Advertisement
ಬೆಳೆ ವೈವಿಧ್ಯತೆ ಅಳವಡಿಸಿಕೊಂಡಲ್ಲಿ ಕೃಷಿಯಲ್ಲಿ ಸೋಲುತ್ತೇವೆಂದು ಯೋಚಿಸುವ ಅಗತ್ಯವೇ ಇಲ್ಲ. ತಾವು ಉಣ್ಣುವ ಆಹಾರ ಬೆಳೆಗಳನ್ನು ಬೆಳೆದುಕೊಳ್ಳಲು ತಮ್ಮ ಜಮೀನಿನಲ್ಲಿಯೇ ಸ್ವಲ್ಪ ಸ್ಥಳ ಮೀಸಲಿರಿಸಿಕೊಂಡು ರಾಸಾಯನಿಕ ರಹಿತವಾಗಿ ಬೆಳೆದ ಫಸಲನ್ನು ಬಳಕೆ ಮಾಡಿದರೆ, ರೈತ ಸ್ವಾವಲಂಬಿಯೂ ಆಗಬಹುದು. ಅನ್ನದಾತ, ಸ್ವಾವಲಂಬನೆಯ ಪಾಠ ಹೇಳುವ ಸಾಧಕನಾಗಬೇಕು ಎನ್ನುವ ಕಲ್ಪನೆ ಹೊಂದಿರುವ ಗುಂಡೂರಾವ್ ಕುಲಕರ್ಣಿ ತಾವು ಅಂದುಕೊಂಡಿರುವುದನ್ನು ಕೃಷಿಯಲ್ಲಿ ಕಾರ್ಯರೂಪಕ್ಕೆ ತಂದಿದ್ದಾರೆ.
Related Articles
Advertisement
ಸಜ್ಜೆಯ ಮಧ್ಯೆ ಬೆಳೆದ ತೊಗರಿಯಿಂದ ನಾಲ್ಕು ಕ್ವಿಂಟಾಲ್, ಸಜ್ಜೆ ಏಳು ಕ್ವಿಂಟಾಲ್ ಇಳುವರಿ ಪಡೆದಿದ್ದಾರೆ. ನಾಲ್ಕು ಎಕರೆಯಲ್ಲಿ ಪ್ರತ್ಯೇಕವಾಗಿ ಬೆಳೆದ ತೊಗರಿ ಎಕರೆಗೆ ಎಂಟು ಕ್ವಿಂಟಾಲ್‌ನಂತೆ ಇಳುವರಿ ದೊರೆತಿದೆ. ಹತ್ತು ಎಕರೆ ಮಾವಿನ ತೋಟ ಸೃಷ್ಟಿಸಿದ್ದು ದಷ್ಟಪುಷ್ಟವಾಗಿ ಬೆಳೆದ ಮರಗಳು ಉತ್ತಮ ಫಸಲನ್ನೇ ನೀಡುತ್ತಿವೆ. ಕಳೆದ ಬಾರಿ ಮಾವು ಕೃಷಿಯದಿಂದ ನಾಲ್ಕು ಲಕ್ಷ ರೂಪಾಯಿ ಆದಾಯ ಕೂಡ ಗಳಿಸಿದ್ದಾರೆ.
ದೇಸಿ ಧಾನ್ಯದ ಸೊಬಗು: ತಾವು ಬಳಕೆ ಮಾಡುವ ಭತ್ತವನ್ನು ಸ್ವತಃ ತಾವೇ ಬೆಳೆದುಕೊಳ್ಳುತ್ತಾರೆ. ದೊಡ್ಡಿಗ ತಳಿಯ ದೇಸೀ ತಳಿಯ ಭತ್ತವನ್ನು ಜುಲೈ ಮೊದಲ ವಾರದಲ್ಲಿ ಬಿತ್ತನೆ ಮಾಡಿದ್ದಾರೆ. ಎರಡು ಎಕರೆಯಲ್ಲಿ ಕೂರಿಗೆ ಸಹಾಯದಿಂದ ಬಿತ್ತನೆ ಕೈಗೊಂಡಿದ್ದು ಸಾಲಿನ ನಡುವೆ ಒಂದು ಅಡಿಯಷ್ಟು ಅಂತರ ಕಾಯ್ದುಕೊಂಡಿದ್ದಾರೆ. ತೆಳುವಾಗಿ ಬಿತ್ತನೆ ಮಾಡಿದ್ದು ಗಿಡಗಳ ಮಧ್ಯೆ ಅರ್ಧ ಅಡಿ ಅಂತರದಲ್ಲಿ ಗಿಡಗಳು ಮೇಲೆದ್ದು ನಿಂತಿವೆ.
ಕೊಟ್ಟಿಗೆಯ ತಿಪ್ಪೆಗೊಬ್ಬರ ಹೊರತುಪಡಿಸಿ ಬೇರೆ ಯಾವ ರಾಸಾಯನಿಕ ಗೊಬ್ಬರವನ್ನು ಭತ್ತದ ಕೃಷಿಗೆಂದು ಬಳಕೆ ಮಾಡದಿರುವ ಕಡ್ಡಾಯ ನಿರ್ಣಯವನ್ನು ದಶಕಗಳಿಂದ ಪಾಲನೆ ಮಾಡಿಕೊಂಡು ಬಂದಿದ್ದಾರೆ. ಬಿತ್ತನೆ ಮಾಡಿದ ಇಪ್ಪತ್ತು, ಮೂವತ್ತು ಹಾಗೂ ನಲವತ್ತೆ„ದನೆಯ ದಿನಕ್ಕೆ ಗಡ್ಡೆ ಕುಂಟೆ ಹೊಡೆದು ಕಳೆ ನಿಯಂತ್ರಿಸಿದ್ದಾರೆ. ಕುಂಟೆಯ ಹೊಡೆತಕ್ಕೆ ಬೇರು ಹರಿದುಕೊಂಡು ಸಡಿಲಗೊಂಡ ಭೂಮಿಯಲ್ಲಿ ಗಿಡಗಳು ಒಂದಕ್ಕೊಂದು ಸ್ಪರ್ಧೆಯೊಡ್ಡುವ ರೀತಿಯಲ್ಲಿ ಬೆಳೆದುನಿಂತಿದ್ದವು.
ಮೂರುವರೆ ಅಡಿ ಎತ್ತರ ಬೆಳೆದು ನಿಂತ ಪ್ರತೀ ಗಿಡಗಳ ಬುಡದಲ್ಲಿ 10-15 ತೆಂಡೆಗಳು ಬೆಳೆದು ನಿಂತು ನೋಡುಗರ ಕಣ್ ಸೆಳೆಯುತ್ತಿತ್ತು. ಈಗ ಭತ್ತದ ಕಟಾವು ಮುಗಿಸಿದ್ದಾರೆ. ಹದಿನೈದು ಕ್ವಿಂಟಾಲ್ ಇಳುವರಿ ಪಡೆದಿದ್ದಾರೆ. ಸಾವಯವ ಭತ್ತವನ್ನು ತಪ್ಪಿಯೂ ಮಾರಾಟ ಮಾಡುವುದಿಲ್ಲ. ಅದು ಸಂಪೂರ್ಣ ಮನೆ ಬಳಕೆಗೆ ಮೀಸಲು. ದಪ್ಪನಾದ ಕಾಳುಗಳನ್ನು ಹೊಂದಿರುವ ಭತ್ತವನ್ನು ಅಕ್ಕಿ ಮಾಡಿಸಿ ಪಾಲಿಶ್ ಮಾಡಿಸದೇ ಬಳಕೆ ಮಾಡುತ್ತಾರೆ. ಸಿಪ್ಪೆ ದಪ್ಪನಾಗಿರುವ ಈ ಭತ್ತದಿಂದ ಅಕ್ಕಿ ತಯಾರಿಸಿದರೆ ಒಂದು ಕ್ವಿಂಟಾಲ್ ಭತ್ತಕ್ಕೆ ನಲವತ್ತು ಕೆಜಿ ಅಕ್ಕಿ ಸಿಗುತ್ತದೆ.
ಸಿರಿಧಾನ್ಯ ಹಾರಕ ಕೃಷಿ: ಇವರು ಒಂದು ಎಕರೆ ಪ್ರದೇಶದಲ್ಲಿ ನಿರಂತರವಾಗಿ ಹಾರಕ ಬೆಳೆಯುತ್ತಿದ್ದಾರೆ. ಜುಲೈ ಮೊದಲನೆಯ ವಾರ ಕೂರಿಗೆಯ ಸಹಾಯದಿಂದ ಬಿತ್ತನೆ ಮಾಡಿದ್ದರು. ಸಾಲಿನ ಮಧ್ಯೆ ಅರ್ಧ ಅಡಿ ಅಂತರ ಕಾಯ್ದುಕೊಂಡಿದ್ದಾರೆ. ಬಿತ್ತನೆ ಮಾಡಿದ ಇಪ್ಪತ್ತು, ನಲವತ್ತು ಹಾಗೂ ತೊಂಭತ್ತನೆಯ ದಿನಕ್ಕೆ ಕುಂಟೆ ಹೊಡೆದು ಕಳೆ ನಿಯಂತ್ರಿಸಿದ್ದಾರೆ.
ನವೆಂಬರ್ ತಿಂಗಳ ಕೊನೆಯ ವಾರ ಬೆಳೆ ಕಟಾವು ಮುಗಿಸಿದ್ದಾರೆ. ಆರು ಕ್ವಿಂಟಾಲ್ ಇಳುವರಿ ಪಡೆದಿದ್ದಾರೆ. ಹಾರಕ ಬೆಳೆಯನ್ನು ಮಾರಿದ ಉದಾಹರಣೆಯಿಲ್ಲ. ಅಕ್ಕಿ ಮಾಡಿಸಿ ತಾವೇ ಬಳಕೆ ಮಾಡಿಕೊಳ್ಳುತ್ತಾರೆ. ದಿನ ನಿತ್ಯದ ಆಹಾರದಲ್ಲಿ ಇವರೇ ಬೆಳೆದುಕೊಂಡ ದೇಸೀ ತಳಿಯ ಭತ್ತ ಹಾಗೂ ಹಾರಕದಕ್ಕಿಯನ್ನು ಬಳಕೆ ಮಾಡಿಕೊಳ್ಳುತ್ತಾರೆ.
ಭೂಮಿಯ ಫಲವತ್ತತೆ ಹೀಗೆ..: ಭೂಮಿಯ ಫಲವತ್ತತೆ ವರ್ಧನೆಗೆ ವಹಿಸುವ ಕಾಳಜಿ ಕಡಿಮೆಯಾಗದಂತೆ ಗಮನ ವಹಿಸುತ್ತಾರೆ. ಎರಡು ವರ್ಷಕ್ಕೊಮ್ಮೆ ದನದ ಹಿಂಡುಗಳನ್ನು ತಿಂಗಳುಗಳ ಕಾಲ ನಿಲ್ಲಿಸುವ ರೂಢಿ ತಪ್ಪದೇ ಪಾಲಿಸುತ್ತಾರೆ. 150-200 ದನಗಳು ಜಮೀನಿನಲ್ಲಿಯೇ ತಿಂಗಳುಗಳ ಕಾಲ ಓಡಾಡಿಕೊಂಡಿರುತ್ತವೆ. ಸಗಣಿ, ಗೋಮೂತ್ರಗಳು ನೇರವಾಗಿ ಭೂಮಿಗೇ ತಲುಪುವುದರಿಂದ ಫಲವತ್ತತೆ ಕಡಿಮೆ ಅವಧಿಯಲ್ಲಿ ಹೆಚ್ಚು ಸಾಧ್ಯವಾಗುತ್ತದೆ ಎನ್ನುವ ಮಾತು ಇವರದು. ಇದರ ಹೊರತಾಗಿ ಕೊಟ್ಟಿಗೆಯ ತಿಪ್ಪೆ ಗೊಬ್ಬರವನ್ನು ಬಳಕೆ ಮಾಡುತ್ತಾರೆ.
ನೀರಾವರಿಗಾಗಿ ಬಾವಿ ರಚಿಸಿಕೊಂಡಿದ್ದಾರೆ. ಒರತೆ ಹೊಂದಿರುವ ಬಾವಿಯಲ್ಲಿ ಸದಾ ನೀರು ತುಂಬಿರುತ್ತದೆ. ಈ ಬಾರಿಯ ಮಳೆಯಿಂದಾಗಿ ಬಾವಿ ಪೂರ್ತಿ ತುಂಬಿಕೊಂಡಿದೆ. ಮೂವತ್ತು ಅಡಿ ವ್ಯಾಸದಲ್ಲಿ ಬಾವಿಯ ನೀರು ಸಂಗ್ರಹಗೊಂಡಿದ್ದು ಕೃಷಿಗಾಗಿ ನೀರಿನ ಬಳಕೆಯನ್ನು ಮಾಡುತ್ತಿದ್ದಾರೆ. ಬೆಳೆದ ಬೆಳೆಯನ್ನು ಮಾರಿ ಹಣ ಗಳಿಸುವುದೊಂದೇ ರೈತರ ಕೆಲಸವಾಗಬಾರದು. ತಮಗೋಸ್ಕರವೂ ಚಿಂತನೆ ಮಾಡುವಂತಾಗಬೇಕು ಎನ್ನುವ ಗುಂಡೂರಾವ್ ಕುಲಕರ್ಣಿ ತಾವು ಆಡುವುದನ್ನೇ ತಮ್ಮ ಜಮೀನಿನಲ್ಲಿ ಮಾಡಿ ತೋರಿಸಿದ್ದಾರೆ.
* ಕೋಡಕಣಿ ಜೈವಂತ ಪಟಗಾರ