ನು ಗೆದ್ದುಕೊಡುವ ಸಮರ ತಂತ್ರಕಾರನಾಗಿ ತನಗೆ ತಾನೇ ಸಾಟಿ ಎಂಬುದನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮತ್ತೂಮ್ಮೆ ನಿರೂಪಿಸಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವಿನ ಬಳಿಕ ಇದೀಗ ಉತ್ತರಪ್ರದೇಶವನ್ನಿಡೀ ಅಕ್ಷರಶಃ ಬಾಚಿ ಬಿಜೆಪಿ ಬುಟ್ಟಿಗೆ ತುಂಬಿಸಿಕೊಂಡಿರುವುದು ಅಮಿತ್‌ ಶಾ ಸಾಮರ್ಥ್ಯಕ್ಕೆ ನಿದರ್ಶನ.

Advertisement

ಉತ್ತರಪ್ರದೇಶದಲ್ಲಿ ಬಿಜೆಪಿ 324 ಸ್ಥಾನಗಳನ್ನು ಗೆದ್ದಿರುವುದರ ಹಿಂದೆ ತಿಂಗಳುಗಟ್ಟಲೆ ಲಕ್ನೋದಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಠಿಕಾಣಿ ಹೂಡಿ, ಇಡೀ ರಾಜ್ಯದಲ್ಲಿ ಸತತ ಸಂಚರಿಸಿ ಪ್ರಚಾರ ತಂತ್ರವನ್ನು ಎಚ್ಚರಿಕೆ ಮತ್ತು ಅತ್ಯಂತ ಚಾಣಾಕ್ಷತನದಿಂದ ಯೋಜಿಸಿದ ಅಮಿತ್‌ ಶಾ ಅವರ ದಣಿವರಿಯದ ಶ್ರಮವಿದೆ.

ಜಾತಿ ಸೂತ್ರ, ಇನ್ನೊಂದು ಆಯಾಮ: ಎಸ್‌ಪಿ, ಕಾಂಗ್ರೆಸ್‌ ಮತ್ತು ಬಿಎಸ್‌ಪಿಯ ಜಾತಿ ಆಧಾರದಲ್ಲಿ ಮತಗಳನ್ನು ಸೆಳೆಯುವ ಸೂತ್ರವನ್ನೇ ಇನ್ನೊಂದು ಆಯಾಮದಿಂದ ಪ್ರಯೋಗಿಸಿದರೆ ಬಿಜೆಪಿ ಗೆಲುವು ಸಾಧಿಸಬಹುದು ಎಂಬುದನ್ನು ಶಾ ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲೇ ಮನಗಂಡಿದ್ದರು. ಎಸ್‌ಪಿ ಮತ್ತು ಬಿಎಸ್‌ಪಿಯಲ್ಲಿ ಪ್ರಾತಿನಿಧ್ಯ ಸಿಗದ ಇತರ ಜಾತಿಗಳನ್ನು ಗುರಿಯಾಗಿರಿಸಿಕೊಂಡು ಚುನಾವಣಾ ವ್ಯೂಹವನ್ನು ರಚಿಸಿದರು. ಹೀಗಾಗಿ ಕುರ್ಮಿ, ಕೊಯೆರಿ, ಲೋಧ್‌, ತೇಲಿ, ಕುಮ್ಹಾರ್‌, ಕಾಹರ್‌ ಮೊದಲಾದ “ಇತರ ಹಿಂದುಳಿದ ವರ್ಗ’ಗಳ ಮತಗಳು ಬಿಜೆಪಿಯತ್ತ ಬಂದವು. ಇದೇ ವರ್ಗಕ್ಕೆ ಸೇರಿದ ಕೇಶವ ಪ್ರಸಾದ್‌ ಮೌರ್ಯ ಬಿಜೆಪಿ ರಾಜ್ಯಾಧ್ಯಕ್ಷರಾದದ್ದು ಈ ತಂತ್ರದ ಭಾಗವಾಗಿಯೇ. ಪ್ರಧಾನಿ ನರೇಂದ್ರ ಮೋದಿ ಕೂಡ ಹಿಂದುಳಿದ ವರ್ಗದವರು ಎಂಬ ಅಂಶವನ್ನು ಪೂರಕವಾಗಿ ಬಳಸಿಕೊಳ್ಳಲಾಯಿತು.

1990ರ ಕಾಲಘಟ್ಟದಲ್ಲಿ ಕಲ್ಯಾಣ್‌ ಸಿಂಗ್‌ ಅವಲಂಬಿಸಿದ ಸೂತ್ರವನ್ನೇ ಪುನಾರೂಪಿಸಿದರೆ ಗೆಲುವು ಸಾಧ್ಯವೆಂಬ ಅಮಿತ್‌ ಶಾ ಊಹೆ ನಿಜವಾಗಿದೆ. ಸಮಾಜವಾದಿ ಪಕ್ಷದ ಯಾದವ ಮತಬ್ಯಾಂಕ್‌ ಮತ್ತು ಬಹುಜನ ಸಮಾಜವಾದಿ ಪಕ್ಷದ ಜಾಟ್‌ ಮತಬ್ಯಾಂಕ್‌ಗೆ ಎದುರಾಗಿ ಅಮಿತ್‌ ಶಾ ಯಾದವೇತರ ಮತ್ತು ಜಾಟೇತರ ಮತದಾರರನ್ನು ಬಿಜೆಪಿಯತ್ತ ಸೆಳೆದರು. ಬಿಎಸ್‌ಪಿಯಲ್ಲಿದ್ದ ಅನೇಕ ದಲಿತ ನಾಯಕರನ್ನು ಬಿಜೆಪಿಗೆ ಸೇರಿಸಿಕೊಂಡು ಟಿಕೆಟ್‌ ನೀಡಿದರು.

ಪಕ್ಷದ ಸ್ಟಾರ್‌ ರಾಜಕಾರಣಿಗಳ ರ್ಯಾಲಿ ಸರಣಿಯನ್ನೇ ಆಯೋಜಿಸಿದ್ದು ಅಮಿತ್‌ ಶಾರ ಇನ್ನೊಂದು ತಂತ್ರ. ಪ್ರಧಾನಿ ಮೋದಿ ಸ್ವತಃ 30ಕ್ಕೂ ಹೆಚ್ಚು ರ್ಯಾಲಿಯಲ್ಲಿ ಭಾಗವಹಿಸಿದ್ದರು, ಸ್ವಕ್ಷೇತ್ರ ವಾರಾಣಸಿಯಲ್ಲಿ ಒಂದು ರಾತ್ರಿ ತಂಗಿದ್ದರು, ಮೂರು ದಿನ ಪ್ರಚಾರ ಅಭಿಯಾನ ನಡೆಸಿದ್ದರು. ಎಸ್‌ಪಿ – ಕಾಂಗ್ರೆಸ್‌ ರ್ಯಾಲಿಗಳಿಗೆ ಸಮಾನಾಂತರವಾಗಿ ರ್ಯಾಲಿಗಳನ್ನು ಸಂಘಟಿಸಿ ಮತದಾರರು ಅತ್ತಕಡೆ ಸೆಳೆಯಲ್ಪಡದಂತೆ ನೋಡಿಕೊಂಡರು. ಕಾಶಿಯಲ್ಲಿ ರಾಹುಲ್‌ ಗಾಂಧಿ – ಅಖೀಲೇಶ್‌ ಯಾದವ್‌ ರೋಡ್‌ಶೋ ನಡೆದ ಹೊತ್ತಿಗೇನೇ ಪ್ರಧಾನಿ ಮೋದಿ ಮೂರು ತಾಸುಗಳ ರೋಡ್‌ಶೋ ನಡೆಸಿದ್ದು ಇದಕ್ಕೆ ಉದಾಹರಣೆ.

Advertisement

ಉತ್ತರಪ್ರದೇಶ ಬಹುದೊಡ್ಡ ರಾಜ್ಯ, ಏಳು ಸುತ್ತುಗಳಲ್ಲಿ ಚುನಾವಣೆ ನಡೆಯಿತು. ಇಡೀ ರಾಜ್ಯಕ್ಕೆ ಒಂದೇ ವ್ಯೂಹ ನಡೆಯದು ಎಂಬ ಅಂಶವೂ ಶಾ ಗಮನದಲ್ಲಿತ್ತು. ಹೀಗಾಗಿ ಹಂತದಿಂದ ಹಂತಕ್ಕೆ ಚುನಾವಣಾ ವಿಷಯಗಳೂ ತಂತ್ರಗಳೂ ಆದ್ಯತೆಗಳೂ ಬದಲಾಗುತ್ತ ಹೋದವು. ಉದಾಹರಣೆಗೆ, ಪ್ರಧಾನಿ ಮೋದಿ, ಮುಸ್ಲಿಮ್‌ ಮತಗಳನ್ನು ಎಸ್‌ಪಿ- ಬಿಎಸ್‌ಪಿಯತ್ತ ಕ್ರೋಡೀಕರಿಸಬಹುದಾದ ಕೋಮುಸಂವೇದಿ ವಿಚಾರಗಳನ್ನು ಭಾಷಣದಲ್ಲಿ ಎತ್ತಿದ್ದು ಮುಸ್ಲಿಮ್‌ ಬಾಹುಳ್ಯವುಳ್ಳ ಪ್ರದೇಶಗಳಲ್ಲಿ ಮೊದಲ ಕೆಲವು ಹಂತದ ಮತದಾನ ಮುಗಿದ ಬಳಿಕವೇ.

ಮುಖ್ಯಮಂತ್ರಿ ಅಭ್ಯರ್ಥಿಯನ್ನು ಹೆಸರಿಸದೆ ನರೇಂದ್ರ ಮೋದಿ ಅವರ ವರ್ಚಸ್ಸನ್ನು ಬಳಸಿಕೊಂಡದ್ದು ಕೂಡ ಶಾ ಕಾರ್ಯತಂತ್ರಗಳಲ್ಲಿ ಒಂದು. ನೋಟು ರದ್ದತಿ ಬಿಜೆಪಿ ಗೆಲುವಿಗೆ ಸವಾಲಾಗಿತ್ತು. ಆದರೆ ಕೊನೆಯ ಹಂತದಲ್ಲಿ ಬಿಜೆಪಿ ಸಾಲಮನ್ನಾ ಸ್ಕೀಮುಗಳನ್ನು ಘೋಷಿಸಿತು, ಬಜೆಟ್‌ನಲ್ಲಿ ರೈತ ಮೆಚ್ಚುವಂತಹ ಯೋಜನೆಗಳನ್ನು ಪ್ರಕಟಿಸಿತು. ಆ ಮೂಲಕ ಉ. ಪ್ರದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಹಳ್ಳಿಗರನ್ನು ಸೆಳೆಯುವಲ್ಲಿ ಸಫ‌ಲವಾಯಿತು.

ಮೋದಿ ಆಡಳಿತ, ನಿಲುವು, ನಿರ್ಧಾರಗಳ ಬಗ್ಗೆ ಜನಾಭಿಪ್ರಾಯ ಸೂಚಕ ಎಂದೇ ಬಿಂಬಿತವಾಗಿದ್ದ ಚುನಾವಣೆಯಿದು. ಅಮಿತ್‌ ಶಾ ತಂತ್ರಗಾರಿಕೆಗೆ ಸಾಟಿಯಿಲ್ಲ ಮತ್ತು ಪ್ರಧಾನಿ ಮೋದಿಯವರ “ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ ಸಮರ್ಥ ನಾಯಕ’ನೆಂಬ ಇಮೇಜ್‌ಗೆ ಧಕ್ಕೆಯಾಗಿಲ್ಲ ಎಂಬುದನ್ನು ಫ‌ಲಿತಾಂಶ ತೋರಿಸಿಕೊಟ್ಟಿದೆ.

ಅಮಿತ್‌ ವರ್ಸಸ್‌ ಪ್ರಶಾಂತ್‌ ಕಿಶೋರ್‌
2014ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಒಟ್ಟಿಗೆ ಕೆಲಸ ಮಾಡಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು ಇದೀಗ ಪರಸ್ಪರ ಎದುರಾಳಿಗಳಾಗಿದ್ದಾರೆ. ಕಳೆದ ವರ್ಷ ಬಿಹಾರದಲ್ಲಿ ನಿತೀಶ್‌ಕುಮಾರ್‌ ಪರ ಕೆಲಸ ಮಾಡಿ ತಮ್ಮ ಕೈಚಳಕ ತೋರಿದ್ದ ಪ್ರಶಾಂತ್‌ ಕಿಶೋರ್‌ ಇದೀಗ ಉತ್ತರ ಪ್ರದೇಶದಲ್ಲಿ ಮುಗ್ಗರಿಸಿದ್ದಾರೆ. ಆದರೆ, ಅಮಿತ್‌ ಶಾ ಅವರು 403 ಸ್ಥಾನಗಳ ಪೈಕಿ 324 ಸ್ಥಾನಗಳಿಸಿ ಪ್ರಶಾಂತ್‌ ಕಿಶೋರ್‌ಗೆ ಸಡ್ಡು ಹೊಡೆದಿದ್ದಾರೆ.

ಕಳೆದ ಒಂದು ವರ್ಷಗಳಿಂದ ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌ ಗೆಲ್ಲಿಸುವ ಜವಾಬ್ದಾರಿ ಹೊತ್ತು ಟಿಕೆಟ್‌ ಹಂಚಿಕೆಯಿಂದ ಹಿಡಿದು ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಯವರೆಗೆ ಸಂಪೂರ್ಣವಾಗಿ ತಮ್ನನ್ನು ತೊಡಗಿಸಿಕೊಂಡಿದ್ದ ಪ್ರಶಾಂತ್‌ ಕಿಶೋರ್‌, ಕನಿಷ್ಠ ಪ್ರತಿಪಕ್ಷ ಸ್ಥಾನವನ್ನು ಗಳಿಸಿಕೊಡುವಲ್ಲಿ ವಿಫ‌ಲರಾಗಿದ್ದಾರೆ. ಆದರೆ, ಪಂಜಾಬ್‌ನಲ್ಲಿ  ಅವರ ತಂತ್ರಗಾರಿಕೆ ಫ‌ಲಿಸುವ ಮೂಲಕ ಕಾಂಗ್ರೆಸ್‌  ಅಧಿಕಾರದ ಗದ್ದುಗೆ ಏರಿದೆ. ಒಟ್ಟಾರೆ ಪ್ರಶಾಂತ್‌ ಕಿಶೋರ್‌,  ಬಿಹಾರ ಹಾಗೂ ಪಂಜಾಬ್‌ನಲ್ಲಿ  ತಾವು ಬೆಂಬಲಿಸಿದ ಪಕ್ಷವನ್ನು ಅಧಿಕಾರದ ಚುಕ್ಕಾಣಿ ಹಿಡಿಸಿದ್ದರೆ ಇತ್ತ ಅಮಿತ್‌ ಶಾ, ಮಹಾರಾಷ್ಟ್ರ , ಅಸ್ಸಾಂ, ಉತ್ತರಪ್ರದೇಶ, ಉತ್ತರಾಖಂಡ ಹಾಗೂ ಮಣಿಪುರದಲ್ಲಿ ಬಿಜೆಪಿಯನ್ನು ಗೆಲ್ಲಿಸಿ, ಕಾಂಗ್ರೆಸ್‌ ಮುಕ್ತ ಭಾರತದ ಕನಸನ್ನು ಸಕಾರಗೊಳಿಸಲು ಮುಂದುಡಿಯಿಟ್ಟಿದ್ದಾರೆ.

ತೆರೆಮರೆಯ ಸೂತ್ರಧಾರ ಸುನಿಲ್‌ ಬನ್ಸಾಲ್‌
ಉತ್ತರಪ್ರದೇಶ ಚುನಾವಣೆಯಲ್ಲಿ ಅಮಿತ್‌ ಶಾ ಬಿಜೆಪಿಯ ವ್ಯೂಹಾಚಾರ್ಯನಾದರೆ ಅದನ್ನು ಯುದ್ಧಾಂಗಣದಲ್ಲಿ ಕಟ್ಟಿನಿಲ್ಲಿಸಿ ಮತಪ್ರವಾಹ ಹರಿದುಬರಲು ಕಾರಣರಾದವರು ಸುನಿಲ್‌ ಬನ್ಸಾಲ್‌ ಎಂಬ ತೆರೆಮರೆಯ “ಸಿಇಒ’. ಆರ್‌ಎಸ್‌ಎಸ್‌, ಎಬಿವಿಪಿ ಹಿನ್ನೆಲೆಯ ಸುನಿಲ್‌ ಬನ್ಸಾಲ್‌ ರಾಜಸ್ಥಾನ ಮೂಲದವರು. 2014ರ ಮಹಾಚುನಾವಣೆಯ ಸಂದರ್ಭದಲ್ಲಿ ಉತ್ತರಪ್ರದೇಶ ರಾಜ್ಯ ಪ್ರಚಾರ ಅಭಿಯಾನದಲ್ಲಿ ಅಮಿತ್‌ ಶಾ ಸಹಾಯಕರಾಗಿ ನಿಯೋಜಿತರಾಗಿದ್ದರು. ಆರೆಸೆಸ್‌ ಜಂಟಿ ಮಹಾಕಾರ್ಯದರ್ಶಿ ಡಾ. ಕೃಷ್ಣ ಗೋಪಾಲ್‌ ಮತ್ತು ಸುನಿಲ್‌ ಬನ್ಸಾಲ್‌ ನೇತೃತ್ವದ ಪ್ರಚಾರ ಅಭಿಯಾನ 2014ರ ಮಹಾಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಹೇಗೆ ಕೆಲಸ ಮಾಡಿತು ಎಂಬುದು ಗೊತ್ತೇ ಇದೆ. ಈಗ 2017ರಲ್ಲಿ ಕೂಡ ಸುನಿಲ್‌ ಬನ್ಸಾಲ್‌ ಎಂಬ ನೇಪಥ್ಯದ ಸೂತ್ರಧಾರನ ಕಾರ್ಯನಿರ್ವಹಣೆ ಯಶಸ್ವಿಯಾಗಿದೆ ಎಂಬುದಕ್ಕೆ ಉ. ಪ್ರದೇಶದಲ್ಲಿ ಬಿಜೆಪಿ ಕ್ಲೀನ್‌ ಸ್ವೀಪ್‌ ಸಾಕ್ಷಿ.

Advertisement

Udayavani is now on Telegram. Click here to join our channel and stay updated with the latest news.

Next