Advertisement

ಮೋದಿ-ಬಿಎಸ್‌ವೈ ನೋಡಿ ಬಹುಮತ ಕೊಡಿ: ಕಾಂಗ್ರೆಸ್‌, ಜೆಡಿಎಸ್‌ ವಿರುದ್ಧ ಅಮಿತ್‌ ಶಾ ವಾಗ್ಧಾಳಿ

10:40 PM Feb 23, 2023 | Team Udayavani |

ಬಳ್ಳಾರಿ: ದಕ್ಷಿಣ ಭಾರತದಲ್ಲಿ ಕರ್ನಾಟಕವನ್ನು ಅಗ್ರ ರಾಜ್ಯವನ್ನಾಗಿ ಮಾಡಲಿದ್ದೇವೆ. ಪ್ರಧಾನಿ ಮೋದಿ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಮೇಲೆ ವಿಶ್ವಾಸವಿಟ್ಟು ಒಂದೇ ಒಂದು ಬಾರಿ ಪೂರ್ಣ ಬಹುಮತದ ಸರಕಾರ ತರಲು ನಿರ್ಣಯಿಸಿ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಜನರಲ್ಲಿ ಮನವಿ ಮಾಡಿದರು.

Advertisement

ಸಂಡೂರಿನ ಎಸ್‌ಆರ್‌ಎಸ್‌ ಮೈದಾನದಲ್ಲಿ ಗುರುವಾರ ನಡೆದ “ವಿಜಯ ಸಂಕಲ್ಪ ಯಾತ್ರೆ’ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. ಕೋವಿಡ್‌ ವೇಳೆ ಜನರಿಂದ ನಯಾಪೈಸೆ ಪಡೆಯದೆ ಉಚಿತವಾಗಿ ಲಸಿಕೆ ನೀಡಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಐದು ಕೆ.ಜಿ. ಇದ್ದ ಅಕ್ಕಿಯನ್ನು 10 ಕೆ.ಜಿ. ನೀಡಲಾಗುತ್ತಿದೆ. ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಇನ್ನಷ್ಟು ಅಭಿವೃದ್ಧಿ ಹಾಗೂ ಉತ್ತಮ ಆಡಳಿತ ನೀಡಲು ಬಿಜೆಪಿಯನ್ನು ಸಂಪೂರ್ಣವಾಗಿ ಅಧಿಕಾರಕ್ಕೆ ತರಲು ಜನ ನಿರ್ಣಯ ಮಾಡಬೇಕು ಎಂದರು.

ಕಾಂಗ್ರೆಸ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ಕುರ್ಚಿಗಾಗಿ ಜಗಳ ನಡೆದಿದೆ. ಜೆಡಿಎಸ್‌, ಕಾಂಗ್ರೆಸ್‌ ಎರಡೂ ಕುಟುಂಬ ರಾಜಕಾರಣ ಮಾಡುತ್ತಿವೆ. ಆ ಪಕ್ಷಗಳಿಂದ ರಾಜ್ಯದ ಅಭಿವೃದ್ಧಿ ನಿರೀಕ್ಷಿಸಲಾಗದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದು ಸರಿಯಲ್ಲ. ಜೆಡಿಎಸ್‌ಗೆ ಕೊಟ್ಟ ಒಂದೊಂದು ಮತ ಕಾಂಗ್ರೆಸ್‌ಗೆ, ಕಾಂಗ್ರೆಸ್‌ಗೆ ಹೋದ ಮತ ಸಿದ್ದರಾಮಯ್ಯರ ಭ್ರಷ್ಟ ಸರಕಾರ ಬರಲು ಕಾರಣವಾಗಲಿದೆ. ಸಿದ್ದರಾಮಯ್ಯರದ್ದು ಎಟಿಎಂ ಸರಕಾರ. ಅದರ ಸದಸ್ಯರು ದಿಲ್ಲಿಯಲ್ಲಿದ್ದಾರೆ ಎಂದು ವ್ಯಂಗ್ಯವಾಡಿದ ಅಮಿತ್‌ ಶಾ, ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯವಿದೆ ಎಂದರು.

ಇದೇ ವೇಳೆ ಬಳ್ಳಾರಿ-ವಿಜಯನಗರ ಅವಳಿ ಜಿಲ್ಲೆಗಳ ಬಿಜೆಪಿ ಮುಖಂಡರು ಅಮಿತ್‌ ಶಾ ಅವರಿಗೆ ಬೆಳ್ಳಿಗದೆ, ಶ್ರೀ ಕುಮಾರಸ್ವಾಮಿ ದೇವಸ್ಥಾನದ ಭಾವಚಿತ್ರ ನೀಡಿ ಸಮ್ಮಾನಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ರಾಜ್ಯದ ಉಸ್ತುವಾರಿ ಅರುಣ್‌ ಸಿಂಗ್‌, ಮಾಜಿ ಸಿಎಂ ಯಡಿಯೂರಪ್ಪ ಇದ್ದರು.

ರಂಗ ಪ್ರವೇಶಿಸಿದ ಪ್ರಧಾನ್‌
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಚಟುವಟಿಕೆಗಳು ಗರಿಗೆದರಲಾರಂಭಿಸಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪ್ರವಾಸದ ಜತೆಗೆ ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್‌ ಹಾಗೂ ಸಹ ಉಸ್ತುವಾರಿಗಳೂ ಬೆಂಗಳೂರಿಗೆ ಆಗಮಿಸಿದ್ದು, ಚುನಾವಣ ಕಾರ್ಯತಂತ್ರದ ಬಗ್ಗೆ ರಹಸ್ಯ ಕಾರ್ಯತಂತ್ರಗಳು ಆರಂಭಗೊಂಡಿವೆ.

Advertisement

ಬೆಂಗಳೂರಿಗೆ ಆಗಮಿಸಿದ ಬಳಿಕ ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿಗೆ ಭೇಟಿ ನೀಡಿದ ಧರ್ಮೇಂದ್ರ ಪ್ರಧಾನ್‌, ಪದಾಧಿಕಾರಿಗಳು ಹಾಗೂ ಪ್ರಮುಖರ ಜತೆಗೆ ಸಭೆ ನಡೆಸಿದರು. ಚುನಾವಣೆಯಲ್ಲಿ ಸಂಘಟನೆಯ ಮಹತ್ವದ ಬಗ್ಗೆ ಈ ಸಭೆಯಲ್ಲಿ ಔಪಚಾರಿಕ ಚರ್ಚೆ ನಡೆದಿದ್ದು, ಮುಂದಿನ ವಾರದಿಂದ ವಿಭಾಗವಾರು ಸಭೆ ನಡೆಸಲು ನಿರ್ಧರಿಸಲಾಗಿದೆ.

150 ಸ್ಥಾನ ಗೆಲುವು
ಸಹ ಉಸ್ತುವಾರಿಗಳಾದ ಮನಸುಖ ಮಾಂಡವೀಯ, ಅಣ್ಣಾಮಲೈ ಜತೆಗೆ ಇದೇ ಮೊದಲ ಬಾರಿಗೆ ಚುನಾವಣ ಸಿದ್ಧತೆ ಬಗ್ಗೆ ಚರ್ಚೆ ನಡೆಸುವುದಕ್ಕಾಗಿ ಬೆಂಗಳೂರಿಗೆ ಆಗಮಿಸಿರುವ ಪ್ರಧಾನ್‌ ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಶಾಸಕ ಸ್ಥಾನಗಳಲ್ಲಿ ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಚಿವ ಮತ್ತು ಕರ್ನಾಟಕದ ಚುನಾವಣ ಸಹ ಉಸ್ತುವಾರಿ ಮನಸುಖ ಮಾಂಡವೀಯ ಮತ್ತು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ, ಸಂಸದ ಪಿ.ಸಿ. ಮೋಹನ್‌, ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ…, ರಾಜ್ಯ ಮುಖ್ಯ ವಕ್ತಾರ ಮಹೇಶ್‌ ಜತೆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next