Advertisement

ಕೊರೊನಾ ನಿರ್ವಹಣೆಯಲ್ಲಿ ವಿಶ್ವಕ್ಕೇ ಮಾದರಿ

12:13 PM Sep 03, 2021 | Team Udayavani |

ದಾವಣಗೆರೆ: ಭಾರತ ಮಹಾಮಾರಿ ಕೊರೊನಾವನ್ನು ಅತ್ಯಂತ ಸಮರ್ಥವಾಗಿ ಎದುರಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು.

Advertisement

ನಗರದ ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯ ಆವರಣದಲ್ಲಿ ಗುರುವಾರ ಗಾಂಧಿ ಭವನ, ಪೊಲೀಸ್‌ ಪಬ್ಲಿಕ್‌ ಶಾಲೆ, ಜಿ.ಎಂ. ಕೇಂದ್ರೀಯ ಗ್ರಂಥಾಲಯ ಉದ್ಘಾಟಿಸಿ ಅವರುಮಾತನಾಡಿದರು. ಭಾರತ ಮಾತ್ರವಲ್ಲ, ಇಡೀ ವಿಶ್ವವೇ ಎಂದೆಂದೂ ಕಂಡು ಕೇಳಿರದ ಮಹಾಮಾರಿ ಕೊರೊನಾವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅತ್ಯಂತ ಸಮರ್ಥವಾಗಿ ಎದುರಿಸುತ್ತಿದೆ. ಮುಂದೆ ಎಂತಹದ್ದೇ ಮಹಾಮಾರಿ ಎದುರಾದರೂ ಅತ್ಯಂತ ಧೈರ್ಯ-ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಭಾರತ ಎಲ್ಲ ರೀತಿಯ ಅಗತ್ಯ ವ್ಯವಸ್ಥೆಗಳೊಂದಿಗೆ ಸಜ್ಜಾಗಿದೆ ಎಂದರು. ಮಾನವ ಕುಲಕ್ಕೆ ಸವಾಲಾಗಿರುವ ಮಹಾಮಾರಿ ಕೊರೊನಾವನ್ನು 130 ಕೋಟಿ ಜನಸಂಖ್ಯೆ ಹೊಂದಿರುವ ಭಾರತ ಹೇಗೆ ಎದುರಿಸಲಿದೆ ಎಂದು ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡುತ್ತಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾ ಆರಂಭವಾದ ದಿನದಿಂದ ನಡೆಸಿದ ಪ್ರಯಕ್ಕೆ ‌ ದೇಶದ ಎಲ್ಲ ರಾಜ್ಯಗಳು, 130 ಕೋಟಿ ಜನರು ಹೆಗಲಿಗೆ ಹೆಗಲು ನೀಡಿದ ಪರಿಣಾಮ ಕೊರೊನಾವನ್ನು ಸಮರ್ಥವಾಗಿ ನಿಭಾಯಿಸಲಾಗುತ್ತಿದೆ ಎಂದರು.

ಕೊರೊನಾದ ಮೊದಲ ಮತ್ತು ಎರಡನೇ ಅಲೆ ಎದುರಿಸುವ ಸಂದರ್ಭದಲ್ಲಿ ವಾರಿಯರ್ಸ್‌, ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಪೌರ ಕಾರ್ಮಿಕರು ತಮ್ಮ ಜೀವವನ್ನೇ ಪಣಕ್ಕಿಟ್ಟು ಅವಿಸ್ಮರಣೀಯ ಸೇವೆ ಸಲ್ಲಿಸಿದರು. ಸರ್ಕಾರ ಆದಿಯಾಗಿಎಲ್ಲರೂಎಷ್ಟೇ ಪ್ರಯತ್ನಪಟ್ಟರೂಕೆಲವರನ್ನು ಕಳೆದುಕೊಳ್ಳಬೇಕಾಯಿತು. ಅಂತೆಯೇ ಅನೇಕ ಅಮೂಲ್ಯ ಜೀವಗಳನ್ನು ಉಳಿಸಲಾಗಿದೆ ಎಂದರು.

ಕೊರೊನಾ ವಿರುದ್ಧ ವಿಜಯ ಸಾಧಿಸುವುದಕ್ಕೆ ಲಸಿಕೆ ಅತಿ ಪ್ರಮುಖ ಎಂಬುದನ್ನು ಮನಗಂಡ ಪ್ರಧಾನಿ ನರೇಂದ್ರ ಮೋದಿ ನೇತತ್ವದ ಸರ್ಕಾರ ಬೃಹತ್‌ ಲಸಿಕಾಕರಣ ಆರಂಭಿಸಿದೆ. 130 ಕೋಟಿ ಜನರಿಗೆ ಹಮ್ಮಿಕೊಂಡಿರುವ ಲಸಿಕಾಕರಣವನ್ನು ಭಾರತ ಹೇಗೆ ನಡೆಸಲಿದೆ ಎಂದು ವಿಶ್ವದ ಎಲ್ಲ ರಾಷ್ಟ್ರಗಳು ಗಮನಿಸುತ್ತಿದ್ದವು. ಈಗ ಜಗತ್ತಿನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ನೀಡಿರುವ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಕಳೆದ ಎರಡು ದಿನಗಳ ಹಿಂದೆ ಒಂದು ಕೋಟಿಗೂ ಅಧಿಕ ಪ್ರಮಾಣದಲ್ಲಿ ಲಸಿಕೆ ನೀಡುವ ಮೂಲಕ ತನ್ನ ದಾಖಲೆಯನ್ನು ತಾನೇ ಮುರಿದಿದೆ ಎಂದರು.

ಕೆಲವು ರಾಜ್ಯ, ಜಿಲ್ಲೆ, ಸಮುದಾಯ, ವರ್ಗಗಳಲ್ಲಿ ಲಸಿಕೆ ಪಡೆಯುವುದಕ್ಕೆ ಹಿಂಜರಿಕೆ ಕಂಡು ಬರುತ್ತಿದೆ. ಬಿಜೆಪಿ ಕಾರ್ಯಕರ್ತರು, ಮುಖಂಡರು ಲಸಿಕಾಕರಣ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿ ಲಸಿಕಾ ಕೇಂದ್ರಕ್ಕೆ ಕರೆ ತಂದು ಲಸಿಕೆ ಕೊಡಿಸಬೇಕು. ಯಾರೇ ಆಗಲಿ ಲಸಿಕೆಯಿಂದ ದೂರ ಉಳಿಯದಂತೆ ನೋಡಿಕೊಳ್ಳಬೇಕು. ಈ ಕಾರ್ಯ ಮುಂದುವರಿಸಿದರೆಕೊರೊನಾ ನಮ್ಮಿಂದ ಬಹು ದೂರ ಹೋಗಲಿದೆ ಎಂದು ವಿಶ್ವಾಸ ವ್ಯಕ್ತಪಪಡಿಸಿದರು.

Advertisement

ಆತ್ಮ ನಿರ್ಭರತೆ ಸಾಧಿಸಲಿದ್ದೇವೆ: ಕೊರೊನಾದ ಎರಡನೇ ಅಲೆಯಲ್ಲಿಎದುರಾದಆಮ್ಲಜನಕ ಕೊರತೆಯನ್ನುಸಮರ್ಥವಾಗಿ ನಿರ್ವಹಿಸಲಾಯಿತು. ಸಾವಿರಾರು ಕೋಟಿ ರೂ. ಆನುದಾನದಲ್ಲಿ ಆಮ್ಲಜನಕ ಘಟಕಗಳ ಸ್ಥಾಪನೆ ಮಾಡಲಾಗಿದೆ. ಅತೀ ಹೆಚ್ಚಿನ ಭಾಗಗಳಲ್ಲಿ ಆಮ್ಲಜನಕ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಮುಂದಿನ ದಿನಗಳಲ್ಲಿ ಭಾರತ ಆಮ್ಲಜನಕ ಪೂರೈಕೆಯಲ್ಲೂ ಆತ್ಮ ನಿರ್ಭರತೆ ಸಾಧಿಸಲಿದೆ. ಇನ್ನು ಮುಂದೆ ಎಲ್ಲಿಯೂ ಆಮ್ಲಜನಕದ ಕೊರತೆ ವಿಸ್ತರಿಸುವುದೇ ಇಲ್ಲ ಎಂದು ಅಮಿತ್‌ ಶಾ ತಿಳಿಸಿದರು.

ದಾವಣಗೆರೆ ಉತ್ತರ ವಿಧಾನಸಭಾಕ್ಷೇತ್ರದ ಶಾಸಕ ಎಸ್‌.ಎ. ರವೀಂದ್ರನಾಥ್‌ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಆರಗ ಜ್ಞಾನೇಂದ್ರ, ಮುರುಗೇಶ್‌ ನಿರಾಣಿ, ಬಿ.ಸಿ. ಪಾಟೀಲ, ಆನಂದ್‌ ಸಿಂಗ್‌, ಬೈರತಿ ಬಸವರಾಜ್‌, ಸಂಸದ ಡಾ|ಜಿ.ಎಂ.ಸಿದ್ದೇಶ್ವರ, ಶಾಸಕರಾದ ಎಂ.ಪಿ. ರೇಣುಕಾಚಾರ್ಯ, ಎಸ್‌.ವಿ. ರಾಮಚಂದ್ರ, ಜಿ. ಕರುಣಾಕರ ರೆಡ್ಡಿ, ಪ್ರೊ| ಎನ್‌. ಲಿಂಗಣ್ಣ, ಕೊಂಡಜ್ಜಿ ಮೋಹನ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next